Gireesh pm Giree

Abstract Inspirational

3.0  

Gireesh pm Giree

Abstract Inspirational

ಮಾಯವಾದ ಕಿಣಿಕಿಣಿ ಸದ್ದಿನ ಮೋಡಿಗಾರ

ಮಾಯವಾದ ಕಿಣಿಕಿಣಿ ಸದ್ದಿನ ಮೋಡಿಗಾರ

1 min
136


ಸುಡು ಬೇಸಿಗೆಯ ಝಳಕ್ಕೆ ಬಾಯಾರುತ್ತಿತ್ತು. ಎಷ್ಟು ನೀರು ಕುಡಿದರೂ ಆರದ ದಾಹ. ಮನೆಯಂಗಳದಲ್ಲಿ ಗೆಳೆಯರ ಜೊತೆಗೂಡಿ ಆಡುವ ಲಗೋರಿ ಆಟದ ಮೋಜು ಬೇಸಿಗೆಯ ಬೇಗೆಯನ್ನೂ ಮೀರಿಸುವಂತಿತ್ತು. ಬಾಯಲ್ಲಿ ನೀರ ಪಸೆ ಮಾಯವಾಗಿ ಮೈಯಲ್ಲಿ ಬೆವರು ಮಳೆಹನಿಯಂತೆ ಜಿನುಗುತ್ತಿತ್ತು. ಆಟ ಆಡುವಾಗ ಇದ್ಯಾವುದನ್ನೂ ಲೆಕ್ಕಿಸದೆ ಮನಸಾರೆ ಆಡುತ್ತಿದ್ದೆವು.


ಅಂಗಳ ಎಂಬ ಮೈದಾನದಲ್ಲಿ ಆಟದಲ್ಲಿ ತಲ್ಲೀನರಾದ ಆ ಕ್ಷಣದಲ್ಲಿ ಕಿಣಿಕಿಣಿ ಎಂಬ ನಾದ ವಿನೋದ ಮಾತ್ರ ನಮ್ಮನ್ನು ಎಚ್ಚರಿಸುತ್ತಿತ್ತು. ಅದೇನೆಂದು ಎಲ್ಲರಿಗೂ ತಿಳಿದಿದ್ದರೂ ಏನೋ ಒಂದು ರೀತಿಯ ಆಕರ್ಷಣೆ, ಕುತೂಹಲ. ಆ ಸದ್ದಿನ ಮೂಲ ಅರಸುತ್ತಾ ಓಡೋಡಿ ಗೇಟಿನ ಬಳಿ ಸರಸರನೇ ಬಂತು ನಮ್ಮ ಸೈನ್ಯ. ಎಲ್ಲರ ಮುಖದಲ್ಲೂ ಮಂದಹಾಸ. ಎಲ್ಲರೂ ತಮ್ಮ ತಮ್ಮ ಕಿಸೆ ಮುಟ್ಟಿಕೊಳ್ಳುತ್ತಿದ್ದರು. ಅದರಲ್ಲಿ ಏನೂ ಇರುತ್ತಿರಲಿಲ್ಲ. ಕೆಲವರ ಕಿಸೆಯಂತೂ ತೂತಾಗಿ ಐದು ಬೆರಳುಗಳು ಇಣುಕುತ್ತಿದ್ದವು. ಪ್ರಯತ್ನ ನಿಲ್ಲುತ್ತಿರಲಿಲ್ಲ. 


ಯಾವುದನ್ನೂ ಲೆಕ್ಕಿಸದೆ ಮನೆಕಡೆ ಓಡಿ, ಒಂದೋ ಎರಡೋ ರೂಪಾಯಿಯನ್ನು ಕದ್ದೋ ಕೇಳಿಯೋ ತರುತ್ತಿದ್ದರು. ನಾನು ಅಮ್ಮನನ್ನು ಕಾಡಿಸಿ ಪೀಡಿಸಿ ಹೇಗೋ ಎರಡರ ನಾಣ್ಯವನ್ನು ಹೊಂದಿಸುತ್ತಿದ್ದೆ. ಅದರಿಂದ ʼಪಾಲ್ ಐಸ್ʼ ಖರೀದಿಸುತ್ತಿದ್ದೆ. ಉಳಿದ ಗೆಳೆಯರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ʼಕೊಟ್ಟೆ ಐಸ್ʼ, ʼಚೌಕ ಐಸ್ʼ ತೆಗೆಯುತ್ತಿದ್ದರು. ಆ ಐಸ್‌ಕ್ಯಾಂಡಿ ಪೆಟ್ಟಿಗೆಯ ಒಡೆಯನೇ ನಮಗೆ ಮಾಯಗಾರ. ಆತ ಕೊಡುವ ಕ್ಯಾಂಡಿಯನ್ನು ನೋಡುವುದು, ತಿನ್ನುವುದರಲ್ಲಿ ಅದೇನೋ ಸಂಭ್ರಮ. 


ಅವನ ಕೈಯಿಂದ ಸಿಗುವ ಕ್ಯಾಂಡಿ ನೀರಾದಂತೆ ಮನವೂ ನೀರಾಗುತ್ತಿತ್ತು. ಬೇಸಿಗೆಯ ಬೇಗೆ ನೀಗಿಸುವ ಈ ತಂಪು ಮಂಜಿನಗಡ್ಡೆಯ ರುಚಿಗೆ ಮನಸೋಲದವರು ಯಾರು. ಅವನ ಕಿಣಿಕಿಣಿ ಸದ್ದಿನ ಸೈಕಲ್, ಅದರ ಮೇಲೊಂದು ಕಪ್ಪು ಮರದ ಡಬ್ಬಿ ಡಬ್ಬಿಯೊಳಗೆ ನಮಗಿಷ್ಟದ ಐಸ್ ಕ್ಯಾಂಡಿ. ಇಂದಿಗೂ ಆ ನೆನಪು ಹಚ್ಚಹಸಿರು. 


ಆದರೆ ಇಂದು ನಮ್ಮ ಊರ ರೋಡಲ್ಲಿ ಆ ಕಿಣಿಕಿಣಿ ಸದ್ದಿನ ಮಾಯಗಾರ ಬರುವುದೇ ಇಲ್ಲ. ಇಂದು ಏನು ಬೇಕಾದರೂ ಅಂಗಡಿಗೆ ಹೋಗಬೇಕು. ಗೆಳೆಯರ ಜೊತೆಗೂಡಿ ಐಸ್‌ ಕ್ಯಾಂಡಿ ಚಪ್ಪರಿಸುವುದು, ಹಣಕೊಡಲು ಅಮ್ಮನ ಹಿಂದೇಟು, ಅವಳ ಕಾಲಿಗೆ ಬಿದ್ದಾದರೂ ಹಣ ತೆಗೆದು ಉಳಿದ ಗೆಳೆಯರ ಮುಂದೆ ನಾನೇನು ಕಮ್ಮಿ ಇಲ್ಲವೆಂದು ಜಂಭದಿಂದ ಐಸ್ ಚಪ್ಪರಿಸುವುದು. ಈ ಸಿಹಿ ಗಳಿಗೆ ಮರಳಿ ಬರುವುದೇ?


Rate this content
Log in

Similar kannada story from Abstract