ಮುಂದೇನು?
ಮುಂದೇನು?
ನಮ್ಮ ಬೀದಿಯ ಕೊನೆಯ ಮನೆಯಲ್ಲಿ ಒಬ್ಬರು ಸತ್ತು ಹೋಗಿದ್ದಾರೆ ಎಂಬ ಸೂಚನೆ ಗೊತ್ತಾದರೆ ಸಾಕು ನನ್ನ ಎದೆ ಢವ ಢವ ಅನ್ನುತ್ತಾ ಹೊಡೆದುಕೊಳ್ಳುತ್ತಿತ್ತು. ನಾನು ಆ ಮನೆಯ ಕಡೆ ನೋಡುವುದಕ್ಕೂ ಹೆದರಿಕೊಂಡು ಬೀದಿಗೇ ಬರುತ್ತಿರಲಿಲ್ಲ. ರಾತ್ರಿ ಕಣ್ಣು ಮುಚ್ಚಿ ನಿದ್ರೆ ಮಾಡಲು ಭಯ. 'ನಾನೂ ಸತ್ತು ಹೋದರೆ? ನನ್ನನ್ನು ಸುಡುತ್ತಾರೆ, ಅಬ್ಬಾ ಅಗಿ ನನಗೆ ಉರಿಯಾಗುತ್ತದೆ, ಆ ನಂತರ ನಾನು ನಮ್ಮವರೊಂದಿಗೆ ಇರಲಾಗದು. ಅಬ್ಬಾ ಸಾವು ಎಂದರೆ ಏಕೋ ಭಯ ಭಯ ಭಯ. ನನಗೆ ಒಂದೇ ಪ್ರಶ್ನೆ ಕಾಡುತ್ತಿತ್ತು,ನಾವು ಸತ್ತು ಹೋದರೆ ಮುಂದೇನು?ಎಲ್ಲಿಗೆ ಹೋಗುತ್ತೀವಿ?'ಈ ಸಾವಿನ ವಿಷಯ , ನೆನಸಿಕೊಂಡಷ್ಟೂ ನನ್ನ ಭಯ ಹೆಚ್ಚುತ್ತಿತ್ತು.
ಒಂದು ದಿನ ನಮ್ಮ ಮನೆಯಲ್ಲಿ ನಮ್ಮ ಅಜ್ಜಿ ಸತ್ತುಹೋದಾಗ ನನಗೆ ಅವರನ್ನು ಮಲಗಿಸಿದ್ದ ಕಡೆ ಹೋಗುವುದಕ್ಕೆ ಭಯ. ಆಗ ನನ್ನ ಅಪ್ಪ ಸಾವಿನ ಬಗ್ಗೆ ತಿಳುವಳಿಕೆ ನೀಡಿ, ನನ್ನನ್ನು ನಮ್ಮ ಅಜ್ಜಿಯ ದೇಹದ ಹತ್ತಿರ ಕರೆದೊಯ್ದು, '
'ಇದು ಕೇವಲ ದೇಹ, ತುಂಬಾ ದಿನಗಳು ಇದನ್ನು ಮನೆಯಲ್ಲಿಟ್ಟು ಕೊಂಡರೆ,ಹುಳು ಹುಪ್ಪಟೆ ತಿನ್ನಲು ಬರುತ್ತವೆ. ಕೆಟ್ಟ ವಾಸನೆ ಹರಡುತ್ತದೆ. ಈ ದೇಹದಿಂದ ಅಜ್ಜಿ ಯ ಆತ್ಮ ದೇವರ ಹತ್ತಿರ ಹೋಗಿದೆ. ಇನ್ನು ಈ ದೇಹಕ್ಕೆ ಅವರು ಮತ್ತೆ ಹಿಂದಿರುಗಿ ಬರಲಾರರು. ದೇವರು ಅವರಿಗೆ ಹೊಸ ದೇಹ ಕೊಡುತ್ತಾನೆ.ಮುಂದೆ ಅವರು ಯಾವ ರೂಪದಲ್ಲಿ ಇರುತ್ತಾರೆನ್ನುವುದು ನಮಗೆ ಯಾರಿಗೂ ತಿಳಿಯುವುದಿಲ್ಲ. ಮನುಷ್ಯ ರಾಗಿ ಹುಟ್ಟಿ ಈ ದೇಹ ಪಡೆದವರೆಲ್ಲರೂ ಒಂದು ದಿನ ಈ ದೇಹ ಬಿಟ್ಟು ಹೋಗಲೇ ಬೇಕು '
ನನಗೆ ಸ್ವಲ್ಪ ಸ್ವಲ್ಪ ವಾಗಿ ಸಾವಿನ ಬಗ್ಗೆ ಮನದಟ್ಟಾಯಿತು. ಆದರೂ ಒಮ್ಮೊಮ್ಮೆ ಈ ಬದುಕು
ಮುಗಿದ ನಂತರ ಮುಂದೇನು ಎಂದು ಚಿಂತಿಸುತ್ತ ಹೋದರೆ ಎಲ್ಲವೂ ಅಯೋಮಯ ವೆನಿಸುತ್ತದೆ.
ಕಾಣದ ಮರಣಾನಂತರದ ಆ ಮುಂದಿನ ಬದುಕಿನ ಬಗ್ಗೆ ಅತಿಯಾದ ಯೋಚನೆ ಮಾಡದೇ, ಇಂದು ಆ ದೇವರು ಕೊಟ್ಟಿರುವ ಈ ಸುಂದರ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದಷ್ಟೇ ನಮ್ಮ ಗುರಿ ಯಾಗಿರಬೇಕು.
ಎಂದು ನನ್ನ ಈಗಿನ ನಿಲುವು.
