STORYMIRROR

radheya kanasugalu

Classics Inspirational Others

4  

radheya kanasugalu

Classics Inspirational Others

ಮನಸ್ಸು ಮಾಡಿಯಾಗಿರಲಿ

ಮನಸ್ಸು ಮಾಡಿಯಾಗಿರಲಿ

4 mins
273

ಮುಂಜಾನೆ ಎಲ್ಲಾ ಮಂದಿ ಜಲ್ದಿ ಎದ್ದು ಸ್ವಚ್ಛತಾ ಕಾರ್ಯಕ್ರಮ ಮಾಡಕತ್ತಿದ್ರು. ಅವರವರ ಮನಿ ತೊಳಿಯುದು, ಹಾಸಗಿ ತೊಳದ ಹಾಕುದು ಮಾಡಕತ್ತಾರ. 'ಸ್ವಾಮಗೊಳ ಬರು ಟೈಮ ಆತು ಜಲ್ದಿ ತಯಾರಗ' ಅಂತ ಊರ ಗೌಡ ಹೆಂಡ್ತಿಗ ಹೇಳಿದಾ. ಊರಾನ ಎಲ್ಲಾ ಮಂದಿ ಸ್ವಾಮಗೊಳ ಬರಾತಾರ ಅಂತ ಮನಿ ಹಸನ ಮಾಡಿ ಪೂಜೆ ಸಾಮನ ತೊಗೊಂಡ ತಯಾರಾಗಿ ಊರಾಗಿನ ಗುಡಿ ಕಡೆ ಹೊಂಟ್ರು. 


ಊರಿಗೆ ಸ್ವಾಮಗೊಳ ಬರತಾರ ಅಂದ್ರ ಮಂದಿ ಮನಿ ಮಡಿ ಮಾಡಿ ತಾವು ಮಡಿಯಾಗಿ ಹೊಗಾವರು. ಮತ್ತ ಸ್ವಾಮಗೊಳ ಪಾದ ಪೂಜೆ ಮಾಡಾಕ ಎಲ್ಲಾರಿಗು ಅವಕಾಶ ಇತ್ತು. ಅದ್ಕ ಮಂದಿ ನಾ ಮೂದಲ ನಿ ಮೂದಲ ಪಾದ ಪೂಜಿ ಮಾಡಬೇಕು ಅಂತ.

ಸ್ವಾಮಗೊಳ ಊರಿಗೆ ಬಂದ್ರ, ಮೂದಲ ಹೋಗಿ ಪುಷ್ಕರಣಿ ಒಳಗ ಜಳಕ ಮಾಡಿ ಗುಡಿಗೆ ಹೋಗಿ ದೇವರ ಪೂಜೆ ಮಾಡಿದಮ್ಯಾಲ ಒಂದ ಗ್ಲಾಸ ನೀರು ಕುಡದ ಮಂದಿಗೆ ಭೇಟಿ ಆಗವರು. ಯಾಕಂದ್ರ..,ಶ್ರಾವಣ ಮಾಸದಾಗ ಅವರು ಉಪವಾಸ ಮಾಡವರು ಅದ್ಕ ಪೂಜೆ ಆಗುತನ ನೀರು ಕುಡಿತಿರಲಿಲ್ಲಾ. 


ಊರನಾ ಮಂದೆಲ್ಲಾ ಬಂದು ಪಾದ ಪೂಜಿಗೆ ತಯಾರಾಗಿ ನಿಂತಿದ್ರು . ಆದ್ರ ನಿಂಗವ್ವ ಅಜ್ಜಿ ಅವತ್ತ ಊರಿಂದ ಬಂದ್ಳು. "ಅಯ್ಯ ಶಿವನ ಊರಿಗೆ ಸಾಮಿಯೋರ ಬಂದಾರ ನಾ ಅರೆ ತಮ್ಮನ ಊರಿಗೆ ಹೋಗಿದ್ನಿ ಇಗ ಬಂದಿನಿ ಏನ್ಮಾಡ್ಲಿಪಾ ದೇವರ..! 

ಲಗುನ ಜಳಕಾ ಮಾಡಿ ಮನಿಗೆಲ್ಲಾ ಗೋಮೂತ್ರ ಸಿಡಸಿ ಪೂಜಿ ಸಾಮನ ತೂಗೂಂಡ ಹೋದ್ರ ಆತ..." ಅಂದ್ಳು.

ಗುಡಿ ಮುಂದ ಮಂದಿ ಪಾಳಿ ಮನಗಂಡ ಹಚ್ಚಿದ್ರು.

ನಿಂಗವ್ವ ಅಜ್ಜಿ ಜಳಕಾ ಮಾಡಿ ಇದ್ದಂತಾದ ಸೀರಿ ಊಟ್ಕೊಂಡಳು, ಸೀರಿಗೆ ಅಲ್ಲಲಿಗೆ ತ್ಯಾಪಿ ಹಚ್ಚಿತ್ತು, ದಿಂಡ ಹಾಕಿ ಹೋಲದಿತ್ತ. ಮನಿಗೆಲ್ಲಾ ಗೋಮೂತ್ರ ಸಿಡಿಸಿ, ಪೂಜಿ ಸಾಮನ ತೂಗೂಂಡ ಹಿತ್ತಲದಾಗ ಬೆಳದ ಹೂವಿನ ಗಿಡದಾನ ಹೂ ಕಿತ್ತ್ಕೊಂಡ ಕೈಯ್ಯಾಗ ಬಡಗಿ ಹಿಡದ ಗುಡಿ ಕಡೆ ಹೊಂಟಳು.


ಗುಡಿ ಮುಂದ ಹೋಗುಕ ಮಂದಿನ ನೋಡಿ ಅಂಜ್ಕೋತ ಹೋಗಿ ಪಾಳಿ ಹಚ್ಚಾಕ ಹೋದಳು.

"ಅಯ್ಯ....! ನಿನ ಮುದಕಿ ಇಲ್ಯಾಕ ಬಂದಿ..?! ನಡಿ ನಡಿ ಅಕಡಿ ದೂರ ನಿಂದರ....." ಅಂದ್ರು ಅಲ್ಲಿ ನಿಂತ ಮಂದಿ.

"ಯಾಕ ಯಪ್ಪ, ನಾನು ಸಾಮಗೂಳ ದರಸನಾ ಮಾಡಿ ಪಾದಾ ಪೂಜಿ ಮಾಡಾಕ ಬಂದಿನಿ" ಅಂತ ಅಜ್ಜಿ ಅಂದ್ಳು. "ನಿಮ್ಮಂತವರ ನಮ್ಮ ಜೋಡಿ ನಿಂದರುದ... ನೀವೆನಿದ್ರು ಊರ ಹೊರಗ. ನಿಮ್ಮಂತ ಬಡ ಭಿಕಾರಿಗೆ ಪೂಜಿ ಯಾಕ ಬೇಕ? ನೋಡ ನಿನ್ನ ಅವತಾರ ನಿನ್ನ ಹರಕ ಸೀರಿ, ಮುರಕಾ ತಾಟ (ತಟ್ಟೆ) ಇಂತಾದ್ರಾಗ ಪೂಜಿ ಸಾಮನ ತಂದಿ. ಮತ್ತ ಸ್ವಾಮಗೊಳ ನಿಮ್ಮಂತವರಿಗೆ ಮುಟ್ಟಸ್ಕೊಳಲ್ಲ ಸುಮ್ಮ ದೂರ ಕುಂತ ಪೂಜಿ ನೋಡಿ ಹೋಗ.." ಅಂತ 

ಪಾಳಿ ನಿಂತ ಮಂದಿ ಹೀಂಗೆಲ್ಲಾ ಅಂದಿದ್ದ ನೋಡಿ ನಿಂಗವ್ವ ಅಜ್ಜಿಗೆ ಬ್ಯಾಸರಾಗಿ ದೂರ ಹೋಗಿ ನಿಂತಳು.

ಎಲ್ಲಾ ಮಂದಿ ಹೊಸ ಅರಬಿ, ರೇಷ್ಮಿ ಸೀರಿ, ಬಂಗಾರ ಮೈ ತುಂಬ ಹಾಕೂಂಡ ಬೆಳ್ಳಿ ತಾಟ ಒಳಗ ತರತರಹದ ಹೂವ, ಗಂಧದ ಕಡ್ಡಿ, ಕರ್ಪೂರ, ಬೆಳ್ಳಿ ಬಟ್ಟಲದಾಗ ಅರಿಶಿನಾ -ಕುಂಮಕುಮ, ಬೆಳ್ಳಿ ಚರಗಿ ಒಳಗ ನೀರು, ಗೋಡಂಬಿ ಬದಾಮಿ ದ್ರಾಕ್ಷಿ ಹಾಕಿ ಮಾಡಿದ್ದ ನೈವೆದ್ಯ ತಂದಿದ್ರು. ಕೆಲವುರ ಹಿತ್ತಾಳಿ ಮತ್ತ ತಾಮ್ರದ ಸಾಮಾನದಾಗು ತಂದಿದ್ರು.


ಆದ್ರ ನಿಂಗವ್ವಜ್ಬಿ ಹಳಿ ಸೀರಿ ಉಟ್ಕೊಂಡ, ಮುರದಿದ್ದ ಗಂಗಾಳದಾಗ (ಅಂಚು ಇಲ್ಲದ ತಟ್ಟೆ) ಅಲ್ಲೆ ದಂಡಿಗೆ ಅರಿಶಿನ ಕುಂಮಕುಮ , ಎರಡ ಉದ್ದಿನ ಕಡ್ಡಿ,ಎರಡು ಹಿತ್ತಲದಾಗ ಬೆಳದ ದಾಸವಾಳ ಹೂವ ಒಂಚುರ ನೈವೆದ್ಯಕ್ಕ ಬೆಲ್ಲದ ಹರಳು ಒಂದ ಚರಗಿ ನಾಕ ಸಲಾ ಬೂದಿ ಹಚ್ಚಿ ತಿಕ್ಕಿದ್ಳು ಸ್ವಚ್ಛ ಕಾಣ್ಲಿ ಅಂತ ಅದರಾಗ ನೀರು ತೂಗೂಂಡ ಬಂದಿದ್ಳು.

"ದೇವರ ಮಂದೆನ ಹಿಂಗ ಅಂದ್ರಲಾ ಇರ್ಲಿ ಬಿಡು ದೂರ ಕುಂತ ಪೂಜಿ ನೋಡಿ ಹೋದ್ರ ಆತ" ಅಂತ ಅಜ್ಜಿ ದೂರ ಕುಂತಳು.

"ಸ್ವಾಮಗೊಳ ಪೂಜಿ ಮಗ್ಸಿದ್ರು, ಇನ್ನ ಹೊರಗಿನ ಶಿವಲಿಂಗ ಪೂಜಿ ಮತ್ತ ಪಾದ ಪೂಜಿಗೆ ಹೊರಗ ಬರಾಕತ್ತಾರ ಯಾರು ಗದ್ದಲ ಮಾಡಬ್ಯಾಡ್ರಿ ಶಾಂತ ಇರ್ರಿ" ಅಂತ ಗುಡ್ಯಾಗಿಂದ ಅನೌನ್ಸ ಮಾಡಿದ್ರು.

ಮಂದೆಲ್ಲಾ ಶಾಂತಾಗಿ ನಿಂತ್ರು.


ಸ್ವಾಮಗೊಳ ಬಂದ್ರು...!

ಅಜ್ಜಿ ಸ್ವಾಮಗೂಳ ಬರುದ ನೋಡಿ ಅಕಿ ತಂದ ಪೂಜಿ ಸಾಮಾನ ಹಿಂದ ಸರಿಸಿ ಮುದರಕೊಂಡ ಕುಂತಳು. 

ಸ್ವಾಮಗೊಳ ದೂರಿಂದ ನೋಡ್ಕೊತ ಬಂದ್ರು. ಮಂದಿ ನಿಂತಿದ್ದು, ಅಜ್ಜಿ ದೂರ ಕುಂತಿದ್ದು. 

ಸ್ವಾಮಗೊಳ ಅಜ್ಜಿ ಕಡೆನೆ ನಡ್ಕೊತ ಹೊಂಟ್ರು. 

ಅವರ ಶಿಷ್ಯರು "ಗುರುಗೊಳ ಮಂದಿ ಇಲ್ಲಿ ಪಾಳಿಗೆ ನಿಂತಾರ.." ಸ್ವಾಮಗೊಳು ಸುಮ್ನೆ ಇರುವಂಗ ಸನ್ನೆ ಮಾಡಿ ಹೇಳಿದ್ರು.

ಶಿಷ್ಯರು ಸುಮ್ನ ಅವರ ಹಿಂಬಾಲ ಹೊಂಟ್ರು. ಸ್ವಾಮಗೊಳ ನಿಂಗವ್ವ ಅಜ್ಜಿ ಕಡೆ ಹೊದ್ರು, ಅವರಿಗೆ ಅಕಿ ಹಿಂದ ಚರಗಿ ಮತ್ತ ಕೆಂಪು ಹೂವ ಕಾಣಸ್ತು ಮತ್ತ ಕೇಳಿದ್ರು "ಯಾಕ ಅಜ್ಜಿ, ಹೂವು ಮತ್ತ ನೀರಿನ ಚರಗಿ ನೋಡಿದ್ರ ಪೂಜಿಗೆ ಬಂದಂಗ ಅನಸತದ ಆದ್ರಅಲ್ಲಿ ಮಂದಿ ನಡು ನಿಂದರುದ ಬಿಟ್ಟ ದೂರ ಯಾಕ ನಿಂತಿ..?" ಆದ್ರ ಅಜ್ಜಿಗೆ ಅವರನ್ನ ನೋಡಿ ಮಾತೆ ಬರಲಿಲ್ಲ.. ಸ್ವಾಮಗೊಳಿಗೆ ಅಲ್ಲಿ ನಡದ ಘಟನೆ ಅರ್ಥ ಆಗಿ ಅಜ್ಜಿ ಕಡೆ ಹೋಗಿರತಾರ. "ನಡಿ ನಡಿ ಅಜ್ಜಿ ಪೂಜಿ ಮಾಡುನಡಿ" ಅಂತ ಅಕಿ ತಂದ ಪೂಜಿ ತಾಟ ತೂಗೂಂಡ ಅಲ್ಲಿ ಶಿವಲಿಂಗ ಪೂಜಿ ಮಾಡುನ ನಡಿ ಅಂದ್ರು. ಅಜ್ಜಿ ಅವರ ಹಿಂದ ಹೂಂಟಳು. ಅಲ್ಲಿದ್ದ ಮಂದಿ ಗಾಬ್ರಿಯಾಗಿ ಕಣ್ಣ ಕಣ್ಣ ಬಿಟ್ಟ ನೋಡಾಕತ್ರು. ಒಳಗೊಳಗ ಗುಸು ಗುಸು ಮಾತಾಡಾಕತ್ರು. ಸ್ವಾಮಗೊಳ ಪ್ರಶ್ನೆ ಮಾಡಾಕಂತು ಆಗಲ್ಲ ಅಂತ ಸುಮ್ಮ ನಿಂತ್ರ.


ಸ್ವಾಮಗೊಳ ಅಜ್ಜಿ ಚರಗಿ ನೀರಿಂದ ಸ್ವಲ್ಪ ಲಿಂಗ ತೂಳದು ಕುಂಮಕುಮ ಹಚ್ಚಿ ಹೂವು ಹಾಕಿ ಉದ್ದಿನ ಕಡ್ಡಿ ಹಚ್ಚಿ ಸ್ವಲ್ಪ ಬೆಲ್ಲ ನೈವೆದ್ಯ ಇಟ್ಟು ಮಂತ್ರ ಹೇಳಿದ್ರು ಸ್ವಾಮಗೊಳಿಗೆ ಬಿಕ್ಕಳಿಕೆ ಬಂತು ಅಜ್ಜಿ ತಾಟೊಳಗಿಂದ ಉಳಿದಿದ್ದ ಬೆಲ್ಲ ತಿಂದು ನೀರು ಕುಡದ್ರು. ಅಲ್ಲಿದ ಮಂದಿಗೆ ವಿಚಿತ್ರ ಆಯ್ತು. ಊರ ಗೌಡ ಸವಕಾಸ ಗುರುಗಳ ಕಡೆ ಬಂದ ಅಂಜ್ಕೊತ "ಸ್ವಾಮಗೊಳ... ಅಲ್ರಿ ಇಷ್ಟೆಲ್ಲಾ ಮಂದಿ ಪಾಳಿ ಹಚ್ಚಿ ಪೂಜಿಗೆ ನಿಂತಿವಿ ನೀವೆನ ಆ ಮುದಕಿ ಕಡೆ ಹೋದ್ರಿ, ಛೀ..! ಛೀ..! ಸ್ವಲ್ಪು ಸರಿಯಿಲ್ಲಾ. ಮತ್ತ ಆ ದರಿದ್ರ ಮುದುಕಿ ತಂದ ಸಾಮನಿಂದ ಪೂಜಿ ಮಾಡಿದ್ರಿ, ಅದು ಅಲ್ಲದ ಅಕಿ ತಂದ ಬೆಲ್ಲ ತಿಂದ ನೀರು ಕುಡದ್ರಿ.

ಅಕಿ ಅವತಾರ ನೋಡ್ರಿ ಹೊಲಸ ತಾಟ, ಚರಗಿ ಮಡಿ ಇಲ್ಲ, ಏನಿಲ್ಲ ಇಂತಾ ಮಂದಿ ಮುಟ್ಟಸ್ಕೊಳಾಕು ಅರ್ಹತೆ ಇಲ್ಲ ಅಂತಾದ್ರಾಗ ನೀವು..,"

ಸ್ವಾಮಗೊಳ ನಕ್ಕೊತ, "ನೀವು ಪೂಜಿಗೆ ಬಂದಿರಿ ಅಜ್ಜಿನು ಪೂಜಿ ಮಾಡಾಕ ಬಂದಾಳ. ಮನಷ್ಯಾಗ ಭಕ್ತಿ, ಮಡಿ ಮನಸೊಳಗ ಇರಬೇಕು. ನಮ್ಮ ಆಡಂಬರ, ಶ್ರೀಮಂತಿಕೆ ಒಳಗ ಅಲ್ಲಾ. ಅಷ್ಟಕ್ಕೊ ಭಕ್ತಿಗೆ ಮಡಿ ಯಾಕ ಬೇಕು.? ಮಣ್ಣಿನ ಗಡಿಗೆ ಒಳಗ ಕುಡದ್ರು ನೀರ, ಬೆಳ್ಳಿ ಚರಗಿ ಒಳಗು ನೀರ. ನೀವೆಲ್ಲಾ ಪೂಜಿಗೆ ಬಂದಿದಕ್ಕಿಂತ ಆಡಂಬರ ತೋರಸಾಕ ಬಂದಂಗ ಅದ. ಯಾವ ದೇವರು ಮಡಿ ಮಾಡ್ರಿ ಅಂತಾ ಹೇಳಿಲ್ಲಾ. ಮನಿ ಸ್ವಚ್ಛ ಮಾಡುದ ಅಂದ್ರ ನಿಮಗ ಯಾವದ ರೋಗ-ರುಜಿಣ ಬರಬಾರದು ಅಂತ, ಮತ್ತ ಪೂಜಿಗೆ ಯಾವಾಗು ಭಕ್ತಿ ಬೇಕು ಜಾತಿ, ಮತ, ಮಡಿ, ಶ್ರಿೀಮಂತಿಕೆ ಮತ್ತ ಆಡಂಬರ ಅಲ್ಲಾ" ಅಂದ್ರು. "ಎಲ್ಲಾರು ನೀವು ತಂದ ಚರಗಿ ಇಲ್ಲಿ ತಂದ ಇಡ್ರಿ", ಎಲ್ಲಾರು ಇಟ್ರು "ಎಲ್ಲಾರು ಬಂದ ಇದ್ರೊಳಗಿನ ನೀರು ನೋಡ್ರಿ" ಅಂದ್ರು. ಎಲ್ಲಾರ ಚರಗಿ ಮ್ಯಾಲೆ ಫಳ ಫಳ ಇದ್ರು ಒಳಗ ಸ್ವಲ್ಪ ಕಸಾ, ಕಡ್ಡಿ, ಧೂಳು ಮಣ್ಣು ಇತ್ತಂತ ಆದ್ರ ಅಜ್ಜಿ ಚರಗಿ ಹೊರಗ ನೋಡಾಕ ಹೊಲಸ ಇದ್ರು ಒಳಗ ನೀರು ಸ್ವಚ್ಛ ತಿಳಿ ಇತ್ತಂತ. ಎಲ್ಲಾರು ಪವಾಡ ನೋಡಿದಂಗ ಸುಮ್ಮ ನಿಂತ್ರು, ಸ್ವಾಮಗೊಳ ಹೇಳಿದ್ರ "ನಿಮ್ಮ ಚರಗಿ ಮ್ಯಾಲೆ ಬೆಳ್ಳಿದು ಸ್ವಚ್ಛ ಅದ, ಆದ್ರ ನೀರು ಯಾಕ ಹೊಲಸ ಅದಾವ...? "ನೀವು ಹಂಗ ಛಲೊ ಒಡವಿ, ವಸ್ತ್ರ ಹಾಕೂಂಡಿರಿ ಆದ್ರ ಮನಸೊಳಗಿನ ಭಕ್ತಿಗೆ ನಾನು ನನ್ನದು ಅನ್ನು ಅಹಂ, ಜಾತಿ, ಮತ, ಶ್ರೀಮಂತಿಕೆ ಅನ್ನು ಕಸಾ, ಕಡ್ಡಿ, ಧೂಳ ತುಂಬ್ಯದ.

ಆದ್ರ ಅಜ್ಜಿ ಕಡೆ ಬಂಗಾರಿಲ್ಲಾ, ರೇಷ್ಮಿ ವಸ್ತ್ರ ಇಲ್ಲಾ, ಬೆಳ್ಳಿ ಸಾಮನ ಇಲ್ಲಾ ಆದ್ರ ಮನಸ್ಸ ಸ್ವಚ್ಛ ಅದ ಅದ್ರೊಳಗ ಜಾತಿ ಮತ ಶ್ರೀಮಂತಿಕೆ ಮೇಲು ಕೀಳು ಇಲ್ಲಾ ಅದ್ಕೆ ಅಕಿ ಮನಸ್ಸೊಳಗ ಭಕ್ತಿ ಅನು ಭಾವನ ಒಂದೆ ಅದ. ಮನಸ್ಸು ಮಡಿಯಾಗಿರಬೇಕು ಮೈ ಅಲ್ಲಾ..." ಅಂದು ಸ್ವಾಮಗೊಳ ಮುಂದಿನ ಕಾರ್ಯಕ್ರಮಕ್ಕ ಹೋದ್ರು.


ನಾವೆಲ್ಲರು ಜಾತಿ ಜಾತಿ ಅಂತಾ ಬಡ್ಕೊತಿವಿ,ಅಲ್ಲಾ ಎಲ್ಲಾರು ಒಂದ ಸಲಾ ವಿಚಾರ ಮಾಡ್ರಿ ದೇಶಾ ಕಾಯೋ ಸೈನಿಕರು ನಮ್ಮ ಜಾತಿ ಜನರಿಗೆ ಅಷ್ಟೆ ರಕ್ಷಣೆ ಕೊಡ್ತಿವಿ ಅಂದ್ರ, ಎಲ್ಲಾರ ಜೀವಾ ಕಾಪಾಡು ಡಾಕ್ಟರ್ ನಮ್ಮ ಜಾತಿ ಅವರಿಗೆ ಅಷ್ಟೆ ಚಿಕಿತ್ಸೆ ಕೂಡ್ತಿನಿ ಶ್ರೀಮಂತ ಮಂದಿಗೆ ಅಷ್ಟ ನೋಡ್ತೀನಿ ಅಂದ್ರ.. ನೋಡ್ರಿ ನಮ್ಮ ಸಲುವಾಗಿ ಜೀವಾ ಕೊಡು ಸೈನಿಕ ಜಾತಿ ನೋಡಲ್ಲ, ನಮ್ಮ ಜೀವ ಉಳಿಸು ಡಾಕ್ಟರ್ ಜಾತಿ ನೋಡಲ್ಲಾ ಅಂದ್ರ ನಮಗ ಯಾಕ...? 




Rate this content
Log in

Similar kannada story from Classics