ಮನಸಿದ್ದರೆ ಮಾರ್ಗ
ಮನಸಿದ್ದರೆ ಮಾರ್ಗ
ರಾಜು ರಾಜು ಬಾರೋ ಇಲ್ಲಿ.... ಎಂದು ಕರೆದ ಅಮ್ಮನ ನೋಡಿ ಕಣ್ಣಲಿ ನೀರು ತುಂಬಿಕೊಂಡು ಏನಮ್ಮ ಎಂದ...
ಊಟ ಮಾಡು ಹುಳಿ ಆರಿಹೋದರೆ ಚೆನ್ನಾಗಿ ಇರಲ್ಲ ಎಂದಾಗ....
ನಿಟ್ಟುಸಿರು ಬಿಟ್ಟ ರಾಜು... ಆಯ್ತು ಬಂದೆ ಎಂದು ಕೈ ಕಾಲು ತೊಳೆದು ಅಡುಗೆ ಮನೆಯಲ್ಲಿ ಬಂದು ಕೂತಾಗ...
ತಂದೆಯ ನೋಟ ಅವನ ಎದೆಗೆ ಇರಿದಂತೆ ಆಯಿತು.
ಹಿರಿಯಣ್ಣಯ್ಯ ಮತ್ತು ಸುನಂದಮ್ಮ ನವರಿಗೆ ಮೂರು ಜನ ಮಕ್ಕಳು, ದೊಡ್ಡವನು ಚಂದನ್, ಮಗಳು ನಳಿನಿ, ಕೊನೆಯವನು ರಾಜೇಂದ್ರ.
ತಮ್ಮದೇ ಒಂದು ಸಣ್ಣ ದಿನಸಿ ಅಂಗಡಿ ಇಟ್ಟು ಕೊಂಡಿದ್ದರು.. ಊರಿನಲ್ಲಿ ಹೊಲ ಗದ್ದೆ ಇತ್ತು, ಮಕ್ಕಳ ಓದಿನ ಸಲುವಾಗಿ, ಹರಿಹರದಲ್ಲಿ ಬಂದು ನೆಲೆಸಿದ್ದರು.
ದೊಡ್ಡವ ಚಂದನ್ ಓದಿನಲ್ಲಿ ಚುರುಕು, ಎಂಎ ಮುಗಿಸಿ
ಅಲ್ಲಿನ ಕಾಲೇಜು ಒಂದರಲ್ಲಿ ಲೆಕ್ಚರರ್ ಆಗಿದ್ದ, ನಳಿನಿ ಬಿಕಾಂ ಫೈನಲ್ ಇಯರ್ ನಲ್ಲಿ ಓದುತ್ತಿದ್ದಳು...
ಆದರೆ ರಾಜುವಿಗೆ ಮಾತ್ರ ಎನೂ ಮಾಡಿದರು ವಿದ್ಯೆ ತಲೆಗೆ ಹತ್ತಲೇ ಇಲ್ಲ.
ಹೇಗೋ ಕಷ್ಟ ಪಟ್ಟು ಎಸ್ ಎಸ್ ಎಲ್ ಸಿ ಪಾಸು ಮಾಡಿದ, ಸೆಕೆಂಡ್ ಪಿಯುಸಿ ಪರೀಕ್ಷೆ ಮಾತ್ರ ಅವನಿಗೆ ಕಬ್ಬಿಣದ ಕಡಲೆ ಆಗಿ ಕಾಡುತಿತ್ತು..
ಅನುತ್ತೀರ್ಣನಾದ ಅವನ್ನ ಕಂಡರೆ ತಂದೆಗೆ ಅಷ್ಟಕ್ಕಷ್ಟೇ..
ಹೂ ತಿನ್ನು ತಿನ್ನು ಬಿಸಿ ಆರಿಹೋಗುತ್ತೆ...ಎಂದಾಗ ... ಅಮ್ಮನ ಕರುಳು ಚುರುಕು ಎಂದಿತು.... ರೀ ಸಲ್ಪ ಸುಮ್ಮನೆ ಇರಬಾರದೇ?
ರಾಜು ನಿಧಾನವಾಗಿ ಊಟ ಮಾಡಿ ಓದುಕೋ ಮರೀ...
ನಾಳಿದ್ದು ಪರೀಕ್ಷೆ ಇದೆ ಅಲ್ವಾ ಎಂದು ಕಣ್ಣಲ್ಲೇ ಮಗನಿಗೆ ಸನ್ನೆ ಮಾಡಿದರು..
ಹೌದು ಹೌದು ದೊಡ್ಡ ಐಎಸ್ ಆಫೀಸರ್ ಆಗಬೇಕು ನೋಡು ಇವನು... ಒಂದು ಪಿಯುಸಿ ಪರೀಕ್ಷೆ ಪಾಸು ಮಾಡೋ ಯೋಗ್ಯತೆ ಇಲ್ಲ ಅಯೋಗ್ಯನ ತಂದು... ಎಂದು ಎದ್ದು ಹೋದರು.
ಎಲೆ ಅಡಿಕೆ ತಟ್ಟೆ ಹಿಡಿದು ಗಂಡನ ಕೋಣೆಗೆ ಬಂದು ರೀ.. ಎಂದಾಗ ಮಡದಿಯ ಮುಖ ನೋಡಿ ಅವಳ ಮನದ ನೋವನ್ನು ಅರ್ಥ ಮಾಡಿಕೊಂಡ ಹಿರಿಯಣ್ಯಯ.. ನಂಗೆ ಗೊತ್ತು ಕಣೇ ನೀನು ಏನು ಹೇಳಬೇಕು ಅಂತ ಬಂದೆ ಅಂತ ಎಂದರು...
ಹೌದು ರೀ ನಿಮಗೆ ಎಲ್ಲಾ ಗೊತ್ತು, ಆದರೂ ಏನೂ ಮಾಡಲ್ಲ ಎಂದರು.... ಏನೇ ನೀನು ಹೇಳೋದು...
ಏನೂ ಮಾಡಲ್ಲ ಅಂದ್ರೆ ಮೂರು ಮಕ್ಕಳನ್ನು ಒಂದೇ ರೀತಿ ಸಾಕಿ ಸಲಹಿದ್ದಿನೀ ತಾನೇ, ಎಂದರು ಕೋಪದಿಂದ.
ಹೌದು ರೀ... ನಾನು ಅದರ ಬಗ್ಗೆ ಯಾವತ್ತೂ ಏನೂ ಹೇಳಿಲ್ಲ....
ಮತ್ತೆ ಯಾಕೆ ನಿನ್ನ ಮುದ್ದಿನ ಮಗ ಹಾಗೆ, ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ ಅನ್ನೋ ಹಾಗೆ ಎಂದರು..
ರೀ ಏನು ಮಾಡೋದು ಹೇಳಿ... ಅವನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ.... ಆ ದೇವರು ಒಬ್ಬೋಬ್ಬರಿಗೆ ಒಂದೊಂದೇ ರೀತಿ ಬುದ್ಧಿ ತುಂಬಿರುತ್ತಾನೆ ಎಂದು ಮುಸಿ ಮುಸಿ ಅತ್ತರು..
ಸರಿ ಏನು ಮಾಡಬೇಕು ಹೇಳು ಈಗ ಸುಮ್ಮನೆ ಅಳಬೇಡ ಎಂದಾಗ... ಮತ್ತೆ ನಮ್ಮ ರಾಜುನಾ ನಿಮ್ಮ ಜೊತೆ ಅಂಗಡಿ ವ್ಯಾಪಾರಕ್ಕೆ ಹಾಕಿ ಕೊಳ್ಳಿ... ಎಂದರು...
ಸುಮಾರು ಹೊತ್ತು ಯೋಚಿಸಿ ಸರಿ ನಾಳೆಯಿಂದ ನನ್ನ ಜೊತೆ ಅಂಗಡಿಯಲ್ಲಿ ಕುಳಿತು ಕೆಲಸ ಕಲಿಯಲಿ ಎಂದರು...
ರಾಜು ಬಹುಬೇಗನೆ ಎಲ್ಲಾ ವಹಿವಾಟು ಕಲಿತು ... ಅಂಗಡಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾನೆ...
ಓದಿನಲ್ಲಿ ಆಸಕ್ತಿ ಇಲ್ಲದಿದ್ದರೂ ವ್ಯಾಪಾರ ಅವನ ಕೈ ಹಿಡಿಯಿತು...
ಅದನ್ನು ಕಂಡ ತಾಯಿ ಮನಸ್ಸು ಸಂತಸಗೊಂಡಿತು...
ರೀ ನೋಡಿದರಾ ನಮ್ಮ ರಾಜುನಾ ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ ಅಂತಾ ಇದ್ರೀ ಈಗ ನೋಡಿ ನಿಮ್ಮನ್ನೇ ಮೀರಿಸುವಂತೆ ಎಲ್ಲಾ ವ್ಯವಹಾರ ಕಲಿತಿದ್ದಾನೆ ಎಂದು ರಾಜುವಿನ ಕಡೆ ಹೆಮ್ಮೆ ಇಂದ ನೋಡಿದರು.
