JAISHREE HALLUR

Classics Inspirational Others

4  

JAISHREE HALLUR

Classics Inspirational Others

ಒಂದು ಕಾಲವಿತ್ತು ಅಂದು..

ಒಂದು ಕಾಲವಿತ್ತು ಅಂದು..

3 mins
361



   ನನ್ನ ವ್ಯಾಸಂಗದ ದಿನಗಳು ಬಡತನದಲ್ಲೇ ಕಳೆದುಹೋಗಿತ್ತು. ಮನೆಯ ಕಷ್ಟಗಳ ನಡುವೆ, ನಾನು ತಾಂತ್ರಿಕ ಪದವಿಗೆ ಸೇರಿದಂದು, ಕಾಲೇಜಿಗೆ ಫೀಸು ಕಟ್ಟುವ ಸ್ತಿತಿಯಲ್ಲಿರಲಿಲ್ಲ.. ಅಪ್ಪನ ಪ್ರಾವಿಡೆಂಟ್ ಹಣ ನೂರು ರುಪಾಯಿ ತಿಂಗಳ ಕೊನೆಯಲ್ಲಿ ಖರ್ಚಾಗಿಬಿಡುತ್ತಿದ್ದ ಆ ದಿನಗಳು ಅತ್ಯಂತ ಮರುಕ ಹುಟ್ಟಿಸುತ್ತಿತ್ತು. 


ನನ್ನ ಒಡಹುಟ್ಟಿದವರಾದ ತಮ್ಮ ತಂಗಿಯರ ಸರಕಾರೀ ಶಾಲೆ ಹೇಗೋ ಮುಂದುವರಿದ ಸಂಗತಿಯಾಗಿತ್ತು. ಮನೆಗೆ ಹಿರಿಯ ಮಗಳಾದ ನನಗೆ ಜವಾಬ್ಧಾರಿ ಹೆಗಲಿಗೇರಿತ್ತು. ಮತ್ತು ಓದುವ ಹಂಬಲವೂ ಬಹಳವಾಗಿತ್ತು. ಐ ಎ ಎಸ್ ಪರೀಕ್ಷೆ ಪಾಸಾಗಬೇಕೆಂಬ ಅಪ್ಪನ ಆಸೆಗೆ ಒತ್ತುಕೊಟ್ಟು ಎಂಜಿನೀಯರಿಂಗ್ ವ್ಯಾಸಂಗಕ್ಕೆ ಕಾಲಿಟ್ಟ ದಿನಗಳು ಅತ್ಯಂತ ಮರೆಯಲಾರದ ಕ್ಷಣಗಳು. 


ಹಾಸ್ಟೆಲ್ ವಾಸ. ಖಾನಾವಳೀ ಊಟ.

ಹಣದ ಅಭಾವ. ತಿಂಗಳ ಖರ್ಚು.

ಓದುವ ಛಲ. ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿಗಳನ್ನು ಒಗ್ಗೂಡಿಸಿಕೊಂಡು ಸಂಭಾಳಿಸಿದ ಆ ದಿನ...ಈ ಒಣಗಿದ ಬ್ರೆಡ್ ನನ್ನ ದೈನಂದಿನ ತಿಂಡಿಯಾಗಿತ್ತು..

ಒಂದು ಹೊತ್ತಿನ ಖಾನಾವಳೀ ಊಟವನ್ನು ಉಳಿಸಿಕೊಂಡು ಎರಡೂ ಹೊತ್ತು ಉಂಡದ್ದೇ ಹೆಚ್ಚು. ಅಪ್ಪ ಕಳಿಸುತ್ತಿದ್ದ ತಿಂಗಳ ಖರ್ಚು ತೀರ ಸಾಲದಾಗಿದ್ದು ಮತ್ತೊಮ್ಮೆ ಕೇಳುವ ತಾಕತ್ತಿರಲಿಲ್ಲ. ಯಾಕೆಂದರೆ, ಅಲ್ಲಿ ಮನೆ ನಡೆಸುವುದೇ ಕಷ್ಟದಾಯಕವಾಗಿದ್ದು, ನನ್ನ ಖರ್ಚಿಗೆ ಹೆಣಗಾಡುವಂತಿತ್ತು..ಇದರ ಅರಿವು ನನಗೆ ಬಹಳ ಚೆನ್ನಾಗಿತ್ತು. ಆದ್ದರಿಂದ, ನಾನು ಹಿತಮಿತಿಯನ್ನು ಮೀರುತ್ತಿರಲಿಲ್ಲ.


ದಿನವೂ ಕಾಲೇಜಿಗೆ ಉಡಲು ಇದ್ದ ಮೂರು ಉದ್ದ ಲಂಗ ಹಾಗೂ ಉದ್ದ ಅಂಗಿ, ಕಾಲಲ್ಲಿ ಒಂದು ಜೊತೆ ಪ್ಲಾಸ್ಟಿಕ್ ಚಪ್ಪಲಿ, ಉದ್ದ ಜಡೆ, ಹೆಗಲಿಗೆ ಪುಸ್ತಕದ ಚೀಲದೊಂದಿಗೆ ಎಂಜಿನೀಯರಿಂಗ್ ಕಾಲೇಜು ಬಸ್ಸಿನಲ್ಲಿ ದಿನವೂ ಪಯಣ. ಊರಾಚೆಯಲ್ಲಿದ್ದ ಆವರಣ ನನಗೊಂದು ದೇವಮಂದಿರವಾಗಿತ್ತು. ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಾನು ಮತ್ತು ನನ್ನ ಗೆಳತಿ, ಇಬ್ಬರೇ ಹುಡುಗಿಯರಿದ್ದೆವು. ಇಡೀ ಕಾಲೀಜಿಗೆ ನಾವೇ ಹೀರೋಯಿನ್ಗಳು...

ಇಡೀ ಬಾಗಲಕೋಟೆಯಲ್ಲಿ, ತಾಂತ್ರಿಕ ಶಿಕ್ಷಣಕ್ಕೆ ಸೇರಿದ ಇಬ್ಬರೇ ಹುಡುಗಿಯರನ್ನು ಅತ್ಯಂತ ಗೌರವಾಧರಗಳಿಂದ ನೋಡುತ್ತಿದ್ದರು. ನಾವು ಬೆಂಗಳೂರನವರಾದ್ದರಿಂದ ಅವರಿಗೆಲ್ಲ ಸೋಜಿಗವೆನಿಸಿತ್ತು. ಶಿಕ್ಷಕರ ನಿರಂತರ ಸಹಕಾರ, ಸಲಹೆ, ಮುತುವರ್ಜಿ ನಮ್ಮ ಮೇಲೆ ಸದಾ ಇರುತ್ತಿತ್ತು. ಆದರೂ ನಾ ಎಂದೂ ನನ್ನ ಬಡತನವನ್ನು ಹೇಳಿಕೊಂಡದ್ದಿಲ್ಲ. ಅದು ಮುಚ್ಚಿಡುವಂತದ್ದೂ ಅಲ್ಲ. ನನ್ನ ಗೆಳತಿ ಸ್ವಲ್ಪ ಮಟ್ಟಿಗೆ ಶ್ರೀಮಂತಳಾಗಿದ್ದಳು..


ವಿವಿದ ಪದವೀ ವಿಧ್ಯಾರ್ಥಿಗಳ ಹೆಣ್ಣು ಮಕ್ಕಳ ಹಾಸ್ಟೇಲ್ ನಲ್ಲಿ ವಾಸವಿದ್ದ ನನಗೆ ಪ್ರತೀ ಆರು ತಿಂಗಳಿಗೊಮ್ಮೆ ಫೀಸು ಆರು ನೂರು ರುಪಾಯಿ ಭರಿಸಬೇಕಿತ್ತು. ವರ್ಷದ ಸ್ಕಾಲರ್ ಶಿಪ್ ಬಂದೊಡನೆ ಅದರಿಂದ ಕಾಲೇಜಿನ ಫೀಸು, ಹಾಸ್ಟೇಲ್ ಫೀಸು ಸೇರಿ ಸಾಕಾಗುತ್ತಿತ್ತು. ತಿಂಗಳ ಖರ್ಚಿಗೆ ಅಪ್ಪನ ಐನೂರು ರೂ ಅಷ್ಟೆ. 

ಒಂದು ಸಲ, ಸ್ಕಾಲರ್ ಶಿಪ್ ಬರುವುದು ತಡವಾಗಿ, ಫೀಸು ಸಮಯಕ್ಕೆ ಸರಿಯಾಗಿ ಭರಿಸಲಾಗದೇ ಹಾಸ್ಟೇಲ್ ಬಿಡುವಂತಹ ಪ್ರಸಂಗವೂ ಬಂದಿತ್ತು. ಆಗ ಅಳುವೇ ಬಾಯಿಗೆ ಬಂದ ಕ್ಷಣ. ಏನು ಮಾಡುವುದೆಂಬ ಆತಂಕ..ವಾರ್ಡನ್ ಗೆ ಬೇಡಿಕೊಂಡೆ. ಆದರೆ , ಯಾವುದೂ ಸಹಾಯಕ್ಕೆ ಬರದೇ ಇದ್ದಾಗ, ಕಾಲೇಜಿನ ಕ್ಲಾರ್ಕ್ ಒಬ್ಬರು , ನನ್ನ ತಂದೆಯ ಪರಿಚಯವಿದ್ದವರಾಗಿ ನನಗೆ ಶಿಫಾರಸು ಮಾಡಿ ಫೀಸನ್ನು ನಂತರ ಭರಿಸಲು ಪರವಾನಿಗೆಯಿತ್ತ ಮೇಲೆ ಜೀವ ಬಂದಂತಾಯ್ತು. ಇಂತಹ ಅನೇಕ ಘಟನೆಗಳ ನಡುವೆ ನನ್ನ ವ್ಯಾಸಂಗ ನಾಲ್ಕು ವರ್ಷಗಳ ಕಾಲ ನಡೆದು ಬೆಂಗಳೂರಿಗೆ ವಾಪಸಾದಾಗ ಎಂತಹ ಖುಷಿ, ಹೆಮ್ಮೆ ನನ್ನ ಹೆತ್ತವರಿಗೆ. ಅಪ್ಪನಿಗೆ ಎಲ್ಲಿಲ್ಲದ ಪ್ರೌಡಿಮೆ. ಮನೆಗೆ ಬಂದವರೆದುರಿಗೆಲ್ಲಾ ನನ್ನ ಮಗಳು ಎಂಜಿನೀಯರಿಂಗ್ ಮಾಡಿದ್ದಾಳೆ ಎಂದು ಹೊಗಳುವುದೇ ಒಂದು ಖುಷಿಯಿತ್ತು. 


ನನಗೆ ಆಗ ಮುಖ್ಯ ಉದ್ದೇಶ ಕೆಲಸ ಹುಡುಕಿ ಮನೆಯ ಜವಾಬ್ಧಾರಿಯನ್ನು ತೆಗೆದುಕೊಳ್ಳುವ ಇಚ್ಛೆ. ಆರೇ ತಿಂಗಳಲ್ಲಿ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಕೆಲಸ ಸಿಕ್ತು. ತಿಂಗಳಿಗೆ ಐನೂರು ರೂ ಸ್ಟೈಪೆಂಡ್.. ಖುಷಿಯೋ ಖುಷಿ..


ನಂತರ , ಆರೇ ತಿಂಗಳಲ್ಲಿ ಡಿಪ್ಲೋಮಾ ಕಾಲೇಜೊಂದರಲ್ಲಿ ಲೆಕ್ಚರರ್ ಹುದ್ದೆಗೆ ನೇಮಕಾತಿ. ತಿಂಗಳಿಗೆ ಸಾವಿರದ ಎಂಟುನೂರು ಸಂಬಳ. ಸಂತೋಷಕ್ಕೆ ಪಾರವೇ ಇರಲಿಲ್ಲ..ಅಲ್ಲಿ ಎರಡು ವರ್ಷದ ಅನುಭವ..

ಆಮೇಲೆ , ಸ್ನಾತಕೋತ್ತರ ಪದವಿಧರರ ಎಂಪ್ಲಾಯಿಮೆಂಟ್ ಎಕ್ಛೇಂಜಿನಿಂದ ಬಂದ ಕರೆಯೋಲೆ...ರಕ್ಷಣಾ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶ. 

ಅನೇಕ ಪರೀಕ್ಷೆ, ತಪಾಸಣೆಗಳ ಬಳಿಕ ದೊರೆತ ಅತ್ಯಂತ ಮಹತ್ವಪೂರ್ಣವಾದ ನೌಕರಿ ಮನೆಯ ಎಲ್ಲರಿಗೂ ಸಂತೋಷ ತಂದಿತ್ತು. ನಾನಂತೂ ಸಂಪೂರ್ಣ ಆಕಾಶತುದಿಯಲ್ಲಿದ್ದೆ...ನಂತರ, ಹೀಗೇ ಅಪ್ಪನ ರಿಟೈರ್ಮೆಂಟು ಆಯಿತು. ನನ್ನ ಜವಾಬ್ಧಾರಿ ಹೆಚ್ಚಿತು. ದಿನಗಳುರುಳಿದವು.

ಯಾವಾಗ ದೊಡ್ಡವರಾದೆವೋ, ಯಾವಾಗ ಮದುವೆಯಾಯಿತೋ, ಯಾವಾಗ ಮಕ್ಕಳಾದವೋ, ತಿಳಿಯಲೇ ಇಲ್ಲ. ಅಷ್ಟು ಕಾಲಗರ್ಭದಲ್ಲಿ ನಮ್ಮದೇ ಜಗತ್ತಿನಲ್ಲಿ ಮುಳುಗಿ ಹೋದ ಗತಕಾಲ. ಈಗ ಈ ಬ್ರೆಡ್ಡಿನ ತುಣುಕೊಂದು ಎಲ್ಲವನ್ನೂ ನೆನಪಿಸಿತು ನೋಡಿ.


ದೇವರು ಎಂತೆಂತಹ ಪರೀಕ್ಷೆಗಳನ್ನು ಜೀವನದಲ್ಲಿ ಇಟ್ಟಿರುತ್ತಾನೆಂದು ಯಾರೂ ಊಹಿಸಲು ಸಾಧ್ಯವಿಲ್ಲ ಮಿತ್ರರೆ..


ಈಗಿನ ಕಾಲದಲ್ಲಿ ಎಷ್ಟು ಬದಲಾವಣೆಯಾಗಿದೆಯೆಂದರೆ, ಮನೆಮನೆಗಳಲ್ಲಿ ಎಂಜಿನೀಯರ್ ಗಳಿದ್ದಾರೆ. ಲೆಕ್ಕವಿಲ್ಲದಷ್ಟು ಕಾಲೇಜುಗಳು. ಹಣದ ಸುರಿಮಳೆ, ಲಕ್ಷಗಟ್ಟಲೆ ಫೀಸು , ಹೆತ್ತವರ ಸಹಕಾರ, ಸಾಹುಕಾರಿಕೆ ಎಲ್ಲವೂ ಅತೀ ಶೀಘ್ರದಲ್ಲಿ ಬದಲಾಗಿವೆ...

ನನ್ನ ಮಕ್ಕಳೂ ಸಹ ಎಂಜಿನೀಯರಿಂಗ್ ವ್ಯಾಸಂಗ ಮಾಡಿದವರಾಗಿದ್ದಾರೆ. ಇವೆಲ್ಲಾ ಈಗ ಸರ್ವೇ ಸಾಮಾನ್ಯವೆನಿಸುತ್ತಿವೆ.


ಆದರೂ, ನನಗೆ ಹೆಮ್ಮೆಯಿದೆ. ನಮ್ಮ ಕಾಲವೇ ಬೇರೆ. ಅಲ್ಲಿ ಛಲವಿತ್ತು. ಬಲವಿತ್ತು. ಮಾನಸಿಕ ತುಮುಲವಿತ್ತು. ಹಂಬಲವಿತ್ತು. ಓದಿನ ಬಗ್ಗೆ ಶಿಸ್ತಿತ್ತು. ಗೌರವವಿತ್ತು. ಈಗ ಇವೆಲ್ಲ ಮಾಯವಾಗಿವೆ ಅನಿಸ್ತಿದೆ..


ಹೀಗೆ ನೆನಪುಗಳೊಂದಿಗೆ ನಿಮ್ಮೊಡನೆ ಈ ರಾತ್ರಿಯ ಬರಹ ...😊😊😊🙏🙏🙏🙏🙏🙏



Rate this content
Log in

Similar kannada story from Classics