ಕಥೆಯಾದಳು ಹುಡುಗಿ
ಕಥೆಯಾದಳು ಹುಡುಗಿ
ಅವಳೊಂದು ಸಾಧಕಿಯಾಗಬೇಕಿತ್ತು... ಇಲ್ಲವೇ ಒಂದು ಮಹಾನ್ ಚೇತನವಾಗಬೇಕಿತ್ತು...ಇಲ್ಲ ಒಂದು ಮಗುವಿನಂತಹ ನಗು ಯಾವತ್ತೂ ಅವಳ ಮುಖದಲ್ಲಿ ಲಾಸ್ಯವಾಡುತ್ತಿರಬೇಕಿತ್ತು.. ಇಲ್ಲದಿದ್ದರೆ ಅವಳ ಸಿಹಿನಿದ್ದೆಯಲ್ಲಿ ಸುಂದರ ಕನಸುಗಳು ಅವಳನ್ನು ಎಚ್ಚರಿಸುತ್ತಿರಬೇಕಿತ್ತು.. ಕೊನೆಯ ಪಕ್ಷ ಅ ಕನಸುಗಳನ್ನು ಹಿಡಿಯಲು ಅವಳು ಓಡುತ್ತಿರಬೇಕಿತ್ತು.. ಹಗ್ಗ ಬಿಚ್ಚಿದ ಕರುವಿನ ತರಹ.. ಅದರೆ ಅದಾವುದು ಆಗಲಿಲ್ಲ... ಜೀವನವೆಂಬುದು ನಿಂತ ನೀರಾಗಿರುವುದಿಲ್ಲವಲ್ಲ.. ಅದು ಯಾವಾಗಲೂ ಹರಿಯುತ್ತಲೆ ಇರುತ್ತದೆ.. ಕಲ್ಲು, ಬಂಡೆ, ಕಾನನ ಎಲ್ಲವನ್ನೂ ದಾಟಿ... ಅದರೆ ಅವಳು ಯಾವತ್ತೂ ನದಿಯಾಗಿ, ಸ್ವಚಂದವಾಗಿ ,ಸ್ವತಂತ್ರವಾಗಿ ಹರಿಯಲೇ ಇಲ್ಲ... ಬದಲಾಗಿ ಇನ್ನೊಬ್ಬರ ಮಾತಿಗೆ ತಲೆಯಾಡಿಸುವ ಗೊಂಬೆಯಾಗಿ ಬಿಟ್ಟಳು.. ಜೀವಂತ ಗೊಂಬೆಯಾಗಿ ಬಿಟ್ಟಳು. ಈಗ ಅವಳ ಕಣ್ಣಿನಲ್ಲಿ ಜೀವವಿಲ್ಲ...ಬದಲಾಗಿ " ....ಯಾಕೋ ಮುಂದಕ್ಕೆ ಓದಲಾಗದೇ, ಪುಸ್ತಕವನ್ನು ಮಡಿಚಿಟ್ಟು ಗಡಿಯಾರದ ಕಡೆ ನೋಡಿದೆ.. ಸಮಯ ಸಂಜೆ ನಾಲ್ಕು ಗಂಟೆಯಾಗಿತ್ತು... ಛೇ.. ಇಷ್ಟು ಹೊತ್ತಿಗೆ ಬರಬೇಕಾಗಿದ್ದ ಶೃದ್ದಾ ಇನ್ನೂ ಬಂದಿಲ್ಲವಲ್ಲ...ಯಾಕೋ ಮನಸ್ಸಿಗೆ ಬೇಜಾರಾಯಿತು.. ಎದ್ದು ಹೊರಗೆ ನಡೆದೆ.. ಶೃದ್ದಾ ಬರುವ ದಾರಿಯಲ್ಲೇ ಸುತ್ತಾಡಿಕೊಂಡು ಬರೋಣವೆಂದು ಚಪ್ಪಲಿ ಮೆಟ್ಟಿಕೊಂಡು ಮುಂದೆ ಸಾಗಿದೆ.. ಶೃದ್ದಾ ನನ್ನ ತಂಗಿ ಎಂಟು ವರ್ಷಗಳ ಹಿಂದೆ ಅವಳ ಮದುವೆಯಾಗಿತ್ತು.. ಅಷ್ಟೇನೂ ದೊಡ್ಡ ಉದ್ಯೋಗವಲ್ಲದಿದ್ದರೂ, ಮೆಡಿಕಲ್ ಸ್ಟೋರ್ ಒಂದರಲ್ಲಿ ರೆಸಪಿನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.. ನಮ್ಮ ಊರಿನಲ್ಲಿ ಜಾತ್ರೆ ಇದ್ದುದರಿಂದ ಇವತ್ತು ತನ್ನ ಆರು ವರ್ಷದ ಮಗಳು ಶ್ರಾವ್ಯಳೊಂದಿಗೆ ಮಂಗಳೂರಿನಿಂದ ಬರುತ್ತೇನೆ ಎಂದು ಹೇಳಿದ್ದಳು... ಅವಳ ಗಂಡ ಅಂದರೆ ನನ್ನ ಬಾವನಿಗೆ ಇವತ್ತು ಬ್ಯಾಂಕ್ ನಲ್ಲಿ ರಜಾ ಸಿಕ್ಕದೆ, ಮನೆಯಲ್ಲಿ ಉಳಿದುಬಿಟ್ಟಿದ್ದ... ಸುಮಾರು ಎರಡು ಕಿಮೀ ನಡೆದರೂ, ಶೃದ್ದಾಳ ಸುಳಿವಿಲ್ಲದೆ ಹೋದದರಿಂದ ಮನಸಿಗ್ಯಾಕೋ ಗಾಬರಿಯಾಯಿತು.. ಪೋನ್ ಮಾಡೋಣವೆಂದು ಕಿಸೆಗೆ ಕೈ ಹಾಕಿದೆ.. ಮೊಬೈಲ್ ಇರಲಿಲ್ಲ. ಮರೆತು ಮನೆಯಲ್ಲಿಯೇ ಬಿಟ್ಟು ಬಂದಿದ್ದೆ... ಇನ್ನೇನೂ ಮಾಡೋದು . ಅವಳು ಬರುವವರೆಗೂ ಇಲ್ಲೇ ಕಾಯೋಣವೆಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತೆ. ಅದು ನಮ್ಮ ಊರಲ್ಲಿ ಇರುವ ಅತ್ಯಂತ ಪ್ರಶಾಂತವಾಗಿರುವ, ರಮಣೀಯ ಪ್ರದೇಶ... ಆ ಜಾಗದಲ್ಲಿ ಒಮ್ಮೆ ಕುಳಿತುಕೊಂಡರೆ, ನಮ್ಮ ಹಳೆಯ ಕ್ಷಣಗಳತ್ತ ಮನಸ್ಸು ತಿರುಗಿದರೆ ಅಚ್ಚರಿಪಡಬೇಕಿಲ್ಲ.. ಹಾಗೆ ಕುಳಿತವನು ಒಮ್ಮೆ ತಿರುಗಿದೆ.. ಆಗ ಕಂಡಿತು ಆ ಮನೆ.. ಒಂದು ಕಾಲದಲ್ಲಿ ಇಡೀ ಊರಿಗೆ ಮಾದರಿಯಾಗಿದ್ದ ಮನೆ.. ಕೇವಲ ಹತ್ತು ವರುಷಗಳ ಹಿಂದೆ, ಅತ್ಯಂತ ಸುಂದರವಾಗಿ ಕಳೆಯಿಂದ ಕೂಡಿದ್ದ ಆ ಮನೆ ಈಗ ಕಳಾಹೀನವಾಗಿತ್ತು... ಅದು ನಮಗೆ ಅಪರಿಚಿತ ಮನೆಯೇನೂ ಆಗಿರಲಿಲ್ಲ.. ನಾವು ದಿನಾಲೂ ಓಡಾಡುತ್ತಿದ್ದ ಮನೆ... ನಮ್ಮ ಸಂಬಂಧಿಕರಲ್ಲದಿದ್ದರೂ ಅದಕ್ಕಿಂತಲೂ ಹೆಚ್ಚಿನ ಆತ್ಮೀಯತೆಯನ್ನು ಹೊಂದಿದ್ದ ಮನೆ... ಯಾಕೋ ಆ ಮನೆಯನ್ನೂ ನೋಡುತ್ತಿದ್ದರೆ ನನ್ನ ಮನಸ್ಸು ಯಾಕೋ ಹಿಂದಕ್ಕೆ ವಾಲತೊಡಗಿತು.. ಸುಮಾರು ಹತ್ತು ವರುಷಗಳ ಹಿಂದಕ್ಕೆ......
" ನಾನು ದ್ವೇಷಿಸಬೇಕೆಂದರೇ, ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ದ್ವೇಷಿಸುತ್ತೇನೆ.. ನಾನು ದ್ವೇಷಿಸಬೇಕೆಂದರೇ ಶಾಕುಂತಲೆಯನ್ನು ಮರೆತ ದ್ಯುಷಂತನನ್ನು ದ್ವೇಷಿಸುತ್ತೇನೆ.. ನಾನು ದ್ವೇಷಿಸಬೇಕೆಂದರೇ ದ್ರೌಪದಿಯನ್ನು ಜೂಜಿನಲ್ಲಿ ಅಡವಿಟ್ಟ ಧರ್ಮರಾಯನನ್ನು ದ್ವೇಷಿಸುತ್ತೇನೆ... ನಾನು ದ್ವೇಷಿಸಬೇಕೆಂದರೇ ಹೆಣ್ಣನ್ನು ಅಬಲೇಯೆಂದು ತೋರಿಸಿ, ಆಟದ ಬೊಂಬೆಯೆಂದು ಆಡಿಸಿದ ಮನುಕುಲವನ್ನು ದ್ವೇಷಿಸುತ್ತೇನೆ..."
"ಯಾಕೇ ವಸುದಾ ಈ ರೀತಿಯೆಲ್ಲಾ ಬರೀತಾ ಇದ್ದೀಯಾ.... ಕಾಲೇಜಿನಲ್ಲಿ ಯಾವುದಾದರೂ ಪ್ರಬಂಧ ಬರೆಯೋಕೆ ಹೇಳಿದ್ದಾರ... ".ಸುಮ್ಮನೆ ಕೇಳಿದೆ ನಾನು.
"ಇಲ್ಲ ಕಣೋ , ನಾಳೆ ಮಹಿಳಾ ದಿನಾಚರಣೆಯಲ್ವಾ, ಅದಕ್ಕೆ ಭಾಷಣದ ಲಿಸ್ಟ್ ನಲ್ಲಿ ನನ್ನ ಹೆಸರು ಹಾಕಿದ್ದಾರೆ. ನಂಗೆ ಮೊದಲೇ ನಂಗೆ ಭಾಷಣ ಅಂದ್ರೆ ಆಗಲ್ಲ.. ಅದಕ್ಕೆ ಏನೇನೋ ಗೀಚುತ್ತಾ ಇದ್ದೀನಿ..."
"ನಿಂಗೆ ಭಾಷಣ ನಾನು ಬರೆದು ಕೋಡ್ತೀನಿ.. ಅದರೆ ನೀನು ಬರೆದಿರುವ ರೇಂಜ್ ನೋಡಿದ್ರೆ ಮುಂದೆ ಗ್ಯಾರಂಟಿ ಉತ್ತಮ ಮಹಿಳಾವಾದಿ ಅಂತೂ ಆಗಿಯೇ ಆಗ್ತೀಯಾ ..." ಎಂದೇ ನಗುತ್ತಾ...
"ಅಂತಾ ಸೀನ್ ಎಲ್ಲಾ ಇಲ್ಲಪ್ಪ... ನಾನು ಆಗುವುದಿದ್ದರೆ ಖಂಡಿತಾ ಡಾಕ್ಟರ್ ಆಗಿಯೇ ಆಗ್ತೀನಿ... ನಂಗೂ ಯಾಕೋ ವೈದಕೀಯ ಫೀಲ್ಡ್ ಅಂದ್ರೆ ತುಂಬಾ ಇಷ್ಟ... " ಅವಳ ಮಾತಿನಲ್ಲಿ ಉತ್ಸಾಹ ಎದ್ದು ಕಾಣುತ್ತಿತ್ತು....
",ನೀನು ಡಾಕ್ಟರ್ ಆಗಿಯೇ ಆಗ್ತೀಯಾ ಅಂತಾ ನಂಗೆ ತುಂಬಾನೇ ಕಾನ್ಪೀಡೆನ್ಸ್ ಇದೆ.. ಅದರೆ ನಂಗೀಗ ಒಂದು ಕೆಲಸ ಕೊಟ್ಟಿದ್ದೀಯಾ.. ಅದನ್ನು ಮುಗಿಸಬೇಕಲ್ಲಾ"
"ಆಯ್ತು ಕಣೋ , ನೀನು ಭಾಷಣ ಬರೀ... ನಾನು ನಾಳೆಯೇ ಬೆಳಗ್ಗಿಯೇ ಎದ್ಕೊಂಡು ಬರ್ತೀನಿ " ಎಂದು ಎದ್ದು ಹೊರಟಳು ವಸುದಾ...
ಅವತ್ತು ಶನಿವಾರ, ಬೆಳಗ್ಗಿನ ಸಮಯದಲ್ಲೇ ನಮ್ಮ ಮನೆಗೆ ಓಡಿಕೊಂದು ಬಂದಿದ್ದಳು ವಸುಧಾ. ಅವಳ ಮುಖದಲ್ಲಿ ಹೇಳಲಾಗದಷ್ಟು ಖುಷಿ ಇತ್ತು...
"ಏನಾಯ್ತೆ? ವಸುದಾ ಯಾಕೇ ಮಕ್ಕಳ ರೀತಿ ಕುಣಿಯುತ್ತಿದ್ದಿಯಾ... ಏನಾದರೂ ಲಾಟರಿ ಹೊಡೆಯಿತೋ ಹೇಗೆ?..."
"ಒಂದು ರೀತಿಯಲ್ಲಿ ಲಾಟರಿ ಹೊಡೆದಂಗೆ ಮಧು... ಕೊನೆಗೂ ಅಪ್ಪ ನನ್ನನ್ನ ಮಂಗಳೂರಿಗೆ ಕಳುಹಿಸುದಕ್ಕೇ ಒಪ್ಪಿಕೊಂಡುಬಿಟ್ಟರು.... ಇನ್ನೂ ಸ್ವಲ್ಪ ವರ್ಷದಲ್ಲಿ ನಾನು ಡಾಕ್ಟರ್ ಆಗಿ ಇರ್ತೀನಿ " ಖುಷಿಯಲ್ಲಿ ಅಕ್ಷರಶಃ ಕಿರುಚಿ ಮಾತಾನಾಡಿದ್ದಳು ವಸುಧಾ.. ಅವಳ ಕೂಗಿಗೆ ಒಳಗಿನಿಂದ ನನ್ನ ತಂಗಿ ಶೃದ್ದಾ ಕೂಡ ಓಡಿಬಂದಿದ್ದಳು..
"ಅಂತೂ ಆ ದೂರ್ವಸ ಮುನಿಯಂತ ನಿನ್ನ ಅಪ್ಪ ನಿನ್ನನ್ನ
ಮಂಗಳೂರಿಗೆ ಕಳುಹಿಸಲು ಒಪ್ಪಿದ್ದು ದೊಡ್ಡ ಪವಾಡವೇ ಸರಿ... ಅವರು ನಿನ್ನೆ ಇದ್ದ ಪರಿಸ್ಥಿತಿಯಲ್ಲಿ ನಂಗೆ ಇದನ್ನು ನಂಬೋಕೆ ಸಾಧ್ಯವಾಗ್ತ ಇಲ್ಲ..."
"ಅದಕೆಲ್ಲಾ ನಿಂಗೆ ಥ್ಯಾಂಕ್ಸ್ ಹೇಳಬೇಕು ಮಧು .ನೀನು ನಿನ್ನೆ ಮೆಡಿಕಲ್ ವಿಧ್ಯಾಭ್ಯಾಸದ ಬಗ್ಗೆ ನಮ್ಮ ಮನೆಗೆ ಬಂದು ಭಾಷಣ ಮಾಡದೇ ಇದ್ದಿದ್ದರೆ, ನಮ್ಮ ಅಪ್ಪ ಇನ್ನೂ ಹಳೆಯ ಗೊಡ್ಡು ಸಂಪ್ರದಾಯವನ್ನೇ ನಂಬಿಕೊಂಡು ಇರುತ್ತಿದ್ದರು"
"ಮತ್ತೆ ನಮ್ಮಣ್ಣ ಅಂದ್ರೆ ಸುಮ್ಮನೇನಾ...! ಮಾಡುವುದಕ್ಕೆ ಏನೂ ಬರದಿದ್ದರೂ ಭಾಷಣ ಮಾತ್ರ ಚೆನ್ನಾಗಿ ಬೀಗಿತಾನೆ " ಪಕ್ಕದಲ್ಲಿ ಇದ್ದ ಶೃದ್ದಾ ನನ್ನನ್ನು ರೇಗಿಸಿದಳು.
"ಮತ್ತೆ ಅಕ್ಕನ್ನ ಕೆಲಸಕೋಸ್ಕರ ಮೈಸೂರಿಗೆ ಕಳುಹಿಸಬಹುದು.ನನ್ನನ್ನ ಮಾತ್ರ ಓದೋಕೆ ಮಂಗಳೂರಿಗೆ ಕಳುಹಿಸಬಾರದ.. ಅದೇ ವಿಷಯಕ್ಕೆ ಅಮ್ಮನ ಜೊತೆ ಹಠ ಮಾಡಿದೆ.. ಅಮ್ಮ ಹೇಗೋ ಅಪ್ಪನನ್ನ ಪುಸಲಾಯಿಸಿ ಒಪ್ಪಿಸಿದಳು. ಹೇಗೋ ನೀನು ಹೇಳಿದ ಮಾತು ಕಿವಿಯಲ್ಲಿ ಇತ್ತಲ್ಲ.. ಅದಕ್ಕೆ ಹೆಚ್ಚು ಮಾತನಾಡದೇ ಒಪ್ಪಿಕೊಂಡು ಬಿಟ್ಟರು.."...
"ಅಲ್ಲ ವಸುಧಾ ಎಲ್ಲವನ್ನೂ ಬಿಟ್ಟು ಮೆಡಿಕಲ್ ಕಲಿತೀನಿ ಅಂತಾ ಹಠ ಮಾಡಿಕೊಂಡು ಕೂತಿದ್ದಿಯಲ್ಲಾ... ಯಾಕೆ ನಿಂಗೆ ಮೆಡಿಕಲ್ ಅಂದ್ರೆ ತುಂಬಾ ಇಷ್ಟ " ಕೇಳಿದಳು ಶೃದ್ದಾ...
"ನಂಗೆ ಒಂದು ಕನಸಿದೆ ಶೃದ್ದಾ... ಈ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನೂ ಕಟ್ಟಿಸಬೇಕು ಅಂತಾ... ಆಗ ಸಣ್ಣ ಸಣ್ಣ ಕಾಯಿಲೆಗೂ ಮೂವತ್ತು ಕಿಮೀ ದೂರಕ್ಕೆ ಹೋಗಬೇಕಾದ ಅವಶ್ಯಕತೆ ಇರೋದಿಲ್ಲ "
"ನಿನ್ನ ಆಸೆ ಖಂಡಿತಾ ಈಡೇರಿತ್ತೆ ಅಂತಿಯಾ....? "
"ನಿಮ್ಮಂತಹ ಸ್ನೇಹಿತರು ನಂಗೆ ಸಿಕ್ಕಿದ ಮೇಲೆ ಆಸೆ ಈಡೇರದೆ ಇರುತ್ತ.. ಖಂಡಿತಾ ಈಡೇರುತ್ತೆ... ಅಂದ ಹಾಗೆ ಶೃದ್ದಾ ಮತ್ತೆ ಹತ್ತು ಗಂಟೆಗೆ ನಮ್ಮ ಮನೆ ಕಡೆ ಬಾ... ಸ್ವಲ್ಪ ಪೇಟೆ ಕಡೇ ಹೋಗಿ ಬರೋಣ , ಬುಕ್ಸ್ ಪರ್ಚೆಸ್ ಮಾಡೋಕಿತ್ತು... ಅದರೆ ಈ ತಲೆ ಹರಟೆ ಜೊತೆ ಮಾತ್ರ ಬರಬೇಡ ..."ಎಂದು ತುಂಟ ನಗು ನಗುತ್ತಾ ಹೊರಟುಹೋದಳು ವಸುಧಾ.... ಯಾಕೋ ಅವಳು ಹೋಗುತ್ತಾಳೆ ಎಂಬ ಸುದ್ದಿ ನನ್ನ ಎದೆಗೆ ಯಾಕೋ ಭಾರವಾದ ಸುದ್ಧಿಯಾಯಿತು... ಅದು ಪ್ರೀತಿಯಾ ಅಥವಾ ಇನ್ನೇನೊ ಆ ಕ್ಷಣಕ್ಕೆ ಗೊತ್ತಾಗಲಿಲ್ಲ..
ಅವಳು ಇದ್ದೀದ್ದೆ ಹಾಗೆ ಶುದ್ಧ ತಲೆಹರಟೆ..... ಮಾತು ಅವಳ ಆಸ್ತಿ... ಅವಳನ್ನು ಊಟ ಮಾಡದೇ ಕುಳಿತಿಕೋ ಅಂದ್ರೂ ಕುಳಿತುಕೊಂಡಳು, ಅದರೆ ಮಾತಾನಾಡದೇ ಒಂದು ನಿಮಿಷವೂ ಇರೋಕೆ ಅವಳಿಂದ ಸಾಧ್ಯವಿಲ್ಲ..... ಅವಳು ಹೆಚ್ಚಿನ ಸಮಯ ನಮ್ಮ ಮನೆಯಲ್ಲಿ ಕಳಿಯುತ್ತಿದ್ದುದ್ದು ಚಿಕ್ಕಂದಿನಿಂದಲೂ ಬಂದ ಅಭ್ಯಾಸ.... ಆಗಿನಿಂದಲೂ ನಮ್ಮ ಪ್ರಪಂಚದಲ್ಲಿ ಇದ್ದದ್ದು ನಾವು ನಾನು, ತಂಗಿ ಮತ್ತು ಅವಳು... ಬೇರೆ ಯಾರು ನಮ್ಮ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿರಲಿಲ್ಲ... ಅವಳು ನನಗಿಂತ ಮೂರು ವರ್ಷ ಚಿಕ್ಕವಳು, ನನ್ನ ತಂಗಿ ಅವಳಿಗಿಂತ ಒಂದು ವರ್ಷ ಚಿಕ್ಕವಳು...
ಅವಳು ಎಷ್ಟು ತಲೆ ಹರಟೆನೂ ಅಷ್ಟೇ ಬುದ್ದಿವಂತೆ ಕೂಡ... ಸೆಕೆಂಡು ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ್ ಆಗಿ ಬಂದಿದ್ದಳು... ಓದು ಅಲ್ಲದೇ ಬೇರೆ ಎಲ್ಲಾ ವಿಷಯಗಳಲ್ಲೂ ಅವಳು ಮುಂದಿದ್ದಳು... ಅವಳಲ್ಲಿ ಇದ್ದ ಒಂದು ಕನಸು ಡಾಕ್ಟರ್ ಆಗಿ ನಮ್ಮ ಹಳ್ಳಿಯಲ್ಲಿ ಒಂದು ಹಾಸ್ಪಿಟಲ್ ಕಟ್ಟಿಸೋದು... ಅದಕ್ಕೆ ಈಗ ಮೆಡಿಕಲ್ ಕಲಿಸೋಕೆ ಅವಳ ತಂದೆ ಒಪ್ಪಿದ್ದು ಅವಳಿಗೆ ಪ್ರಪಂಚವೇ ಗೆದ್ದಷ್ಟು ಖುಷಿಯಾಗಿತ್ತು....
ಆದರೆ ಮಂಗಳೂರಿಗೆ ಹೋದ ಒಂದು ತಿಂಗಳ ನಂತರ ನಡೆದ ಘಟನೆಗಳು ಅವಳ ಬದುಕಿನ ದಿಕ್ಕನ್ನೆ ಬದಲಿಸಿಬಿಟ್ಟಿತ್ತು.. ಅಂತಹ ಒಂದು ಬದಲಾವಣೆಗೆ ಕಾರಣವಾಗಿದ್ದು ಅವಳ ಅಕ್ಕನ ಪ್ರೇಮ ಕಥೆ... ಅವಳ ತಂದೆಯ ಪ್ರತಿಷ್ಠೆ...
ಅವತ್ತು ಅವಳು ಮಂಗಳೂರಿನಿಂದ ಮನೆಗೆ ಬಂದವಳೇ ಸೀದಾ ನಮ್ಮ ಮನೆಗೆ ಓಡಿಕೊಂಡು ಬಂದಿದ್ದಳು...ಅವತ್ತು ಮನೆಯಲ್ಲಿ ನಾನೊಬ್ಬನೇ ಇದ್ದೆ... ತಂಗಿ ಕಾಲೇಜಿಗೆ ಹೋಗಿದ್ದರೆ.. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗಿದ್ದರು.. ಒಂದು ತಿಂಗಳ ಹಿಂದೆ ಇದೇ ರೀತಿ ನಮ್ಮ ಮನೆಗೆ ಬಂದಾಗ ಅವಳ ಮುಖದಲ್ಲಿ ಖುಷಿ ಇತ್ತು. ಆದರೆ ಈ ಸಲ ಖುಷಿ ಇರಲಿಲ್ಲ.. ಬದಲಿಗೆ ಅತ್ತುಕೊಂಡೆ ಬಂದಿದ್ದಳು..
"ಏನಾಯ್ತು ವಸುಧಾ...ಯಾಕೇ ಅಳುತ್ತಾ ಇದ್ದೀಯಾ" ವಿಷಯ ಗೊತ್ತಿದ್ದರೂ ಮಾತು ಆರಂಭಿಸುವಂತೆ ಕೇಳಿದೆ...
"ಅಕ್ಕ ಯಾರನ್ನೋ ಪ್ರೀತಿ ಮಾಡಿ ಮೈಸೂರಿನಲ್ಲೇ ಸೆಟಲ್ ಆಗಿದ್ದಾಳಂತೆ. ಮದುವೆ ಕೂಡ ಮಾಡಿಕೊಂಡಿದ್ದಾರೆ ಅಂತಾ ಊರಲೆಲ್ಲಾ ಮಾತಾನಾಡಿಕೊಳ್ತ ಇದ್ದಾರೆ.... ಅಪ್ಪ ಹೊರಗೆ ಮುಖ ತೋರಿಸೋಕೇ ಆಗದೆ ಮನೆ ಒಳಗೆ ತಲೆ ಮೇಲೆ ಕೈ
ಇಟ್ಟುಕೊಂಡು ಕೂತಿದ್ದಾರೆ... ಯಾರು ಮಾತಾನಾಡಿಸಿದರೂ ಹೂಂ ಗುಟ್ಟುತ್ತಾ ಕೂಡ ಇಲ್ಲ... ಅಮ್ಮ ಅಂತೂ ರೂಮಿನಿಂದ ಹೊರಗೆ ಬರ್ತಾ ಇಲ್ಲ.... ಏನೋ ಮಾಡೋದು ಗೊತ್ತು ಆಗ್ತಾ ಇಲ್ಲ.."..
"ಅದಕ್ಕೆಲ್ಲಾ ಚಿಂತೆ ಮಾಡಬೇಡ ನೀನು.... ಸ್ವಲ್ಪ ದಿನ ಎಲ್ಲಾ ಸರಿ ಹೋಗುತ್ತೆ... ನಿನ್ನ ಅಕ್ಕ ಈ ತರ ಮಾಡಿದ್ದಾಳೆ ಅಂದಾಗ ಒಮ್ಮೆ ಎಲ್ಲರಿಗೂ ನೋವಾಗುವುದು ಸಹಜ.... ಇದುವರೆಗೂ ಊರಲ್ಲಿ ಒಳ್ಳೆಯ ಹೆಸರಿತ್ತು.... ಈಗ ಇವಳು ಇದನ್ನು ಹಾಳು ಮಾಡಿದ್ಳು ಅಂತಾ ಸ್ವಲ್ಪ ದಿನ ಕೋಪ ಇರಬಹುದು... ಸಮಯ ಕಳೆದ ಹಾಗೇ ಎಲ್ಲಾ ಸರಿಯಾಗಬಹುದು"...
" ಅದ್ರೆ ನಮ್ಮ ಅಪ್ಪನ ಬಗ್ಗೆ ನಿಂಗೆ ಗೊತ್ತಿಲ್ಲ ಮಧು... ಅವರು ಏನ್ನಾನ್ನೂ ಬೇಕಾದ್ರೂ ಸಹಿಸಿಕೊಳ್ಳುತ್ತಾರೆ.. ಆದರೆ ತನ್ನ ಪ್ರತಿಷ್ಠೆಗೆ
ಪೆಟ್ಟು ಬಿದ್ದರೆ,ಖಂಡಿತಾ ಅವರು ಕ್ಷಮಿಸಲ್ಲ.. ಇದೂ ಗೊತ್ತಿದ್ದು ಅಕ್ಕ ಈ ತರ ಯಾಕೆ ಮಾಡಿದ್ರೂ ಗೊತ್ತಾಗ್ತ ಇಲ್ಲ... ಅದು ಅಲ್ಲದೆ ಅಪ್ಪ ಅವಳನ್ನು ತುಂಬಾನೇ ನಂಬ್ತಾ ಇದ್ದರು.. ನನಗಿಂತ ಹೆಚ್ಚು... " ಬೇಸರದಿಂದ ನುಡಿದಳು ವಸುದಾ...
"ಕೆಲವೊಬ್ಬರು ನಮ್ಮ ಕಣ್ಣಿಗೆ ಹೇಗೆ ಕಾಣ್ತಾರೋ , ಆ ರೀತಿ ಇರೋದಿಲ್ಲ ವಸುದಾ... ಅವಳಿಗೂ ಆ ಸಮಯದಲ್ಲಿ ಭಯ ಉಂಟಾಗಿರಬಹುದು..ಅದು ಸಹಜ ಅಲ್ವಾ" ಅವಳ ಮನಸ್ಸಿನಲ್ಲಿ ಧೈರ್ಯ ತುಂಬಲು ಪ್ರಯತ್ನಪಟ್ಟೆ...
"ಅದ್ರೆ ನನ್ನ ಹತ್ತಿರ ಒಂದು ಮಾತನ್ನಾದರೂ ಹೇಳಬಹುದಿತ್ತು.... ನನ್ನ ಜೊತೆ ಅಷ್ಟೊಂದು ಕ್ಲೋಸ್ ಇದ್ರೂ , ನನ್ನಿಂದ ಮುಚ್ಚಿಟ್ಟುಬಿಟ್ಟಳು.. ನಂಗೆ ಈಗ ಅಪ್ಪನ ಮುಖ ನೋಡಿದ್ರೆ ಅಳು ಬರುತ್ತಿದೆ... ನಾನು ಈಗ ಸ್ವಲ್ಪ ಹೊತ್ತು ಇಲ್ಲೇ ಇರ್ತೀನಿ " ಎಂದು ಒಳಗೆ ಇದ್ದ ಕುರ್ಚಿಯ ಮೇಲೆ ಸುಮ್ಮನೆ ಕೂತಳು ವಸುದಾ...
ಅವಳನ್ನು ಸಂತೈಸಬೇಕು ಎಂದು ಅನಿಸಿತಾದರೂ ಯಾಕೋ ಬೇಡ ಎಂದು ಸುಮ್ಮನಾದೆ.....
ಇದೆಲ್ಲಾ ನಡೆದು ಎರಡು ದಿನಕ್ಕೆ ನಾನು ನನ್ನ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ.... ಮರಳಿ ಬರುವಾಗ ಸುಮಾರು ಒಂದು ತಿಂಗಳಾಗಿತ್ತು.. ಅ ದಿನಗಳಲ್ಲಿ ನಾನು ಬೆಂಗಳೂರಿನಲ್ಲಿ ಇದ್ದರೂ ನನ್ನ ಮನಸ್ಸು ಮಾತ್ರ ಅವಳ ಮೇಲೆಯೇ ಇತ್ತು... ಮನೆಗೆ ಕಾಲ್ ಮಾಡಿ ವಿಚಾರಿಸಬಹುದು ಎಂದರೆ ಮೊಬೈಲ್ ಮಹಾಶಯ ಇನ್ನೂ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟಿರಲಿಲ್ಲ... ಅವಳ ಬಗ್ಗೆ ಯೋಚನೆ ಮಾಡ್ತಾ ಹೇಗೋ ಒಂದು ತಿಂಗಳು ಕಳೆದುಬಿಟ್ಟಿದ್ದೆ....
ನಾನು ಮನೆಗೆ ತಿರುಗಿ ಬಂದು ಎರಡು ದಿನಾವಾದರೂ ಅವಳ ಪತ್ತೆಯೇ ಇಲ್ಲದನ್ನು ಕಂಡು ನನ್ನ ಮನಸ್ಸಿನಲ್ಲಿ ಕಳವಳ ಉಂಟು ಮಾಡಿತ್ತು.. ಮನೆಯವರಲ್ಲಿ ಕೇಳಿದ್ರೂ ಯಾಕೋ ಅವರ ಉತ್ತರ ನನ್ನ ಮನಸ್ಸಿಗೆ ತೃಪ್ತಿ ಕೊಟ್ಟಿರಲಿಲ್ಲ.... ಯಾವುದಕ್ಕೂ ಅವಳ ಮನೆಗೆ ಹೋಗಿಯೇ ನೋಡೋಣವೆಂದು
ಹೊರಟು ನಿಂತೆ....
ಮನೆಯ ಮುಂದೆ ಇರುವ ಮೆಟ್ಟಿಲಿನಲ್ಲಿ ಗಲ್ಲದ ಮೇಲೆ ಕೈ
ಇಟ್ಟುಕೊಂಡು ವಸುದಾ ಕುಳಿತಿದ್ದಳು... ಹೊರಗೆ ನಿಂತಿದ್ದ ಲಾರಿಯಲ್ಲಿ ಮನೆಯ ಸಾಮಾನುಗಳನ್ನು ತುಂಬಿಸಲಾಗಿತ್ತು..
ಮೆಲ್ಲನೆ ಅವಳ ಹತ್ತಿರ ಹೋಗಿ ಅವಳ ಭುಜವನ್ನು ತಟ್ಟಿದೆ.. ಒಮ್ಮೆ ಬೆಚ್ಚಿಬಿದ್ದವಳು ನನ್ನನ್ನು ನೋಡಿ, ತಬ್ಬಿ ಕೊಂಡು ಅಳುವುದಕ್ಕೆ ಆರಂಭಿಸಿದಳು.... ಸ್ವಲ್ಪ ಹೊತ್ತು ಅತ್ತ ಅವಳು ನಂತರ ಹೋಗಿ ಪುನಃ ಮೆಟ್ಟಿಲ ಮೇಲೆ ಕುಳಿತುಕೊಂಡಳು...
" ಮಧೂ, ನನ್ನನ್ನು ಇಲ್ಲಿಂದ ಎಲ್ಲಾದರೂ ದೂರ ಕರೆದುಕೊಂಡು ಹೋಗಿ ಬಿಡು.... ನನಗಿಲ್ಲಿ ಇರೋದಕ್ಕೆ ಸ್ವಲ್ಪನೂ ಇಷ್ಟ ಇಲ್ಲ... ನಾನು ಡಾಕ್ಟರ್ ಆಗದಿದ್ರೂ ಪರವಾಗಿಲ್ಲ...ನೀನು ನನ್ನ ಜೊತೆಗಿದ್ದರೆ ಸಾಕು... ಅದು ನಾನು ಡಾಕ್ಟರ್ ಅದಕ್ಕಿಂತಲೂ ಹೆಚ್ಚು ಖುಷಿ ಕೊಡುತ್ತೆ..... ನಾನು ನಿನ್ನ ಜೊತೆಗೇನೇ ಇರ್ತೀನಿ ಮಧೂ ".
" ವಸುದಾ ಯಾಕೇ ಈ ರೀತಿ ಮಾತಾನಾಡ್ತ ಇದ್ದೀಯಾ... ನೀನು ಮಂಗಳೂರಿಗೆ ಹೋಗಿ ಇರ್ತೀಯಾ ಅಂತಾ ನಾನು ಅಂದುಕೊಂಡ್ರೆ... ಇಲ್ಲಿ ಎಲ್ಲಾವನ್ನು ಪ್ಯಾಕ್ ಮಾಡಿ ಎಲ್ಲಿಗೋ ಹೊರಟಿದ್ದಿರಲ್ಲಾ"
"ಇನ್ನೇಲ್ಲಿಯಾ ಮಂಗಳೂರು ... ಇನ್ನೇಲ್ಲಿಯಾ ಡಾಕ್ಟರ್... ನನ್ನ ಎಲ್ಲಾ ಕನಸುಗಳು ನುಚ್ಚುನೂರಾದವು ಮಧು... ಕೇವಲ ಅಕ್ಕನ ಒಂದು ತಪ್ಪಿನಿಂದ... ಅಪ್ಪನ ಪ್ರತಿಷ್ಠೆಯಿಂದ.... ನಾಳೆ ನಾವು ಇಲ್ಲಿಂದ ದೂರದ ಊರು ಸಾಗರಕ್ಕೆ ಹೊರಟು ಹೋಗ್ತಾ ಇದ್ದೀವಿ... ಅಲ್ಲೇ ಹುಡುಗನೇ ಮನೆ ಕೂಡ ಇರೋದು... ಅಲ್ಲೇ ಛತ್ರದಲ್ಲಿ ಮದುವೆ ಕೂಡ ನಡೆಯುತ್ತೆ ಅಂತಾ ಅಪ್ಪ ನಿನ್ನೆ ಅಮ್ಮನತ್ರ ಮಾತಾನಾಡಿದನ್ನ ನಾನು ಕೇಳಿಸಿಕೊಂಡೆ"...
"ಮದುವೆನಾ..!! ಯಾರದೂ ವಸುಧಾ " ಅಚ್ಚರಿಯಿಂದ ಕೇಳಿದೆ...
"ನನ್ನದೇ ಮದುವೆ.... ಎರಡು ವಾರಗಳ ಹಿಂದೆ ಹುಡುಗನ ಕಡೆಯವರು ನಮ್ಮ ಮನೆಗೆ ಬಂದಿದ್ದರು... ನಾನು ಈಗಲೇ ಮದುವೆ ಬೇಡ ಅಂದಿದ್ದಕ್ಕೆ , ಅಮ್ಮ ಸಾಯೋ ಮಾತೆಲ್ಲ ಆಡಿಬಿಟ್ರು.... ನಾನು ಊಟ ತಿಂಡಿ ಬಿಟ್ಟು ಪ್ರತಿಭಟಸಿದಕ್ಕೆ, ಅಪ್ಪ ವಿಷವನ್ನೇ ಊಟಕ್ಕೆ ಹಾಕಿ ತಿಂದುಬಿಟ್ಟರು... ಕೊನೆಗೆ ಏನೂ ಮಾಡೋಕೆ ಆಗದೇ ಸುಮ್ಮನಾಗಿಬಿಟ್ಟೆ"
"ಯಾಕೇ ಅವರಿಗೆ ಅಷ್ಟೊಂದು ಹಠ.... ಮಗಳು ಎಂಬ ಮಮಕಾರ ಈಗೆಲ್ಲಿ ಹೊಯ್ತು"....
"ಅಕ್ಕನ ತರ ನಾನು ಯಾರನ್ನಾದರೂ ಕಟ್ಟಿಕೊಂಡು ಓಡಿ
ಹೋಗ್ತೀನಿ ಎಂಬ ಭಯ ಅವರಿಗೆ... ನಿನ್ನೆ ಅಮ್ಮನತ್ರ ಹಠ
ಮಾಡಿದಕ್ಕೆ ಅಕ್ಕನ ವಿಷಯ ಎತ್ತಿ ನನ್ನನ್ನು ಹಂಗಿಸಿದ್ದರು...... ಈಗ ನಾನು ಏನು ಮಾಡೋದು ಗೊತ್ತಾ ಗ್ತ ಇಲ್ಲ.... ನಂಗೆ ಈ ಮದುವೆ ಇಷ್ಟವಿಲ್ಲ.. " ಎಂದು ಪುನಃ ಅಳೋದಕ್ಕೆ ಪ್ರಾರಂಭ
ಮಾಡಿಬಿಟ್ಟಳು...
ನನಗೆ ಇದು ಅನಿರೀಕ್ಷಿತವಾಗಿತ್ತು... ಆ ಕ್ಷಣದಲ್ಲಿ ಅವಳನ್ನು ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯಲಿಲ್ಲ... ಅವಳನ್ನು ಕರೆದುಕೊಂಡು ಹೋಗುವಷ್ಟು ನಾನು ಬೆಳೆದಿರಲಿಲ್ಲ... ಹಾಗೇ ಒಮ್ಮೆ ಅಲೋಚನೆ ಮಾಡಿದೆ ಆದರೂ ಅವಳ ತಂದೆ ತಾಯಿಯ ಮನಸ್ಥಿತಿ ನನ್ನನ್ನು ಹಿಂದೆ ಸರಿಯುವಂತೆ ಮಾಡಿತ್ತು.... ಕೊನೆಗೆ ಅವಳ ತಲೆ ಸವರಿ,
"ಏನೂ ಆಗಲ್ಲ ವಸುಧಾ.... ಎಲ್ಲಾ ಒಳ್ಳೆದಾಗುತ್ತೆ... ನಾನು ಈಗ ಏನೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ... ನಿಂಗೂ ನಿನ್ನ ತಂದೆಯ ವಿಷಯ ಗೊತ್ತು... ಅವರ ಹಠಮಾರಿತನವೂ ಗೊತ್ತು... ಯಾವುದಕ್ಕೂ ಸಂಜೆ ನನ್ನ ತಂದೆಯನ್ನು ಅವರ ಜೊತೆ ಮಾತನಾಡಲು ಒಪ್ಪಿಸುತ್ತೆನೆ.. ಹೇಗೋ ಅವರಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಲ್ವಾ... ಅವರ ಮಾತನ್ನಾದರೂ ಕೇಳ್ತಾರಾ ನೋಡೋಣ " ಎಂದು ಅಲ್ಲಿಂದ ಹೊರಡಲು ತಯಾರಾದೆ...ಅಷ್ಟರಲ್ಲಿ ಅವಳ ತಾಯಿ ಅಲ್ಲಿಗೆ ತಲುಪಿದ್ದರು.. ಅವರ ಹತ್ತಿರ ಮಾತಾನಾಡೋಣ ಎಂದು ಹೋದೆನಾದರೂ ಅವರ ಒಂದು ಕಣ್ಣೋಟ ನನಗೆ ಎಲ್ಲವನ್ನೂ ಅರ್ಥ ಮಾಡಿಸಿತ್ತು.. ಇವರ ಹತ್ತಿರ ಮಾತನಾಡಿ ಪ್ರಯೋಜನವಿಲ್ಲವೆಂದು ಅಲ್ಲಿಂದ ಸೀದಾ ಹೊರಟು ಬಂದಿದ್ದೆ... ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕಣ್ಣಿಂದ ನೀರು ಬಂದಿರಲಿಲ್ಲ, ಅವತ್ಯಾಕೊ ಕಣ್ಣೀರು ನನ್ನ ಗಲ್ಲವನ್ನು ತಲುಪಿತ್ತು...
ಆ ದಿನ ರಾತ್ರಿಯೇ ನನ್ನ ತಂದೆಯನ್ನು ಅವರ ಮನೆಗೆ ಕಳುಹಿಸಿದ್ದೆ... ಅವರು ತುಂಬಾನೇ ಅತ್ಮೀಯರಾಗಿದ್ದರು.. ಅವರ ಮಾತನ್ನಾದರೂ ಕೇಳಬಹುದು ಎಂಬ ಸಣ್ಣ ನಂಬಿಕೆಯೊಂದಿತ್ತು... ಆದರೆ ತಂದೆ ಮರಳಿ ಬರುವಾಗ ಅದು ಹುಸಿಯಾಗಿತ್ತು....
ಹಾಗೇ ಯೋಚಿಸುತ್ತಾ ಕಲ್ಲು ಬೆಂಚಿನ ಕುಳಿತಿದ್ದ ನನಗೆ ಯಾವುದೋ ವಾಹನ ಎದುರು ಬಂದು ನಿಂತ ಸದ್ದು ಕೇಳಿ.ಒಮ್ಮೆಲೇ ವಾಸ್ತವಕ್ಕೆ ಬಂದೆ... ಎದುರಿನಲ್ಲಿ ಆಟೋರಿಕ್ಷಾದಿಂದ ತಂಗಿ ಶೃದ್ದಾ ಇಳಿಯುತ್ತಿದ್ದಳು..ಅವಳ ಮುದ್ದಿನ ಮಗಳು ಏಳು ವರ್ಷದ ಶ್ರಾವ್ಯ "ಮಾಮ"ಎಂದು ನನ್ನನ್ನು ತಬ್ಬಿಕೊಂಡಳು... ಅವಳನ್ನು ಮೇಲಕ್ಕೆ ಎತ್ತಿಕೊಂಡೆ....
"ಏನಣ್ಣಾ, ಹೇಗಿದ್ದಿಯಾ.... ಕಲ್ಲು ಬೆಂಚಿನ ಮೇಲೆ ಕುಳಿತು ಏನೋ ಯೋಚಿಸುತ್ತಿರುವಾಗೆ ಇತ್ತು... ನಾವು ಬಂದದ್ದು ಗೊತ್ತಾಗಲಿಲ್ಲ.. ಅಂತಹ ಗಾಢ ವಿಚಾರ ಏನೋ.?"...
"ಏನಿಲ್ಲ ಶೃದ್ದಾ, ಯಾಕೋ ಆ ಮನೆಯನ್ನೂ ನೋಡ್ತಾ ಇದ್ದ ಹಾಗೆ ಹಳೆ ನೆನಪುಗಳು ಮನಸ್ಸಿನಲ್ಲಿ ಬಂತು... ಅದಕ್ಕೆ ಸುಮ್ಮನೆ ಇಲ್ಲೆ ಕುಳಿತುಬಿಟ್ಟೆ "
"ಯಾಕೋ ಕಳೆದುಹೋದ ಸಂಗತಿಗಳನ್ನು ನೆನಪು ಮಾಡಿಕೊಂಡು ಕೊರಗ್ತೀಯಾ.... ಅವತ್ತು ನೀನು ಸ್ವಲ್ಪ ಧೈರ್ಯ ವಹಿಸುತ್ತಿದ್ದರೆ, ಏನೋ ಅವಳ ಬದುಕು ಕೊಂಚ ಅದ್ರೂ ಬದಲಾಗುತ್ತಿತ್ತೋ ಏನೋ?... ಈ ರೀತಿಯಾಗಿ ಬೇರೆಯವರ
ಗುಲಾಮಗಿರಿಯಲ್ಲಿ ಅಂತೂ ಖಂಡಿತಾ ಇರ್ತಾ ಇರಲಿಲ್ಲ " ಬೇಸರದಿಂದ ಹೇಳಿದರು ಶೃದ್ದಾ...
"ಅವತ್ತಿನ ಪರಿಸ್ಥಿತಿಯಲ್ಲಿ ನಾನು ಏನನ್ನೂ ಮಾಡುವ ಹಾಗೇ ಇರಲಿಲ್ಲ.... ಅವಳ ತಂದೆ ತಾಯಿ ಪ್ರತಿಷ್ಠೆ ಬಿಟ್ಟು ಸ್ವಲ್ಪ ತಾಳ್ಮೆ ವಹಿಸುತ್ತಿದ್ದರೆ ಆಗ್ತಾ ಇತ್ತು .... ನಂಗೂ ಅವಳ ಮೇಲೆ ಬೆಟ್ಟದಷ್ಟು ಪ್ರೀತಿ ಇತ್ತು... ಆಗ ನಾನಿನ್ನೂ ಚಿಕ್ಕವನು ಆಗಷ್ಟೇ ಕಾಲೇಜು ಮುಗಿಸಿದ್ದೆ... ಕೈಯಲ್ಲೊಂದು ಕೆಲಸ ಕೂಡ ಇರಲಿಲ್ಲ.. ಒಂದುವೇಳೆ ನಾನು ಎಲ್ಲವನ್ನೂ ಎದುರಿಸಿ ನಿಂತಿದ್ದರೂ, ಅವಳ
ತಂದೆ ತಾಯಿ ವಿಷಯ... ಆಗಷ್ಟೇ ಒಂದು ಸಲ ನೋವು ತಿಂದವರು... ಅವರು ಮತ್ತೆ ಭೂಮಿ ಮೇಲೆ ಇರುತ್ತಿದ್ದರು ಎಂಬ ನಂಬಿಕೆ ನನಗೆ ಇರಲಿಲ್ಲ... ಅವರ ಸಮಾಧಿ ಮೇಲೆ ನಾವು ಜೀವನ ಕಟ್ಟಿ ನಿಂತರೆ ಅಲ್ಲಿ ಸುಖಕ್ಕಿಂತ ದುಃಖವೇ ಜಾಸ್ತಿ ಅನಿಸಿತು..ಅದಕ್ಕೆ ಅವಳನ್ನು ಅವರ ಕೈಗೆ ಬಿಟ್ಟು ಬಿಟ್ಟೆ "... ನನ್ನ ಕಣ್ಣಲ್ಲಿ ನೀರು ತುಂಬಿತ್ತು...
"ಇದರಿಂದ ನಿಂಗೆ ಸುಖ ಸಿಕ್ಕಿತ್ತಾ ಇಲ್ಲ ...ಕೊನೆಯ ಪಕ್ಷ ಅವಳಾದರೂ ಕನಸುಗಳನ್ನು ಪೂರೈಸಿಕೊಂಡಳಾ ಇಲ್ಲ... ಅವಳನ್ನು ಒತ್ತಾಯದಲ್ಲಿ ಯಾರಿಗೋ ಮದುವೆ ಮಾಡಿ ಅವರ ತಂದೆ ತಾಯಿ ಆದರೂ ಸುಖ ಪಟ್ವರಾ ಇಲ್ಲ... ಎಲ್ಲರೂ ದುಃಖದಲ್ಲೆ ಇರುವಾಗ ಇಲ್ಲಿ ನೀನು ಮಾಡಿರುವ ತ್ಯಾಗಕ್ಕೇನೂ ಬೆಲೆಯಿದೆ ಅಣ್ಣಾ.... ಇಲ್ಲಿ ತಪ್ಪು ನಿಮ್ಮಿಬ್ಬರದೂ ಅಲ್ಲ...
ತಪ್ಪು ಯಾರದ್ದು ಅಂದರೆ ವಿವೇಚನೆ ಮಾಡದೇ ಮದುವೆ ಮಾಡಿದ ಅವಳ ತಂದೆಯದು... ತನಗೆ ಒಬ್ಬಳು ತಂಗಿ ಇದ್ದಾಳೆ ಎಂದು ಯೋಚಿಸದೆ ತನ್ನ ಬದುಕನ್ನು ಮಾತ್ರ ನೋಡಿದ ಅವಳ ಅಕ್ಕನದು... ತಪ್ಪು ಯಾರದೇ ಆಗಿರಲಿ ಆದರೆ ಹಕ್ಕಿಯಂತೆ ಹಾರಾಡಬೇಕಿದ್ದ ಎರಡು ಹೃದಯಗಳು ಮಾತ್ರ ಸಿಡಿದು ಚೂರಾದದ್ದು ಮಾತ್ರ ಅಷ್ಟೇ ಸತ್ಯ "..
ಅವಳ ಮಾತು ನೂರಕ್ಕೆ ನೂರು ಸತ್ಯವಾಗಿತ್ತು.. ಆದರೆ ಅದಕ್ಕೆ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲ.. ಬತ್ತಿ ಹೋಗದ ಕಣ್ಣೀರುವೊಂದನ್ನು ಬಿಟ್ಟು... ಯಾಕೋ ಅವಳು ಇದ್ದ ಮನೆಯತ್ತ ಒಮ್ಮೆ ತಿರುಗಿ ನೋಡಿದೆ... ಆ ಮನೆ ನನ್ನಲ್ಲಿ ಹಲವಾರು ಉತ್ತರವಿಲ್ಲದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.. ಪುನಃ ಆ ಕಡೆ ತಿರುಗಲು ಮನಸ್ಸಾಗದೇ ತಂಗಿಯ ಹಿಂದೆಯೇ ಮನೆ ಕಡೆಗೆ ಹೆಜ್ಜೆ ಹಾಕಿದೆ.. ಕಾಲಚಕ್ರವೂ ಇಂತಹ ಹಲವಾರು ಸಂಗತಿಗಳೊಂದಿಗೆ ಇದನ್ನೂ ಸೇರಿಸಿ ಮುಂದಕ್ಕೆ ಸಾಗುತ್ತಲೆ ಇತ್ತು.....
ಮುಗಿಯಿತು...

