ನಿಮ್ಮ ಪ್ರೀತಿಗೆ ಚಿರಋಣಿ ನಾನು
ನಿಮ್ಮ ಪ್ರೀತಿಗೆ ಚಿರಋಣಿ ನಾನು
ಅದೊಂದು ದಿನ 'ರೀ, ಇವತ್ತು ಆಸ್ಪತ್ರೆಗೆ ಬಂದಿದೀನಿ , ಈವತ್ತು ಅಡ್ಮಿಟ್ ಆಗಲೇಬೇಕು , ನಾಳೆಗೆ ಸರ್ಜರಿ ಮಾಡ್ತೀವಿ ಅಂತ ವೈದ್ಯರು ಹೇಳ್ತಿದಾರೆ, ನೀವು ಬೇಗ ಬನ್ನಿ' ಅಂತ ಕಾಲ್ ಮಾಡಿ ಹೇಳಿದೆ. ಸರಿ ನೀ ಹೆದರಬೇಡ , ಆರಾಮಿರು ನಾನು ಆಫೀಸಲ್ಲಿ ಲೀವ್ ಕೇಳಿ ಬರ್ತೀನಿ ಅಂದ್ರು. ಬೆಳಗಾವಿಯಿಂದ ಹುಬ್ಬಳ್ಳಿಗೆ ಬರಬೇಕಿತ್ತು. ಲೀವ್ ಕೇಳಿ ಅಲ್ಲಿಂದಾನೆ ಬೈಕ್ ಹತ್ತೇ ಬಿಟ್ಟಿದ್ದಾರೆ. ಕೇವಲ ಒಂದು ಒಂದೂವರೆ ಗಂಟೆಯೊಳಗೆ ಆಸ್ಪತ್ರೆಗೆ ಬಂದಿದ್ದಾರೆ. ಬಂದವರೇ , ಶ್ರೀ , ಹೇಗಿದಿಯಾ? ಡಾಕ್ಟರ್ ಏನಂದ್ರು ? ನಾಸ್ಟಾ ಆದ್ರೂ ಮಾಡಿದಿಯಾ ಇಲ್ವಾ? ಬಾ ಏನಾದ್ರೂ ತಿಂದು ಬರೋಣ ಅಂತ ಮಾತಾಡ್ತಾನೆ ಇದಾರೆ. ನನಗಂತೂ ಅವರ ಮುಖ ನೋಡಿ ನಿಜವಾಗ್ಲೂ ಅಳು ಬಂತು. ಆ ಕಾಳಜಿಭರಿತ , ಪ್ರೀತಿಯ ಮಾತುಗಳು ನನ್ನ ಅರ್ಧ ನೋವನ್ನು ಕಡಿಮೆ ಮಾಡಿದ್ದವು. ಜೊತೆಗೆ ಆಪರೇಷನ್ ಬಗ್ಗೆ ಇದ್ದ ಭಯವನ್ನು ಹೊಗಲಾಡಿಸಿದ್ದವು. ಹದಿಮೂರು ದಿನಗಳ ಕಾಲ ಡ್ಯೂಟಿ ಎನ್ನದೆ ನನ್ನ ಆರೈಕೆಯಲ್ಲಿ ಸಮಯ ಕಳೆದ ಇವರು ನನ್ನನ್ನು ಮಗುವಿನಂತೆ ನೋಡಿಕೊಂಡಿದ್ದಾರೆ. ತಮ್ಮ ಊಟ, ನಿದ್ರೆಯನ್ನೇ ಮರೆತಂತೆ ಕಾಣುತ್ತಿದ್ದರು. ಏನೇ ಹೇಳಿ , ನಾನಂತೂ ಇವರನ್ನು ಪಡೆಯಲು ಪುಣ್ಯ ಮಾಡಿದ್ದೆ ಅನಿಸುತ್ತೆ. ಊಟ ಸೇರುತ್ತಿಲ್ಲ ಅಂತೇನಾದರೂ ನಾನು ಸ್ವಲ್ಪ ತಿಂದಿದ್ದರೆ, ಸ್ವಲ್ಪ ಸಮಯದ ಬಳಿಕ ಮತ್ತೇನಾದರೂ ತಿಂಡಿಯನ್ನು ತಂದು ತಾವೇ ತಿನ್ನಿಸಿ ಆಮೇಲೆ ಮಾತ್ರೆ ಕೊಡುತ್ತಿದ್ದರು. ಆಪರೇಷನ್ ಆದ ದಿನ ಪೂರ್ತಿಯಾಗಿ ಉಪವಾಸ ಇದ್ದೆ. ಸಲಾಯನ್ ಮಾತ್ರ ಇತ್ತು. ಮರುದಿನ ಇಡ್ಲಿ ಕೊಡಲು ಹೇಳಿದರು. ಇಡ್ಲಿಯೇನೋ ತಂದರು . ಆದರೆ ನನಗೆ ಬಲಗಡೆ ಎದೆ ಆಪರೇಷನ್ ಆಗಿದ್ದರಿಂದ ಕೈ ಎತ್ತಿ ತಿನ್ನಲು ಆಗಲಿಲ್ಲ. ಆಗ ನಮ್ಮಮ್ಮ ತಿನ್ನಿಸಲು ಬಂದರು. ಆದರೆ ಇವರು ಅತ್ತೆ ನೀವು ತಿನ್ನಿಸುವುದು ಬೇಡ ಬಿಡಿ , ನಾನೇ ತಿನ್ನಿಸ್ತಿನಿ, ನಿನ್ನೆಯಿಂದ ಉಪವಾಸ ಇದ್ದಾಳೆ. ನಾ ತಿನ್ನಿಸಿದರೆ ಒಂದು ತುತ್ತು ಜಾಸ್ತಿ ತಿಂತಾಳೆ ಅಂತ ತಾವೇ ತಿನ್ನಿಸಿದ್ರು. ಅವರ ಒಳ್ಳೆಯತನಕ್ಕೆ, ಪ್ರೀತಿಗೆ ಸರಿಸಾಟಿ ಯಾರಿಲ್ಲ. ಆಪರೇಷನ್ ಆಗಿದೆ ಅಂತಲ್ಲ , ಹಿಂದೆ ಕೂಡ ಸ್ವಲ್ಪವೇ ಜ್ವರ ಬರಲಿ , ನೆಗಡಿ ಆಗಲಿ ಅವರಂತೂ ಸ್ವಲ್ಪವೂ ಬೇಸರ ಮಾಡಿಕೊಂಡಿದ್ದು ಇಲ್ಲ. ಆಸ್ಪತ್ರೆಗೆ ಕರೆದೊಯ್ಯುವುದರ ಜೊತೆಗೆ ಮಾತ್ರೆ ಕೊಡುವುದು , ಊಟದ ಕಾಳಜಿ , ವಿಕ್ಸ್ ಮೆಂತೋ ಪ್ಲಸ್ ಹಚ್ಚುವುದರಿಂದ ಹಿಡಿದು ಅತಿಯಾದ ಕಾಳಜಿ ಮಾಡುತ್ತಾರೆ. ಆರೋಗ್ಯ ಸುಧಾರಿಸುವವರೆಗೂ ಬಿಸಿ ಅನ್ನ , ಬಿಸಿ ಉಪ್ಪಿಟ್ಟು ತಾವೇ ಮಾಡಿಕೊಡುತ್ತಾರೆ. ರಾತ್ರಿ ಆಗಾಗ ಎದ್ದು ಜ್ವರ ಕಮ್ಮಿಯಾಗಿದೆಯಾ ಎಂದು ಪದೇ ಪದೇ ನೋಡುವುದು , ತಣ್ಣೀರಿನ ಪಟ್ಟಿ ಹಾಕುವುದು , ಔಷಧಿ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಕೊಡುವುದು, ಹೀಗೆ ನಮ್ಮೆಜಮಾನರು ತುಂಬಾ ಪ್ರೀತಿಯಿಂದ , ಕಾಳಜಿಯಿಂದ , ಒಂಚೂರು ಬೇಸರಿಸಿಕೊಳ್ಳದೆ , ಆರೈಕೆ ಮಾಡುತ್ತಾರೆ. ನಾನಂತೂ ಅವರಿಗೆ , ಅವರ ಪ್ರೀತಿ ಕಾಳಜಿಗೆ ಯಾವಾಗಲೂ ಚಿರಋಣಿ ಅಂತ ಹೇಳ್ತಾನೆ ಇರ್ತೀನಿ.
ಇನ್ನೂ ಅವರಿಗೇನಾದರೂ ಆರೋಗ್ಯ ಸರಿಯಿಲ್ಲ , ಜ್ವರ ಬಂದಿದೆಯೆಂದು ಗೊತ್ತಾದರೆ ಸಾಕು. ನನಗಂತೂ ಕೈ ಕಾಲೇ ಆಡುವುದಿಲ್ಲ. ಮೊದಲು ಕಷಾಯ ಮಾಡಿಕೊಟ್ಟು , ನಂತರ ವಿಕ್ಸ್ ಹಚ್ಚಿ , ಮಾತ್ರೆ ಕೊಡ್ತೀನಿ. ನನಗಂತೂ ಬೈಕ್ ಡ್ರೈವಿಂಗ್ ಬರಲ್ಲ. ಸೋ ಯಾರಾದರೂ ಅಕ್ಕಪಕ್ಕದವರು ಸಿಗುತ್ತಾರೆಯಾ ಅಂತ ವಿಚಾರಿಸಿ ಬಂದು , ಯಾರಾದರೂ ಸಿಕ್ಕರೆ ಮೊದಲು ಆಸ್ಪತ್ರೆಗೆ ಕಳುಹಿಸಿಕೊಡ್ತೀನಿ. ಅವರಿಗೆ ಬಾಯಿ ರುಚಿ ಕೆಟ್ಟಿರುತ್ತೆ ಅಂತ ಅವರಿಗಿಷ್ಟವಾದ ರೊಟ್ಟಿಯ ಊಟವನ್ನೇ ಮಾಡಿಕೊಡುವೆ. ಸರಿಯಾದ ಟೈಮಿಗೆ ಮಾತ್ರೆ ಕೊಟ್ಟು ಅವರಂತೆ ನಾನೂ ಕೂಡ ಕಾಳಜಿ ಮಾಡುವೆ. ಸ್ವಲ್ಪ ದಿನದ ಹಿಂದೆ ಶುಗರ್ ಸ್ವಲ್ಪ ಹೆಚ್ಚು ತೋರಿಸ್ತಿದೆ ಅಂತ ವೈದ್ಯರು ಹೇಳಿದಾಗ , ನಾನು ಇಲ್ರಿ ಡಾಕ್ಟರ್ , ಅವರಿಗೆ ಶುಗರ್ ಇಲ್ರಿ , ಒಮ್ಮೆಗೆ ಹೆಂಗ ಬರ್ತತಿ ಅದು ಅಂತ ವಾದಿಸಿದ್ದೆ. ಊಟದಲ್ಲಿ ಕಂಟ್ರೋಲ್ ಮಾಡಬಹುದು ಎಂದು ಗೊತ್ತಿದ್ದರೂ ಆವತ್ತಂತೂ ತುಂಬಾ ಅತ್ತಿದ್ದೆ. ಅದೇಕೋ ಗೊತ್ತಿಲ್ಲ, ಅವರಿಗೆ ಸ್ವಲ್ಪ ಹುಷಾರು ತಪ್ಪಿದರೂ ನನ್ನ ಅರ್ಧ ಜೀವವೇ ಹೋಗಿರುತ್ತೆ. ನನ್ನ ಪ್ರಾಣವೇ ಅವರಾಗಿರುವುದರಿಂದ ಅವರು ಎಂದೆಂದೂ ಚೆನ್ನಾಗಿರಬೇಕು.
ಹೀಗೆ ನಾವಿಬ್ಬರು ಯಾವಾಗಲೂ ಪರಸ್ಪರ ಒಬ್ಬರಿಗೊಬ್ಬರ ಕಾಳಜಿ ಮಾಡುತ್ತ ಮಗಳೊಂದಿಗೆ ಖುಷಿಯಾಗಿ , ಆರಾಮಾಗಿ , ಚೆನ್ನಾಗಿದಿವಿ.
