Vijaya Bharathi.A.S.

Abstract Classics Inspirational

4  

Vijaya Bharathi.A.S.

Abstract Classics Inspirational

ನನ್ನ ದೇಶ ನನ್ನ ಘನ

ನನ್ನ ದೇಶ ನನ್ನ ಘನ

3 mins
3



 ನಲವತ್ತರ ದಶಕದಲ್ಲಿ ಇಡೀ ಭಾರತದಲ್ಲಿ ಸ್ವಾತಂತ್ರ್ಯ ಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ, ಭಾರತೀಯರ ನಾಗರೀಕರೆಲ್ಲರೂ ಸ್ವ ಇಚ್ಛೆಯಿಂದ ತಮ್ಮ ಓದು ,ಉದ್ಯೋಗಗಳನ್ನು ತೊರೆದು, ತಮ್ಮನ್ನು ತಾವು ದೇಶಕ್ಕಾಗಿ ಅರ್ಪಿಸಿಕೊಳ್ಳುತ್ತಿದ್ದರು. ದೇಶಕ್ಕಾಗಿ ತಮ್ಮ ಪ್ರಾಣಗಳನ್ನು ಅರ್ಪಿಸಿದ ಅದೆಷ್ಟೋ ಜನರ ಹೆಸರು ಮುಂಚೂಣಿಯಲ್ಲಿ ಬರಲೇ ಇಲ್ಲ. ಎಲೆಯ ಮರೆಯ ಕಾಯಿಯಂತೆ ತೆರೆಯ ಹಿಂದೆ ಹೋರಾಟ ಮಾಡಿ, ತಮ್ಮ ತನು ಮನ ಧನಗಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ತ್ಯಾಗಿಗಳಿಗೇನು ಕಡಿಮೆ ಇರಲಿಲ್ಲ. ಅಂತಹ ಒಬ್ಬ ಸಾಧಾರಣ ವ್ಯಕ್ತಿಯ ಅಸಾಧಾರಣ ಹೋರಾಟ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖವೆನಿಸುತ್ತದೆ. 

ನಮ್ಮ ಕಥಾನಾಯಕ ಹರೀಶ್, ಮೈಸೂರು ಪ್ರಾಂತ್ಯದ ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಹರೀಶ್ ಹದಿನೈದು ವರ್ಷದ ಬಿಸಿ ರಕ್ತದ ಯುವಕ. ಆಗತಾನೆ ಎಸ್.ಎಸ್.ಎಲ್.ಸಿ. ಮುಗಿಸಿ ಇಂಟರ್ಮೀಡಿಯೆಟ್ (ಈಗಿನ ಪಿ.ಯು.ಸಿ.) ಗೆ ಸೇರಿದ್ದ . ದೇಶದಲ್ಲಿ ಮಹಾತ್ಮಾಗಾಂಧಿ ನೇತೃತ್ವದಲ್ಲಿ ’ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಳನ ನಡೆಯುತ್ತಿತ್ತು. ಹರೀಶ್ ಮತ್ತು ಅವನ ಇಬ್ಬರು ಸ್ನೇಹಿತರು ಈ ಆಂದೋಳನದಲ್ಲಿ ಧುಮುಕಿ ಬಿಟ್ಟರು. ಒಂದು ದಿನ ಕಾಲೇಜ್ ಗೆಂದು ಹೋದವರು, ಮನೆಗೆ ಬರಲಿಲ್ಲ. ಮನೆಯಲ್ಲಿ ಅವರ ತಂದೆ ತಾಯಿಯರು ಆತಂಕ ಗೊಂಡರು. ಬ್ರೀಟಿಷರ ಆಡಳಿತದಲ್ಲಿ ಹೋರಾಟಕ್ಕೆ ಇಳಿದವರು ಪೋಲಿಸ್ ರ ಕೈಗೆ ಸಿಕ್ಕಿ ಬಿದ್ದರಂತೂ ಅವರ ಸ್ಥಿತಿ ಏನಾಗಬಹುದೆಂದು ಊಹಿಸಿಕೊಂಡರೇ ಭಯವಾಗುತ್ತಿತ್ತು. ಅದೇ ರೀತಿ ಹರೀಶ್, ಗಿರೀಶ್ ಮತ್ತು ಮಹೇಶ್ ನ ಅಪ್ಪ ಅಮ್ಮಂದಿರು ಕಂಗಾಲಾಗಿ ಹೋದರು. 

ಒಂದು ವಾರ ಕಳೆದರೂ ಆ ಮೂರು ಜನರೂ ಮನೆಗೆ ಬರದೇ ಇದ್ದಾಗ, ಆ ಮೂವರ ತಾಯಂದಿರು ಕಣ್ಣೀರಿಡುತ್ತಾ ಕುಳಿತರು. ಅದರಲ್ಲಿ ಹರೀಶ್ ನ ತಾಯಿಯಂತೂ ಮಗನ ಯೋಚನೆಯಲ್ಲಿ ಹಾಸಿಗೆ ಹಿಡಿದು ಬಿಟ್ಟರು. ಆಂದೋಳನದಲ್ಲಿ ಹೋರಾಟ ಮಾಡುವವರೆಲ್ಲರನ್ನೂ ಜೈಲಿಗೆ ಹಾಕುತ್ತಿರುವ ವಿಷಯ ತಿಳಿದ ಮೇಲಂತೂ ಆ ಮೂವರ ಮನೆಯಲ್ಲಿ ತಂದೆ ತಾಯಿಯರು 

ನಡುಗಿ ಹೋದರು. ಜೈಲಿಗೆ ಹೋದವರು ಅಲ್ಲಿಂದ ಹೊರಬರುವುದು ಕನಸಿನ ಮಾತಾಗಿತ್ತು. 

ಎರಡು ಮೂರು ತಿಂಗಳುಗಳು ಕಳೆದರೂ ಹರೀಶ್ , ಗಿರೀಶ್ ಮತ್ತು ಮಹೇಶ್ ಮನೆಗೆ ಬರದೇ ಹೋದಾಗ, ತಮ್ಮ ಮಕ್ಕಳಿಗೆ ಏನು ಗತಿ ಅಗಿದೆಯೋ ಅಂತ ಮನೆಯವರೆಲ್ಲರೂ ಚಿಂತೆಯಲ್ಲಿ ಕಳೆದು ಹೋಗಿದ್ದರು. 

ಒಂದು ದಿನ ಗಿರೀಶ್ ಮನೆಗೆ ವಾಪಸ್ ಬಂದಾಗ, ಅವನ ಸ್ಥಿತಿಯನ್ನು ನೋಡಿ ಅವನ ತಂದೆ ತಾಯಿಗೆ ದುಃಖ ಉಕ್ಕಿ ಬಂತು. ಮಗನ ಒಂದು ಕಾಲಿಗೆ ಗುಂಡೇಟು ತಗುಲಿ, ಆ ಕಾಲು ಶಕ್ತಿಯನ್ನು ಕಳೆದುಕೊಂಡಿತ್ತು. ಊರುಗೋಲಿನ ಸಹಾಯದಿಂದ ಅವನು ಮರಳಿ ಬಂದಾಗ, ಅವನ ತಂದೆ ತಾಯಿಗೆ ಮಗನನ್ನು ನೋಡಿ ಸಂಕಟವಾದರೆ, ಅವನಿಗೆ ತುಂಬಾ ತೃಪ್ತಿ ಸಿಕ್ಕಿತ್ತು. ತನ್ನ ಭಾರತಮಾತೆಗಾಗಿ ತಾನು ಹೋರಾಡಿ . ಯಾರದೋ ಸಹಾಯದಿಂದ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದ. ಇವನು ವಾಪಸ್ ಬಂದ ಒಂದು ತಿಂಗಳೊಳಗೇ ಮಹೇಶ್ ಕೂಡ ಪೋಲಿಸರ ಕಣ್ಣು ತಪ್ಪಿಸಿ ಮನೆಗೆ ಬಂದು ಸೇರಿದ. ಅವನ ಕೈಗಳಿಗೆ ಗುಂಡೇಟು ಬಿದ್ದಿತ್ತು. ರಕ್ತ ಸುರಿಸಿಕೊಂಡೇ ಮನೆಗೆ ವಾಪಸ್ ಆಗಿದ್ದ. ಅವನ ಮನೆಯಲ್ಲಿ ಅವನ ಸ್ಥಿತಿಯನ್ನು ನೋಡಿ ಅವನ ಅಪ್ಪ ಅಮ್ಮ ಇಬ್ಬರೂ ಸ್ವಲ್ಪ ಹೊತ್ತು ಮೂರ್ಛೆ ತಪ್ಪಿ ಬಿಟ್ಟರು. ನಂತರ ಅವನನ್ನು ಕರೆದುಕೊಂಡು ಹೋಗಿ ಹತ್ತಿರದ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಅವರ ಮನೆಯವರೆಲ್ಲರಿಗೂ ಪೋಲಿಸ್ ನವರು ಇವನನ್ನು ಹುಡುಕಿಕೊಂಡು ಬರಬಹುದೆಂಬ ಭಯ ಒಳಗೊಳಗೇ ಕಾಡುತ್ತಿತ್ತು. ಮಹೇಶ್ ನನ್ನು ಗೃಹಬಂಧಿಯಾಗಿ ಇರಿಸಿದ್ದರು.


ದೇಶದಲ್ಲಿ ಸ್ವಾತಂತ್ರ ಹೋರಾಟದ ಬಿಸಿಹವಾ ಎಲ್ಲೆಲ್ಲೂ ಹೆಚ್ಚಾಗಿತ್ತು. ಹರೀಶ್ ನ ಸುದ್ಧಿಯೇ ಬರಲಿಲ್ಲ. ಅವನು ಮನೆ ಬಿಟ್ಟು ಹೋಗಿ ಹತ್ತಿರ ಹತ್ತಿರ ಒಂದು ವರ್ಷವಾಗುತ್ತಾ ಬಂದಿತ್ತು. ಅವನ ತಾಯಿ ಮಗನ ಚಿಂತೆಯಲ್ಲಿ ಮಾನಸಿಕ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಅವನ ಮನೆಯಲ್ಲಿ ಎಲ್ಲರಿಗೂ ಹರೀಶ್ ನ ಚಿಂತೆಯ ಜೊತೆ ಅವನ ತಾಯಿಯ ಚಿಂತೆಯೂ ಸೇರಿಕೊಂಡಿತ್ತು. ಒಂದು ದಿನ ಒಬ್ಬ ಅಪರಿಚಿತ ಬಂದು ,ಹರೀಶ್ ನ ತಂದೆಯ ಕೈಗೆ ಪತ್ರವೊಂದನ್ನು ಕೊಟ್ಟ. ಅದರಲ್ಲಿ ಕೆಲವು ರೀತಿಯ ಕೋಡ್ ವರ್ಡ್ಸ್ ಗಳು ಮಾತ್ರ ಇದ್ದುದ್ದನ್ನು ನೋಡಿದಾಗ, ಅದೇನೆಂದು ಅವರಿಗೆ ಅರ್ಥವಾಗಲಿಲ್ಲ. ಅಲ್ಲೇ ಇದ್ದ ಆ ಅಪರಿಚಿತನನ್ನು ಈ ಪತ್ರದ ಒಕ್ಕಣೆಯ ಅರ್ಥವೇನೆಂದು ಕೇಳಿದಾಗ, ಅಲ್ಲಿದ್ದ ಕೆಲವಿ ಸಂಜ್ಞೆ ಗಳನ್ನು ನೋಡಿ, 

"ನಿಮ್ಮ ಮಗ ಸುರಕ್ಷಿತವಾಗಿದ್ಡಾನೆ, ಸಧ್ಯದಲ್ಲೇ ಮನೆಗೆ ಹಿಂದಿರುಗುತ್ತಾನೆ, ಚಿಂತೆ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದಾಗ, ಹರೀಶ್ ನ ಮನೆಯವರಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಅವರ ತಂದೆ ತಮ್ಮ ಹೆಂಡತಿಗೆ ಮಗನ ಸಂದೇಶವನ್ನು ತಿಳಿಸಿದಾಗ ಅವರ ಮುಖದಲ್ಲಿ ಸ್ವಲ್ಪ ಗೆಲುವು ಮೂಡಿತು. ಅಪರಿಚಿತ ಸ್ವಲ್ಪ ಹೊತ್ತು ಇದ್ದು, ರಾತ್ರಿ ಹನ್ನೊಂದು ಗಂಟೆಯ ನಂತರ ಮುಸುಕು ಧರಿಸಿ ಹರೀಶ್ ನ ಮನೆಯಿಂದ ಹೊರಟ. 


ಅತ್ತ ಹರೀಶ್ ಬ್ರಿಟಿಷ್ ಸರ್ಕಾರದ ವಿರುದ್ಧ ಸ್ವದೇಶಿ ಆಂದೋಳನ ನಡೆಸುತ್ತಾ, ಅವರ ವಿರುದ್ಧ ಪಾಂಪ್ಲೆಟ್ ಗಳನ್ನು ಮಾಡಿ ಹಂಚುತ್ತ, ಪೋಲಿಸರ ಕಣ್ಣು ತಪ್ಪಿಸಿ ನೆಲಮಾಳಿಗೆಯಲ್ಲಿ ವಾಸಿಸುತ್ತಾ , ಹೋರಾಟಗಾರರ ಬಲಗೈ ಆಗಿ ಕೆಲಸ ಮಾಡುತ್ತಿದ್ದನು. 

ಪೋಲಿಸರು ಹರೀಶ್ ನ ಮೇಲೆ ಕಣ್ಣಿಟ್ಟು ಅವನನ್ನು ಬಂಧಿಸಲು ಹರಸಾಹಸ ಮಾಡುತ್ತಿದ್ದರು. ಕಡೆಗೂ ಒಂದು ಬಾರಿ ಹರೀಶ್ ನನ್ನು ಬಂಧಿಸಿ ಕಾರಾಗೃಹದಲ್ಲಿ ಸೆರೆ ಹಿಡಿದು ಬಿಟ್ಟಾಗ, ಹರೀಶ್ ಒಂದೆರಡು ದಿವಸ ಜೈಲಿನಲ್ಲಿ ಇದ್ದು, ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೊರ ಬಂದು ಬಿಟ್ಟ. ಇದಾದ ನಂತರ ಪೋಲಿಸರು ಹರೀಶ್ ನನ್ನು ಹುಡುಕಾಡುತ್ತಲೇ ಇದ್ದರು. ಆದರೆ ಅವನು ಪೋಲಿಸರ ಕಣ್ಣು ತಪ್ಪಿಸಿ, ಆಂದೋಳನಗಳಲ್ಲಿ ಸಕ್ರಿಯನಾಗಿದ್ದ. ಹರೀಶ್ ನ ಗುಂಪಿನ ಅನೇಕರು ಪೋಲಿಸರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದರು.  


ಕಡೆಗೂ ದೇಶಭಕ್ತರ ನಿರಂತರ ಹೋರಾಟದ ಫಲವಾಗಿ 1947 ರ ಆಗಸ್ಟ್ 15 ರಂದು ಭಾರತಮಾತೆಗೆ ಸ್ವಾತಂತ್ರ್ಯ ದೊರಕಿ, ದೇಶದಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ’ವಂದೇ ಮಾತರಂ’ ಘೋಷ ಮೊಳಗಿತು. 

ಮಾರನೆಯ ದಿನ ಹರೀಶ್ ತನ್ನ ಗುಂಪಿನ ನಾಯಕರಿಗೆ ಹೇಳಿ, ಮನೆಗೆ ಮರಳಿದ. ಇದುವರೆಗೂ ತಮ್ಮ ಮಗನ ಸುದ್ಧಿ ತಿಳಿಯದೇ ಅವನ ಆಸೆಯನ್ನು ತೊರೆದು ಬಿಟ್ಟಿದ್ದ ಅವನ ಅಪ್ಪ,ಅಮ್ಮ, ಅಕ್ಕ ತಂಗಿ ತಮ್ಮಂದಿರು, ಇದ್ದಕ್ಕಿದ್ದಂತೆ ಬಂದ ಹರೀಶ್ ನನ್ನು ನೋಡಿ, ಸಂತೋಷದಿಂದ ಸಂಭ್ರಮಿಸಿದರು. ಹಾಸಿಗೆ ಹಿಡಿದಿದ್ದ ತಾಯಿ ಮಗ ಹತ್ತಿರ ಬಂದಾಗ ಅವನನ್ನು ತಬ್ಬಿಕೊಳ್ಳುತ್ತಾ 

ಆನಂದ ಭಾಷ್ಪ ಸುರಿಸಿದಳು. ತನ್ನ ಮಗನೊಬ್ಬ ಸ್ವಾತಂತ್ರ ಹೋರಾಟಗಾರ ನೆಂಬ ಸಾತ್ವಿಕ ಗರ್ವ ಅವನ ಹೆತ್ತವರಲ್ಲಿ ತುಂಬಿತು. 


ಮುಂದೆ ಸ್ವಾಂತತ್ರ ಹೋರಾಟ ದಲ್ಲಿ ಭಾಗವಹಿಸಿದವರಿಗೆ ಸರ್ಕಾರದಿಂದ ಸ್ವಲತ್ತುಗಳನ್ನು ನೀಡುತ್ತದೆ ಎಂದು ಗೊತ್ತಾದಾಗ,

ಹರೀಶ್ ನಿಗೆ ಅವನ ಮನೆಯವರೆಲ್ಲರೂ ಒಂದು ಮನೆಗಾಗಿ ಅರ್ಜಿ ಹಾಕುವಂತೆ ಬಲವಂತ ಮಾಡಿದರು. ಆದರೆ ಅವನು ಅದಕ್ಕೆ ಒಪ್ಪದೇ’ ನನ್ನ ತಾಯಿಗಾಗಿ ಮಾಡಿದ ಸೇವೆಗೆ ನಾನು ಯಾವ ಪ್ರತಿಫಲವನ್ನೂ ಬಯಸುವುದಿಲ್ಲ. ಅದು ನನ್ನ ಕರ್ತವ್ಯವಾಗಿತ್ತು’ ಅಂತ ಹೇಳಿ ಸರ್ಕಾರದಿಂದ ಬರುವ ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳದೇ, ತನ್ನ ಸ್ವಂತ ತಾಕತ್ತಿನ ಮೇಲೆ ಉದ್ಯೋಗ ಹಿಡಿದನು. ಆದರೆ ಮಹೇಶ್ ಮತ್ತು ಗಿರೀಶ್ ಇಬ್ಬರಿಗೂ ಸ್ವಾತಂತ್ರ ಹೋರಾಟಗಾರರ ಕೋಟದ ಅಡಿಯಲ್ಲಿ ಉದ್ಯೋಗ ದೊರಕಲು ಬೇಕಾದಷ್ಟು ಸಹಾಯ ಮಾಡಿದನು. 

ಹರೀಶ್ ನ ನಿಸ್ವಾರ್ಥ ದೇಶಪ್ರೇಮವನ್ನು ಗುರುತಿಸಿದ ಕೆಲವು ಸಂಘ ಸಂಸ್ಥೆಗಳು ಅವನನ್ನು ಸನ್ಮಾನಿಸಿದವು.ಆಗ ಅವನ ಮನದಲ್ಲಿ'ನನ್ನ ದೇಶ ನನ್ನ ಘನ...ಸಾರೇ ಜಹಾಂಸೇ ಅಚ್ಚಾ ಹಿಂದೂ ಸಿತಾ ಹಮಾರ' ಮೊಳಗುತ್ತಿತ್ತು.


Rate this content
Log in

Similar kannada story from Abstract