ಹುಣ್ಣಿಮೆ ಬೆಳದಿಂಗಳ ರೋಮಾಂಚನ ...
ಹುಣ್ಣಿಮೆ ಬೆಳದಿಂಗಳ ರೋಮಾಂಚನ ...
ಹುಣ್ಣಿಮೆ ರಾತ್ರಿ ಹಾಲು ಚೆಲ್ಲಿದಂತೆ ಬೆಳದಿಂಗಳು, ಮಿನುಗುವ ತಾರೆಗಳು, ಮಂದವಾಗಿ ಬೀಸುತ್ತಿರುವ ತಂಗಾಳಿಯಲ್ಲಿ , ಭಾರವಾದ ಹೆಜ್ಜೆ ಇಡುತ್ತ ಬರುತ್ತಿದ್ದ ರೇವತಿಯ ಬಿಳಿ ಸೀರೆಯ ಸೆರಗು ಹಾರಿ ಬಾನಂಚಿನ ಬಿಳಿ ಮೋಡದಂತೆ ಕಾಣುತ್ತಿತ್ತು. ಮುಂಗುರುಳು ಹಾರಿ ಮುಖದಲ್ಲಿ ಕಚಗುಳಿ ಇಡುತ್ತಿದ್ದವು. ಮುಡಿ ಕಟ್ಟದ ಸ್ವತಂತ್ರವಾಗಿ ಹಾರಾಡುವ ಕೇಶರಾಶಿ ಆಕಾಶಕ್ಕೆ ಮೆರಗು ತಂದಿತ್ತು. ಈಜುಕೊಳದ ಹತ್ತಿರವಿದ್ದ ತೂಗುಬುಟ್ಟಿಯಲ್ಲಿ ಕುಳಿತು ಕೊಳದಲ್ಲಿ ಹೊಳೆಯುತ್ತಿದ್ದ ಹುಣ್ಣಿಮೆ ಪೂರ್ಣಚಂದ್ರನ ಪ್ರತಿಬಿಂಬ ನೋಡಿ ರೋಮಾಂಚನಗೊಂಡಳು ರೇವತಿ. ಆಸೆತುಂಬಿದ ಕಣ್ಣುಗಳು, ಅದುರುವ ತುಟಿಗಳು, ಹಣೆಯಲ್ಲಿ ಸಣ್ಣದಾಗಿ ತಂಗಾಳಿಯಲ್ಲೂ ಬೆವರ ಹನಿಗಳು ಅವಳ ವಿರಹದ ನೋವನ್ನು ಸೂಚಿಸುತ್ತಿದ್ದವು. ಉಯ್ಯಾಲೆ ಯಾಗಿತ್ತು ಮನಸ್ಸು. ತೀರದ ಬಯಕೆಯ ಹಂಬಲ ಅವಳ ಉಸಿರಿನ ಏರಿಳಿತಗಳು "ವಿರಹಾ... ನೂರು ತರಹಾ " ಎನ್ನುತ್ತಿದ್ದವು.
ತೂಗುಬುಟ್ಟಿಯಲ್ಲಿ ಕುಳಿತ ರೇವತಿ ಒಂದುಸಲ ಜೀಕಿ ಮೇಲೆ ಹೋದಾಗ, ಮೇಲೆ ಹೋದ ಪತಿಯ ನೆನಪು ಆಯಿತು. ತಾನೇ ಮೆಚ್ಚಿ ಮದುವೆಯಾದ ಸೈನ್ಯಾಧಿಕಾರಿ ಸಂಜಯ್ "ಎರಡು ತಿಂಗಳಲ್ಲಿ ಬರ್ತೀನಿ ಪುಟ್ಟಿ" ಎಂದವನು ದೇಶಸೇವೆಯ ಕರೆಗೆ ಓಗೊಟ್ಟು ಹೋದ, ತಿರುಗಿ ಬಂದಾಗ ವೀರ ಮರಣವನ್ನಪ್ಪಿ ನಿರ್ಜಿವ ವಾಗಿ ಬಂದಿದ್ದ. ಭಾರತ ಚೀನಾ ಯುದ್ಧದಲ್ಲಿ ನೂರಾರು ಚೀನಿ ಸೈನಿಕರನ್ನು ಸೆದೆಬಡೆದು, ವೈರಿಗಳ ಗುಂಡಿಗಾಹುತಿ ಆಗಿದ್ದ. ದುಃಖ ಪಡಬೇಕೋ, ಹೆಮ್ಮೆ ಪಡಬೇಕೋ ಅರಿಯದೆ ಮೂಕಳಾಗಿದ್ದಳು ರೇವತಿ. ವಿರಹ ವೇದನೆಯಿಂದ ದುರಾಲೋಚನೆಗಳು.. ಆ ಹುಣ್ಣಿಮೆ ಚಂದ್ರಮನೇಬಂದು ತನ್ನ ಆರಿದ ತುಟಿ ತೋಯಿಸಬಾರದೇ, ಹ್ರದಯದ ದಾಹ ತೀರಿಸಿ ತನು ಮನ ತಂಪುಗೊಳಿಸಬಾರದೇ.. ತಾಳಲಾರೆ ಅಂದುಕೊಳ್ಳುದ್ದಿದ್ದಂತೆಯೇ ತೂಗುಬುಟ್ಟಿ ಸುಯ್ ಎಂದು ಕೆಳಗೆ ಬಂದಿತು.
>
ನಡುಗಿದ ರೇವತಿಗೆ ಯಾರೋ ಕರೆದಂತಾಯಿತು. ನೋಡಿದರೆ ಎದುರಿಗೆ ತನ್ನದೇ ಪ್ರತಿಬಿಂಬ ಕೂಗಿ ಹೇಳುತ್ತಿತ್ತು, "ರೇವತಿ ಏನಿದು ನಿನ್ನ ಆಲೋಚನೆ, ಒಬ್ಬ ವೀರ ಯೋಧನ ಮಡದಿಯಾಗಿ. ಸಂಯಮ ಕಳೆದುಕೋ ಬೇಡ. ಕ್ಷಣಿಕ ಸುಖಕ್ಕಾಗಿ ಪತಿಗೆ ದ್ರೋಹ ಬಗೀತಿಯ? ಕಾಮನೆ ತುಂಬಿದ ಕಣ್ಣುಗಳನ್ನು , ಅದುರುವ ತುಟಿಗಳನ್ನು, ಹಣೆ ಬೆವರೊರಸಿ, ಹತೋಟಿಗೆ ತೆಗೆದುಕೋ, ವೀರಮರಣ ಹೊಂದಿದ ಸಂಜಯಗೆ ಗೌರವ ತರುವ ಯೋಚನೆ ಮಾಡು. ಏಳು ಹೊರಡು, ಹುಣ್ಣಿಮೆ ಚಂದಿರನಂತೆ ನೀನು ಎಲ್ಲಾರಿಗೂ ಬೆಳಕಾಗ ಬೇಕು.." ತಕ್ಷಣ ಪ್ರತಿಬಿಂಬ ಕಾಣದಾಯಿತು.
ರೇವತಿ ಎದ್ದು ಹೋಗಿ ಶವರ್ ಕೆಳಗೆ ನಿಂತು ಆಶೆಗಳನ್ನು ಶಮನ ಮಾಡಿಕೊಂಡು, ಸಂಜಯನ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ದೀಪ ಹಚ್ಚಿದಳು. "ಏನುಂದ್ರೆ, ಇನ್ನೆಂದು ಕನಸಿನಲ್ಲೂ ಇಂತಹ ಯೋಚನೆ ಮಾಡಲ್ಲ. ಕ್ಷಮಿಸಿ ಬಿಡಿ " ಎಂದು ಕಣ್ಣೀರಿಟ್ಟು, ಒಂದು ನಿರ್ಧಾರ ಮಾಡಿದಳು. ಮರುದಿನವೇ ನರ್ಸ್ ತರಬೇತಿ ಸೇರಿದಳು. ನಂತರ ದೇಶದ ಗಡಿಯಲ್ಲಿರುವ ಸೈನಿಕರ ಆಸ್ಪತ್ರೆಯಲ್ಲಿ ನರ್ಸ್ ಆಗಿ, ಅಳಿವು ಉಳಿವುಗಳ ಮಧ್ಯ ಇರುವ ಸಾವಿರಾರು ವೀರ ಯೋಧರ ಶುಶ್ರುಷೆ ಮಾಡಿ ಸಂಜಯನ ಆತ್ಮಕ್ಕೆ ಶಾಂತಿ ಬಯಸಿ ತಾನೂ ಒಬ್ಬ ಸಾಧಕರ ಸಾಲಿಗೆ ಸೇರಿದೆ ಎಂದು ಹೆಮ್ಮೆ ಪಟ್ಟಳು.
ಹುಣ್ಣಿಮೆ ಚಂದ್ರನ ರೋಮಾಂಚ ರಾತ್ರಿ ರೇವತಿಗೆ ಹೊಸ ಜೀವನ ತಂದು, ಆ ರಾತ್ರಿ ಅವಳ ಜೀವನದ ಮರೆಯಲಾರದ ರಾತ್ರಿಯೆನಿಸಿತು.
ರೋಮಾಂಚನ ಕೇವಲ ಪ್ರೀತಿ ಪ್ರೇಮಗಳಿಗೆ ಮೀಸಲಾಗಿಲ್ಲ. ಸಮಾಜ ಸೇವೆ, ದೇಶಸೇವೆ, ಇನ್ನೂ ಅನೇಕ ಸಾಧನೆಗಳಿಂದಲೂ ಖಂಡಿತ ರೋಮಾಂಚನವಾಗುತ್ತದೆ. ಇದು ನನ್ನ ಅಭಿಪ್ರಾಯ.