Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

Vijaya Bharathi

Abstract Classics Others


3  

Vijaya Bharathi

Abstract Classics Others


ಮಿಂಚಿ ಹೋದ ಕಾಲ

ಮಿಂಚಿ ಹೋದ ಕಾಲ

4 mins 180 4 mins 180

            ಹದಿಹರೆಯದ ಹಲವಾರು ಕನಸುಗಳನ್ನು ಹೊತ್ತು, ಮದುವೆ ಮಾಡಿಕೊಂಡು ಗಂಡನ ಮನೆಗೆ ಸೇರು ಒದ್ದು ಬಂದಿದ್ದ ಆರಭಿಗೆ, ಒಂದೆರಡು ತಿಂಗಳೊಳಗೆ ನಿರಾಸೆಯಾಗತೊಡಗಿತು. ಮದುವೆಗೆ ಮುಂಚೆ ಕಥೆ ಕಾದಂಬರಿಗಳನ್ನು ಓದುತ್ತಾ, ತನ್ನ ಕನಸಿನ ರಾಜಕುಮಾರನೂ ಕಥಾನಾಯಕರಂತೆ ತನ್ನನ್ನು ಪ್ರೀತಿಯ ಹೊಳೆಯಲ್ಲಿ ಮೀಯಿಸುತ್ತಾನೆಂದು ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಮದುವೆ ಮಾಡಿಕೊಂಡಿದ್ದ ಕಲ್ಪನೆಯ ಕನ್ಯೆ ಆರಭಿಗೆ,ತಾನು ಕಲ್ಪಿಸಿಕೊಂಡಿದ್ದ ವೈವಾಹಿಕ ಜೀವನಕ್ಕೂ, ವಾಸ್ತವ ಜೀವನಕ್ಕೂ ಅಜಗಜಾಂತರವೆಂದು ತಿಳಿಯುವ ವೇಳೆಗೆ ಅವಳಿಗೆ ತುಂಬಾ ಭ್ರಮನಿರಸನವಾಗಿತ್ತು.


   ಮದುವೆ ಗೊತ್ತಾಗಿ ನಿಶ್ಚಿತಾರ್ಥವಾದಾಗಲಿನಿಂದ ಮದುವೆಯವರೆಗೂ ನೂರಾರು ಕಲ್ಪನೆಯ ಕನಸುಗಳಲ್ಲಿ ತೇಲಿಸಿ, ನೂರಾರು ಭರವಸೆಗಳನ್ನು ನೀಡಿ, ಅವಳ ಮನಸ್ಸಿನಲ್ಲಿ ಆಸೆಯ ಬೀಜಗಳನ್ನು ಬಿತ್ತಿದ್ದ ಅವಳ ಗಂಡ ಆನಂದ್, ಮದುವೆಯಾದ ನಂತರ ಬೇರೆಯೇ ರೀತಿಯಲ್ಲಿರುವುದನ್ನು ಗಮನಿಸುತ್ತಿದ್ದ ಆರಭಿಗೆ ತಾನೇನಾದರೂ ಮೋಸ ಹೋದೆನೆ ಎಂದು ಅನುಮಾನ ಪಡುತ್ತಿದ್ದಳು.

ಅವಳು ಹುಟ್ಟಿ ಬೆಳೆದ ಮನೆಗೂ, ಸೇರಿದ ಗಂಡನ ಮನೆಗೂ ತುಂಬಾ ವ್ಯತ್ಯಾಸಗಳನ್ನು ಗಮನಿಸುತ್ತಾ ಪಶ್ಚಾತ್ತಾಪ ಪಡುತ್ತಿದ್ದಳು. ಆರಭಿಯ ಗಂಡ ಆನಂದ್ ಮದುವೆಗೆ ಮುಂಚೆ ಹೇಳುತ್ತಿದುದೆಲ್ಲವೂ ಸುಳ್ಳೆಂದು ಅವಳಿಗೆ ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ.ಅವಳಿಗೋ, ಮದುವೆಯಾದ ತಕ್ಷಣ ಹನಿಮೂನಿಗೆ ಯಾವುದಾದರೂ ಸುಂದರವಾದ ಹಿಲ್ಸ್ ಸ್ಟೇಷನ್ನಿಗೆ ಹೋಗಿ ಅಲ್ಲಿ ತಾನು, ತನ್ನ ಗಂಡನೊಡನೆ ಆರಾಮವಾಗಿ ಕಾಲಕಳೆಯಬೇಕೆಂದುಕೊಂಡಿದ್ದಳು. ಆದರೆ ಹೊಸಹೆಂಡತಿ ಬಂದ ಎರಡೇ ದಿನಗಳಲ್ಲಿ ಆನಂದ್ ತನ್ನ ಕೆಲಸದ ಒತ್ತಡದ ನೆಪವನ್ನು ಹೇಳುತ್ತಾ ಆಫೀಸಿಗೆ ಹೊರಟೇ ಬಿಟ್ಟಾಗ ಆರಭಿಗೆ ಆಶ್ಚರ್ಯದೊಂದಿಗೆ ನಿರಾಸೆಯ ಕಣ್ಣೀರು ಹರಿಯಿತು. ಆದರೂ ಅವಳು ತನ್ನ ಮನದಾಸೆಯನ್ನು ನಾಚಿಕೆ ಬಿಟ್ಟು ಕೇಳಿದಾಗ, ಆನಂದ್ ಉಡಾಫೆಯಿಂದ ಅವಳ ಮಾತನ್ನು ತಳ್ಳಿಹಾಕುತ್ತಾ,

"ಹೋ ಮದುವೆಯಾದ ಕೂಡಲೆ ಈ ಹನಿಮೂನ್ ಎಂಬ ಹರಕೆ ತೀರಿಸಲೇ ಬೇಕಾ? ಮುಂದೆ ಬೇಕಾದಷ್ಟು ಅವಕಾಶವಿರುತ್ತದೆ. ಹೋದರಾಯಿತು. ನನಗೆ ಈಗ ಆಫೀಸಿನಲ್ಲಿ ತುಂಬಾ ಕೆಲಸವಿದೆ. ಮುಂದಿನ ತಿಂಗಳು ಹೋಗೋಣ"ಎಂದು ಹೇಳಿದಾಗ ಆರಭಿ "ಅಯ್ಯೋ, ಹೊಸದಾಗಿ ಮದುವೆಯಾದ ಈ ಕಾಲ ಕಳೆದು ಹೋದರೆ ಮತ್ತೆ ಮರಳಿ ಬರುವುದಿಲ್ಲ. ಯಾವುದೇ ಕಾಲಕ್ಕೂ ಅದರದೇ ಆದ ಮಹತ್ವವಿದೆ. ಈಗ ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಈ ಸಮಯ ಅತ್ಯಂತ ಮುಖ್ಯವಾದ ಘಟ್ಟ. ನೀವು ಮದುವೆಗೆ ಮುಂಚೆ, ನಾವಿಬ್ಬರೂ ಭೇಟಿ ಮಾಡಿದಾಗಲೆಲ್ಲಾ, ನನಗೂ ಹೊರಗಡೆ ಓಡಾಡುವುದೆಂರೆ ತುಂಬಾ ಇಷ್ಟ ಅಂತ ಹೇಳುತ್ತಿದ್ದಿರಿ. ಇಷ್ಟು ಬೇಗ ನೀವು ಆಡಿದ ಮಾತುಗಳನ್ನು ಮರೆತಂತಿದೆ" ಎಂದ ಆರಭಿಯ ಕಣ್ಣಿನಲ್ಲಿ ಗಂಗೆ ಭಾಗೀರಥಿಗಳಿಳಿಯುತ್ತಿರುವುದನ್ನು ಕಂಡ ಆನಂದ್, ಹತ್ತಿರ ಬಂದು ಅವಳನ್ನು ಬಳಸುತ್ತಾ, ಅವಳ ಕಣ್ಣೀರನ್ನು ಒರೆಸುತ್ತಾ, 

"ಹೋ ಹೋ ಹೋ! ಸ್ಟಾಪ್ ಕ್ರೈಯಿಂಗ್ ಮೈ ಡಿಯರ್ ವೈಫ್. ಇಷ್ಟಕ್ಕೆಲ್ಲಾ ಕಣ್ಣೀರು ಹಾಕುವುದಾ? ಈಗ ನನಗೆ ಸ್ವಲ್ಪ ವರ್ಕ ಪ್ರೆಶರ್ ಇದೆ. ಮುಂದಿನ ತಿಂಗಳು ಪ್ಲಾನ್ ಮಾಡೋಣ. ಪ್ಲೀಸ್ ಚಿಯರ್ ಅಪ್" ಎಂದು ಸಮಾಧಾನ ಪಡಿಸಿ ತನ್ನ ಆಫೀಸಿಗೆ ಹೊರಟೇ ಬಿಟ್ಟ. ಗಂಡ ಹೋದ ದಿಕ್ಕನ್ನೇ ನೋಡುತ್ತಾ ಆರಭಿ ನಿಟ್ಟುಸಿರು ಬಿಟ್ಟಳು. 


 ಹೀಗೆ ಪ್ರಾರಂಭವಾದ ಅವಳ ನಿರಾಸೆ ಮುಂದೆ ಚಿಗುರೊಡೆಯುತ್ತಾ ಹೋಯಿತು. ಇವಳ ಬಾಡಿದ ಮುಖವನ್ನು ನೋಡಲಾಗದೆ ಆನಂದ್ ಒಂದೆರಡು ದಿನಗಳ ಮಟ್ಟಿಗೆ ಹತ್ತಿರದ ಹಿಲ್ ಸ್ಟೇಷನ್ನಿಗೆ ಅವಳನ್ನು ಕರೆದೊಯ್ದು, ಹನಿಮೂನ್ ಟ್ರಿಪ್ ಮುಗಿಸಿದ್ದ. ಇದಾದ ನಂತರ ಅವನಾಗೇ ಎಲ್ಲಿಗೂ ಹೊರಡಲು ಇಷ್ಟ ಪಡುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದು ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದ. ಅತ್ತೆ, ಮಾವ, ಮೈದುನ‌,‌ ನಾದಿನಿಯರಿರುವ ಆ ಕೂಡು ಕುಟುಂಬದಲ್ಲಿ ಆರಭಿಗೆ ಗಂಡನೊಡನೆ ಏಕಾಂತ ಸಿಗುವುದೇ ಕಷ್ಟವಾಗುತ್ತಿತ್ತು. ಆ ಮನೆಯಲ್ಲಿ ಎಲ್ಲರೂ ಆನಂದನ ಮೇಲೆ ಅವಲಂಬಿತವಾಗಿದ್ದುದ್ದರಿಂರ ತನ್ನ ಹೆತ್ತವರು ಹಾಗೂ ತಂಗಿ, ತಮ್ಮಂದಿರನ್ನು ಬಿಟ್ಟು ಇವರಿಬ್ಬರೇ ಹೊರಗಡೆ ಹೋಗಲು ಆಗುತ್ತಿರಲಿಲ್ಲ. ಇದು ಅವನಿಗೂ ಇಷ್ಟವಾಗುತ್ತಿರಲಿಲ್ಲ. ಆದರೆ ಆರಭಿಗೆ ಗಂಡನ ಈ ವರ್ತನೆಯಿಂದ ಬೇಸರವಾಗುತ್ತಿತ್ತು. ತನ್ನ ಈ ಬೇಸರವನ್ನು ಗಂಡನೊಡನೆ ಹೇಳಿಕೊಂಡಾಗಲೆಲ್ಲಾ ಆನಂದನದು ಒಂದೇ ಸಮಧಾನ, "ಮೊದಲು ನನ್ನ ಕೆಲವು ಜವಾಬ್ದಾರಿಗಳು ಮುಗಿದು ಬಿಡಲಿ, ನಂತರ ನೋಡೋಣ. ಈಗೇನು ಕಾಲ ಮಿಂಚಿ ಹೋಯಿತಾ? ಮುಂದೆ ನಾವಿಬ್ಬರೂ ಸುತ್ತಾಡೋದು ಇದ್ದೇ ಇದೆ" ಹೀಗೆ ಹೇಳುತ್ತಾ ಹೋದ. 


ಇದೇ ಸ್ಟೀರಿಯೋ ಟೈಪ್ ಮಾತುಗಳನ್ನು ಕೇಳಿ ಕೇಳಿ ಬೇಸರಗೊಂಡ ಆರಭಿ, ತನ್ನ ಕಲ್ಪನೆಯ ಕನಸುಗಳ ಬಾಗಿಲಿಗೆ ಭದ್ರವಾಗಿ ಬೀಗ ಹಾಕಿಬಿಟ್ಟಳು. ದೇವಸ್ಥಾನ, ಹರಕೆಗಳು, ಮದುವೆ ಮುಂಜಿ, ಗೃಹಪ್ರವೇಶ,ಮುಂತಾದ ಕಡೆಗಳಿಗೆ ಮನೆಯವರೆಲ್ಲರೂ ಕೂಡಿ ಹೋಗಿ ಬರುತ್ತಿದ್ದರು, ಅಷ್ಟೇ. ಆರಭಿಯ ಕನಸುಗಳು ಕನಸಾಗಿಯೇ ಉಳಿಯಿತು. ಇನ್ನು ಈ ಬಗ್ಗೆ ಗಂಡನಲ್ಲಿ ಮಾತನಾಡುವುದು ಪ್ರಯೋಜನವಿಲ್ಲವೆಂದುಕೊಂಡು ತೆಪ್ಪಗಾದಳಾದರೂ, ಒಳಗೊಳಗೇ ನೋವನ್ನು ನುಂಗುತ್ತಿದ್ದಳು.


ಅವಳ ಜೀವನದಲ್ಲೂ ಕಾಲ ಸದ್ದಿಲ್ಲದೆ ಸರಿದು ಹೋಗುತ್ತಿತ್ತು. ನಾದಿನಿ ಮೈದುನರ ಮದುವೆಗಳಾಗಿ ಅವರವರ ದಾರಿ ಕಂಡುಕೊಂಡರು. ಅತ್ತೆ, ಮಾವಂದಿರು ವೃದ್ದಾಪ್ಯದ ಅಂಚಿಗೆ ಬಂದಿದ್ದರು. ಗಂಡನ ಕೂದಲು ಮೆಲ್ಲಗೆ ನೆರೆಯತೊಡಗಿತು. ಅವಳಿಗೂ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಇಣುಕಿ, ಅವಳ ಜೀವನದ ಕಳೆದ ಕಾಲವನ್ನು ಕೂಗಿ ಹೇಳುತ್ತಿತ್ತು. ಈಗ ಅವಳ ಮುಂದೆ ಕಾಲೇಜಿನಲ್ಲಿ ಓದುತ್ತಿದ್ದ ಇಬ್ಬರು ಗಂಡು ಮಕ್ಕಳ ಜವಾಬ್ದಾರಿಯಿತ್ತು. 

ಇತ್ತೀಚೆಗೆ ಅವಳು ನಿದ್ರೆಯನ್ನು ಇಷ್ಟಪಡುತ್ತಿದ್ದಳು. ಅವಳು ಮಲಗಿದಾಗ ಸುಪ್ತ ಮನಸ್ಸಿನ ಆಸೆಗಳು, ಕನಸುಗಳಾಗಿ ಬೀಳುವಾಗ, ಅವಳಿಗೆ ನಿದ್ರೆಯೇ ಆಪ್ತ ಸಂಗಾತಿಯಾಗಿತ್ತು.


ಯಾರು ಹೇಗೇ ಇರಲಿ, ಓಡುವ ಕಾಲವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆನಂದನಿಗೆ ನಿವೃತ್ತಿಯೂ ಆಯಿತು. ಆದರೆ ಈಗ ಅವನನ್ನು ಪಶ್ಚಾತ್ತಾಪ ಕಾಡುತ್ತಿತ್ತು. ಈಗ ಅವನಿಗೆ ಆರಭಿಯ ಜೊತೆ ಹಾಯಾಗಿ ಪ್ರವಾಸ ಮಾಡಬೇಕೆಂದು ಮನಸ್ಸು ತುಡಿಯುತ್ತಿತ್ತು. ಇಷ್ಟು ವರ್ಷಗಳು ಈ ಸಂಸಾರಕ್ಕೆ ದುಡಿದು ಸಂಪಾದಿಸುವುದರಲ್ಲೇ ಅವನ ಅತ್ಯಂತ ಒಳ್ಳೆಯ ಕಾಲವು ಸದ್ದಿಲ್ಲದೆ ಸರಿದು ಹೋಗಿತ್ತು. ಅವನು ಹೊರಗೆ ಟೂರ್ ಮಾಡಲು ಚಡಪಡಿಸುತ್ತಿದ್ದ. ಅದು ಸಾಧ್ಯವಾಗದಾಗ ಪಿರಿಪಿರಿಗುಟ್ಟುತ್ತಿದ್ದ. ಆದರೆ ಆರಭಿಗೆ ಈಗೇನು ಬೇಡವಾಗಿತ್ತು. ಇಬ್ಬರ ಜೀವನದ ಸುಂದರ ಸಮಯ ಸರಿದು ಹೋಗಿ, ಈಗ ಕೇವಲ ಯಾಂತ್ರಿಕ ಬದುಕು ಸಾಗುತ್ತಿತ್ತು. ಮನೆಯ ವೃದ್ದರು ತಮ್ಮ ಕೊನೆಗಾಲವನ್ನು ಕಾಯುತ್ತಾ ಕುಳಿತಿದ್ದರು. 


 ಒಂದು ದಿನ ಆನಂದ್ ಹತಾಶೆಯಿಂದ "ನನಗಂತೂ ಈ ಸಂಸಾರದ ಹೊಣೆ ಹೊತ್ತು ಸಾಕಾಗಿ ಹೋಗಿದೆ. ಈ ಸಾಂಸಾರಿಕ ಜವಾಬ್ದಾರಿ ಎಂದು ಮುಗಿದು ನಾವೂ ಸಹ ಎಲ್ಲರಂತೆ ದೇಶ ವಿದೇಶಗಳನ್ನು ಎಂದು ನೋಡುವೆವೋ! ಈಗ ನನ್ನಲ್ಲಿ ಯಥೇಚ್ಛವಾಗಿ ಹಣವಿದೆ, ಒಳ್ಳೆಯ ಕಾರಿದೆ ಎಲ್ಲಾ ಇದೆ. ಆದರೆ ಈಗ ಈ ಕರೋನಾ ಭೂತದ ಭೀತಿಯಿಂದ ಎಲ್ಲಿಯೂ ಹೋಗಲಾಗುತ್ತಿಲ್ಲ. ಏಕೋ ಏನೋ ಇತ್ತೀಚೆಗೆ ನನಗೊಂದು ರೀತಿ ಡಿಪ್ರೆಶನ್" ಪೇಚಿಕೊಂಡಾಗ, ಆರಭಿ ಅವನನ್ನು ನೋಡಿ ವಿಷಾದದ ನಗೆ ನಕ್ಕು, "ಈಗ ಪೇಚಾಡಿಕೊಂಡರೆ ಏನು ಉಪಯೋಗ? ಹೊರಗೆ ಸುತ್ತಾಡಿಕೊಂಡು ಬರಬೇಕಾದ ಕಾಲದಲ್ಲಿ, ಕೆಲಸ ಜವಾಬ್ದಾರಿ ಎಂದು ಹೇಳುತ್ತಾ ಕಾಲವನ್ನು ಕಳೆದದ್ದಾಯಿತು. ಈಗ ನಿಮಗೆ ಸುತ್ತಾಡುವ ಆಸೆ ಬರುವ ವೇಳೆಗೆ ಕಾಲ ಬದಲಾಯಿತು. ಸಾಲದ್ದಕ್ಕೆ ಈ ಕರೋನಾ ಕಾಟ ಬೇರೆ. ನಮ್ಮ ಆಯುಷ್ಯದಲ್ಲಿ ಕಳೆದು ಹೋದ ಯೌವನದ ಆ ಕಾಲ ಮತ್ತೆ ಮರಳಿ ಬರುವುದೆ? ಆಗೆಲ್ಲಾ ನಾನು ಎಷ್ಟು ತಿಳಿಹೇಳಿದರೂ ನೀವು ಕೇಳಲಿಲ್ಲ. ಈಗ ಸುಮ್ಮನೆ ಪೇಚಾಡುತ್ತಾ ಕುಳಿತುಕೊಂಡರೆ ಏನು ಪ್ರಯೋಜನ? ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂದಾಗಿದೆ.ಕಾಲಾಯ ತಸ್ಮೈ ನಮಃ" ಎಂದು ಆರಭಿ ಇವನಿಗೆ ಮುಖ ತಿರುಗಿಸಿ ಮಲಗಿದಾಗ, ಅವಳ ಮಾತುಗಳನ್ನೇ ಮೆಲುಕು ಹಾಕುತ್ತಾ, ನಿಟ್ಟುಸಿರು ಬಿಟ್ಟ ಆನಂದ್. ಅವನಿಗೆ ಈಗ ಪಶ್ಚಾತ್ತಾಪವಾಗಿತ್ತು.

"ನಿಜ, ನಾನು ನಮ್ಮ ಯೌವ್ವನದ ಕಾಲವನ್ನು ವ್ಯರ್ಥ ಮಾಡಿಬಿಟ್ಟೆ.ನಮ್ಮ ಜೀವನದ ಉತ್ತುಂಗ ಕಾಲವು ಸರಿದೇ ಹೋಯಿತು" ಅವನ ಮನಸ್ಸು ನೀರವವಾಗಿ ರೋದಿಸಿತು.Rate this content
Log in

More kannada story from Vijaya Bharathi

Similar kannada story from Abstract