ನಾನು ನೋಡಿದ ಅಪ್ಪನ ಮೊದಲ ಬೈಕ್
ನಾನು ನೋಡಿದ ಅಪ್ಪನ ಮೊದಲ ಬೈಕ್
ಎಲ್ಲರಿಗೂ ಅವರದೇ ಆದಂತಹ " ಮೊದಲ " ಎನ್ನುವ
ಎಷ್ಟೋ ವಿಷಯಗಳು ಇರುತ್ತವೆ . ಆ ಮೊದಲುಗಳ ಮಧ್ಯದಲ್ಲಿ ಕೆಲವೊಂದು ಅತೀ ಮುಖ್ಯವಾದಂತವುಗಳು ಇರುತ್ತವೆ. ಮರೆಯಲೂ ಆಗದ ಇಂತಹ ಮೊದಲುಗಳ ಸಾಲಲ್ಲಿ ನಾನು ನನ್ನ ಅಪ್ಪನ ಪ್ರೀತಿಯ ಒಂದು ಮೊದಲಿನ ಬಗ್ಗೆ ಬರೆಯಬೇಕೆಂದಿರುವೆ.
ನಾನು ಚಿಕ್ಕವಳಿದ್ದಾಗ ಅಪ್ಪ , ನನ್ನನ್ನು ಊರಲ್ಲಿ ಅಜ್ಜಿ ಹತ್ತಿರ ಬಿಟ್ಟು ಭಾರತ ಮಾತೆಯ ಸೇವೆಗೆಂದು ತೆರಳಿದ್ದರು . ಚಿಕ್ಕವರಿದ್ದಾಗ ಮನೆಯ ಪರಿಸ್ಥಿತಿ ಈಗಿನಂತೆ ಇರಲಿಲ್ಲವಂತೆ. ಸ್ವಲ್ಪ ಕಷ್ಟದ ದಿನಗಳನ್ನು ಕಂಡ ಅಪ್ಪ ತಮಗೆ ಅಂತ ಯಾವ ಒಂದು ವಸ್ತುವನ್ನು ಇಷ್ಟ ಪಟ್ಟು ಕೊಂಡು ಖುಷಿ ಪಟ್ಟವರಲ್ಲ. ಯಾಕೆಂದರೆ ಬರುವ ಸಂಬಳದಲ್ಲಿ ತಮ್ಮ ಕುಟುಂಬ ನಿಭಾಯಿಸುವದರ ಜೊತೆಗೆ ಹಳ್ಳಿಗೂ ದುಡ್ಡು ಕಳಿಸಬೇಕಿತ್ತು . ಹೀಗಾಗಿ ಅಪ್ಪ ಒಂದು ವಸ್ತು ಕೊಳ್ಳುವಾಗ ನೂರು ಬಾರಿ ಯೋಚಿಸಿ , ಯೋಚಿಸಿ ತಾವು ಕೊಂಡ ಆ ವಸ್ತುವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತ , ಅದನ್ನು ಜೋಪಾನವಾಗಿ ನೋಡಿಕೊಳ್ಳುವ ಸ್ವಭಾವ ಅಪ್ಪನದು .
ಆರ್ಮಿಯಲ್ಲಿದ್ದ ಅಪ್ಪ ಅಲ್ಲೊಂದು ಮೊದಲ ಬಾರಿಗೆ ಸೈಕಲ್ ಕೊಂಡಿದ್ದರು. ಆ ಸೈಕಲ್ ಮೇಲೆ ನಾನು ಹತ್ತಿಲ್ಲ , ಆದರೂ ನನ್ನ ತಮ್ಮ ತಂಗಿಯರು ಆಡಿದ ನೂರು ನೆನಪಿದೆ. ಅಮ್ಮ ಆ ಸೈಕಲ್ ನಲ್ಲಿ ತಂಗಿಯರಿಬ್ಬರನ್ನು ಕೂರಿಸಿಕೊಂಡು ಹೋಗುವಾಗ ರೇವತಿಯ ಕಾಲು ಸಿಕ್ಕು , ಕಾಲು ಮುರಿದುಕೊಂಡ ನೆನಪು ಈಗಲೂ ಮರೆಯಲ್ಲ. ಆ ಸೈಕಲ್ ಮದ್ಯಪ್ರದೇಶದಿಂದ ಹಾವೇರಿಯ ಹಳ್ಳಿಗೆ ಬಂದಿತ್ತು. ಒಂದು ಗೀಚೂ ಸಹ ಆಗಿರಲಿಲ್ಲ. ಅದನ್ನು ನನ್ನ ತಮ್ಮ ಹಾಗೂ ಅತ್ತೆ ಮಗ ಸಂತೆಗೆ ಹೋದಾಗ ಆ ಸೈಕಳನ್ನು ಕಳೆದುಕೊಂಡು ಬಂದಿದ್ದರು.
ಅಪ್ಪ ತುಂಬಾ ಬೇಸರ ಮಾಡಿಕೊಂಡಿದ್ದರು.
ಸ್ವಲ್ಪ ದಿನಗಳ ನಂತರ ಅಪ್ಪನಿಗೆ ಅಮ್ಮ ಬೈಕು ಕೊಳ್ಳುವಂತೆ ಒತ್ತಾಯಿಸಿದರು. ಬೈಕು ಓಡಿಸಲು ಬಾರದ ಅಪ್ಪ ಅದರತ್ತ ಗಮನ ಕೊಡಲಿಲ್ಲ. ನಿಜ ಹೇಳಬೇಕೆಂದರೆ ಅವರಿಗೆ ಬೈಕು ಇಷ್ಟವಿರಲೇ ಇಲ್ಲ. ಆದರೆ ಅಮ್ಮ ಬಿಡಬೇಕಲ್ಲ , ದಿನವೂ ಒತ್ತಾಯಿಸಿ ಒತ್ತಾಯಿಸಿ ಬೈಕು ತರಲು ಒಪ್ಪಿಸಿದರು.
ಒಪ್ಪಿಗೆ ಕೊಟ್ಟ ತಕ್ಷಣ ಅಮ್ಮ ಒಂದೇ ವಾರದಲ್ಲಿ ತರುವಂತೆ ಹೇಳಿದರು. ಹೇಗೋ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದರು. ಹಾವೇರಿಗೆ ಹೋಗಿ ಹೀರೋ ಹೋಂಡಾ ಬೈಕು ತಂದಿದ್ದರು. ಆ ಬೈಕ್ ತಂದರೂ ಅಪ್ಪಾಜಿಗೆ ಓಡಿಸಲು ಬರುತ್ತಿರಲಿಲ್ಲ. ಆದರೂ ಪ್ರಯತ್ನ ಮಾಡಿ ಕಲಿಯುತ್ತಿದ್ದರು. ಸ್ವಲ್ಪ ದಿನಗಳ ನಂತರ ರೇವತಿಯನ್ನು ಕೂರಿಸಿಕೊಂಡು ಓಡಿಸುತ್ತಿರುವಾಗ ಬಿದ್ದು ಕೈ ಕಾಲು ಗಾಯವಾಗಿ ಎಷ್ಟೋ ದಿನಗಳ ಕಾಲ ಆರೈಕೆಯಾದರು.
ಹೀಗೆ ಅಪ್ಪ ತಂದ ಆ ಹಸಿರು ಬಣ್ಣದ ಬೈಕು ಈಗಲೂ ಕಣ್ಣ ಮುಂದೆ ಬಂದು ಆ ದಿನದ ನೆನಪು ತರಿಸುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಏಳೆಂಟು ಬೈಕುಗಳನ್ನು ಬದಲಾಯಿಸಿದ್ದಾರೆ. ಆದರೂ ಆ ಹಸಿರು ಬಣ್ಣದ ಬೈಕು ಮಾತ್ರ ಅಪ್ಪನೂ ಮರೆಯಲ್ಲ. ಅಪ್ಪನ ಜೊತೆಯ ಆ ಹಸಿರು ಬೈಕಿನಲ್ಲಿ ಹೋದ ಸವಾರಿಯನ್ನಂತೂ ಮರೆಯೋಕ್ಕಾಗಲ್ಲ.
ಈ ಮೊದಲ ಬೈಕು ಅಮ್ಮನ ಕನಸು, ನಮ್ಮ ಆಸೆಯ ಕೂಸು ಆಗಿತ್ತು. ಪ್ರತಿ ಆಮವಾಸ್ಯೆಗೆ , ಹಬ್ಬಕ್ಕೂ ತೊಳೆದು ಪೂಜೆ ಮಾಡಿ ಖುಷಿ ಪಡುತ್ತಿದ್ದೆವು. ಆ ಬೈಕ್ ಮೇಲೆ ಎಲ್ಲಿಲ್ಲದ ಪ್ರೀತಿ ,ಅಭಿಮಾನ ಇದ್ದಿತು. ಸರಿಯಾಗಿ ಓಡಿಸಲು ಬಾರದ ಅವರು , ಈಗಂತೂ ಬೈಕ್ ತೆಗೆದುಕೊಂಡು ಧಾರವಾಡ , ಗದಗ , ಹಿರೇಕೆರೂರ್ ಶಿರ್ಶಿ ಎಲ್ಲ ಕಡೆಯೂ ಸುತ್ತಿದ್ದಾರೆ.
ನಾನು ನೋಡಿದ ಅಪ್ಪನ ಆ ಮೊದಲ ಬೈಕ್ ನ ನೆನಪು ಈಗಲೂ ಹಸಿರಾಗಿದೆ.
