ಮಕ್ಕಳು ಮತ್ತು ಶಾಲೆ
ಮಕ್ಕಳು ಮತ್ತು ಶಾಲೆ
ನಾನ್ ಸ್ಟಾಪ್ ನವೆಂಬರ್ ಆವೃತ್ತಿ 3 ಬಿಗಿನರ್
ದಿನ 30
ವಿಷಯ:ಪೋಷಕರು
ಆಫೀಸ್ಸನಿಂದ ಸಾಕಾಗಿ ಮನೆಗೆ ಬಂದ ಸುಮ, ತನ್ನ ಹತ್ತು ವರ್ಷದ ಮಗಳು ತನ್ನ ಪಾಡಿಗೆ ತಾನು ಲ್ಯಾಪ್ ಟಾಪ್ ನಲ್ಲಿ ಯಾವುದೋ ವೀಡಿಯೋವನ್ನು ನೋಡುತ್ತ ಕುಳಿತಿರುವುದನ್ನು ನೋಡಿ, ಅಸಹನೆಯಿಂದ ಕಿರುಚಿದಳು.
"ಪುಟ್ಟಿ,ಲ್ಯಾಪ್ಟಾಪ್ ನಲ್ಲಿ ಏನು ನೋಡುತ್ತಿದ್ದೀಯ, ಮೊದಲು ಎತ್ತಿಡು."
"ಮಮ್ಮಿ ನಂದು ಕ್ಲಾಸ್ ಹನ್ನೆರಡಕ್ಕೇ ಮುಗಿತು. ಮಿಸ್ ಹೋಂ ವರ್ಕ್ ಲಿಂಕ್ ಕಳುಹಿಸಿದ್ದಾರೆ. ನೀನು ನೋಡಿ ಹೇಳಿಕೊಟ್ಟ ಮೇಲೆ ಮಾಡುತ್ತೀನಿ. ಅಲ್ಲೀವರೆಗೂ ಇದೊಂದು ಕಾರ್ಟೂನ್ ವೀಡಿಯೋ ನೋಡುತ್ತಿರುತ್ತೀನಿ ಪ್ಲೀಸ್"
"ಅದೆಲ್ಲ ಬೇಡ.ಈಗ ನೀನು ಕೆಳಗೆ ಹೋಗಿ ಸ್ವಲ್ಪ ಹೊತ್ತು ಆಟ ಆಡಿಕೊಂಡು ಬಾ,"
ಸುಮ ಮಗಳಿಂದ ಲ್ಯಾಪ್ಟಾಪ್ ಕಿತ್ತಿಟ್ಟಾಗ, ಪುಟ್ಟಿ ಮುಖ ಚಿಕ್ಕದು ಮಾಡಿಕೊಳ್ಳುತ್ತಾ,
"ಮಮ್ಮಿ ಆಟ ಆಡಲು ಯಾರೂ ಇಲ್ಲ.ಎಲ್ಲಾ ಊರಿಗೆ ಹೋಗಿದ್ದಾರೆ. ನನಗೆ ಬೋರ್ ಆಗತ್ತೆ. ನೀನೇನೋ ಕೆಲಸಕ್ಕೆ ಹೋಗುತ್ತೀಯ. ನನಗೆ ಸ್ಕೂಲ್ ಇಲ್ಲ. ತಾತ ಅಜ್ಜಿ ಟಿ.ವಿ.ನೋಡುತ್ತಿರುತ್ತಾರೆ, ಡ್ಯಾಡಿಗೆ ಆಫೀಸ್ ಕಾಲ್ಗಳು.ನಾನೇನು ಮಾಡಲಿ? ನಿನ್ನ ಮೊಬೈಲ್ ಆದರೂ ಕೊಡು."
ಮಗುವಿನ ಪರಿಸ್ಥಿತಿಯನ್ನು ನೋಡಿ,ಸುಮಳಿಗೆ ತುಂಬಾ ಕನಿಕರವೆನಿಸಿತು. ಒಂದೂವರೆ ವರ್ಷದಿಂದ ಮನೆಯಲ್ಲೇ ಕುಳಿತು, ಏನೋ ಒಂದೆರಡು ಗಂಟೆಗಳ ಕಾಲ ಆನ್ ಲೈನ್ ಕ್ಲಾಸ್ ಅಂತ ಲ್ಯಾಪ್ ಟಾಪ್ ಹಿಡಿದುಕೊಂಡರೆ ಮುಗಿಯಿತು. ಇನ್ನು ಉಳಿದ ಸಮಯದಲ್ಲಿ ಅದನ್ನು ಎಂಗೇಜ್ ಮಾಡಲು ಯಾರಿಗೂ ಪುರುಸೊತ್ತಿಲ್ಲ. ಅತ್ತೆ ಮಾವ, ಗಂಡ ಎಲ್ಲರೂ ಅವರವರ ಕೆಲಸಗಳಲ್ಲಿ ಬಿಜ಼ಿ. ಕರೋನದಿಂದ ಊರಿಗೆ ತೆರಳಿರುವ ಅಪಾರ್ಟ್ಮೆಂಟ್ ಮಕ್ಕಳು, ಪಾಪ, ಪುಟ್ಟಿ ತಾನೆ ಏನು ಮಾಡೀತು?
ಮಗಳಿಗೆ ಮೊಬೈಲ್ ಕೊಟ್ಟು, ಸೀದಾ ರೂಮಿಗೆ ಬಂದರೆ, ತನ್ನ ಕೆಲಸದಲ್ಲಿ ಮುಳುಗಿ, ಯಾವುದೋ ಮುಖ್ಯವಾದ ಕಾಲ್ ನಲ್ಲಿ ಬಿಜ಼ಿಯಾಗಿದ್ದ ಗಂಡ ಸುಧೀರ್, ಇವಳು ಬಂದದ್ದನ್ನು ಗಮನಿಸಿ, ಕೈ ಸಂಜ್ಞೆಯಿಂದಲೇ ಐದು ನಿಮಿಷವೆಂದಾಗ, ಸುಮಳಿಗೆ ತಲೆ ಚಚ್ಚಿಕೊಳ್ಳುವಂತಾಯಿತು. ಅವನು ಫೋನ್ ಡಿಸ್ಕನೆಕ್ಟ್ ಮಾಡಿದ ನಂತರ,ಅವನ ಬಳಿ ಹೋದ ಸುಮ,
"ಏನ್ರಿ, ಪುಟ್ಟಿ ತನ್ನ ಪಾಡಿಗೆ ತಾನು ಏನೋ ಲ್ಯಾಪ್ ಟಾಪ್ ತೆಗೆದು, ಏನೋ ನೋಡುತ್ತ ಕುಳಿತಿರುತ್ತಾಳೆ,ನೀವು ಸ್ವಲ್ಪ ಗಮನಿಸಬಾರದ?" ಎಂದು ಜೋರು ಮಾಡಿದಾಗ,
"ಏಯ್ ಸುಮಿ, ನನಗೆ ವರ್ಕ್ ಫ಼್ರಂ ಹೋಂ ಇದೆಯೇ ಹೊರತು ಹಾಲಿಡೆ ಅಲ್ಲ ಗೊತ್ತಾಯಿತ? ನಾನು ಏನು ಮಾಡುವುದಕ್ಕಾಗುತ್ತೆ ಹೇಳು? ಅವಳ ಪಾಡಿಗೆ ಅವಳು ಏನೋ ನೋಡಿಕೊಳ್ಳುತ್ತ ಸುಮ್ಮನಿದ್ದರೆ ಸಾಕು" ಸುಧೀರ್ ಮಾತಿಗೆ ಸಿಟ್ಟಾದಳು ಸುಮ.
"ನಾವು ಪೋಷಕರು ನಮ್ಮದೇ ಆದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ, ಮಗುವಿನ ಕಡೆ ಗಮನ ಕೋಡದೇ ಇರುವುದು ಸರೀನಾ?" ಗಂಡನ ಮೇಲೆ ಸಿಡುಕುತ್ತಾ ರೂಮಿನಿಂದ ಹೊರ ಬಂದಳು.
’ಇಂದಿನ ಪೋಷಕರಿಗೆ ಮಕ್ಕಳ ಶಾಲೆಯ ವಿದ್ಯಾಭ್ಯಾಸವೊಂದು ಸವಾಲಾಗಿದ್ದು, ಎಂದಿಗೆ ಶಾಲೆಗಳು ಪ್ರಾರಂಭವಾಗಿ ಮಾಮುಲಿನಂತೆ ಸರಿಹೋಗುತ್ತದೋ ? ನನಗೆ ಸಾಕಾಗಿ ಹೋಗಿದೆ ’ ಎಂದು ಬಯ್ದುಕೊಳ್ಳುತ್ತ, ಪುಟ್ಟಿಯನ್ನು ಕರೆದುಕೊಂಡು ಅಂಗಡಿಗೆ ಹೊರಟಳು.
