ನೆಚ್ಚಿನ ಗುರು
ನೆಚ್ಚಿನ ಗುರು
ಅದೊಂದು ಸುಂದರವಾದ ಮಾದರಿ ಗ್ರಾಮ.
ಅಲ್ಲಿ ಒಂದು ಮಾದರಿ ಸರ್ಕಾರಿ ಪ್ರೌಢಶಾಲೆ.
ಅಂದು ಆ ಶಾಲೆಯಲ್ಲಿ ಮಕ್ಕಳೆಲ್ಲರೂ ತುಂಬಾ ಸಪ್ಪೆಯಾಗಿದ್ದರು. ಎಲ್ಲರ ಮುಖದಲ್ಲೂ ಒಂದು ರೀತಿಯ ದುಗುಡ. ಕೆಲವು ಹೆಣ್ಣು ಮಕ್ಕಳಂತೂ ಕಣ್ಣೀರಿಡುತ್ತಿದ್ದರು. ಅವರ ನೆಚ್ಚಿನ ಗುರುಗಳಾಗಿದ್ದ
ಅರ್ಜುನ್ ಸರ್ ಆ ಶಾಲೆಯಿಂದ ಬೇರೆ ಶಾಲೆಗೆ
ವರ್ಗವಾಗಿ ,ಅಂದು ಆ ಶಾಲೆಯಿಂದ ರಿಲೀವ್ ಆಗುತ್ತಿದ್ದರು. ಆ ಶಾಲೆಯಲ್ಲಿ ಅರ್ಜುನ್ ಸರ್ ಅಂದರೆ ಮಕ್ಕಳೆಲ್ಲರಿಗೂ ಅಚ್ಚು ಮೆಚ್ಚು.
ವಿಜ್ಞಾನ ದ ಉಪಾಧ್ಯಾಯ ರಾಗಿದ್ದು ಅತ್ಯಂತ ಕಿರಿಯ ವಯಸ್ಸಿನವರಾಗಿದ್ದರು.
ಅರ್ಜುನ್ ಸರ್ ಅತ್ಯಂತ ಕಠಿಣ ವಾದ ವಿಜ್ಞಾನವನ್ನು ಅತ್ಯಂತ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಚೆನ್ನಾಗಿ ಕಲಿಸುತ್ತಿದ್ದರು. ವಿಜ್ಞಾನದ ಪ್ರಾಯೋಗಿಕತೆಯನ್ನು ತಾವೇ ನಿಂತು ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದರು. ಗ್ರಾಮೀಣ ಮಕ್ಕಳಿಗೆ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿದ್ದರು. ಈಗ ಮೂರು ನಾಲ್ಕು ವರ್ಷಗಳಿಂದ ಆ ಶಾಲೆಯ ವರ್ಚಸ್ಸನ್ನು ಹೆಚ್ಚು ಮಾಡಿದ್ದ ಅರ್ಜುನ್ ಸರ್ ಗೆ ಬೇರೆ ಶಾಲೆಗೆ ವರ್ಗಾವಣೆ ಆದಾಗ, ಆ ಶಾಲೆಯ ಮಕ್ಕಳಿಗೆ ತುಂಬಾ ದುಃಖವಾಯಿತು. ಆದರೆ ಸರ್ಕಾರದ ಆದೇಶವನ್ನು ಯಾರು ಮೀರುವಂತಿಲ್ಲ.
ಅರ್ಜುನ್ ಸರ್ ಗೆ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭವನ್ನು ಆ ಶಾಲೆಯವರು ಏರ್ಪಡಿಸಿದ್ದರು. ಅಂದಿನ ಸಮಾರಂಭದಲ್ಲಿ ತಮ್ಮ ನೆಚ್ಚಿನ ಗುರುವಿನ ಬಗ್ಗೆ ಆ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಯೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ಅಂದು ಆ ಶಾಲೆಯ ತನ್ನ ಪ್ರೀತಿಯ ವಿದ್ಯಾರ್ಥಿ ಗಳು ಸಲ್ಲಿಸಿದ ಗೌರವಾದರಗಳನ್ನು ಕಂಡು ಅರ್ಜುನ್ ಸರ್ ಕಣ್ಣುಗಳು ತುಂಬಿ ಕೊಂಡವು.
ಕಡೆಗೂ ಭಾರವಾದ ಹೃದಯದಿಂದ ತಮ್ಮ ನೆಚ್ಚಿನ ಗುರು ಗಳನ್ನು ಹನಿಗಣ್ಣುಗಳಿಂದ ಬೀಳ್ಕೊಟ್ಟರು.
ಗುರು ಶಿಷ್ಯರುಗಳ ಹೃದಯ ಸ್ಪರ್ಶಿಯ ಈ ಬೀಳ್ಕೊಡುಗೆ ಅಲ್ಲಿದ್ದವರೆಲ್ಲರನ್ನೂ ಭಾವುಕರನ್ನಾಗಿಸಿತು.
