Vijaya Bharathi

Abstract Inspirational Others

3  

Vijaya Bharathi

Abstract Inspirational Others

ಮಹಾಮಾತೆ

ಮಹಾಮಾತೆ

4 mins
188


 ಅಂದು ಹೊಸ ಮನೆಯ ಗೃಹಪ್ರವೇಶ. ಆಶಿಶ್ ಮತ್ತು ಅತೀತ್ ತಮ್ಮ ತಾಯಿ ಸುಮಳ ಜೊತೆ ಜೊತೆಗೂ ಓಡಾಡಿಕೊಂಡು, ಅಮ್ಮನ ಕೆಲಸಕ್ಕೆ ಹೆಗಲು ಕೊಟ್ಟು ಎಲ್ಲವನ್ನೂ ಅಚ್ಚುಕಟ್ಟಾಗಿ ಸಂಭಾಳಿಸುತ್ತಿರುವುದನ್ನು ನೋಡುತ್ತಿದ್ದ ಸುಮಳ ತಾಯಿ ಸುಮಿತ್ರಮ್ಮನ ಕಣ್ಣಾಲಿಗಳು ತುಂಬಿದವು. ಮೂರು ಬೆಡ್ ರೂಮಿನ ವಿಶಾಲವಾದ ಮನೆಯನ್ನು ತನ್ನ ಆಸೆಯಂತೆ ನವೀನವಾಗಿ ಕಟ್ಟಿಸಿ, ಸುಂದರವಾದ ಇಂಟೆರಿಯರ್ ಡೆಕೋರೇಶನ್ ಮಾಡಿಸಿದ್ದಳು ಸುಮ. ಗೃಹಪ್ರವೇಶಕ್ಕೆ ಬಂದವರೆಲ್ಲರೂ, ಮನೆಯನ್ನು ನೋಡಿ ಅವಳ ಅಭಿರುಚಿಯನ್ನು ಹೊಗಳಿ ಅವಳಿಗೆ ಅಭಿನಂದಿಸಿ ಹೋಗುತ್ತಿದ್ದರು. 


ಬಲಗೈಗೊಂದು ಬ್ರಾಸ್ಲೆಟ್, ಎಡಗೈಗೆ ಗೋಲ್ಡೆನ್ ಚೈನ್ ಇರುವ ವಾಚ್, ಕತ್ತಿಗೊಂದು ಸಿಂಪಲ್ ನೆಕ್ಲೇಸ್ ಹಾಕಿಕೊಂಡು, ತನ್ನ ನೀಳಕೇಶ ರಾಶಿಯನ್ನು ಒಟ್ಟಿಗೆ ಸೇರಿಸಿ ಕ್ಲಿಪ್ ಮಾಡಿ, ತಿಳಿ ನೀಲಿ ಬಣ್ಣದ ಮೈಸೂರು ಸಿಲ್ಕ್ ಸೀರೆಯಲ್ಲಿ ಅತ್ಯಂತ ಸರಳವಾಗಿ ಅಲಂಕರಿಸಿಕೊಂಡು ಓಡಾಡುತ್ತಿದ್ದ ಮಗಳು ಸುಮಳನ್ನು , ಅವಳ ತಾಯಿ ಸುಮಿತ್ರಮ್ಮ ಅಭಿಮಾನದಿಂದ ನೋಡುತ್ತಿದ್ದರು. ಐವತ್ತರ ಹರೆಯದಲ್ಲೂ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ತಮ್ಮ ಮಗಳು ಸುಮಳನ್ನು ನೋಡುತ್ತಾ, ಸುಮಿತ್ರಮ್ಮನ ಕಣ್ಣಾಲಿಗಳು ತುಂಬಿಕೊಂಡವು. ತನ್ನ ಜೀವನದಲ್ಲಿ ಬಹಳ ಹೋರಾಟ ನಡೆಸಿ ಮೇಲಕ್ಕೆ ಬಂದಿರುವ ಮಗಳ ಬಗ್ಗೆ ಒಂದು ಕಡೆ ಆನಂದಭಾಷ್ಪ,  ಮತ್ತೊಂದು ಕಡೆ ಮಗಳ ಗತ ಜೀವನದ ನೋವಿನ ನೆನಪುಗಳ ಬಿಸಿಹನಿಗಳೆರಡೂ ಮಿಳಿತವಾಗಿ ಒಟ್ಟೊಟ್ಟಿಗೆ ಇಳಿಯುತ್ತಿದ್ದವು. ಅವರ ಮನಸ್ಸು ಹಾಗೇ ಹಿಂದಕ್ಕೋಡಿತು. 


ಈಗ ಇಪ್ಪತ್ತೈದು ವರ್ಷಗಳ ಹಿಂದೆ ಐದು ವರ್ಷದ ಆಶಿಶ್ ಹಾಗು ಮೂರು ವರ್ಷದ ಅತೀತ್ ನನ್ನು 

ಮಡಿಲಲ್ಲಿಟ್ಟುಕೊಂಡು ಇಪ್ಪತ್ತೈದರ ಹರೆಯದ ತಮ್ಮ ಮಗಳು ಸುಮ,ಗಂಡನನ್ನು ಕಳೆದುಕೊಂಡ ಆ ಸಂದರ್ಭ ನೆನಪಾಗಿ ತಾಯಿಯ ಕರುಳುಹಿಂಡಿದಂತಾಯಿತು.


ಅನುಕಂಪದ ಆಧಾರದ ಮೇಲೆ ಮಗಳಿಗೆ ಅಳಿಯನ ಆಫೀಸ್ ನಲ್ಲಿ ಡಿ ಗ್ರೂಪ್ ನೌಕರಳ ಕೆಲಸ ದೊರೆತಾಗ, ಅವಳು ಮುಜುಗರ ಪಟ್ಟುಕೊಳ್ಳದೆ , ತನಗೆ ಸಿಕ್ಕಿರುವ ಉದ್ಯೋಗ ವನ್ನು ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ಕೆಲಸಕ್ಕೆ ಸೇರಿ, ಜೊತೆ ಜೊತೆಗೆ ಅರ್ಧಕ್ಕೆ ನಿಲ್ಲಿಸಿದ್ದ ಓದನ್ನೂ ಮುಂದುವರಿಸುತ್ತಾ, ಮನೆಕೆಲಸ,ಮಕ್ಕಳ ಲಾಲನೆ ಪಾಲನೆಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ತನ್ನ ಸ್ವಂತ ಪರಿಶ್ರಮದಿಂದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಿ,ಮುಂದೆ ತಂದು,ಇದೀಗ ನಿಲ್ಲಲು ಒಂದು ಸ್ವಂತ ಗೂಡನ್ನು ಕಟ್ಟಿಕೊಂಡು, ಗೆಲುವಿನ ಹೆಜ್ಜೆ ಇಡುತ್ತಿದ್ದ ಮಗಳ ಆತ್ಮ ನಿರ್ಭರತೆಯನ್ನುಕಂಡು ಹೆಮ್ಮೆ ಪಡುತ್ತಿದ್ದರು. ಅಂದಿನಿಂದ ಇಂದಿನವರೆ,ಗೂ ಮಗಳ ಬೆಂಬಲವಾಗಿ ನಿಂತು, ಅವಳ ಸಂಸಾರ ಇದೀಗ ಒಂದು ದಡ ಮುಟ್ಟುತ್ತಿರುವಾಗ, ಅವರಿಗೆ ಒಂದು ಕಡೆ ಆನಂದ ಮತ್ತೊಂದು ಕಡೆ ಮಗಳ ಒಂಟಿ ತನದ ಬಗ್ಗೆ ನೋವು ಎರಡು ಭಾವಗಳೂ ಒಟ್ಟಿಗೆಮೇಳೈಸಿದ್ದು,ಅವರು ಅತ್ಯಂತ ಭಾವುಕರಾಗಿದ್ದರು. ಮಗಳಿಗಾಗಿ ತಮ್ಮ ಗಂಡ ಹಾಗು ಮನೆ ಎಲ್ಲವನ್ನೂ ತೊರೆದು ಬಂದಿದ್ದರು ಸುಮಿತ್ರಮ್ಮ. ಕಡೆ ಕಡೆಗೆ ಹೆಂಡತಿಯನ್ನು ಬಿಟ್ಟಿರಲಾರದೆ ಅವರ ಪತಿಯೂ ಇವರೊಂದಿಗೇ ಇರುತ್ತಿದ್ದರು. ಈಗೆರಡು ವರ್ಷಗಳ ಹಿಂದೆ ಸುಮಿತ್ರಮ್ಮ ತಮ್ಮ ಪತಿಯನ್ನೂ ಕಳೆದುಕೊಂಡಿದ್ದರು. ತಮ್ಮ ಮಗಳು ಅನುಭವಿಸಿದ ಕಷ್ಟಗಳ ಮುಂದೆ ತಮ್ಮ ಕಷ್ಟಗಳು ಏನೇನೂ ಇಲ್ಲ ಎಂದುಕೊಳ್ಳುತ್ತಾ, ಧೈರ್ಯದಿಂದ ಇರುತ್ತಿದ್ದರು.ಮಗಳ ಮುಂದೆ ಎಂದೂ ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಡುತ್ತಿರಲಿಲ್ಲ. 


ಆದರೆ ಇಂದು ಅವರು ಭಾವುಕರಾಗಿದ್ದರು. ಆಗಾಗ ತಮ್ಮ ಕರವಸ್ತ್ರದಿಂದ ಕಣ್ಣು ಮೂಗುಗಳನ್ನು ಒರೆಸಿಕೊಳ್ಳುತ್ತಿದ್ದರು.


ಅಂದು ಬೆಳಗ್ಗಿನಿಂದ ಸಂಜೆಯವರೆಗೂ ಅತಿಥಿಗಳಿಂದ ತುಂಬಿ ತುಳುಕುತ್ತಿದ್ದ ಹೊಸಮನೆ ,ರಾತ್ರಿಯ ವೇಳೆಗೆ 

ಶಾಂತವಾಯಿತು. ಬೆಳಗ್ಗಿನಿಂದಲೂ ಓಡಾಡಿ ಓಡಾಡಿ ಆಯಾಸಗೊಂಡಿದ್ದ ಸುಮ, ಆಶಿಶ್ ಹಾಗೂ ಅತೀತ್ ಮೂವರೂ ಬಂದು ಸುಮಿತ್ರಮ್ಮನವರ ಸುತ್ತಲೂ ಕುಳಿತರು. ತಮ್ಮ ಹತ್ತಿರ ಬಂದು ಕುಳಿತ ಮೊಮ್ಮಕ್ಕಳ

ತಲೆಯನ್ನು ನೇವರಸಿದ ಸುಮಿತ್ರಮ್ಮ, ತಮ್ಮ ಮೊಮ್ಮಕ್ಕಳಿಗೆ ಒಂದೆರಡು ಹಿತವಚನಗಳನ್ನು ಹೇಳುತ್ತಾ ಕುಳಿತರು.

ಆಶಿಶ್ ಹಾಗೂ ಅತೀತ್ ಇಬ್ಬರಿಗೂ ಅಜ್ಜಿಯ ಮಾತುಗಳನ್ನು ಆಲಿಸು ವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಜ್ಜಿಯ ಮಾತಿಗೆ ಕಿವಿಗೊಟ್ಟರು. 


"ನೋಡಿ ಮಕ್ಕಳಾ, ಇಂದಿನ ನಿಮ್ಮ ಈ ಸ್ಥಿತಿಗೆ ನಿಮ್ಮ ಅಮ್ಮನ ಇಪ್ಪತ್ತೈದು ವರ್ಷಗಳ ದಣಿವರಿಯದ ಸತತ ಪರಿಶ್ರಮವೇ ಕಾರಣ ಎನ್ನುವುದನ್ನು ಎಂದಿಗೂ ಮರೆಯಬೇಡಿ.. ನೀವಿಬ್ಬರೂ ಎಳೆಮಕ್ಕಳಾಗಿದ್ದಾಗಲೇ

 ನಿಮ್ಮ ಅಪ್ಪ, ನಿಮ್ಮೆಲ್ಲರನ್ನೂ ಬಿಟ್ಟು ಮೇಲಿನ ಲೋಕಕ್ಕೆ ಹೋಗಿಬಿಟ್ಟಾಗ, ನಿಮ್ಮ ಅಮ್ಮನಿಗೆ ಮುಂದೇನು? ಎಂಬುದೇ ಯೋಚನೆಯಾಗಿತ್ತು. ಕೇವಲ ಎಸ್.ಎಸ್.ಎಲ್.ಸಿ. ಮುಗಿಸಿದ್ದ ಅವಳಿಗೆ, ನಿಮ್ಮ ಅಪ್ಪನ ಆಫೀಸಿನಲ್ಲಿ ಗ್ರೂಪ್ ಡಿ ನೌಕರಳ ಕೆಲಸ ಸಿಕ್ಕಿದಾಗ, ಅದನ್ನೇ ದೇವರು ಕೊಟ್ಟ ವರಪ್ರಸಾದವೆಂದು ತಿಳಿದು, ಕೆಲಸಕ್ಕೆ ಸೇರಿ, ಜೊತೆ ಜೊತೆಗೆ ತನ್ನ ಓದನ್ನೂ ಮುಂದುವರಿಸಿಕೊಂಡು, ಪದವಿಯನ್ನು ಪಡೆದು,ಮುಂದೆ ಇಲಾಖೆಯ ಪರೀಕ್ಷೆಗಳನ್ನೂ ಮುಗಿಸಿಕೊಳ್ಳುತ್ತಾ, ಇಂದು ಅದೇ ಆಫೀಸಿನಲ್ಲಿ ಆಫೀಸರ್ ಹುದ್ದೆಯನ್ನು ಅಲಂಕರಿಸಿದ್ಡಾಳೆಂದರೆ, ನಾವೆಲ್ಲರೂ ಅವಳ ಛಲವನ್ನು ಮೆಚ್ಚಲೇ ಬೇಕು. ತನ್ನ ಇಪ್ಪತ್ತೈದನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು,ತನ್ನ ವೈಯಕ್ತಿಕ ಸುಖಗಳಿಂದ ವಂಚಿತಳಾದರೂ, ಎಲ್ಲವನ್ನೂ ಮರೆತು,ಅವನ ಸ್ಥಾನವನ್ನೂ ತುಂಬಿ, ತನ್ನ ಮಕ್ಕಳಿಗಾಗಿ ನಿರಂತರವಾಗಿ ಶ್ರಮಿಸಿ, ನಿಮ್ಮಿಬ್ಬರನ್ನೂ ಬಿ.ಇ. ಮಾಡಿಸಿ,ನಿಮಗೆ ಉತ್ತಮ ಜೀವನವನ್ನು ಕಲ್ಪಿಸಿಕೊಟ್ಟಿದ್ಡಾಳೆ. ಈಗ ನನಗೂ ಒಂದು ರೀತಿ ನೆಮ್ಮದಿ ಸಿಕ್ಕಿದಂತಾಯಿತು. ನಿಮ್ಮ ಅಪ್ಪ ಹೋದ ದಿನದಿಂದ ಇಂದಿನವರೆಗೂ ನಾನು ನನ್ನ ಮಗಳ ಬೆಂಬಲವಾಗಿ ನಿಂತುಬಿಟ್ಟೆ. ಇಂದು ನನಗೂ ನನ್ನ ಜೀವನದಲ್ಲಿ ತೃಪ್ತಿ ಸಿಕ್ಕಿದೆ. ತನ್ನ ವೈಯಕ್ತಿಕ ನೋವನ್ನು ನುಂಗಿಕೊಂಡು ಅತ್ಯಂತ ಶ್ರಮದಿಂದ ನಿಮ್ಮನ್ನು ಸಾಕಿ ಸಲಹಿ,ಬೆಳೆಸಿರುವ ಈ ನಿಮ್ಮ ಅಮ್ಮ ಮತ್ತು ನನ್ನ ಮಗಳು ನಿಜವಾಗಿಯೂ "ಮಹಾತಾಯಿ" ಯೇ ಸರಿ. ನೀವಿಬ್ಬರೂ ನನ್ನದೊಂದು ಕೋರಿಕೆಯನ್ನು ನಡೆಸಿಕೊಡುತ್ತೇವೆಂದು ನನಗೆ ಮಾತು ಕೊಡಿ" 


ಸುಮಿತ್ರಮ್ಮ ಇಬ್ಬರು ಮೊಮ್ಮಕ್ಕಳ ಮುಂದೆ ತನ್ನ ಸುಕ್ಕುಗಟ್ಟಿದ ಕೈಯನ್ನು ಮುಂದೆ ನೀಡುತ್ತಾ ಕೇಳಿದಾಗ,

ಮೊಮ್ಮಕ್ಕಳಿಬ್ಬರೂ ಅಜ್ಜಿಯ ಕೈ ಮೇಲೆ ತಮ್ಮ ಕೈಗಳನ್ನಿಡುತ್ತಾ,


" ಅಜ್ಜಿ, ನೀವು ಕೇಳಿದ್ದನ್ನು ನಾವು ಶಿರಸಾವಹಿಸಿ ನಡೆಸಿಕೊಡುತ್ತೀವಿ. ಏನು ಅಂತ ಹೇಳಿ " ಇಬ್ಬರೂ ಒಕ್ಕೊರಲಿನಲ್ಲಿ ಹೇಳಿದಾಗ, ಸುಮಿತ್ರಮ್ಮ, ಹತ್ತಿರದಲ್ಲೇ ಕುಳಿತಿದ್ದ ತಮ್ಮ ಮಗಳು ಸುಮಳ ಕೈಯನ್ನು ತೆಗೆದುಕೊಂಡು, ಮೊಮ್ಮಕ್ಕಳ ಕೈಗಳ ಮೇಲಿಡುತ್ತಾ "ಆಶಿಶ್,ಅತೀತ್,ಇಂದು ನಿಮ್ಮ ಎಲ್ಲಾ ಏಳಿಗೆಯ ಹಿಂದೆ ನಿಮ್ಮ ಅಮ್ಮನ ಪರಿಶ್ರಮದ ಬೆವರಿನ ಹನಿಗಳಿವೆ. ಮುಂದೆ ನಿಮ್ಮ ಮದುವೆಯಾದ ಮೇಲೂ, ಯಾವುದೇ ಕಾರಣಕ್ಕೂ ಈ ತಾಯಿಯ ಮನಸನ್ನು ನೋಯಿಸದೆ ಅವಳನ್ನು ಸಂತೋಷವಾಗಿ ನೋಡಿಕೊಳ್ಳುತ್ತೀವೆಂದು ನಿಮ್ಮ ಈ ಅಜ್ಜಿಗೆ ಮಾತುಕೊಡಿ. ಇನ್ನು ನಾನು ನೆಮ್ಮದಿಯಿಂದ ಕಣ್ಣು ಮುಚ್ಚಿಕೊಳ್ಳುತ್ತೇನೆ. "

ಅಜ್ಜಿಯ ಮಾತನ್ನು ಕೇಳಿದ ಮೊಮ್ಮಕ್ಕಳು ತಮ್ಮ ಕೈಗಳಿಂದ ಅಜ್ಜಿಯ ಬಾಯಿಯನ್ನು ಮುಚ್ಚುತ್ತಾ,

"ಅಜ್ಜಿ,ನಿಮ್ಮ ಮಾತಿನಂತೆಯೇ ನಾವು ನಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ.ಯಾವುದೇ ಕಾರಣಕ್ಕೂ ಅವಳನ್ನು ನೋಯಿಸುವುದಿಲ್ಲ. ಅದರೆ ನೀವು ಮಾತ್ರ ನಮ್ಮನ್ನು ಬಿಟ್ಟು ಹೋಗುವ ಮಾತನಾಡಬೇಡಿ.ನಿಮಗೆ ನಮ್ಮ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಿದೆ ಗೊತ್ತಾ?" ಎಂದಾಗ,

ಅಲ್ಲಿ ನಗುವಿನ ಬುಗ್ಗೆಯೇ ಚಿಮ್ಮಿತು. ಮೊಮ್ಮಕ್ಕಳ ಮಾತುಗಳನ್ನು ಕೇಳಿ, ಸುಮಿತ್ರಮ್ಮನವರಿಗೆ ಸಂತೋಷವಾದರೆ, ತನ್ನ ಪ್ರತಿಯೊಂದು ಕಷ್ಟದಲ್ಲೂ ಬೆಂಬಲವಾಗಿ ನಿಂತ ತನ್ನ ತಾಯಿಯ ಅಂತಃಕರಣವನ್ನು ಕಂಡು ಸುಮಳ ಹೃದಯ ತುಂಬಿ ಹೋಯಿತು. 


ಆಶಿಶ್ ಮತ್ತು ಅತೀತ್ ಅಜ್ಜಿಯನ್ನು ರೇಗಿಸುತ್ತಾ, ಅಮ್ಮನನ್ನು ಚುಡಾಯಿಸುತ್ತಾ,ಎಲ್ಲರೂ ಸೇರಿ ಸೆಲ್ಫಿ ತೆಗೆದುಕೊಳ್ಳುತ್ತಾ, ಸಂತೋಷವಾಗಿ ಕಾಲ ಕಳೆದು, ರಾತ್ರಿ ಹನ್ನೆರಡು ಹೊಡೆದ ನಂತರ,ಎಲ್ಲರೂ ಮಲಗಿದರು. ಅಂದು ಆ ನಾಲ್ವರಿಗೂ ಸುಖವಾಗಿ ನಿದ್ರೆ ಬಂದಿತು. 


ಮಾರನೆಯ ದಿನ ಬೆಳಗ್ಗೆ ಅಜ್ಜಿಯನ್ನು ಹುಡುಕುತ್ತಾ ಅವರ ರೂಮಿಗೆ ಹೋದ ಆಶಿಶ್ , ಅಜ್ಜಿ ಅಲ್ಲಾಡದೆ ಮಲಗಿರುವುದನ್ನು ಕಂಡು ರೂಮಿನಿಂದಲೇ ತನ್ನ ಅಮ್ಮನನ್ನು ಕೂಗಿದಾಗ, ಸುಮಾ ರೂಮಿಗೆ ಧಾವಿಸಿ "ಅಮ್ಮಾ,ಅಮ್ಮಾ" ಎಂದು ಕೂಗುತ್ತಾ ಮೈ ಮುಟ್ಟಿ ಅಲ್ಲಾಡಿಸಿದಾಗ,ಅವರ ಕೈ ಕೆಳಗೆ ಬಿದ್ದುದನ್ನು ನೋಡಿ ಅವಳಿಗೆ ಅನುಮಾನವಾಯಿತು. ಮೂಗಿನ ಬಳಿ ಬೆರಳಿಟ್ಟು ನೋಡಿದಾಗ,ಅವರ ಉಸಿರು ನಿಂತಿರುವುದು ತಿಳಿದು, "ಅಮ್ಮಾ,ಅಮ್ಮಾ" ಎನ್ನುತ್ತಾ ಅವರ ಮೇಲೆ ತಲೆಯಿಟ್ಟು ಬಿಕ್ಕುತ್ತಿದ್ದರೆ,ತನ್ನ ಕರ್ತವ್ಯ ಮುಗಿಯಿತೆಂಬ ತೃಪ್ತಿಯಿಂದ ಆ ಮಹಾಮಾತೆ ಸುಮಿತ್ರಮ್ಮ ನೆಮ್ಮದಿಯಿಂದ ಚಿರನಿದ್ರೆಗೆ ಜಾರಿದ್ದರು. ಆ ಮಹಾಮಾತೆಯ ಅಗಲುವಿಕೆಯಿಂದ ಮೂವರಿಗೂ ಅನಾಥ ಪ್ರಜ್ಞೆ ಮೂಡಿತು.ಕಡೆಗೆ ಆಶೀಶ್ ತಮ್ಮನೊಂದಿಗೆ

"ಅತೀತ್, ನಮ್ಮ ’,ಸೂಪರ್ ಮಾಮ್’ ನ ಅಮ್ಮ 'ದೊಡ್ಡ ಸೂಪರ್ ಮಾಮ್’ ಕಣೋ ,ಅಂದರೆ ಆ ನನ್ನ ತಾಯಿಯ ತಾಯಿ 'ಮಹಾಮಾತೆ' ಕಣೊ, ಹ್ಯಾಟ್ಸ್ ಅಪ್ ಟು ಹರ್" ಎಂದಾಗ ಇಬ್ಬರೂ ಅಜ್ಜಿಯ ದೇಹಕ್ಕೆ ಸಲ್ಯೂಟ್ ಮಾಡಿ ತಮ್ಮ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು. ಅಲ್ಲಿಯೇ ಇದ್ದ ಸುಮ,ತುಂಬು ಪ್ರೀತಿಯಿಂದ ಮಕ್ಕಳನ್ನು ಬಾಚಿ ತಬ್ಬಿಕೊಂಡಳು.


Rate this content
Log in

Similar kannada story from Abstract