ನನ್ನ ಮೆಚ್ಚಿನ ಶಿಕ್ಷಕ
ನನ್ನ ಮೆಚ್ಚಿನ ಶಿಕ್ಷಕ
ನನ್ನ ಮೆಚ್ಚಿನ ಶಿಕ್ಷಕ
ಅಂದು ಗಣಿತದ ತರಗತಿ. ಎಂಟನೆಯ ತರಗತಿಯಲ್ಲಿದ್ದ ನನಗೋ ಗಣಿತವೆಂದರೆ ಕಬ್ಬಿಣದ ಕಡಲೆ. ನಾನು ಅಂದು ಮಾಡಬೇಕಾಗಿದ್ದ ಗಣಿತದ ಹೋಂ ವರ್ಕ್ ಮುಗಿಸಿರಲಿಲ್ಲ. ಹಿಂದಿನ ಬೆಂಚ್ ನಲ್ಲಿ ತಲೆ ತಗ್ಗಿಸಿ ಕುಳಿತೆ. ’ಸಧ್ಯ ನನ್ನನ್ನು ಗಣಿತದ ಮಾಸ್ಟರ್, ಪುರೋಹಿತ್ ಸರ್ ನೋಡದಿದ್ದರೆ ಸಾಕೆಂದು’ ದೇವರಲ್ಲಿ ಬೇಡಿಕೊಂಡು ಕುಳಿತಿದ್ದೆ. ಆದರೆ ಪುರೋಹಿತ್ ಸರ್ ಮೊದಲಿನ ಬೆಂಚ್ ನವರಷ್ಟೇ ಕಡೆಯ ಬೆಂಚ್ ಕಡೆಗೂ ದೃಷ್ಟಿ ಹರಿಸುತ್ತಿದ್ದರು. ನನಗೋ ತುಂಬಾ ಭಯ. ಕಡೆಗೆ ಹೋಂವರ್ಕ್ ಅನ್ನು ತೋರಿಸುವ ಸಮಯ ಬಂದಾಗ, ನನಗೆ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ಕಡೆಗೂ ಮಾಸ್ಟರ್ ಕಣ್ಣು ನನ್ನ ಕಡೆಗೆ ಹರಿದು,
’ಎಲ್ಲಿ ನಿನ್ನ ಹೋಂ ವರ್ಕ್?’ ಎಂದಾಗ, ನಾನು ಹೆದರುತ್ತಾ ಎದ್ದು ನಿಂತು,
’ಸರ್ ಹೋಂ ವರ್ಕ್ ಮಾಡಿಲ್ಲ ಸರ್’ ಎಂದಾಗ, ಅವರಿಗೆ ಸಿಟ್ಟು ಬಂದು, ಇಡೀ ಪಿರಿಯಡ್ ನನಗೆ ನಿಂತುಕೊಳ್ಳುವ ಪನಿಷ್ಮೆಂಟ್ ಕೊಟ್ಟು, ನಾಳೆಗೆ ಎರಡು ದಿನಗಳ ಹೋಂವರ್ಕ್ ಅನ್ನು ಒಟ್ಟಿಗೆ ಮಾಡಿ ತರುವಂತೆ ಹೇಳಿ ಚೆನ್ನಾಗಿ ಗದರಿಸಿದ್ದರು.
ನನಗೆ ತುಂಬಾ ಅವಮಾನವಾದಂತಾಗಿ, ಅಂದೆಲ್ಲಾ ಮನಸ್ಸಿಗೆ ಬೇಸರವಾಗಿ, ಊಟ ತಿಂಡಿ ಬಿಟ್ಟೆ. ಮಾರನೇ ದಿನವೂ ನಾನು ಹೋಂವರ್ಕ್ ಮಾಡದೇ ಇದ್ದುದ್ದರಿಂದ, ಅನಾರೋಗ್ಯದ ನೆಪ ಒಡ್ಡಿ,ಶಾಲೆಗೆ ಚಕ್ಕರ್ ಹೊಡೆದೆ. ಆ ದಿನ ಸಾಯಂಕಾಲ, ನನ್ನ ತಂದೆಯ ಜೊತೆ ಪುರೋಹಿತ್ ಸರ್ ನಮ್ಮ ಮನೆಗೆ ಬಂದಾಗ, ನಾನು ಹೋಗಿ ಕೋಣೆಯಲ್ಲಿ ಅಡಗಿ ಕುಳಿತೆ.
ನನ್ನ ತಂದೆ ಮತ್ತು ಪುರೋಹಿತ್ ಮಾಸ್ಟರ್ ಇಬ್ಬರೂ
ಸಹೋದ್ಯೋಗಿಗಳಷ್ಟೇ ಅಲ್ಲದೇ , ಕ್ಲೋಸ್ ಫ್ರೆಂಡ್ಸ್ ಕೂಡ ಆಗಿದ್ದರು.
ಹೊರಗಡೆ ಹಾಲ್ ನಲ್ಲಿ ಇಬ್ಬರೂ ಕುಳಿತು ಕಾಫಿ ಕುಡಿಯುತ್ತಿದ್ದಾಗ, ಪುರೋಹಿತ್ ಸರ್ ನನ್ನ ವಿಷಯ ತೆಗೆದು, ನಾನು ಅವರ ಗಣಿತದ ವಿಷಯದಲ್ಲಿ ಹಿಂದಿರುವ ಬಗ್ಗೆ ನಮ್ಮ ತಂದೆಗೆ ಹೇಳುತ್ತ, ನಾನು ಗಣಿತದ ಹೋಂ ವರ್ಕ್ ಮಾಡದಿರುವ ಬಗ್ಗೆಯೂ ತಿಳಿಸಿದಾಗ, ನನ್ನ ಅಪ್ಪನಿಗೆ ತುಂಬಾ ಕೋಪ ಬಂದು, ನನ್ನನ್ನು ಕೂಗಿ ಕರೆದಾಗ, ನಾನು ಹೋಗಿ ಅವರಿಬ್ಬರ ಮುಂದೆ ನಿಂತೆ.
"ಮಗಳೇ,ನೀನು ಯಾಕೆ ಗಣಿತದ ಹೋಂ ವರ್ಕ್ ಮಾಡುತ್ತಿಲ್ಲವಂತೆ. ನೋಡು ಪುರೋಹಿತ್ ಹೇಳುತ್ತಿದ್ದಾರೆ."
"ಅಪ್ಪ,ನನಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಅದಕ್ಕೆ ನಾನು ಗಣಿತದ ಹೋಂವರ್ಕ್ ಮಾಡುತ್ತಿಲ್ಲ" ನಾನು ಹೆದರುತ್ತಾ ಅಪ್ಪನ ಎದುರು ನಿಜ ಹೇಳಿದೆ.
"ಅಲ್ಲ ಮಗಳೇ, ಗಣಿತವೆಂಬುದು ನಮ್ಮ ಜೀವನಕ್ಕೆ ತುಂಬಾ ಮುಖ್ಯವಾಗಿ ಬೇಕಾಗಿರುತ್ತದೆ. ನೀನು ಈಗಿನಿಂದಲೇ ನಿನಗೆ ಗೊತ್ತಾಗದಿರುವುದನ್ನು ನಿನ್ನ ಗಣಿತದ ಮಾಸ್ಟರ್ ನಿಂದ ಕೇಳಿ ಕಲಿಯುವುದನ್ನು ಬಿಟ್ಟು ಹೀಗೆ ಅದಕ್ಕೆ ಬೆನ್ನು ಮಾಡುತ್ತಿರುವ ಈ ನಿನ್ನ ಪಲಾಯನ ಸೂತ್ರ ನನಗೆ ಇಷ್ಟವಾಗುತ್ತಿಲ್ಲ." ನನ್ನ ಅಪ್ಪ ಸ್ವಲ್ಪ ಸಿಟ್ಟು ಮಾಡಿಕೊಂಡೇ ಹೇಳಿದಾಗ, ನನಗೆ ತುಂಬಾ ಹೆದರಿಕೆಯೂ ಆಯಿತು. ನಂತರ ಅಲ್ಲೇ ಇದ್ದ
ಪುರೋಹಿತ್ ಸರ್, ನನ್ನ ಕಡೆ ತಿರುಗಿ,
" ಸುಮ, ನಿನಗೆ ಲೆಕ್ಕ ಅರ್ಥವಾಗದಿದ್ದರೆ ನನ್ನನ್ನು ಕೇಳಬೇಕು. ಅದು ಬಿಟ್ಟು, ಹಿಂದಿನ ಬೆಂಚ್ ನಲ್ಲಿ ಕುಳಿತು, ನನ್ನ ಕಣ್ಣು ತಪ್ಪಿಸಿ ಕುಳಿತುಕೊಳ್ಳುತ್ತೀಯಲ್ಲ, ಇದು ಸರಿಯಾ?"
ಹೇಳಿದಾಗ, ನಾನು ಉತ್ತರ ಹೇಳಲು ತಬ್ಬಿಬ್ಬಾದೆ.
ಆಗ ನನ್ನ ಅಪ್ಪ,
"ಮಿಸ್ಟಾರ್.ಪುರೋಹಿತ್, ಇನ್ನು ಮೇಲೆ ನೀವು ನನ್ನ ಮಗಳಿಗೆ ಗಣಿತದ ವಿಷಯವನ್ನು ಮನೆಪಾಠ ಹೇಳಿಕೊಡಬೇಕು. ನಾಳೆಯಿಂದಲೇ ನಿಮ್ಮ ಮನೆಗೆ ಇವಳನ್ನು ಕಳುಹಿಸುತ್ತೇನೆ. " ಎಂದು ಅವರಲ್ಲಿ ಹೇಳಿ,
ನನ್ನ ಕಡೆ ತಿರುಗಿ,
"ಏನು, ನಿನಗೆ ತಿಳಿತಾ?" ಎಂದಾಗ, ನಾನು ನನ್ನ ತಲೆ ಆಡಿಸಿ,ನನ್ನ ಒಪ್ಪಿಗೆ ಸೂಚಿಸಿದೆ.
ಮರುದಿನದಿಂದಲೇ ನಾನು ಗಣಿತಪಾಠಕ್ಕೆ ಪುರೋಹಿತ್ ಸರ್ ಮನೆಗೆ ಹೋಗುತ್ತಿದ್ದೆ. ಅದೇನು ಚಮತ್ಕಾರವೋ?
ನನಗೆ ತುಂಬಾ ಕಷ್ಟವೆನಿಸಿದ ಗಣಿತದ ಸಮಸ್ಯೆಗಳು ಸುಲಭವಾಗಿ ಮನದಟ್ಟಾಗತೊಡಗಿದವು. ನಂತರ ನಾನು ಗಣಿತದ ಪ್ರಮೇಯಗಳನ್ನು ತುಂಬಾ ಇಷ್ಟಪಟ್ಟು ಮಾಡಲು ಪ್ರಾರಂಭಿಸಿದೆ. ನನ್ನ ಈ ರೀತಿಯ ಪ್ರೋಗ್ರೆಸ್ ನೋಡಿ, ಅಪ್ಪ ಮತ್ತು ಪುರೋಹಿತ್ ಸರ್ ಗೆ ತುಂಬಾ ಖುಷಿಯಾಯಿತು.
ಮುಂದೆ ನಾನು ಗಣಿತದಲ್ಲೇ ಸ್ನಾತಕೋತ್ತರ ಮುಗಿಸಿ, ಕಾಲೇಜ್ ನಲ್ಲಿ ಉಪನ್ಯಾಸಕಿಯಾದಾಗ, ಪುರೋಹಿತ್ ಸರ್ ಗೆ ಸ್ವೀಟ್ ಕೊಟ್ಟು ಬರಲು, ಅವರನ್ನು ಭೇಟಿ ಮಾಡಲು ಹೋದಾಗ, ನನ್ನನ್ನು ನೋಡಿ ಅವರಿಗೆ ತುಂಬಾ ಖುಷಿಯಾಯಿತು. ಅಂದು ಅವರು ನನಗೆ ಹೇಳಿದ ಒಂದು ಮಾತು, ಇಂದಿಗೂ ನನ್ನ ಜೀವನದಲ್ಲಿ
ನಾನು ಮರೆತಿಲ್ಲ.
"ಸುಮ, ಅಂದು ನೀನು ಗಣಿತವನ್ನು ಕಷ್ಟವೆಂದು, ಅದಕ್ಕೆ ಬೆನ್ನು ತಿರುಗಿಸಿ,ಪಲಾಯನ ಸೂತ್ರ ಹಿಡಿದಿದ್ದರೆ,ಇಂದು ಹೀಗೆ ಅದರಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಿ ಪರಿಣಿತಳಾಗುತ್ತಿತ್ತೆ? ಗಣಿತದ ಸಮಸ್ಯೆಯಂತೆಯೇ ನಮ್ಮ ಜೀವನದಲ್ಲೂ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಬೆನ್ನು ತೋರಿಸದೇ, ಧೈರ್ಯವಾಗಿ ಅದರೆದುರು ನಿಂತು, ಅದಕ್ಕೆ ಪರಿಹಾರ ಹುಡುಕುವುದನ್ನು ಕಲಿತಾಗ, ನಮ್ಮ ಎಲ್ಲಾ ಸಮಸ್ಯೆಗಳಿಗೂ ಸುಲಭವಾಗಿ ಉತ್ತರ ಸಿಗುತ್ತದೆ."
ಹೀಗೆ ಗಣಿತದ ಪಾಠದ ಜೊತೆ ಜೊತೆಗೆ ಜೀವನದ ಪಾಠವನ್ನೂ ಕಲಿಸಿಕೊಟ್ಟ ಪುರೋಹಿತ್ ಸರ್ ರವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮಿಯೇ.
"ಇಂದು ನೀವು ಎಲ್ಲೇ ಇರಿ,ಹೇಗೇ ಇರಿ, ಥ್ಯಾಂಕ್ಯು ಪುರೋಹಿತ್ ಸರ್, ನಿಮಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು."