ನನ್ನ ದೇಶ ನನ್ನ ಘನ
ನನ್ನ ದೇಶ ನನ್ನ ಘನ
ಇತ್ತೀಚೆಗೆ ಮುರಳಿಗೆ ಅಮೇರಿಕಾದ ಬದುಕು ತುಂಬಾ ದುಸ್ತರವೆನಿಸ ತೊಡಗಿತು. ಉದ್ಯೋಗದ ಅಸ್ಥಿರತೆ, ಭಾರತದ ವಸ್ತುಗಳು ಸಿಗದೇ ಊಟಕ್ಕೂ ಪರದಾಡುತ್ತಾ, ಅಲ್ಲಿಯ ಆಹಾರವನ್ನೇ ತಿನ್ನ ಬೇಕಾದ ಪರಿಸ್ಥಿತಿ, ಹಣದುಬ್ಬರದಿಂದ ಜೀವನ ನಿರ್ವಹಣೆಯ ಕಷ್ಟ, ....ಒಂದು ರೀತಿಯ ಒತ್ತಡದ ಬದುಕು, ...ಎಲ್ಲವನ್ನೂ ಸುಧಾರಿಸಿಕೊಂಡು ಹೋಗುವಷ್ಟರಲ್ಲಿ, ಮುರಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು.
ಆಫೀಸ್ ನಿಂದ ಮನೆಗೆ ಬಂದು ಸೇರುವ ಹೊತ್ತಿಗೆ ಅವನಿಗೆ ಏನೂ ಬೇಡವಾಗುತ್ತಿತ್ತು. ಆದರೆ ಮನೆಗೆ ಬಂದ ಮೇಲೆ ಹೆಂಡತಿ ಮಕ್ಕಳ ಬೇಡಿಕೆಗಳ ಲಿಸ್ಟ್ ರೆಡಿಯಾಗಿರುತ್ತಿತ್ತು. ಅದನ್ನು ಪೂರೈಸುವುದಕ್ಕೆ ಅವನು ಪ್ಲಾನ್ ಮಾಡಬೇಕಾಗಿರುತ್ತಿತ್ತು. ಒಟ್ಟಿನಲ್ಲಿ ಅಮೇರಿಕಾ ಬದುಕಿನಲ್ಲಿ ಹೈರಾಣಗಿ ಹೋಗಿದ್ದ. ಈಗ ಹತ್ತು ವರ್ಷಗಳ ಹಿಂದೆ ಅವನು, ಇಲ್ಲಿಯ ಉದ್ಯೋಗ, ಸಂಬಳ, ಐಷಾರಾಮಿ ಬದುಕಿಗೆ ಮಾರು ಹೋಗಿ,ಬಯಸಿ ಬಯಸಿ ಬಂದಿದ್ದ. ಮೊದಲ ಐದು ವರ್ಷಗಳು ಅವನ ಇಚ್ಛೆಯಂತೆ ಖುಷಿ ಖುಷಿಯಿಂದ ಕಳೆದು ಹೋಯಿತು. ನಂತರ ಮದುವೆ,ಮಕ್ಕಳು ಎಲ್ಲವೂ ಅವನು ಅಂದುಕೊಂಡಂತೆಯೇ ನಡೆದು ಹೋಗಿ, ಅವನ ಜೀವನ ಸ್ವರ್ಗಕ್ಕೆ ಎರಡು ಗೇಣಂತೆ ಆಗಿತ್ತು.
ಆದರೆ ಈಗ ಎರಡು ವರ್ಷಗಳಿಂದ, ಈ ಕರೋನಾ ವೇವ್ ಪ್ರಾರಂಭವಾದಾಗಲಿಂದ, ಅವನಿಗೆ ಅಮೇರಿಕಾದಲ್ಲಿ ಜೀವನ ತುಂಬಾ ಕಷ್ಟವಾಗತೊಡಗಿತು. ಆಗೆಲ್ಲಾ ಅವನು, ಭಾರತದಲ್ಲಿ ಈ ಕರೋನ ತಡೆಗೆ ಎಷ್ಟೊಂದು ಮುನ್ನಚ್ಚೆರಿಕೆ ತೆಗೆದುಕೊಂಡು, ಇಲ್ಲಿಯ ಸರ್ಕಾರ ಜನರಿಗೆ ಬೇಕಾದಷ್ಟು ಸೌಕರ್ಯಗಳನ್ನು ಮಾಡುತ್ತಾ,ಜನಹಿತವನ್ನು ಕಾಯ್ದು ಕೊಂಡಿದ್ದ ವಿಷಯವನ್ನು ಅವನು ಪ್ರತಿದಿನವೂ ಗಮನಿಸುತ್ತಿದ್ದ. ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿ ಇರುವುದನ್ನು ನೋಡುತ್ತಿರುವಾಗ ಅವನಿಗೂ ತಾನೂ ಸಹ ತನ್ನ ಮಾತೃಭೂಮಿಗೆ ಹಿಂದಿರುಗಬೇಕೆಂದು ಹಂಬಲಿಸುತ್ತಿದ್ದ. ಅದನ್ನು ಎಷ್ಟೋ ಸಲ ತನ್ನ ಹೆಂಡತಿ ಮೀರಾಳ ಹತ್ತಿರ ಹೇಳುತ್ತಲೂ ಇದ್ದ. ಆದರೆ ಅಮೆರಿಕಾದ ಜೀವನ ಶೈಲಿಗೆ ಹೊಂದುಕೊಂಡು ಬಿಟ್ಟಿದ್ದ ಅವನ ಹೆಂಡತಿ, ಭಾರತಕ್ಕೆ ಹಿಂದಿರುಗುವುದಕ್ಕೆ ತಯಾರಾಗಿರಲಿಲ್ಲ.
ಇತ್ತೀಚೆಗೆ ಅಮೇರಿಕಾದಲ್ಲಿ ಅಕ್ಕಿಗಾಗಿ ಬವಣೆ ಶುರುವಾಗಿ ಹೋಗಿ, ಒಂದು ಕೆ.ಜಿ. ಅಕ್ಕಿಗೂ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಶುರುವಾದಾಗ,ಮುರಳಿಗಂತೂ ಅಮೇರಿಕಾದ ಬದುಕಿನ ಬಗ್ಗೆ ಜುಗುಪ್ಸೆ ಶುರುವಾಗಿ, ತನ್ನ ದೇಶಕ್ಕೆ ಹೋಗಿ,ಅಲ್ಲೇ ನೆಮ್ಮದಿಯಿಂದ ಜೀವನ ಮಾಡುವುದೇ ಸರಿ ಎನಿಸುತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆ ಅವನ ಉದ್ಯೋಗಕ್ಕೂ ಕತ್ತರಿ ಬೀಳುವ ಸಂಭವನೀಯತೆ ಕಂಡು ಬಂದಾಗ, ಅವನು ತನ್ನ ತಾಯ್ನಾಡಿಗೆ ಹಿಂದಿರುಗುವ ನಿರ್ಧಾರವನ್ನು
ಘಟ್ಟಿಯಾಗಿ ಮಾಡಿಕೊಳ್ಳುತ್ತಾ ಹೋದ. ’ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು’ ಎನ್ನುವಂತೆ, ಪರದೇಶದ ಪರಮಾನಕ್ಕಿಂತ ಸ್ವದೇಶದ ಗಂಜಿಯೇ ಚಂದ ಎನಿಸುತ್ತಿತ್ತು. ನಮ್ಮ ನೆಲ, ನಮ್ಮ ಜಲ ನಮ್ಮ ದೇಶ,ನಮ್ಮ ಸಂಸ್ಕೃತಿ, ನಮ್ಮ ಜನ , ನಮ್ಮ ದೇಶದ ಸ್ವಾತಂತ್ಯದ ಸುಖ ಎಂಬ ಭಾವವೇ ಅವನಿಗೆ ಒಂದು ರೀತಿಯ ಸಮಾಧಾನವನ್ನು ತಂದು ಕೊಡುತ್ತಿತ್ತು.
ಒಂದು ದಿನ ಅವನು ತನ್ನ ಉದ್ಯೋಗಕ್ಕೆ ತಾನೇ ರಾಜಿನಾಮೆ ಇತ್ತು, ತನ್ನ ಮರ್ಯಾದೆಯನ್ನು ಉಳಿಸಿಕೊಂಡ. ನಂತರ ತನ್ನ ಅಪ್ಪ ಅಮ್ಮನಿಗೆ ಫೋನ್ ಮಾಡಿ, ತಾನು ದೆಹಲಿಗೆ ಹಿಂದಿರುಗುತ್ತಿರುವ ವಿಷಯ ತಿಳಿಸಿದಾಗ, ಮುರಳಿಯ ಅಪ್ಪ ಅಮ್ಮನಿಗೆ ತುಂಬಾ ಸಂತೋಷವಾಯಿತು. ಸ್ವಂತ ಬಿಸೆನೆಸ್ಸ್ ಮಾಡುತ್ತಿದ್ದ ಅವರಿಗೆ ಮಗ ಬರುತ್ತಿರುವ ವಿಷಯ ತಿಳಿದು ಸ್ವಲ್ಪ ಬಲ ಬಂದಂತಾಯಿತು. ತಮ್ಮ ವಯಸ್ಸಾದ ಕಾಲದಲ್ಲಿ ,ಮಗ,ಸೊಸೆ,ಮೊಮ್ಮಕ್ಕಳು ತಮ್ಮ ಹತ್ತಿರ ಇರುವ ವಿಷಯ ತಿಳಿದು, ಅವರ ತಂದೆ ತಾಯಿಗೆ ಸಮಾಧಾನವೂ ಆಯಿತು.
********
ಇದಾದ ಒಂದು ತಿಂಗಳ ನಂತರ, ಮುರಳಿ,ತನ್ನ ಹೆಂಡತಿ ಮೀರ ಮತ್ತು ಮಕ್ಕಳೊಂದಿಗೆ ದೆಹಲಿಯ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆದಾಗ,
ಅವನ ಮನಸ್ಸು ಹರ್ಷದಿಂದ ಕುಣಿಯಿತು. ಮಗನನ್ನು ರಿಸೀವ್ ಮಾಡುವುದಕ್ಕೆ ಬಂದಿದ್ದ ತನ್ನ ಅಪ್ಪ ಅಮ್ಮನನ್ನು ನೋಡಿ, ಅವನು ಓಡಿಹೋಗಿ ಅವರಿಬ್ಬರನ್ನೂ ತಬ್ಬಿಕೊಂಡ.
ಅಂದು ಮನೆಗೆ ಬಂದಾಗ ಮುರಳಿಗೆ ಅದೇನೋ ಸಮಾಧಾನವಾಯಿತು.
’ಸಧ್ಯ,ನಾನು ನನ್ನ ನೆಲಕ್ಕೆ ಬಂದು ಸೇರಿದೆನಲ್ಲ?’ ಎಂದು ನಿಟ್ಟುಸಿರು ಬಿಟ್ಟ. ಅವನು ತನ್ನ ಅಪ್ಪ ಅಮ್ಮನ ಮುಂದೆ,
"ಡ್ಯಾಡಿ, ಸಾರೇ ಜಹಾಸೆ ಅಚ್ಛ ಹಿಂದೂ ಸಿತಾ ಹಮಾರ " ಎಂದು ಖುಷಿಯಿಂದ ಹಾಡಿದಾಗ, ಗಂಡನ ಮುಖದಲ್ಲಿ ಚಿಮ್ಮುತ್ತಿದ್ದ ಆನಂದವನ್ನು ದೂರದಿಂದಲೇ ನೋಡುತ್ತಿದ್ದ ಮೀರ, ಅವನ ಹಾಡು ಮಿಗಿಸಿದ ನಂತರ ಜೋರಾಗಿ ಚಪ್ಪಾಳೆ ತಟ್ಟಿದಳು.
ಮುರಳಿಗೆ ತನ್ನ ದೇಶ,ತನ್ನ ಮನೆಗೆ ಸೇರಿದ್ದಕ್ಕೆ ಸಂತೋಷವಾದರೆ,
ಮುರಳಿಯ ತಂದೆ ತಾಯಿಗೆ ಮಗ ತಮ್ಮ ಮಡಿಲಿಗೆ ಸೇರಿದನಲ್ಲಾ ಎಂದು ಸಂತೋಷವಾಗಿತ್ತು. ಇದು ಯಾವುದರ ಪರಿವೆಯೂ ಇಲ್ಲದ ಮುರಳಿಯ ಚಿಕ್ಕ ಮಕ್ಕಳು ತಮ್ಮ ಪಾಡಿಗೆ ತಾವು ಒಂದು ಕಡೆ ಕುಳಿತು,
ಆಟವಾಡಿಕೊಳ್ಳುತ್ತಿದ್ದರು.
