ನಲಿಯುತ ಬಾಳುವ ಮನೆಗೆ ಹೆಣ್ಣೇಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇಭೂಷಣ


ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ.
ನನ್ನ ಕಥಾನಾಯಕಿ ಗಗನ, ಆಗರ್ಭ ಶ್ರೀಮಂತ ಶ್ರೀಪತಿರಾಯ ಒಬ್ಬಳೇ ಮಗಳು. ರೂಪದಲ್ಲಿ ರಂಭೆ, ಮೇನಕೆಯರನ್ನೇ ಮೀರಿಸುವ ಸೌಂದರ್ಯ. ವಿಶಾಲವಾದ ಮಸ್ತಕದಲ್ಲಿ ಹುಣ್ಣಿಮೆ ಚಂದ್ರನ ಆಕಾರದ ಕೆಂಪು ಬೊಟ್ಟು, ಕಾಮನಬಿಲ್ಲಿನಂತಿರುವ ಹುಬ್ಬುಗಳು, ನೀಳ ಮೂಗು ಅದಕ್ಕೊಪ್ಪುವ ವಜ್ರದ ಮೂಗುತಿ, ತೊಂಡೆಹಣ್ಣಿನ ತುಟಿ, ತಾವರೆ ಹೋಲುವ ಕಣ್ಣುಗಳು ಅಬ್ಬಾ "ಅಂದದ ಚೆಲುವೆಯ ಮುಖಕೆ ಕಣ್ಣೇ ಕಾರಣ " ಎನ್ನುವದನ್ನು ಖಚಿತ ಮಾಡುವಂತಿತ್ತು. ಅದೇನು ದೇವರ ಸೃಷ್ಟಿಯೋ, ಗಗನಳನ್ನು ಸೌಂದರ್ಯದ ಜೊತೆ ವಿದ್ಯೆ, ಶ್ರೀಮಂತಿಕೆ, ಮೈಮಾಟ ಎಲ್ಲವನ್ನು ಸೇರಿಸಿ ಸುಂದರ ಬೊಂಬೆಯನ್ನಾಗಿಸಿದ್ದ. ತಾಯಿ ಇಲ್ಲದ ಮಗಳು ಎಂದು ರಾಯರು ಮುದ್ದಾಗಿ ಬೆಳೆಸಿದ್ದರು. ಬಾಯಿಗೆ ಬಂದದ್ದದ್ದನ್ನು ನಡೆಸುತ್ತಿದ್ದರು. BMW ಕಾರಲ್ಲೇ ಕಾಲೇಜ್ ಹೋಗೋದು. ಸಹಪಾಠಿಗಳು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ಅವಳ ಕಿಲ ಕಿಲ ನಗು ಅವಳ ಅಂದಕ್ಕೆ ಮೆರುಗು ನೀಡಿ ಹುಡುಗರಿಗೆ ಹುಚ್ಚು ಹಿಡಿಸುತ್ತಿತ್ತು . ಯಾರೂ ತನ್ನ ಅಂದಕ್ಕೆ ಸಾಟಿಯಿಲ್ಲ ಅನ್ನುವ ಗರ್ವದ ಸಂಜ್ಞೆ ಅವಳ ಮಾತಿನಲ್ಲಿ ಎದ್ದು ಕಾಣುತ್ತಿತ್ತು.
ಒಂದು ದಿನ ಕಾರಿಗೆ ಪೆಟ್ರೋಲ್ ಹಾಕಿಸಲು ಬಂಕೊಂದರಲ್ಲಿ ನಿಂತಾಗ ಪಕ್ಕದಲ್ಲಿ ಸ್ಕ್ಯೂಟಿಯಲ್ಲಿ ಕೂತಿದ್ದವನನ್ನು ನೋಡಿದ ತಕ್ಷಣ ಬೆರಗಾದಳು. ಗಂಡಸರೂ ಇಷ್ಟು ಸುಂದರ ಇರ್ತಾರಾ.. ಅಬ್ಬಾ very handsom..ಅವನೆಡೆ ನೋಡ್ತಾ ಇದ್ದಾಗ ಅವನಿಗೂ ಇವಳ ಅಂದಕ್ಕೆ ಮರುಳಾಗಿ ಬೆರಗಾಗಿ ನೋಡಿದ. ನಾಲ್ಕು ಕಣ್ಣುಗಳು ಒಂದಾದವು. ಪರಿಚಯ, ಸ್ನೇಹ ಮೆಟ್ಟಿಲು ದಾಟಿ ಪ್ರೀತಿ ಮೊಳಕೆಯೊಡೆದು, ಮದುವೆ ವರೆಗೂ ಬಂದರು. ಅವನು ಬೇರಾರು ಅಲ್ಲ ಹಿನ್ನಲೆ ಗಾಯಕ. ರೇಡಿಯೋ, ಟಿವಿ ಯಲ್ಲಿ ಹಾಡಿ ಸಂಪಾದನೆಯಲ್ಲಿ ತಂದೆ ತಾಯಿ,ತಮ್ಮ, ತಂಗಿಯರನ್ನು ಸಾಕುತ್ತಿದ್ದ. ಒಬ್ಬ ಮಧ್ಯಮ ವರ್ಗದ ತುಂಬು ಕುಟುಂಬ ಅವನದು. ಗಗನಾಗೆ ಅದ್ಯಾವುದು ಮ್ಯಾಟರ್ ಆಗ್ಲಿಲ್ಲ ಅವನ ರೂಪ, ಪ್ರೀತಿಗೆ ಮನಸೋತು, ತಂದೆಯನ್ನು ಒಪ್ಪಿಸಿ ಮದುವೆಯಾದಳು.
ಅಕ್ಕಿ ಬೆಲ್ಲ ಚೆಲ್ಲುತ್ತ ಹೊಸಿಲು ದಾಟಿ ಒಳಗೆ ಬಂದ ದಿನವೇ ಅವಳಿಗೆ ಅವನ ಮನೆ ವಾತಾವರಣ ಮುಜುಗರವಾಯಿತು. ಯಾರೂ ಗಮನಿಸಲಿಲ್ಲ. "ಕುತ್ಕೋ ಬಾಮ್ಮ" ಎಂದು ಅತ್ತೆ ಚಾಪೆ ಹಾಕಿದಾಗ, ಅತ್ತೆಯ ನೂಲಿನ ಸೀರೆ ಕಣ್ಣಿಗೆ ಬಿತ್ತು.ಅಸಹ್ಯದಿಂದ ಮೈ ಪರಚಿಕೊಳ್
ಳುವ ಹಾಗಾಯ್ತು. ಅವನ ಪ್ರೀತಿಗೋಸ್ಕರ ಸುಧಾರಿಸಿ ಕೊಂಡಳು. ಅತ್ತೆ ಮಾವ, ನಾದಿನಿ, ಮೈದುನರನ್ನು ಲೊಕ್ಡೌನ್ ಇದೆಯೇನೋ ಅನ್ನೋಹಾಗೆ ದೂರದಲ್ಲೇ ನಿಂತು ಮಾತಾಡಿಸಿದಳು.
ಬರಬರುತ್ತ ಅವಳ ಸಹನೆ ಮಿತಿ ಮೀರಿ, ಗಂಡನನ್ನು ಕರೆದುಕೊಂಡು ಬೇರೆ ಮನೆಗೆ ಬಂದೇ ಬಿಟ್ಟಳು. ಅವನೋ ಸ್ವಾಭಿಮಾನಿ ಅವಳ ನಡೆಗೆ ಬೇಸತ್ತು, ತುಂಬು ಕುಟುಂಬ ತೊರೆದು ಬಂದೆನೆಂದು ಕೊರಗ್ತಾ ಇದ್ದ. ಗಗನಾ ಮಾತ್ರ ಅಹಂಕಾರದಿಂದ ಮೆರೆಯುತ್ತಿದ್ದಳು. ತನ್ನ ಅಂದಕ್ಕೆ ಸಾಟಿಯಾಗಿರುವ ಗಂಡ, ತಂದೆಯ ಶ್ರೀಮಂತಿಕೆ ಅವಳ ಅಹಂಕಾರ ಹೆಚ್ಚಿಸಿದ್ದವು. ಅತ್ತ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ತಂದೆ ತಾಯಿ, ಓದುತ್ತಿರುವ ತಮ್ಮ, ಮದುವೆಗೆ ಬಂದಿರುವ ತಂಗಿ.ನೆನೆದು ಸಂಕಟ ಪಟ್ಟ ಅವನು ಒಂದು ನಿರ್ಧಾರಕ್ಕೆ ಬಂದು ಅವಳ ತಂದೆಗೆ ವಿಚಾರ ತಿಳಿಸಿ ಗಗನಾಳಿಂದ ಬೇರೆ ಆಗುವ ಅಭಿಪ್ರಾಯ ತಿಳಿಸಿದ. ರಾಯರು ಬಂದು ಮಗಳಿಗೆ ಎಲ್ಲಾ ತರಹದ ಬುದ್ಧಿ ಹೇಳಿದರೂ ಅವಳು ಕೇಳಲಿಲ್ಲ. "ಅವನು ಹೋಗಲಿಬಿಡಿ ನಿಮ್ಮಜೊತೆನೇ ಇರ್ತೀನಿ"ಎಂದ ಗಗನಾಗೆ, " ನೋಡು, ಕೊಟ್ಟಹೆಣ್ಣು ಕುಲಕ್ಕೆ ಹೊರತು, ಯಾವತ್ತಿದ್ರೂ ನಿನಗೆ ಈ ಮನೇಲಿ ಜಾಗ ಇಲ್ಲಾ. ಅದೇ ನಿನ್ನ ಮನೆ. ಉಳಿದದ್ದು ನಿನಗೆ ಬಿಟ್ಟಿದ್ದು " ರಾಯರು ಖಡ್ಡಿ ತುಂಡು ಮಾಡಿದ ಹಾಗೆ ಹೇಳಿ ಹೊರಟೆ ಬಿಟ್ಟರು. ಮುಖ ಮುಖ ನೋಡುತ್ತಾ ನಿಂತ ಅವನು " ನಾನು ನನ್ನ ಕುಟುಂಬ ಬಿಟ್ಟು ಇರಲು ಸಾಧ್ಯವೇ ಇಲ್ಲಾ. ನನ್ನ ಮನೆ ಬಾಗಿಲು ನಿನಗೆ ತೆರದೇ ಇರುತ್ತೆ. ಬೇಕಾದರೆ ಬಾ... " ಅವಳುತ್ತರಕ್ಕು ಕಾಯದೇ ಹೊರಗೆ ಹೊರಟೆ ಬಿಟ್ಟ.
ಗಗನಾಗೆ ದಿಗ್ಬ್ರಮೆ ಆಯಿತು. ಕಣ್ಣು ತುಂಬಿ ಬಂದು ಏನೂ ತೋಚದೆ ನಿಂತಿದ್ದಳು. ಪಕ್ಕದ ಮನೆಯ ರೇಡಿಯೋ ಉಲಿಯುತ್ತಿತ್ತು.. ಅವನೇ ಹಾಡಿದ "ಚೆಲುವೆಯ ಅಂದದ ಮೊಗಕೆ ಕಣ್ಣೇ ಕಾರಣ.. ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ " ಕೇಳುತ್ತಿದ್ದಂತೆಯೇ ಅವಳ ಅಂದಕ್ಕಿರುವ ಅಹಂಕಾರಕ್ಕೆ ತೆರೆ ಎಳೆಯಿತು. ನಿಧಾವಾಗಿ ಹೆಜ್ಜೆ ಇಡುತ್ತ ಹೊರಬಂದಾಗ ತನಗಾಗಿ ಕಾಯುತ್ತಿರುವ ಸ್ಕೂಟಿಯಲ್ಲಿದ್ದ ಅವನನ್ನು ನೋಡಿ ಓಡಿ ಹೋಗಿ ಹಿಂದೆ ಕುಳಿತು ಅವನನ್ನು ಬಿಗಿದಪ್ಪಿ "ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ, ಎಂದು... "ಕಿವಿಯಲ್ಲಿ ಪಿಸುಗುಟ್ಟಿದಳು. ಜೊತೆಯಾದವಳ ಗಗನಳೊಂದಿಗೆ ಸಂತೋಷದಿಂದ ಸ್ಕ್ಯೂಟಿ ಮುಂದೆ ಓಡಿಸಿದ.