Shridevi Patil

Classics Inspirational Others

4  

Shridevi Patil

Classics Inspirational Others

ನಮ್ಮನೆ ದೀಪಾವಳಿ ಹಬ್ಬ

ನಮ್ಮನೆ ದೀಪಾವಳಿ ಹಬ್ಬ

2 mins
338


ಬೋರೆ ಹಬ್ಬ ಮುಗಿಸಿ , ಮಾರನೇ ದಿನ ಅಮಾವಾಸ್ಯೆ ಸಲುವಾಗಿ ಎಲ್ಲ ತಯಾರಿ ಮಾಡಿಕೊಂಡು , ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಪೂಜೆಗೆ ಕೈ ಇಟ್ಟರೆ ಮುಗೀತು ನೋಡಿ , ಎಲ್ಲ ಮುಗಿಬೇಕಾದರೆ ಸಾಯಂಕಾಲನ ಆಗಿರ್ತತಿ. ಆಮೇಲೆ ನಾವೆಲ್ಲ ರೆಡಿಯಾಗಿ , ಮಕ್ಕಳನ್ನು ಅಲಂಕರಿಸಿ ಹಬ್ಬದ ಸಡಗರದಲ್ಲಿ ಸಂಭ್ರಮಿಸುತ್ತೇವೆ. ನಡುಮನೆಯಲ್ಲಿ ಲಕ್ಷ್ಮಿ ಕೂರಿಸಿ , ಸೀರೆ ಉಡಿಸಿ , ಅಲಂಕಾರ ಮಾಡಿ , ಮಾವಿನ ತಳಿರು ಬಾಳೆ ಕಂಬ ಕಟ್ಟಿ ಹೂವಿನ ಮಾಲೆ ತೊಡಿಸಿ , ಲೈಟಿನ ಸರ ಹಾಕಿ ಅಲಂಕರಿಸುತ್ತೇವೆ.



ಆಮೇಲೆ ಮನೆಯ ಹೊರಗಡೆ ಕಾರ್ , ಬೈಕು ನಿಲ್ಲಿಸಿ ಅದರ ಮುಂದುಗಡೆ ಮತ್ತೊಂದು ಲಕ್ಷ್ಮಿ ಕಲಶ ಸ್ಥಾಪಿಸಿ , ಅಲ್ಲಿಯೂ ಸೀರೆ ಉಡಿಸಿ , ಒಳಗಿನಂತೆಯೇ ಎಲ್ಲ ಅಲಂಕಾರ ಮಾಡಿ ಪೂಜೆ ಮಾಡುತ್ತೇವೆ. ಸಾಯಂಕಾಲ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಹಚ್ಚಿ ಉಡಿ ತುಂಬಿಸಿ ಕಳುಹಿಸುತ್ತೇವೆ. ಆಮೇಲೆ ಎಲ್ಲರ ಮನೆಯ ಲಕ್ಷ್ಮಿ ಪೂಜೆ , ಮತ್ತು ವಾಹನ ಪೂಜೆಗೆ ಹೋಗಿ ಬರುತ್ತೇವೆ. ಎಲ್ಲ ಕಡೆಯೂ ಲೈಟಿನ ಝಗಮಗ ಬೆಳಕು , ದೀಪದ ಬೆಳಕು , ಆಹಾ.! ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನ್ನುವಷ್ಟು ಅಂದ ಚೆಂದವಾಗಿ ಪ್ರತಿ ಮನೆಯೂ ಕಂಗೊಳಿಸುತ್ತದೆ. ತಡ ರಾತ್ರಿಯವರೆಗೂ ಕೇರಿಯ ಮಂದಿಯಲ್ಲ ಕುಳಿತು ಹರಟೆ ಹೊಡಿಯುತ್ತ ಕಾಲ ಕಳೆಯುತ್ತೇವೆ.ಹೀಗೆ ಅಮವಾಸ್ಯೆಯ ದಿನದ ಪೂಜೆಯಾದರೆ ಮಾರನೇ ದಿನ ಬಲಿ ಪಾಡ್ಯ ಇರುತ್ತದೆ.



ಬಲಿ ಪಾಡ್ಯಮಿ ದಿನವಂತೂ ಒಂದು ವಿಶೇಷ ಹಬ್ಬ. ಅಂದು ವಿಶೇಷವಾಗಿ ಕೊಟ್ಟಿಗೆಯ ಪೂಜೆ ಮಾಡಲಾಗುತ್ತದೆ. ಹಳ್ಳಿಯ ಕಡೆ ಇದೊಂದು ವಿಶೇಷ ಅಂತಾನೆ ಹೇಳಬಹುದು. ಅಮಾವಾಸ್ಯೆ ಮತ್ತು ಪಾಡ್ಯ ದಿನ ಮನೆಯಿಂದ ಹೊರಗೆ ಯಾರಿಗೂ ಶಗಣಿಯನ್ನು ಕೊಡುವುದಿಲ್ಲ. ಯಾಕೆಂದರೆ ಅದು ಕೂಡ ಲಕ್ಷ್ಮಿ ಅಂತಾನೆ ಪೂಜೆ ಮಾಡುತ್ತೇವೆ. ಎತ್ತು , ಆಕಳುಗಳ ಶಗಣಿಯನ್ನು ಎರಡು ದಿನದಿಂದಲೇ ಶೇಖರಿಸಿಟ್ಟಿರುತ್ತಾರೆ.



ಬಲಿ ಪಾಡ್ಯದ ದಿನ ಮನೆಯ ಎಲ್ಲರೂ ಕಡಲೆ ಬೇಳೆ ವಡೆ ಮಾಡಿಕೊಂಡು ತಿಂದು , ಕೊಟ್ಟಿಗೆಯಲ್ಲಿ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ. ಅಂದರೆ ಮೊದಲು ಅದನ್ನು ಸ್ವಚ್ಛಗೊಳಿಸುತ್ತಾರೆ. ಅದಾದ ಮೇಲೆ ಶೇಖರಿಸಿಟ್ಟ ಶೆಗಣಿಯನ್ನು ಕಡ್ಡಿ ಕಸರಿಲ್ಲದೆ ಸ್ವಚ್ಛ ಮಾಡುವರು . ಅದಾದ ಮೇಲೆ ಸರಿಯಾದ ಜಾಗ ನೋಡಿಕೊಂಡು ಅಲ್ಲಿ ಹಟ್ಟಿ ಲಕ್ಕವನನ್ನು ಕೂರಿಸಲು ರೆಡಿ ಆಗುವರು. ಮೊದಲು ಚೌಕಾಕಾರದಲ್ಲಿ ಪಟ್ಟಿ ಹಾಕಿಕೊಂಡು ಅದರ ಮೇಲೆ ಶಗಣಿಯ ಸಣ್ಣ ಸಣ್ಣ ಮುಟ್ಟಿಗೆಯ ತರ ಕಂಬದಂತೆ ಮಾಡಿ ಆ ಪಟ್ಟಿ ಮೇಲೆ ಇಡಲಾಗುತ್ತದೆ.


ಚೌಕಾಕಾರದ ಮಧ್ಯದಲ್ಲಿ ಗುಣಾಕಾರದ ಆಕಾರದಲ್ಲಿ ಮತ್ತೆರಡು ಪಟ್ಟಿ ಎಳೆಯಲಾಗ್ತದೆ , ಅದರ ಮೇಲೂ ಸಹ ಶಗಣಿಯನ್ನು ಮುಟ್ಟಿಗೆ ಕಟ್ಟಿ ಇಡಲಾಗುತ್ತದೆ. ಮಧ್ಯದಲ್ಲಿ ಹಟ್ಟಿ ಲಕ್ಕವ್ವ ಅಂತ ಲಕ್ಷ್ಮಿಯನ್ನು ಮಾಡುತ್ತಾರೆ. ಅದನ್ನು ಕೂಡ ಶೆಗಣಿಯಿಂದಲೇ ಮಾಡುತ್ತಾರೆ. ಹಟ್ಟಿ ಲಕ್ಕವ್ವನನ್ನು ಮಾಡಿ , ಆಕೆ ತಲೆ ಮೇಲೊಂದು ಬುಟ್ಟಿಯಂತೆ ಮಾಡಿ , ಅದರಲ್ಲಿ ಮೊಸರು ಹಾಕುವರು. ಆಮೇಲೆ ಹೂವು ಹಾಕಿ , ಅಲಂಕರಿಸಿ ಅದಕ್ಕೂ ಸೀರೆ ಉಡಿಸುತ್ತಾರೆ. ಮನೆಯೇ ಬಾಗಿಲಿಗೆ ಬುಡಚಿ ಅಂತ ಮಾಡಿ ಸುಣ್ಣ , ಕೆಮ್ಮಣ್ಣು ಹಚ್ಚಿ ಅಲಂಕರಿಸುತ್ತಾರೆ. ಈ ಹಟ್ಟಿ ಲಕ್ಕವ್ವಗ ಮಾಡಿದ ನೈವೇದ್ಯವನ್ನು ಮನೆಯ ಮಗ ಮಾತಾಡದೆ ಊಟ ಮಾಡಬೇಕು.


ಸಾಯಂಕಾಲ ಆಕಳು ತಂದು , ಆ ಹಟ್ಟಿ ಹಾಕಿದ ಜಾಗದಲ್ಲಿ ಹಟ್ಟಿ ಲಕ್ಕವ್ವನನ್ನು ತುಳಿಸಲಾಗ್ತದೆ. ಅದಾದ ಮೇಲೆ ಬಲ್ಲಾಳ ಬಲವಿಂದ್ರನ ಅಂತ ಹಾಡು ಹೇಳಿ , ಮನೆಯಲ್ಲಿ ತಯಾರಿಸಿದ ಕಣಕದ ದೀಪಗಳನ್ನು ಹಚ್ಚಿ ಬೆಳಗಲಾಗುತ್ತದೆ. ಅದಾದ ಮೇಲೆಯೇ ನಾವು ಮನೆಯ ತುಂಬಾ ದೀಪಗಳನ್ನು ಹಚ್ಚಿಡುತ್ತೇವೆ. ಎಲ್ಲರೂ ಖುಷಿಯಿಂದ ಬೆಳಕಿನ ಹಬ್ಬದಲ್ಲಿ , ಮನೆ ಮನದ ಅಂಧಕಾರವೆಲ್ಲ ತೊಳೆದು ಹೋಗಲಿ ಎಂದು ಬೇಡಿಕೊಂಡು ಹಬ್ಬವನ್ನು ಮುಗಿಸುತ್ತೇವೆ.


Rate this content
Log in

Similar kannada story from Classics