Vijaya Bharathi

Abstract

2  

Vijaya Bharathi

Abstract

ಮಜಲುಗಳು

ಮಜಲುಗಳು

3 mins
100


ಹದಿನೆಂಟರ ಹರೆಯದ ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂಬ ಜಾಲಕ್ಕೆ ಸಿಕ್ಕಿ, ತನ್ನ ಕ್ಲಾಸ್ಮೇಟ್ ಮನುವನ್ನು ಅಂತರ್ಜಾತೀಯ ವಿವಾಹ ಮಾ್ಡಿಕೊಂಡು, ಮನೆಯಿಂದ ಹೊರಬಂದಿದ್ದ ಮುಕ್ತಳಿಗೆ , ದಿನಕಳೆದಂತೆ ಒಂದೊಂದೇ ಸಮಸ್ಯೆಗಳು ಎದುರಾಗಿ,ಜೀವನ ಮುನ್ನಡೆಸುವುದೇ ಕಷ್ಟವಾಗತೊಡಗಿತು.ಇಬ್ಬರ ಮನೆಯಿಂದಲೂ ತಿರಸ್ಕೃತರಾದ ಮನು ಮತ್ತು ಮುಕ್ತ ತಮ್ಮದೇ ನೆಲೆಯನ್ನು ಹುಡುಕಿಕೊಂಡು ಗೂಡಿ ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪ್ರೇಮ ವಿವಾಹದ ಮಜಲುಗಳನ್ನು ಅನುಭವಿಸುತ್ತಾ ಹೋದರು.


ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಮದುವೆಯಾಗಿದ್ದ ಅವರಿಗೆ ಕೆಲಸ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಒಳ್ಳೆಯ ಅನುಕೂಲಸ್ಥ ಕುಟುಂಬದಿಂದ ಅವರು ಬಂದಿದ್ದರೂ ಸಧ್ಯದ ಪರಿಸ್ಥಿತಿಯಲ್ಲಿ ಅವರಿಗೆ ಯಾರ ಕಡೆಯಿಂದಲೂ ಸಹಾಯ ಹಸ್ತ ವಿರಲಿಲ್ಲ. ಹೀಗಾಗಿ ಅವರಿಬ್ಬರೂ ಮನುವಿನ ಆಪ್ತಗೆಳೆಯ ರಘುವಿನ ಮನೆಯ ಔಟ್ ಹೌಸ್ ನಲ್ಲಿ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು.ಅವರ ಪರಿಸ್ಥಿತಿ ’ನಾನು ಬಡವ ಆತ ಬಡವಿ ಒಲವೇ ನಮ್ಮ ಬದುಕು' ’ಎಂಬಂತಾಗಿತ್ತು. ಹೇಗೋ ಮನುವಿನ ಸ್ನೇಹಿತ ರಘುವಿನ ದೆಸೆಯಿಂದ ಇಬ್ಬರಿಗೂ ಎರಡು ಹೊತ್ತಿನ ಊಟಕ್ಕೆ ಕೊರತೆಯಾಗಿರಲಿಲ್ಲ. ಕಡೆಗೆ ಮನುವಿಗೆ ಕಾಲ್ ಸೆಂಟರ್ ಒಂದರಲ್ಲಿ ಒಂದು ಸಣ್ಣ ಉದ್ಯೋಗ ದೊರಕಿದಾಗ, ಒಂದು ಹೊತ್ತಿನ ಗಂಜಿ ತಿನ್ನುವಷ್ಟರ ಮಟ್ಟಿಗೆ ಬಂದರು. ಮುಂದೆ ಮುಕ್ತ ಸಣ್ಣ ಹುಡುಗರಿಗೆ ಮನೆ ಪಾಠ ಮಾಡಲು ಪ್ರಾರಂಭಿಸಿದಳು. ಇಬ್ಬರೂ ಮನೆ ಬಿಟ್ಟು ಬರುವಾಗಲೇ ತಮ್ಮ ತಮ್ಮ ಮಾರ್ಕ್ಸ್ ಕಾರ್ಡ್ ಮತ್ತು ಸರ್ಟಿಫಿಕೇಟ್ಗಳನ್ನು ಜೊತೆಗೆ ತಂದಿದ್ದರಿಂದ, ಸ್ವಂತ ಸಂಪಾದನೆಯಿಂದ ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವುದಕ್ಕೆ ಅನುಕೂಲವಾಯಿತು.


ಛಲದಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಹಕ್ಕಿಗಳಿಗೆ ಇದ್ದಕ್ಕಿದ್ದಂತೆ ಒಂದು ದೊಡ್ಡ ಘೋರ ಆಪತ್ತು ಬಂದೊದಗಿತು. ರಸ್ತೆ ಅಪಘಾತ ವೊಂದರಲ್ಲಿ ಮನು ತನ್ನೆರಡೂ ಕಾಲುಗಳನ್ನು ಕಳೆದುಕೊಂಡಾಗ, ಮುಕ್ತಳಿಗೆ ದಿಕ್ಕು ತೋರದಾಯಿತು. ಜೊತೆಗೆ ಮನುವಿನ ಮಗು ಅವಳ ಗರ್ಭದಲ್ಲಿ ಅಂಕುರಿಸಿತ್ತು. ಮನುವಿನ ವಿಷಯ ತಿಳಿದ ಕೂಡಲೇ ಅವನ ತಂದೆ ತಾಯಿ ತಮ್ಮ ತಂಗಿಯರೆಲ್ಲರೂ ಬಂದು, ಗೋಳಿಡುತ್ತಾ, ಮುಕ್ತಳಿಗೆ ಹಿಡಿ ಹಿಡಿ ಶಾಪ ಹಾಕಿ, ಮಗನನ್ನು ಆಸ್ಪತ್ರೆಯಿಂದ ನೇರವಾಗಿ ತಮ್ಮ ಮನೆಗೆ ಕರೆದುಕೊಂಡು ಹೊರಟು ಹೋದರು. ಮನು ಎಷ್ಟೇ ಬೇಡಿಕೊಂಡರೂ,ಮುಕ್ತಳನ್ನು ಮಾತ್ರ ತಮ್ಮ ಸೊಸೆಯೆಂದು ಒಪ್ಪಿಕೊಳ್ಳಲಿಲ್ಲ. ಅಸಹಾಯಕನಾಗಿದ್ದ ಮನು, ಮುಕ್ತಳ ಮುಂದಿನ ಭವಿಷ್ಯವಾದರೂ ಹಸನಾಗಬಹುದೆಂದೆಣಿಸಿ, ಅವನು ಸುಮ್ಮನಾಗದೆ ವಿಧಿಯಿರಲಿಲ್ಲ.


ಮಗಳ ಪರಿಸ್ಥಿತಿಯನ್ನು ಕಂಡು ಮರುಗಿದ ಮುಕ್ತಳ ತಂದೆ ತಾಯಿ, ಅವಳನ್ನು ತಮ್ಮ ಮನೆಗೆ ಕರೆದೊಯ್ಯಲು ಇನ್ನಿಲ್ಲದ ಹಾಗೆ ಪ್ರಯತ್ನ ಪಟ್ಟರೂ, ಮುಕ್ತ ಮಾತ್ರ ಮತ್ತೆ ತನ್ನ ಮನೆಗೆ ಹೋಗಲು ಇಷ್ಟಪಡದೆ ರಘುವಿನ ಮನೆಯ ಔಟ್ ಹೌಸ್ ನಲ್ಲೇ ತನ್ನ ವಾಸ್ತವ್ಯವನ್ನು ಮುಂದುವರಿಸಿದಳು. ಕೊನೇ ವರ್ಷದ ಬಿ.ಕಾಮ್. ಪರೀಕ್ಷೆಯನ್ನು ಶ್ರದ್ಧೆಯಿಂದ ಮುಗಿಸಿ, ಕೆಲಸಕ್ಕೆ ಅರ್ಜಿ ಹಾಕತೊಡಗಿದಳು. ಅವಳ ಬೆಂಬಲಕ್ಕೆ ರಘು ನಿಂತಿದ್ದು ಮನುವಿಗೂ ಸಮಾಧಾನವಾಗಿತ್ತು. ರಘು ಆಗಾಗ್ಗೆ ಗೆಳೆಯನನ್ನು ನೋಡಿಕೊಂಡು ಬರುತ್ತಿದ್ದರೂ, ಸ್ವಾಭಿಮಾನಿ ಮುಕ್ತ ಮಾತ್ರ ಆ ಮನೆಯ ಹೊಸಲು ತುಳಿಯದೆ, ಗಂಡನ ಯೋಗಕ್ಷೇಮವನ್ನು ರಘುವಿನಿಂದ ತಿಳಿದುಕೊಳ್ಳುತ್ತಿದ್ದಳು. ತುಂಬಾ ಬುದ್ಧಿವಂತೆಯಾಗಿದ್ದ ಅವಳಿಗೆ , ಪ್ರಖ್ಯಾತ ವಕೀಲರ ಆಫೀಸ್ ನಲ್ಲಿ ಕೆಲಸ ದೊರೆತು,ತಿಂಗಳಿಗೆ ಹದಿನೈದು ಸಾವಿರ ಸಂಬಳ ದೊರಕುವಂತಾಯಿತು. ಇದರಿಂದ ಮುಕ್ತಳಿಗೆ ಎಷ್ಟೋ ನೆಮ್ಮದಿ ದೊರಕಿದಂತಾಯಿತು.


ಮನುವಿನ ಮಗು ಹೊಟ್ಟೆಯೊಳಗೆ ಆಡಲು ಶುರು ಮಾಡಿತ್ತು. ಆಗೆಲ್ಲ ಮನುವಿನ ಸಾಮೀಪ್ಯವನ್ನು ಮುಕ್ತ ಬಯಸುತ್ತಾ,ನಿಡುಸುಯ್ಯುತ್ತಿದ್ದಳು. ಸ್ವಾಭಿಮಾನಿಯಾದ ಅವಳು ಇತ್ತ ಗಂಡನ ತಂದೆಯ ಮನೆಗೂ ಹೋಗಲು ಇಷ್ಟಪಡದೆ, ತನ್ನ ತಾಯಿಯ ಮನೆಗೂ ಹೋಗಲು ಬಯಸದೆ, ಸ್ವಂತ ವಾಗಿ ಬದುಕಲು ಅಭ್ಯಾಸ ಮಾಡಿಕೊಂಡಳು. ಬೆಳಿಗ್ಗೆಯಿಂದ ರಾತ್ರಿಯ ತನಕ ಬಿಡುವಿಲ್ಲದ ಕೆಲಸ,ರಾತ್ರಿ ಆಯಾಸದಿಂದ ಕಣ್ಣಿಗೆ ನಿದ್ದೆಹತ್ತಿಬಿಡುತ್ತಿತ್ತು.ಅಗತ್ಯ ಸಹಾಯಕ್ಕೆ ಅಕ್ಕ ಪಕ್ಕ ಸದಾ ಸಿದ್ದರಾಗಿರುತ್ತಿದ್ದ ರಘು ಮತ್ತು ಅವನ ತಂಗಿ ರಾಧ, ಮುಕ್ತಳ ಜೀವನ ಸರಾಗವಾಗಿ ನಡೆಯುತ್ತಿತ್ತು. ಅವಳ ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆ, ಅವಳ ತಾಯಿ ಬಂದು ಎಷ್ಟು ಕೇಳಿಕೊಂಡರೂ ತವರಿಗೆ ಹೋಗದ ಸ್ವಾಭಿಮಾನಿ ಮುಕ್ತ, ತನ್ನ ಹೆರಿಗೆ ಮತ್ತು ಬಾಣಂತಿತನಕ್ಕೆ ಒಬ್ಬ ವಯಸ್ಸಾದ ಹೆಂಗಸನ್ನು ಗೊತ್ತು ಮಾಡಿಕೊಂಡಳು. ಆಫಿಸಿಗೆ ಮೂರು ತಿಂಗಳ ಮೆಟರ್ನಿಟಿ ರಜ ಹಾಕಿಕೊಂಡು, ಹೆರಿಗೆಗೆ ಒಂದು ದಿನದ ಮುಂಚಿತವಾಗಿ ಆಸ್ಪತ್ರೆ ಸೇರಿದಳು.ಚೊಚ್ಚಲ ಹೆರಿಗೆ ಎಲ್ಲರೂ ತಮ್ಮ ಪಕ್ಕದಲ್ಲಿ ತಾಯಿಯನ್ನು ಬಯಸುವುದು ಸಹಜ. ಅವಳು ಕೇಳಲಿ ಬಿಡಲಿ, ಮುಕ್ತಳ ಅಮ್ಮ ಹೆರಿಗೆಯ ಸಮಯದಲ್ಲಿ ಆಸ್ಪತ್ರೆಗೆ ಬಂದು ಮಗಳ ಪಕ್ಕ ನಿಂತರು. ಮುದ್ಡಾದ ಗಂಡುಮಗುವಿನ ತಾಯಿಯಾದ ಮುಕ್ತ, ಇಂತಹ ಸಮಯದಲ್ಲಿ ತನ್ನ ಗಂಡ ತನ್ನೆದುರು ಇರಲಾಗದ  ಅಸಹಾಯಕತೆಯನ್ನು ನೆನಪಿಸಿಕೊಂಡು ನಿಡುಸುಯ್ದಳು.


ಮುಕ್ತ ಮತ್ತು ಮಗುವನ್ನು ಅವಳ ಮನೆಗೆ ಬಿಟ್ಟು, ಅವಳ ತಾಯಿ ತಮ್ಮ ಮನೆಗೆ ಹೊರಟರು. ಅವರ ನಿರ್ದೇಶನದಂತೆ ಮುಕ್ತಳ ಬಾಣಂತನ ಸಾಂಗವಾಗಿ ಮುಗಿದು, ಮಗುವಿಗೆ ನಾಲ್ಕು ತಿಂಗಳು ತುಂಬಿದ ನಂತರ ಮುಕ್ತ ಮೊದಲಿನಂತೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದಳು. ಮಗುವಿನ ಫೋಟೊ ಮತ್ತು ಅದರ ಆಟಪಾಠಗಳನ್ನು ಮೊಬೈಲ್ ಮೂಲಕ ನೋಡುತ್ತಿದ್ದ ಮನು, ತಾನು ಈ ಸಮಯದಲ್ಲಿ ಮುಕ್ತಳ ಜೊತೆಗೆ ಇರಲಾಗದುದಕ್ಕೆ ತುಂಬಾ ಬೇಸರ ಪಟ್ಟುಕೊಳ್ಳುತ್ತಿದ್ದನು. ಅವನನ್ನು ನೋಡಿಕೊಳ್ಳುವುದಕ್ಕೆ ಅವನ ತಂದೆ ಒಂದು ಫುಲ್ ಟೈಮ್ ಮೇಲ್ ನರ್ಸ್ ಅನ್ನು ಇಟ್ಟಿದ್ದರು. ತನಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದ್ದರೂ, ತಾನು ಪ್ರೀತಿಸಿದ ಮುಕ್ತ ಮತ್ತು ತನ್ನ ಮಗುವಿನಿಂದ ದೂರ ಇರಬೇಕಾಯಿತಲ್ಲ?ಎಂದು ಒಳಗೊಳಗೇ ಕೊರಗುತ್ತಿದ್ದನು. ಗಂಡನ ಪರಿಸ್ಥಿತಿಯನ್ನು ತಿಳಿದಿದ್ದರೂ, ಈಗಿನ ತನ್ನ ಪರಿಸ್ಥಿತಿಯಲ್ಲಿಅವನಿಗೆ ಏನೂ ಸಹಾಯ ಮಾಡಲಾಗದಿದುಕ್ಕೆ ಮುಕ್ತ ಬೇಸರ ಮಾಡಿಕೊಳ್ಳುತ್ತಿದ್ದಳು. ಇವರಿಬ್ಬರ ಈ ಪರಿಸ್ಥಿತಿಯನ್ನು ಮನಗಂಡ ರಘು ಇಬ್ಬರನ್ನೂ ಒಟ್ಟು ಸೇರಿಸುವ ಪ್ರಯತ್ನ ಮಾಡಿ, ಮನುವಿನ ತಂದೆಯ ಜೊತೆ ಮಾತನಾಡಿ, ಮುಕ್ತಳನ್ನು ಸೊಸೆಯೆಂದೂ, ಮನುವಿನ ಮಗುವನ್ನು ಮೊಮ್ಮಗನೆಂದೂ ಒಪ್ಪಿಕೊಂಡು ತಮ್ಮ ಮನೆಗೆ ಕರೆಸಿಕೊಳ್ಳಬೇಕೆಂದು ರಾಜಿ ಮಾಡಿದ್ದನು. ಅದರಂತೆ, ಮಗನ ಪರಿಸ್ಥಿತಿಯನ್ನು ಮನಗಂಡು ,ಮನುವಿನ ತಂದೆ ತಾಯಿಯರು ಒಂದು ದಿನ ಸೊಸೆಯ ಮನೆಗೆ ಬಂದು ಅವಳನ್ನು ಮತ್ತು ಮೊಮ್ಮಗನನ್ನು ತಮ್ಮ ಮನೆಗೆ ಬರುವಂತೆ ಕರೆದರು. ಆದರೆ ಸ್ವಾಭಿಮಾನಿಯಾದ ಮುಕ್ತ ಅವರ ಆಹ್ವಾನವನ್ನು ತಿರಸ್ಕರಿಸಿಬಿಟ್ಟಾಗ,ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದ್ದರು.


ಮುಂದೆ ಮುಕ್ತ,ತನ್ನ ಸ್ವಪ್ರಯತ್ನದಿಂದ ಬ್ಯಾಂಕ್ ಆಫೀಸರ್ ಪರೀಕ್ಷೆಗಳನ್ನು ಬರೆದು, ಕೊನೆಗೂ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಳು. ನಂತರ ಅವಳು ಹಿಂದೆ ತಿರುಗಿ ನೋಡಲೇ ಇಲ್ಲ. ಇವಳು ಜೀವನದಲ್ಲಿ ಚೆನ್ನಾಗಿ ನೆಲೆನಿಂತ ಮೇಲೆ, ತನ್ನ ಗಂಡನನ್ನು ಮತ್ತೆ ತನ್ನ ಮನೆಗೆ ಕರೆದುಕೊಂಡು ಬಂದು, ಅವನಿಗೆ ಕೃತಕ ಕಾಲುಗಳನ್ನು ಹಾಕಿಸಿ, ಅವನಿಗೂ ಒಂದು ದಾರಿ ಮಾಡಿಕೊಟ್ಟಳು. ತನ್ನ ಗಂಡ ಮನುವಿಗೆ ತನ್ನ ಬ್ಯಾಂಕ್ ನಿಂದ ಸಾಲ ಕೊಡಿಸಿ, ಒಂದು ಕಂಪ್ಯೂಟರ್ ಬಿಸಿನೆಸ್ ಶುರು ಮಾಡಿಸಿದಳು. ಅವನಲ್ಲಿ ಸತ್ತುಹೋಗಿದ್ದ ಆತ್ಮವಿಶ್ವಾಸವನ್ನು ಮತ್ತೆ ತುಂಬುತ್ತಾ ಬಂದಳು.ಅವಳ ಸುತ್ತಮುತ್ತಲಿನವರಿಗೆ ಮುಕ್ತ ಸ್ವಾಭಿಮಾನಿ ಹೆಣ್ಣಾಗಿ, ಸ್ತ್ರೀ ಶಕ್ತಿಯಾಗಿ ಎಲ್ಲರಿಗೂ ಮಾದರಿಯಾದಳು.


ಈ ಬಾರಿಯ ಅಂತರ್ ರಾಷ್ಟೀಯ ಮಹಿಳಾ ದಿನಾಚರಣೆಯಂದು, ಸ್ತ್ರೀ ಶಕ್ತಿ ಮಹಿಳಾ ಸಂಘದವರು, ಅವಳನ್ನು ಕರೆದು ಸನ್ಮಾನಿಸಿದಾಗ, ಮುಕ್ತಳ ತಂದೆ ತಾಯಿ, ಮನುವಿನ ತಂದೆ ತಾಯಿ ಹಾಗು ಮನು ಎಲ್ಲರೂ ಸಮಾರಂಭಕ್ಕೆ ಬಂದಿದ್ದರು. ಎಲ್ಲರ ಸಮ್ಮುಖದಲ್ಲಿ ಮುಕ್ತಳಿಗೆ ಹಾರ ಹಾಕಿ ಸನ್ಮಾನಿಸಿ ಅವಳ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾಗ, ಮನೆಯವರೆಲ್ಲರೂ ಅವಳನ್ನು ಹೆಮ್ಮೆಯಿಂದ ನೋಡುತ್ತಾ, ಜೋರಾಗಿ ಕರತಾಡನ ಮಾಡುತ್ತಿದ್ದರು.


Rate this content
Log in

Similar kannada story from Abstract