ಮಳೆಯೋ ಬಿಸಿಲೋ?,
ಮಳೆಯೋ ಬಿಸಿಲೋ?,
ಅಂದು ಸಂಜೆಯಿಂದಲೇ ಆಕಾಶದಲ್ಲಿ ಕಾರ್ಮೋಡ, ಗುಡುಗು ಸಿಡಿಲು ಮಳೆ ಗಳೊಂದಿಗೆ ಮಿಂಚನ ಫಳಚ್ ಫಳಚ್ ಕೋಲ್ಮಿಂಚಿನ ಚಿತ್ತಾರ. ಕುಂಭ ದ್ರೋಣ ಮಳೆ ಶುರುವಾಯಿತು. ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಹೋಗುವವರ ಪಾಡಂತೂ ಹೇಳತೀರದು.
ಸ್ವಂತ ಗಾಡಿಯಿದ್ದವರು ಸ್ವಲ್ಪ ದೂರ ಹೋಗಿ, ನಂತರ ಒಂದು ಕಡೆ ನಿಂತರೆ ಮುಂದೆ ಹೋಗಲೇ ಆಗದಷ್ಟು ಧಾರಾಕಾರ ಮಳೆ. ಯಾವ ಮ್ಯಾನ್ ಹೋಲ್ ಎಲ್ಲಿ ತೆರೆದುಕೊಂಡಿರುತ್ತದೋ?ಯಾವ ರಸ್ತೆಗಳು ಹೊಂಡಗಳಾಗಿರುತ್ತದೋ? ಎಲ್ಲರಿಗೂ ಜೀವ ಭಯ.
ಆರು ಗಂಟೆಗೆ ಆಫೀಸ್ ಮುಗಿದರೂ, ರಾತ್ರಿ ಹತ್ತಾದರೂ
ಮುಂದೆ ಹೆಜ್ಜೆ ಇಡಲಾಗದ ಪರಿಸ್ಥಿತಿ. ಇದೇನು ಇಂದೇ ಮಹಾರುದ್ರನ ಮಹಾಪ್ರಳಯವೋ? ಎಂಬಂತೆ ಎಲ್ಲರಿಗೂ ಭಾಸವಾಗುತ್ತಿತ್ತು.
ಅಂತಹ ಮಳೆಯಲ್ಲಿ ಒಬ್ಬ ಮನುಷ್ಯ ಕೊಡೆ ಹಿಡಿದು ನಡೆದುಕೊಂಡು ಹೊರಟೇ ಬಿಟ್ಟ. ಇಡೀ ರಾತ್ರಿ, ನೀರನ್ನು ತಳ್ಳಿಕೊಂಡೇ ಮುಂದೆ ಸಾಗಿದ. ಮಳೆಯ ಕಾರಣದಿಂದ ದಾರಿಯಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು.
ಆದರೂ ನಿಧಾನವಾಗಿ ಮೊಬೈಲ್ ಟಾರ್ಚ್ ನ ಬೆಳಕಿನಲ್ಲಿ ನೀರಿನಲ್ಲಿ ಈಜಾಡಿದಂತೆ ನಡೆಯುತ್ತಿದ್ದ. ಯಾವುದೋ ಹಂತದಲ್ಲಿ ಮೊಬೈಲ್ ನ ಚಾರ್ಜ್ ಮುಗಿದು, ಅದೂ ಕೈ ಕೊಟ್ಟಾಗ, ಒಂದು ಕ್ಷಣ ಅವನಿಗೆ ದಿಕ್ಕು ತೋಚದೇ ಹೋಗುತ್ತಿತ್ತು. '
ತಾನೆಂತಹ ತಪ್ಪು ಮಾಡಿದೆ? ಕೊಡೆ ಇದೆ ಎಂಬ ಧೈರ್ಯದಿಂದ ಮನೆ ಸೇರಿ ಬಿಡಬಹುದೆಂದುಕೊಂಡೆ.
ಆದರೆ ಈಗ ನಾನು ನಡುರಾತ್ರಿಯಲ್ಲಿ ನಡುದಾರಿಯಲ್ಲಿ ಅಂತರ್ ಪಿಶಾಚಿ ಯಂತೆ ಸಿಕ್ಕಿ ಹಾಕಿಕೊಂಡೆನಲ್ಲಾ, ಎಲ್ಲಿಯಾದರೂ ನಿಲ್ಲೋಣ ವೆಂದರೆ ನೀರವ ರಸ್ತೆಯಲ್ಲಿ ಎಲ್ಲೂ ಜಾಗವಿಲ್ಲ. ಅಯ್ಯೋ ನನ್ನ ಕಥೆ ಏನಾಗುತ್ತದೋ?"
ಅವನು ಚಿಂತಿಸುತ್ತಾ, ಕೆಲವು ನಿಮಿಷಗಳ ಕಾಲ ನಿಂತು,
ಮತ್ತೆ ನಡೆಯುತ್ತಾ ಭಯದಿಂದ ಬೆವರುತ್ತಾ, ಮಳೆಯಲ್ಲಿ ತೋಯುತ್ತಾ ನಿಧಾನವಾಗಿ ಸಾಗಿದ.
ಒಮ್ಮೆ ಇದ್ದಕ್ಕಿದ್ದಂತೆ, ಬೆಳಕು ಮೂಡಿದಾಗ ಅವನಿಗೆ ಆಶ್ಚರ್ಯವಾಗಿತ್ತು. ಅಂದರೆ ಪೂರ್ವ ದಲ್ಲಿ
ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದ. ಆ ದಾರಿ ಹೋಕನಿಗೆ ಹೋದ ಜೀವ ಬಂದಂತಾಯಿತು.
ಕಡೆಗೂ ಅವನು ಮನೆಗೆ ಸೇರುವ ವೇಳೆಗೆ ಬೆಳಿಗ್ಗೆ ಕಾಫಿ ಸಮಯವಾಗಿತ್ತು.
ಬೇಗ ಮನೆಯೊಳಗೆ ಸೇರಿಕೊಂಡು, ಒದ್ದೆ ಬಟ್ಟೆ ಬದಲಾಯಿಸಿ, ಬಿಸಿ ಬಿಸಿ ಕಾಫಿ ಕುಡಿದು, ಧೊಪ್ಪನೆ ಹಾಸಿಗೆಯ ಮೇಲೆ ಉರುಳಿದ.
