Vijaya Bharathi

Abstract Classics Others

2  

Vijaya Bharathi

Abstract Classics Others

ನಿರಂತರ

ನಿರಂತರ

3 mins
130


ಅರವತೈದರ ರಮಾಳಿಗೆ ಆ ಮನೆಯ ಜವಾಬ್ದಾರಿಗಳನ್ನು ಸಂಭಾಳಿಸಿ ಸಾಕಾಗಿ ಹೋಗಿತ್ತು. ಏರುತ್ತಿದ್ದ ವಯಸ್ಸಿನಲ್ಲಿ ಅವಳ ದೇಹ ಹಾಗು ಮನಸ್ಸು ವಿಶ್ರಾಂತಿ ಯನ್ನು ಬಯಸಿತ್ತು. ಆದರೆ ಅವಳ ಮನೆಯ ಪರಿಸ್ಥಿತಿಯಿಂದ ಅವಳು ಬಯಸಿದ ವಿಶ್ರಾಂತಿ ಇನ್ನೂ ಸಿಕ್ಕಿರಲಿಲ್ಲ.


ಇಪ್ಪತ್ತೆರಡರ ಹರೆಯದಲ್ಲಿ ಮದುವೆಯಾಗಿ ಗಂಡನ ಮನೆ ಸೇರಿದ ರಮಾ, ಅತ್ತೆ ಮಾವ ಗಂಡ ಮಕ್ಕಳು ಅಂತ ಎಲ್ಲರನ್ನೂ ಸುಧಾರಿಸಿ, ಸಂಸಾರವನ್ನು ಬ್ಯಾಲೆನ್ಸ್ ಮಾಡುತ್ತಾ, ಮನೆಯೊಳಗೂ ಹೊರಗಡೆ ಉದ್ಯೋಗವನ್ನೂ ನಿಭಾಯಿಸುತ್ತಾ ಆ ಸಂಸಾರದ ಕಷ್ಟ ಸುಖಗಳನ್ನು ಎದುರಿಸುತ್ತಾ ಸುಮಾರು ನಲ್ವತ್ತೇಳು ವರ್ಷಗಳನ್ನು ನಿಭಾಯಿಸಿಯಾಗಿತ್ತು. ಈಗ ಅವಳ ಇಬ್ಬರು ಗಂಡು ಮಕ್ಕಳು ಬೆಳೆದು ದೊಡ್ಡವರಾಗಿ ಅವರವ ಕಾಲ ಮೆಲೆ ನಿಂತಿದ್ದಾರೆ.


ರಮಾ ಮತ್ತು ಅವಳ ಗಂಡ ಶ್ರೀಪತಿ ಇಬ್ಬರಿಗೂ ನಿವೃತ್ತಿ ಆಗಿ ಐದಾರು ವರ್ಷಗಳೇ ಕಳೆದರೂ ಇಬ್ಬರೂ ಸಂಸಾರದಿಂದ ನಿವೃತ್ತಿ ಪಡೆಯಲು ಆಗಿರದೆ, ನಿವೃತ್ತಿಯಾದ ಮೇಲೂ ತೀರ್ಥ ಕ್ಷೇತ್ರಗಳಿಗೂ ಹೋಗಲಾಗದೆ ನಿರಂತರವಾಗಿ ಸಂಸಾರದಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾರೆ.


"ಬಿಟ್ಟೆನೆಂದರೂ ಬಿಡದೀ ಮಾಯೆ,ಬಿಡದಿದ್ದರೆ ಬೆಂಬಟ್ಟಿತು ಮಾಯೆ'"ಎಂಬಂತೆ ಆಗಿತ್ತು.

ಗಂಡು ಮಕ್ಕಳಿಬ್ಬರಿಗೂ ಮದುವೆ ಮಾಡಿದ ಮೇಲಾದರೂ ತಮಗೆ ವಿಶ್ರಾಂತಿ ದೊರೆಯಬಹುದೆಂದು ಭಾವಿಸಿದ್ದ ರಮಾ ಮತ್ತು ಶ್ರೀಪತಿಗೆ ನಿರಾಸೆಯೇ ಕಾದಿತ್ತು. ಮಕ್ಕಳಿಬ್ಬರ ಮದುವೆಯಾದ ಮೇಲೆ ಅವರ ಜವಾಬ್ದಾರಿ ಇನ್ನೂ ಹೆಚ್ಛಾಗಿದೆಯೇ ವಿನಾ ಕಡಿಮೆಯಾಗಿಲ್ಲ. ಸೊಸೆಯಂದಿರಿಬ್ಬರೂ ಉದ್ಯೋಗ ಮಾಡುವುದರಿಂದ,ಅದರಲ್ಲೂ ಕಾರ್ಪೊರೇಟ್ ಆಫೀಸ್ ಗಳಲ್ಲಿ ದುಡಿಯುತ್ತಿರುವುದರಿಂದ, ಅವರ ಬೇಕು ಬೇಡಗಳೂ ರಮಾಳ ಮೇಲೆಯೇ ಬಿದ್ದು,ಈಗ ಇನ್ನೂ ಮನೆಗೆಲಸದ ಹೊರೆ ಹೆಚ್ಚಾಗುತ್ತಲೇ ಹೋಗಿದೆ.


ಹೀಗಾಗಿ ರಮಾಗೆ ಇತ್ತೀಚೆಗೆ ಈ ಜೀವನದ ಬಗ್ಗೆ ತುಂಬಾ ಹತಾಶಾ ಭಾವ. ತಮ್ಮ ಜೀವನದ ಪ್ರಥಮ ಭಾಗದಲ್ಲಿ, ಮನೆಯ ಹಿರಿಯರು ಕಿರಿಯರನ್ನು ನೋಡಿಕೊಂಡು, ತಮ್ಮ ಸ್ವಂತ ಸುಖವನ್ನು ಬದಿಗಿಟ್ಟಿದ್ದಾಯಿತು, ಕೊನೆಗೆ ಜೀವನದ ಅಂತಿಮ ಭಾಗದಲ್ಲಾದರೂ ಸ್ವಲ್ಪ ನೆಮ್ಮದಿಯಾಗಿ ಇರಲು ಆಗುತ್ತಿಲ್ಲವೆಂಬುದೇ ಅವಳಿಗೆ ತುಂಬಾ ಬೇಸರ ತರುವ ವಿಷಯ.


ಬೆಳಿಗ್ಗೆ ಆರು ಗಂಟೆಗೇಳುವ ರಮಾ, ಎಲ್ಲರಿಗೂ ಕಾಫಿ,ಟೀ ,ಹಾಲುಗಳನ್ನು ಮಾಡಿಕೊಟ್ಟು, ತಿಂಡಿಗೆ ರೆಡಿ ಮಾಡ ಬೇಕು. ನಂತರ ಸೊಸೆಯರು ಸ್ವಲ್ಪ ಸಹಾಯ ಮಾಡಿದಂತೆ ಮಾಡಿ, ತಮ್ಮ ತಮ್ಮ ಡಬ್ಬಿಗಳನ್ನು ತುಂಬಿಸಿಕೊಂಡು, ಎಂಟುಗಂಟೆಗೆಲ್ಲಾ ಮನೆ ಬಿಟ್ಟರೆ ಅವರ ಕೆಲಸ ಮುಗಿದಂತೆಯೇ. ನಂತರ ಏಳುವ ಮೊಮ್ಮಕ್ಕಳಿಗೆ ಸ್ನಾನ ಗೀನ ಮುಗಿಸಿ, ಅವರನ್ನು ಶಾಲೆಗೆ ಕಳುಹಿಸಲು ಸಿದ್ದ ಮಾಡಬೇಕು. ನಂತರ ಅವರನ್ನು ಶಾಲೆಯ ಬಸ್ ಹತ್ತಿಸಿ ಬರುವುದು ಶ್ರೀಪತಿಯ ಕೆಲಸ. ಮತ್ತೆ ಇವರಿಬ್ಬರೂ ತಮ್ಮ ಸ್ನಾನ ಪೂಜೆ ಮುಗಿಸಿ,ತಿಂಡಿ ತಿನ್ನುವ ವೇಳೆಗೆ ಹನ್ನೊಂದು ಹೊಡೆಯಿತ್ತಿತ್ತು. ತಿಂಡಿಯ ನಂತರ, ಬಿ.ಪಿ. ಶುಗರ್ ಮಾತ್ರೆಗಳನ್ನು ತೆಗೆದುಕೊಂಡು, ಸ್ವಲ್ಪ ಹೊತ್ತು ಕುಳಿತು ಅಡುಗೆಗೆ ತಯಾರಿ ಮಾಡ ಬೇಕು. ಊಟ ಮುಗಿಸಿ, ಉಸ್ಸಪ್ಪ ಅಂತ ಕುಳಿತುಕೊಳ್ಳುವ ವೇಳೆಗೆ ಕೆ.ಜಿ.ಕ್ಲಾಸ್ ಮೊಮ್ಮಗು ಬರುತ್ತಿತ್ತು..ಅದಕ್ಕೆ ಯೂನಿಫಾರಂ ಬಿಚ್ಚಿ ಬೇರೆ ಬಟ್ಟೆ ಹಾಕಿ, ಊಟ ಮಾಡಿಸುವ ಹೊತ್ತಿಗೆ ರಮಾಗೆ ತುಂಬಾ ಸಾಕೆನಿಸುತ್ತಿತ್ತು. ನಾಲ್ಕು ಗಂಟೆಗೆ ಇನ್ನೊಂದು ಮೊಮ್ಮಗು ಬಂದಾಗ ಅದಕ್ಕೆ ಏನಾದರೂ ಸ್ನಾಕ್ಸ್ ಕೊಡಬೇಕು, ನಂತರ ಇಬ್ಬರಿಗೂ ಹಾಲು ಬೆರೆಸಿ ಕುಡಿಸಿ ಕೂರುವ ಹೊತ್ತಿಗೆ ಹೊತ್ತು ಮುಳುಗುತ್ತಿತ್ತು. ಮತ್ತೆ ರಾತ್ರಿಯ ಊಟಕ್ಕೆ ಸಿದ್ದ ಮಾಡಬೇಕು.


ಈಗಿನ ಕಾಲದಲ್ಲಿ ಮಹಾನಗರಗಳಲ್ಲಿ ಕೆಲಸಕ್ಕೆ ಹೋಗುವ ಎಲ್ಲರೂ ಮನೆ ಸೇರುವುದೇ ರಾತ್ರಿ ಒಂಭತ್ತಾಗುವುದರಿಂದ ರಾತ್ರಿಯ ಆಡುಗೆಯೂ ರಮಾ ಮೇಲೆ ಬೀಳುತ್ತಿತ್ತು. ಅವಳಂತೂ 'ಈ ಮನೆಗೆಲಸ ವಂತೂ ಹೆಂಗಸಾದವಳಿಗೆ ಎಂದೂ ಮುಗಿಯದ ಕಥೆ' ಯೇ ಸರಿ ಎಂದು ಎಷ್ಟು ಬಾರಿ ಅಲವತ್ತು ಕೊಳ್ಳುತ್ತಿದ್ದಳೋ?. ನಿವೃತ್ತಿ ಯಾದ‌ ನಂತರ ವಾದರೂ ಎಲ್ಲಿಯಾದರೂ ಪ್ರವಾಸಗಳಿಗೆ ಹೋಗಬೇಕೆಂಬ ರಮಾಳ ಯೋಜನೆ ಕಾರಣಾಂತರಗಳಿಂದ ತಪ್ಪಿಹೋಗುತ್ತಿದ್ದುದು ಅವಳ ಬೇಸರವನ್ನು ಹೆಚ್ಚಿಸುತ್ತಾ, ಅವಳು ತಾಳ್ಮೆಕಳೆದುಕೊಳ್ಳುವಂತಾಗುತ್ತಿತ್ತು. 


ಒಮ್ಮೊಮ್ಮೆ ರಮಾಗೆ ತುಂಬಾ ಸಾಕಾಗಿ ಹೋಗಿ, ಗಂಡು ಮಕ್ಕಳಿಬ್ಬರನ್ನೂ ಬೇರೆ ಮನೆ ಮಾಡಿ ಕೊಂಡಿರುವಂತೆಯೂ ಹೇಳಿಬಿಟ್ಟಿದ್ದಳು. ಆದರೆ ಅವರೆಲ್ಲಿ ಕೇಳುತ್ತಾರೆ?. ಈ ಮನೆಯಲ್ಲಿ ಅಪ್ಪ ಅಮ್ಮನಿಂದ ಸಿಗುವ ಸೌಲಭ್ಯ ಸೌಕರ್ಯಗಳು ಬೇರೆ ಮನೆಗೆ ಹೋದರೆ ಎಲ್ಲಿ ಸಿಕ್ಕೀತು.ತಮ್ಮ ಹೆಂಡತಿಯರೂ ನೆಮ್ಮದಿಯಿಂದ ಕೆಲಸಕ್ಕೆ ಹೋಗಲು ಅನುಕೂಲವೆಂದು ಅವರಿಗೆ ತಿಳಿಯದೆ? ಅವರಿಬ್ಬರೂ ರಮಾಳ ಮಾತಿಗೆ ಹಾ ಅನ್ನಲಿಲ್ಲ ಹೂ ಅನ್ನಲಿಲ್ಲ. ಹೀಗೇ ರಮಾ ಮತ್ತು ಶ್ರಿಪತಿಯವರ ದಿನಚರಿ ನಿರಂತರವಾಗಿ ಬಿಡುವಿಲ್ಲದೇ ನಡೆಯುತ್ತಿತ್ತು. ಗಂಡು ಮಕ್ಕಳನ್ನು ಎದುರು ಹಾಕಿಕೊಳ್ಳಲೂ ಆಗದೆ, ಇಳಿವಯಸ್ಸಿನಲ್ಲಿ ಎಲ್ಲಾ ಕೆಲಸಗಳನ್ನೂ ಮಾಡಲೂ ಆಗದೆ ಬಿಸಿ ತುಪ್ಪ ಬಾಯಿಯಲ್ಲಿ ಇಟ್ಟು ಕೊಂಡಂತೆ ಇದ್ದರು.


ಇತ್ತೀಚೆಗೆ ಈ ದಿನಚರಿಯಿಂದ ಸ್ವಲ್ಪ ಸಮಯ ನೆಮ್ಮದಿಯಾಗಿರಲು ರಮಾ ಮತ್ತು ಶ್ರೀ ಪತಿ ಒಂದು ಮಾರ್ಗ ವನ್ನು ಹುಡುಕಿ ಕೊಂಡರು. ಪ್ರತಿ ಭಾನುವಾರ ಸಾಯಂಕಾಲ ರಮಾ ಮತ್ತು ಶ್ರೀ ಪತಿ ಇಬ್ಬರೂ ಶ್ರೀ ರಾಮಕೃಷ್ಣಾಶ್ರಮಕ್ಕೆ ಹೋಗಿ ಬರಲು ಪ್ರಾರಂಭಿಸಿದರು. ಅಲ್ಲಿ ನಡೆಯುವ ಸತ್ಸಂಗ ಕಾಲಕ್ಷೇಪಗಳಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಅಲ್ಲಿಯ ಸ್ವಾಮೀಜಿಯವರ ಪ್ರವಚನವನ್ನು ಕೇಳುತ್ತಿದ್ದ ರಮಾಗೆ ಅವರ ಕೆಲವು ವಾಕ್ಯಗಳು ಮನದಾಳದಲ್ಲಿ ಹೊಕ್ಕಿದವು.


"ಈ ಜಗತ್ತೆಂಬುದು ಭಗವಂತನ ಲೀಲಾವಿನೋದ.ಇದರಲ್ಲಿ ನಾವೆಲ್ಲರೂ ಅವನ ಆಟದ

ದಾಳಗಳು. , ಜನನ ,ಮರಣ,ಗಳ ವೃತ್ತದಲ್ಲಿ ನಿರಂತರವಾಗಿ ನಮ್ಮನ್ನು ಸುತ್ತಿಸುತ್ತಿರುತ್ತಾನೆ. ಗೃಹಿಣಿಯಾದವಳು ಹೇಗೆ ತನ್ನ ಮನೆಗೆಲಸದಲ್ಲಿ ನಿರಂತರವಾಗಿ ಸುತ್ತು ತ್ತಿರುತ್ತಾಳೋ, ಅದೇ ರೀತಿ ಭಗವಂತ,ತನ್ನ ಸೃಷ್ಟಿ ಸ್ಥಿತಿ ಲಯಗಳನ್ನು ನಿರಂತರವಾಗಿ ನಡೆಸುತ್ತಿರುತ್ತಾನೆ. ಇದೊಂದು ಮುಗಿಯದ ಕಥೆ. ಮನುಷ್ಯನಾಗಿ ಹುಟ್ಟಿದವರೆಲ್ಲರೂ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಲೇ ಭಗವಂತನಲ್ಲಿ ಶರಣಾಗತಿ ಮಾಡುತ್ತಾ, ಈ ಜನನಮರಣ ಚಕ್ರದಿಂದ ಮುಕ್ತರಾಗ ಬೇಕೆಂಬುದೇ ಅವನ ಉದ್ದೇಶ.  ಆದ್ದರಿಂದ,ಈ ನಿರಂತರವಾದ ಎಂದೂ ಮುಗಿಯದ ಈ ಸಂಸಾರ ಚಕ್ರದಲ್ಲಿದ್ದುಕೊಂಡೆ ಭಗವಂತನ ಕಡೆಗೆ ಸಾಗಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಇದರ ಕಡೆ ಸಾಗಲು ನಾವು ನಮಗಾಗಿ ದಿನದ ಸ್ವಲ್ಪ ಸಮಯವನ್ನು ಮೀಸಲಾಗಿಡಬೇಕು. ಈ ದಾರಿಯಲ್ಲಿ ಸಾಗುತ್ತಾ ಮುಂದುವರಿದಾಗ ಯಾವುದಾದರೊಂದು ಜನ್ಮದಲ್ಲಿ ಮನುಷ್ಯ ಮುಕ್ತಾತ್ಮನಾಗಬಹುದು. ಇಲ್ಲವಾದರೆ ಈ ಸಂಸಾರ ಚಕ್ರ ದಲ್ಲೇ ನಿರಂತರವಾಗಿ ಸುತ್ತುತ್ತಿರಬೇಕಾಗುತ್ತದೆ."


ಅಂದಿನ ಪ್ರವಚನ ಕೇಳಿ ಮನೆಗೆ ಬಂದ ಮೇಲೆ, ರಮಾ ಒಂದು ನಿರ್ಧಾರಕ್ಕೆ ಬಂದಳು. ಇದುವರೆಗೂ ಎಲ್ಲಾ ಮನೆಗೆಲಸಗಳನ್ನೂ ತನ್ನ ಮೇಲೇ ಎಳೆದುಕೊಳ್ಳುತ್ತಿದ್ದ ಅವಳು, ಒಂದೊಂದಾಗಿ ಸೊಸೆಯಿಂದಿರಿಗೆ ಬಿಟ್ಟು ಬಿಟ್ಟು ,ತಾನು ಸ್ವಾಮೀಜಿಯವರು ತಿಳಿಸಿದ ದಾರಿಯಲ್ಲಿ ಸಾಗಲು ಪ್ರಾರಂಭಿಸಿದಳು. ಮೊದಮೊದಲು ಗಂಡು ಮಕ್ಕಳು ಮತ್ತು ಸೊಸೆಯಿಂದರು ಮಣಮಣಗುಟ್ಟಿದರೂ ಅದರ ಬಗ್ಗೆ ಗಮನ ಕೊಡದೆ ತನ್ನ ದಾರಿಯಲ್ಲಿ ತಾನು ನಡೆಯತೊಡಗಿದಳು. ಮುಂದೆ ಮುಂದೆ ಹೋದಂತೆ ಅವಳ ಮಾರ್ಗ ಸುಗಮವಾಗಿ, ತನಗೆ ಬೇಕಾದ ಹಾಗೆ ನೆಮ್ಮದಿಯಿಂದ ಕಳೆಯುತ್ತಾ, ಸತ್ಸಂಗದ್ವರೊಡನೆ, ತನ್ನ ಗಂಡನ ಜೊತೆ ತೀರ್ಥಯಾತ್ರೆಗಳನ್ನು ಮಾಡುತ್ತಾ, ನೆಮ್ಮದಿಯಿಂದ ಕಾಲ ಕಳೆಯತೊಡಗಿದಳು.


Rate this content
Log in

Similar kannada story from Abstract