Daya Nanda

Drama Romance

1.7  

Daya Nanda

Drama Romance

ಮೌನ ತಾಳಿತೇ ಮನವು

ಮೌನ ತಾಳಿತೇ ಮನವು

8 mins
180


 ಸಮಯ ಸಂಜೆ ಐದು ಗಂಟೆ , ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮರೆಯಾಗಲು ದಿಗಂತದಲ್ಲಿ ಕೆಂಪು ಮೋರೆ ಹಾಕಿಕೊಂಡು ನಿಂತಿದ್ದ..ಆಕಾಶದಲ್ಲಿ ಹಗುರವಾಗಿ ಮೋಡ ಕವಿದು ನಿಂತಿತ್ತು....ಇತ್ತ ಕಡೆ ನಗರದ ಹೊರ ವಲಯದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಸ್ಥಾಪಿಸಲಾಗಿದ್ದ "ಮಲ್ಲಿಗೆ ರೆಸ್ಟೋರೆಂಟ್ " ಸಂಜೆಯ ಚುಮು ಚುಮು ಚಳಿಗೆ ಗ್ರಾಹಕರನ್ನು ಸೆಳೆಯಲು ಹರಸಾಹಸಪಡುವಂತಿತ್ತು.....ಆ ಸಮಯದಲ್ಲಿ ಯಾವಾಗಲೂ ಆ ರೆಸ್ಟೋರೆಂಟ್ ಜನರಿಂದ ಗಿಜಿಗಿಟ್ಟುತ್ತಿತ್ತು. ಆದರೆ ಅವತ್ತು ಮಾತ್ರ ಅದಕ್ಕೆ ತದ್ವಿರುದ್ಧವೆಂಬತೆ ಅಲ್ಲಿ ಜನಜಂಗುಳಿ ತುಂಬಾನೇ ಕಡಿಮೆ ಇತ್ತು....

ಸ್ವಲ್ಪ ಸಮಯದಲ್ಲೇ ಅಲ್ಲಿಯ ವಾತಾವರಣದಲ್ಲಿ ತುಂಬಾನೇ ಬದಲಾವಣೆ ಆಗಲಾರಂಬಿಸಿತು.... ಇದ್ದಕಿದ್ದಂತೆ ಜೋರಾಗಿ ಗಾಳಿ ಮಳೆ ಸುರಿಯಲು ಆರಂಭವಾಯಿತು ....ಅಲ್ಲಿಯವರೆಗೂ ಮೌನವಿದ್ದ ಆಕಾಶದಲ್ಲಿ ಸಿಡಿಲು ಗುಡುಗಿನ ಆರ್ಭಟ ಆರಂಭವಾಯಿತು....ಅದುವರೆಗೂ ದಿಗಂತದಲ್ಲಿ ಕೆಂಪು ಮೋರೆಯಲ್ಲಿದ್ದ ಸೂರ್ಯ ಮರೆಯಾಗಿ ಹೋಗಿದ್ದ...ಯಾವುದೇ ಮುನ್ಸೂಚನೆಯಿಲ್ಲದೆ ಬಂದ ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸಪಡುತ್ತಿದ್ದರು... ಅದೇ ಸಮಯಕ್ಕೆ ಸರಿಯಾಗಿ ಮಲ್ಲಿಗೆ ರೆಸ್ಟೋರೆಂಟ್ ಒಳಗೆ ಬಂದು ಕುಳಿತ ಆರ್ಯವರ್ಧನ್.....

* * *

ಜೋರಾಗಿ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಕುಳಿತ್ತಿದ್ದಾನೆ ಆರ್ಯ.....ಅವನಿಗ್ಯಾಕೋ ಆ ಮಳೆ ಮನಸ್ಸಿನಲ್ಲಿ ಬೇಸರ ಉಂಟು ಮಾಡುತ್ತಿದೆ...ಹಾಗಂತ ಅವನಿಗೆ ಮಳೆಯೆಂದರೆ ಇಷ್ಟವಿಲ್ಲ ಎಂದಲ್ಲ.. ಚಿಕ್ಕಂದಿನಿಂದಲೂ ಅವನಿಗೆ ಮಳೆ ಎಂದರೆ ತುಂಬಾನೇ ಇಷ್ಟ.... ಮನಸ್ಸಿಗೆ ಬೇಜಾರ ಆದಾಗ, ಹೋಗಿ ಮಳೆಯಲ್ಲಿ ನಿಂತು ಬಿಡುತ್ತಿದ್ದ. ಕೆಲವೊಮ್ಮೆ ಶಾಲೆಯಿಂದ ಬರುವಾಗ ಒದ್ದೆಯಾಗಿಕೊಂಡೆ ಬಂದು ತಾಯಿಯ ಕೈಯಲ್ಲಿ ಬೈಗುಳಗಳನ್ನು ತಿಂದಿದ್ದ..ಅಷ್ಟೊಂದು ಇಷ್ಟ ಪಡುತ್ತಿದ್ದ ಮಳೆಯನ್ನು ಆರ್ಯ ಈಗ ದ್ವೇಷಿಸುತ್ತಿದ್ದಾನೆ... ಆದಕ್ಕೆ ಕಾರಣವೂ ಇತ್ತು..ಆ ಕಾರಣ ಕುಂಭದ್ರೋಣ ಮಳೆ ಸೃಷ್ಟಿಸಿದ ಪ್ರಳಯದಂತೆ ಭೀಕರವಾಗಿತ್ತು...ಅವತ್ತು ಅವನಿಗೆ ಒಂದು ವಿಷಯ ಅರಿವಿಗೆ ಬಂತು..ಕೆಲವೊಮ್ಮೆ ನಾವು ಇಷ್ಟಪಡುತ್ತಿದ್ದ ವಿಷಯಗಳೇ ನಮಗೆ ಹೆಚ್ಚು ನೋವನ್ನು ಉಂಟು ಮಾಡುತ್ತದೆ ಎಂದು....

ಸುಮಾರು ಅರ್ಧ ಗಂಟೆಯಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲವಾದುದರಿಂದ ರೆಸ್ಟೋರೆಂಟ್ನನಲ್ಲಿ ಕುಳಿತಿದ್ದ ಆರ್ಯನ ಮನಸ್ಸಿನಲ್ಲಿ ಒತ್ತಡದ ಅನುಭವವಾಯಿತು .. ಎಡಬಿಡದೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಅವನ ಮನಸ್ಸು ಹತೋಟಿ ತಪ್ಪುತ್ತಿತ್ತು..ಬೇಡವೇಂದರೂ ಅವಳ ಜತೆಗಿನ ಆ ಕ್ಷಣಗಳು ಅವನ ಸ್ಮೃತಿಪಟಲದ ಮುಂದೆ ನಿಲ್ಲುತ್ತಿತ್ತು... ಕೊನೆಗೆ ಒತ್ತಡ ತಾಳಲಾರದೆ ತಲೆ ಮೇಲೆ ಕೈ ಹಿಡಿದು ಕುಳಿತ ಆರ್ಯ..

* * *

ತುಸು ಗಾಳಿ ಬೀಸಿದರೂ, ಭೋರ್ಗರೆಯಲು ಸಿದ್ಧವಾಗಿರುವ ಪ್ರಶಾಂತವಾದ ಸರೋವರದಂತೆ ಕಾದಿರುವೆ ನಾನು..

ತುಸು ಬಿಸಿ ತಾಕಿದರೂ, ಕರಗಲು ಆರಂಭಿಸುವ ಮಂಜುಗಡ್ಡೆಯಂತಾಗಿರುವೆ ನಾನು...

ಮರುಭೂಮಿಯಲ್ಲಿ ಬಾಯರಿದವನಿಗೆ ಸಿಗುವ ಓಯಸಿಸ್ ಆಗಬಾರದೇಕೆ ನೀನು...

ಹಿಮಾಲಯದ ತಪ್ಪಲಲ್ಲಿ ಚಳಿಯಲ್ಲಿ ನಡುಗುವವರಿಗೆ ಸಿಗೋ ಬೆಂಕಿಯಾಗಬಾರದೇಕೆ ನೀನು...

ಕಾಯುತ್ತಿರುವೆ ಗೆಳೆಯಾ, ನಿನಗೋಸ್ಕರ ಶಬರಿ ರಾಮನಿಗೆ ಕಾದಿರುವ ತರಹ...

ಬರಲಾರೆಯಾ ಇನಿಯಾ, ನನ್ನೊಡಲಿನ ವಿರಹವನ್ನು ತಣಿಸಲು ಮನ್ಮಥನ ತರಹ...

ನಿನ್ನ ಮಾತುಗಳು ನನಗೆ ಸ್ಪೂರ್ತಿಯನ್ನು ತುಂಬುತ್ತವೆ..ನಿನ್ನ ಸ್ಪರ್ಶವು ನನ್ನೊಳಗಿನ ದುಃಖವನ್ನು ಕಡಿಮೆಗೊಳಿಸುತ್ತದೆ...ನಿನ್ನ ಅಪ್ಪುಗೆಯು ನನ್ನೊಡಲಿನ ಕಾಮನೆಗಳನ್ನು ಬಡಿದೆಬ್ಬಿಸುತ್ತಿದೆ...ನಿನ್ನ ಜೊತೆ ಕಳೆಯುವ ಒಂದೊಂದು ಕ್ಷಣಗಳು....ನನ್ನ ಮನಸ್ಥಿತಿಯನ್ನು ಘರ್ಷನೆಗೊಳ ಪಡಿಸುತ್ತಿವೆ....ಹೇಗೆ ಆನಂದಿಸಲಿ ನಿನ್ನ ಉಪಸ್ಥಿತಿಯನ್ನು....... ಒಂದಂತೂ ಹೇಳಬಲ್ಲೆ ನೀ ಇಲ್ಲದಿರುವ ಈ ಜೀವನ ಹಳಿ ತಪ್ಪಿದ ರೈಲಿನಂತೆ..ಅದು ಭಾವನೆಗಳೇ ಹುಟ್ಟದ ಮನಸ್ಸಿನಂತೆ....ಒಮ್ಮೆ ಬರಲಾರೆಯಾ ಗೆಳೆಯಾ...ನನಗಾಗಿ...ಜಾತಕಪಕ್ಷಿಯಂತೆ ನಿನಗೋಸ್ಕರ ಕಾಯುತ್ತಿರುವ ನಿನ್ನ ಪ್ರಿಯತಮೆಗಾಗಿ....

ಅದು ಅವನಿಗೆ ನಿತ್ಯಾ ಬರೆದ ಮೊದಲ ಪತ್ರ.. ಇದಕ್ಕೂ ಮೊದಲು ಅನೇಕ ಸಲ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹೋದರೂ, ಅದನ್ನು ಅವಳು ಅಕ್ಷರ ರೂಪಕ್ಕೆ ಇಳಿಸಿರಲಿಲ್ಲ..ಈಗ ತಾನು ಬರೆದ ಪತ್ರವನ್ನು ಒಮ್ಮೆ ಓದಿ ನಾಚಿಕೊಂಡಳು ನಿತ್ಯಾ...ಇದನ್ನು ಓದಿ ಅವನೇನು ಮಾಡುತ್ತಾನೋ, ಎತ್ತಿ ಮುದ್ದಾಡುತ್ತಾನೋ ಅಥವಾ ಸುಮ್ಮನೆ ಸೊಂಟ ಗಿಲ್ಲುತ್ತಾನೋ.. ಸುಮ್ಮನೆ ಎದುರುಗಡೆ ಇದ್ದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ನಕ್ಕಳು ನಿತ್ಯಾ...

ಹೌದು..ಅವನು ಇದ್ದಿದ್ದು ಹಾಗೇ , ಅವಳು ಎಷ್ಟೇ ಕೋಪದಲ್ಲಿದ್ದರೂ ಒಂದು ಕ್ಷಣದಲ್ಲಿ ಅವಳನ್ನು ಸಮಾಧಾನ ಪಡಿಸಬಲ್ಲ...ಅವಳನ್ನು ನಗಿಸಿ ಕೋಪವನ್ನು ದೂರ ಮಾಡಬಲ್ಲ..ಸುಮಾರು ಎಂಟು ಇದೇ ರೀತಿ ವರ್ಷಗಳಿಂದ ಅವರ ಪ್ರೀತಿ ಬೆಳೆದು ಬಂದಿತ್ತು..ಅವಳಿಗೆ ತನ್ನವರಾರು ಇಲ್ಲದೇ ಇದ್ದುದರಿಂದ ಅವಳು ಅನಾಥಾಶ್ರಮದಲ್ಲೇ ಬೆಳೆದಿದ್ದಳು...ಆದ್ದರಿಂದ ಈಗ ಅವಳ

ಸರ್ವಸ್ವವು ಅವನೇ ಆಗಿದ್ದ..ಅವನನ್ನು ತುಂಬಾನೇ ಹಚ್ಚಿಕೊಂಡಿದ್ದಳು ನಿತ್ಯಾ...ಅವಳಿಗೆ ತಿಳಿದಿತ್ತು ತಾನಿವತ್ತು ಜರ್ನಲಿಸ್ಟ್ ಆಗಿದ್ದೇನೆ ಎಂದರೆ ಅದಕ್ಕೆ ಕಾರಣ ಆರ್ಯ ಅಂತಾ...ಆದ ಕಾರಣ ಅವಳು ಅವನ ಮಾತನ್ನು ಸುಲಭವಾಗಿ ತೆಗೆದು ಹಾಕುತ್ತಿರಲಿಲ್ಲ ..ಹೀಗೆ ಅವರಿಬ್ಬರ ಪ್ರೀತಿಯ ತೇರು ಬಹಳ ರೊಮ್ಯಾಂಟಿಕ್ ಆಗಿಯೇ ಸಾಗುತ್ತಿತ್ತು...ಹಾಗೇ ಸಾಗುತ್ತಿದ್ದ ತೇರಿಗೆ ಒಂದು ದಿನ ಸಡನ್ನಾಗಿ ಸಿಡಿಲಾಘತವಾಗಿತ್ತು.. ಅದು ಆ ಧಾರಾಕಾರ ಮಳೆಯಲ್ಲಿ, ಕೊಲೆಗಾರನ ಪಟ್ಟದೊಂದಿಗೆ....

* * *

ಅವತ್ತು ಗಣೇಶ ಚತುರ್ಥಿಯ ದಿನ, ಸಮಯ ಸಂಜೆ ಆರು ಗಂಟೆಯಾಗಿತ್ತು.ಅಂದು ಗಣೇಶ ಮೂರ್ತಿಯ ಮೆರವಣಿಗೆ ಇದ್ದುದರಿಂದ ಊರಿನಲ್ಲಿ ಜನಜಂಗುಳಿ ಸ್ವಲ್ಪ ಜಾಸ್ತಿಯೇ ಇತ್ತು..ಸುಮಾರು ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇನ್ನೂ ಬಿಡುಗಡೆ ಕೊಟ್ಟಿರಲಿಲ್ಲ..ಇದು ಕಾರ್ಯಕ್ರಮ ಸುಸ್ರೂತವಾಗಿ ನಡೆಯುವುದಕ್ಕೆ ಅಡ್ಡಿಯುಂಟು ಮಾಡಿತ್ತು...ಅಂತಹ ಧಾರಾಕಾರ ಮಳೆಯಲ್ಲಿ ನಿತ್ಯಾಳನ್ನು ಹುಡುಕುತ್ತಾ ಅವಳ ಗೆಳತಿಯ ಮನೆಗೆ ಹೊರಟಿದ್ದ ಆರ್ಯ.... ನಿತ್ಯಾ ಅವನ ಸಂಪರ್ಕಕ್ಕೆ ಸಿಗದೆ ಸರಿಸುಮಾರು ಒಂದು ವಾರವಾಗಿತ್ತು.. ಬೆಂಗಳೂರಿಗೆ ಹೋಗುವ ಮೊದಲು ಅವಳನ್ನು ಮಾತನಾಡಿಸಿದ್ದೆ ಕೊನೆ , ನಂತರ ಅವಳು ಫೋನಿನಲ್ಲಿಯೂ ಸಂರ್ಪಕಕ್ಕೆ ಸಿಕ್ಕಿರಲಿಲ್ಲ...ಆದ ಕಾರಣ ಅವನು ಎರಡು ದಿನದ ಹಿಂದೆ ಊರಿಗೆ ಬಂದವನು ಅವಳನ್ನು ಹುಡುಕಲು ಆರಂಭಿಸಿದ್ದ. ಅನಾಥಾಶ್ರಮ , ಅವಳು ಕೆಲಸ ಮಾಡುತ್ತಿದ್ದ ಜಾಗ, ಫ್ರೆಂಡ್ಸ್ ಮನೆ ಎಲ್ಲಾ ಕಡೆ ಹುಡುಕಿದ್ದ. ಅದರೆ ಎಲ್ಲಿಯೂ ಅವಳ ಸುಳಿವು ಸಿಕ್ಕಿರಲಿಲ್ಲ..ಈಗ ಕೊನೆಯ ಪ್ರಯತ್ನ ಎಂಬಂತೆ ಅವಳ ಗೆಳತಿ ಶ್ರೇಯಾಳ ಮನೆಗೆ ಹೊರಟಿದ್ದ..

ಜೋರಾಗಿ ಸುರಿಯುತ್ತಿದ್ದ ಮಳೆ ಅವನ ಮನಸ್ಸು ಏನೋ ಕೇಡನ್ನು ಶಂಕಿಸುತ್ತಿತು.ಅದೇ ಚಿಂತೆಯಲ್ಲಿ ಯಾವುದೋ ಭ್ರಮಾಲೋಕದಲ್ಲಿ ಇರುವಂತೆ ಅವನು ಬೈಕ್ ಓಡಿಸುತ್ತಿದ್ದ...

ಆರ್ಯ ಶ್ರೇಯಾಳ ಮನೆ ತಲುಪುವಾಗ ಕತ್ತಲಾಗಿತ್ತು...ಗೇಟಿನ ಹೊರಗೆ ಬೈಕ್ ನಿಲ್ಲಿಸಿ ಸೀದಾ ಮನೆಯ ಹತ್ತಿರ ಹೋದ. ಬಾಗಿಲು ಓಪನ್ ಇತ್ತು, ಆದರೆ ಲೈಟ್ ಹಾಕಿರಲಿಲ್ಲ. ಕರೆಂಟ್ ಹೋಗಿರಬಹುದು ಎಂದುಕೊಂಡು ಜೋರಾಗಿ ಕರೆದ .ಅದರೆ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ, ಮೆಲ್ಲನೆ ಬಾಗಿಲು ನೂಕಿ ಕರೆಯುತ್ತಲೆ ಒಳಗೆ ಹೋದ..ಅದೇ ಅವನು ಮಾಡಿದ ತಪ್ಪು.. ಕೂಡಲೇ ಕಾಲಿಗೆ ಏನೋ ತಡವರಿಸಿದಂತಾಗಿ ದಬಾಲನೆ ಬಿದ್ದ.. ಆಗ ಕೈಗೆ ಸಿಕ್ಕ ವಸ್ತುವನ್ನು ಹಿಡಿದು ಮೆಲ್ಲನೆ ಎದ್ದು ತಡಕಾಡಿ ಲೈಟ್ ಹಾಕಿದ.ಆಗ ಕಂಡ ದೃಶ್ಯವನ್ನು ನೋಡಿ ಅವನು ನಖಶಿಖಾಂತ ನಡುಗಿದ..ಅಲ್ಲಿ

ಒಂದು ಹುಡುಗನ ಹೆಣ ಬಿದ್ದಿತ್ತು... ಕೂಡಲೇ ಅವನು ಹೊರಡಲು ಬಾಗಿಲಿತ್ತ ಓಡಿದ. ಅದರೆ ಅವನ ಅದೃಷ್ಟ ಚೆನ್ನಾಗಿರಲಿಲ್ಲ. ಬಾಗಿಲಲ್ಲಿ ಶ್ರೇಯಾಳ ತಂದೆ ತಾಯಿ ಜೊತೆಗೆ ಪೋಲೀಸರು ನಿಂತಿದ್ದರು..ಒಮ್ಮೆಲೆ ಅವನಿಗೆ ಏನಾಯ್ತು ಅಂತ ಗೊತ್ತೇ ಆಗಲಿಲ್ಲ.. ಅವನು ಏನೇ ಸಮಜಾಯಿಷಿ ಕೊಟ್ರು ಅದನ್ನು ನಂಬುವ ಗೋಜಿಗೆ ಪೋಲೀಸರು ಹೋಗಲಿಲ್ಲ... ಅವನ ಹೇಳಿಕೆಗೆ ಸಾಕ್ಷಿ ಹೇಳೋಕೆ ಶ್ರೇಯಾ ಮನೆಯಲ್ಲಿ ಇರಲಿಲ್ಲ..ಅವಳು ಎರಡು

ದಿನದ ಹಿಂದೆ ಬೆಂಗಳೂರಿಗೆ ಹೊರಟು ಹೋಗಿದ್ದಳು..ಅಲ್ಲಿ ಕೊಲೆಯಾದವನು ಯಾರೆಂದು ಆರ್ಯನಿಗೆ ಮಾತ್ರವಲ್ಲ ಆ ಮನೆಯವರಿಗೆ, ಜೊತೆಗೆ ಪೋಲೀಸರಿಗೂ ಗೊತ್ತಿರಲಿಲ್ಲ... ಮಾಡದ ಕೊಲೆಗೆ ಅನ್ಯಾಯವಾಗಿ ಆರ್ಯ ಜೈಲು ಪಾಲಾಗಿದ್ದ..

***

ಸುಮಾರು ಹದಿನೈದು ದಿನಗಳ ಕಾಲ ಜೈಲಿನಲ್ಲಿ ಆರ್ಯನಿಗೆ ಮುಳ್ಳಿನ ಹಾಸಿಗೆಯಲ್ಲಿ ಮಲಗಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವನಿಗೆ ಸುಖಾಸುಮ್ಮನೆ ಜೈಲಿನಲ್ಲಿ ಕಳೆಯುವ ನೋವಿಗಿಂತಲೂ , ನಿತ್ಯಾಳ ಸ್ಥಿತಿಯ ಬಗ್ಗೆಯೇ ಹೆಚ್ಚು ಚಿಂತೆಯಾಗಿತ್ತು..ಅದಕ್ಕೆ ಅವನು ಜೈಲಿನಿಂದ ಹೊರ ಬರುವ ದಾರಿಯನ್ನೇ ಹುಡುಕುತ್ತಿದ್ದ. ಆಗ ಅವನ ಸಹಾಯಕ್ಕೆ ಬಂದವನು ಲಾಯರ್ ಆಗಿದ್ದ ಅವನ ಗೆಳೆಯ ಹರಿ..ಅವನ ಹೋರಾಟದ ಫಲವಾಗಿ ಅವನಿಗೆ ಇನ್ನೆರಡು ದಿನಗಳಲ್ಲಿ ಭೇಲ್ ಸಿಗುವುದಲ್ಲಿತ್ತು.ಅಷ್ಟರಲ್ಲಿ ಕೊಲೆಗಾರ ತಾನೇ ಬಂದು ಶರಣಾಗಿದ್ದ..ಆ ಕಾರಣಕ್ಕೆ ಆರ್ಯನಿಗೆ ಕೊಲೆ ಕೇಸಿನಿಂದ ಮುಕ್ತಿ ಸಿಕ್ಕಿತ್ತು..

ಜೈಲಿನಿಂದ ಹೊರ ಬಂದ ತಕ್ಷಣ ಅವನು ಮೊದಲು ಹೋಗಿದ್ದೆ ಅವಳು ಇದ್ದ ಆಶ್ರಮಕ್ಕೆ. ಆದರೆ ಅಲ್ಲಿ

ಅವನಿಗೆ ಆಘಾತಕಾರಿಯಾದ ಉತ್ತರವೆ ಸಿಕ್ಕಿತ್ತು..

"ಅವಳು ಕಾಣೆಯಾಗಿ ಸುಮಾರು ಎರಡು ವಾರ ಆಯಿತು..ಪೋಲೀಸ್ ಕಂಪ್ಲೇಂಟ್ ಕೊಟ್ರು ಏನೂ ಪೋಗ್ರೆಸ್ ಇಲ್ಲ..ಅದೇ ನಮಗೂ ಚಿಂತೆಯಾಗಿದೆ..ಇದಕ್ಕೂ ಮುನ್ನ ಈ ಆಶ್ರಮದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. "

"ನನಗನಿಸುತ್ತೆ, ಅವಳು ಯಾವುದೋ ಅಪಾಯದಲ್ಲಿ ಸಿಕ್ಕಿರಬೇಕು. ಇಲ್ಲದೆ ನನಗೆ ಹೇಳದೆ ಎಲ್ಲಿಗೂ ಹೋದವಳಲ್ಲ ಅವಳು. ಇದಕ್ಕೆಲ್ಲಾ ನಾನು ಜೈಲಿಗೆ ಹೋದದ್ದೇ ಕಾರಣ..ನಾನು ಹೊರಗೆ ಇರುತ್ತಿದ್ದರೆ ಹೆಂಗಾದರೂ ಮಾಡಿ ಅವಳನ್ನು ಹುಡುಕುತ್ತಿದ್ದೆ..ಮಾಡದ ಕೊಲೆಗೆ ನನ್ನ ತಗಾಲಾಕಿಸಿ ಬಿಟ್ರು.,,"ಎಂದು ಆರ್ಯ ಬೇಸರದಿಂದ ನುಡಿದ..

,"ಇಲ್ಲ, ನೀನು ಜೈಲಿಗೆ ಹೋದ ಮರು ದಿನವೇ ಅವಳು ಇಲ್ಲಿಗೆ ಬಂದಿದ್ಳು. ನಿನ್ನ ವಿಚಾರ ಮಾತನಾಡಿ ತುಂಬಾನೇ ಅತ್ತಳು.ಏನೂ ಹೇಳಿದ್ರು ಸಮಾಧಾನ ಆಗಲಿಲ್ಲ.. ನಂತರ ರೂಮಿಗೆ ಹೋಗಿ ಕೂತವಳು, ಸಂಜೆ ನಿನ್ನ ನೋಡಿ ಬರ್ತೀನಿ ಅಂತಾ ಹೋದವ್ಳು, ತಿರುಗಿ ಬರಲಿಲ್ಲ...".

" ನೀವು ಅವಕಾಶ ಕೊಟ್ರೆ ಒಮ್ಮೆ ಅವಳಿದ್ದ ರೂಮ್ ಚೆಕ್ ಮಾಡಬಹುದಾ?".

"ಖಂಡಿತವಾಗಿಯೂ, ಈಗಾಗಲೇ ಒಮ್ಮೆ ನಾವು ಚೆಕ್ ಮಾಡಿದ್ದೆವೆ. ಆದರೆ ಯಾವುದೇ ಕ್ಲೂ ಸಿಗಲಿಲ್ಲ.,"ಎಂದು ರೂಮಿನ ಕೀ ಕೊಟ್ಟಳು ವಾರ್ಡನ್.

ಆರ್ಯ ರೂಮಿನ ಬೀಗ ತೆಗೆದು ಒಳಗೆ ಹೋದ..ರೂಮ್ ಮೊದಲಿನಂತೆ ಶುಭ್ರವಾಗಿರಲಿಲ್ಲ..ಅಲ್ಲಲ್ಲಿ ಬೀಸಾಡಿದ ಪುಸ್ತಕಗಳು, ಚದುರಿದ ಪುಸ್ತಕಗಳು ಅಲ್ಲಿ ನಿತ್ಯಾ ಇಲ್ಲ ಎಂಬುವುದಕ್ಕೆ ಸಾಕ್ಷಿಯಾಗಿತ್ತು. ಆರ್ಯ ಸುಮಾರು ಅರ್ಧ ಗಂಟೆ ಜಾಲಾಡಿಯು ಏನೂ ಕ್ಲೂ ಸಿಗದೇ ಇದ್ದಾಗ ಅಲ್ಲಿಂದ ಹೊರಡಲು ಬಾಗಿಲ ಹತ್ತಿರ ಬಂದ.ಆಗ ಅವನಿಗೆ ಬಾಗಿಲ ಹತ್ತಿರ ಇದ್ದ ಟೇಬಲ್ ಮೇಲೆ ಆ ಆಲ್ಬಮ್ ಕಂಡಿತು...ಅದು

ಅವನು ಅವಳ ಬರ್ತ್ ಡೇಗೆಂದು ಗಿಫ್ಟ್ ಕೊಟ್ಟಿದ್ದ ಆಲ್ಬಮ್..ಅದರಲ್ಲಿ ಅವಳ ಜತೆ ಕಳೆದ ಕ್ಷಣಗಳನ್ನು ಫೋಟೋ ರೂಪಕ್ಕೆ ಇಳಿಸಿದ್ದ...ಅದು ಅವನು ಅವಳಿಗೆ ಕೊಟ್ಟ ಪ್ರಥಮ ಉಡುಗೊರೆಯಾಗಿತ್ತು.. ಕೂಡಲೇ ಅವನು ಆ ಆಲ್ಬಮ್ ಅನ್ನು ಎತ್ತಿಕೊಂಡ...ಆಗ ಅದರಿಂದ ನಾಲ್ಕು ಯುವಕರ ಫೋಟೋಗಳು ಕೆಳಕ್ಕೆಬಿತ್ತು..ಅವುಗಳು ಪೇಪರ್ ಗಳಿಂದ ಕತ್ತರಿಸಿದ್ದ ಫೋಟೋಗಳಾಗಿದ್ದವು..ಅವುಗಳ ಜೊತೆಗೆ ಆಲ್ಬಮ್ ನಲ್ಲಿ ಒಂದು ಪತ್ರವೂ ಇತ್ತು.. ಆ ಫೋಟೋಗಳಿಗೂ , ನಿತ್ಯಾ ಕಾಣೆಯಾಗಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಯೋಚಿಸುತ್ತಲೆ ಆರ್ಯ ಆ ಪತ್ರವನ್ನು ಓದತೊಡಗಿದ..

* * *

ಪ್ರೀತಿ ಎಂಬ ಒಂದು ಸುಂದರ ಅನುಭೂತಿ ನನ್ನಲ್ಲಿ ಮರೀಚಿಕೆಯಾಗಿದ್ದ ಸಮಯದಲ್ಲಿ ನೀನು ನನ್ನ ಜೀವನವನ್ನು ಪ್ರವೇಶಿಸಿದೆ.. ಸಂಬಂಧಗಳ ಅರ್ಥವೇ ಗೊತ್ತಿರದ ನನ್ನ ಬದುಕಿಗೆ ಹೊಸ ಅರ್ಥವನ್ನು ತಂದೆ.. ಅನಾಥಾಶ್ರಮದಲ್ಲಿ ಯಾರ ಅನುಬಂಧವು ಇರದೇ ಬೆಳೆದ ನನಗೆ ಹೊಸ ಕನಸುಗಳನ್ನು ಕಾಣಲು ಸ್ಫೂರ್ತಿ ತುಂಬಿದೆ..ಆ ಕನಸು ಈಡೇರಲು ನೀ ನೆರವಾದೆ..ನೀ ನನ್ನನ್ನು ಎಷ್ಟು ಇಷ್ಟ ಪಡ್ತೀಯೊ ಗೊತ್ತಿಲ್ಲ..ಆದರೆ ನಾನು ನಿನ್ನನ್ನು ತುಂಬಾನೇ ಪ್ರೀತಿಸಿದೆ..ನಿನ್ನ ಉಪಸ್ಥಿತಿಯಲ್ಲಿ ನನ್ನೊಳಗಿನ ನೋವನ್ನು ನಾ ಮರೆತೆ..ವರುಷಗಳ ಕಾಲ ಅಲ್ಲದಿದ್ದರೂ, ಒಂದು ದಿನವಾದ್ರೂ ನಿನ್ನ ಸಂಗಾತಿಯಾಗಿ ಬಾಳಬೇಕೆಂದು ಕನಸು ಕಂಡೆ..ನಿನ್ನ ನೀಳವಾದ ಎದೆಯಲ್ಲಿ ಮಲಗಿ ನನ್ನ ಆಸೆಗಳನ್ನು ನಿನ್ನಲ್ಲಿ ಬಿಚ್ಚಿಡಬೇಕು ಎಂಬ ಬಯಕೆ ನನ್ನದಾಗಿತ್ತು..

         ಅದರೆ ಕಾಲ ಎಂಬುದು ಯಾವಾಗಲೂ ಒಂದೇ ರೀತಿ ಇರುವುದಿಲ್ಲವಲ್ಲ..ಅದು ಯಾವ ಟೈಮ್ ಲ್ಲಿ ನಮ್ಮ ಪ್ರೀತಿಗೆ ಯಾರ ಕಣ್ಣುಬಿತ್ತೋ ಗೊತ್ತಿಲ್ಲ..ಈ ಭೂಮಿ ಮೇಲೆ ಬದುಕಲು ಯೋಗ್ಯತೆ ಇಲ್ಲದ ಆ ನಾಲ್ವರು ಮಾಡಿದ ಆನ್ಯಾಯಕ್ಕೆ ನಾನು ಬಲಿಯಾಗಬೇಕಾಯಿತು.. ಅವರ ಅಟ್ಟಹಾಸದ ನಡುವೆ ನಾನು ಏನೂ ಮಾಡಲಾಗದೆ, ನನ್ನ ಸರ್ವಸ್ವವನ್ನೂ ಕಳೆದುಕೊಂಡೆ...ಅವತ್ತು ಊರಿನಲ್ಲಿ ಸಾಹಿತ್ಯ ಸಮ್ಮೇಳನ ಸಮಾರಂಭವಿತ್ತು.ಆ ಸಮಾರಂಭಕ್ಕೆ ನಾನು ಪ್ರತಿಕೆಯ ಪರವಾಗಿ ವರದಿಗಾರ್ತಿಯಾಗಿ ಹೋಗಿದ್ದೆ. ಅವತ್ತು ಸಮಾರಂಭ ಮುಗಿಸಿ ಹಿಂತಿರುಗುವಾಗ ಸಂಜೆಯಾಗಿತ್ತು... ಅದೇ ಸಮಯದಲ್ಲಿ

ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು.. ನಾನು ಇಷ್ಟ ಪಡುತ್ತಿದ್ದ ಆ ಮಳೆಯೇ ನನ್ನ ಪಾಲಿಗೆ ಶಾಪವಾಯಿತು..ಆ ಮಳೆಯಲ್ಲಿ ನನ್ನ ಗಾಡಿ ಕೈಕೋಡ್ತು..ಅದನ್ನು ಸರಿಮಾಡುತ್ತ

ಸ್ವಲ್ಪ ಹೊತ್ತು ಅಲ್ಲಿ ನಿಂತಿದ್ದೆ. ಆಗ ಅವರು ಎಲ್ಲಿದ್ದರೂ ಗೊತ್ತಿಲ್ಲ..ಆ ದುರುಳರು ಅಲ್ಲಿಗೆ ಬಂದುಬಿಟ್ರು.. ನನ್ನ ಪ್ರತಿರೋಧವನ್ನು ಲೆಕ್ಕಿಸದೆ ನನ್ನ ಸರ್ವಸ್ವವನ್ನೂ ನನ್ನಿಂದ ಕಿತ್ತುಕೊಂಡು ಬಿಟ್ಟರು..ಒಂದು ಹೆಣ್ಣು ಮನುಷ್ಯಳು,ಅವಳಿಗೂ ಬದುಕಿದೆ ಎಂಬ ಕರುಣೆಯೂ ಇಲ್ಲದೆ , ನನ್ನನ್ನು ಪೈಶಾಚಿಕವಾಗಿ ನಡೆಸಿಕೊಂಡರು....

ಅವರೆಲ್ಲಾ ಭೂಮಿ ಮೇಲೆ ಇರಲು ಯೋಗ್ಯತೆ ಇಲ್ಲದ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು.. ಹೊರಗೆ ಗಣ್ಯ ವ್ಯಕ್ತಿಯ ಪೋಷಾಕು ಹಾಕಿ ಹೆಣ್ಣನ್ನು ಕಾಮುಕ ದೃಷ್ಟಿಯಿಂದ ನೋಡೊ ಅವರಂಥವರಿಗೆ ಭೂಮಿ ಮೇಲೆ ಬದುಕುವ ಹಕ್ಕಿಲ್ಲ ಅಂತಾ ಅವತ್ತೆ ನಿರ್ಧಾರ ಮಾಡಿದೆ...

ಅದಕ್ಕೆ ಅವರೆಲ್ಲಾರನ್ನು ಮುಗಿಸುವ ನಿರ್ಧಾರಕ್ಕೆ ಬಂದೆ.ಇದು ನಿನಗೆ ತೊಂದರೆ ಆಗಬಹುದು ಎಂದು ನಿನ್ನಿಂದ ಮುಚ್ಚಿಟ್ಟೆ.. ಅವರಲ್ಲೊಬ್ಬ ಶ್ರೇಯಾಳ ಪರಿಚಯದವ. ಅವತ್ತು ಅವನು ಶ್ರೇಯಾಳ ಮನೆಗೆ ಹೋಗುವ ಸುದ್ದಿ ಸಿಕ್ಕಿತ್ತು.. ಆದ್ದರಿಂದ ಅವನನ್ನು ಅಲ್ಲೇ ದಾರಿಯಲ್ಲಿ ಮುಗಿಸುವ ಪ್ಲಾನ್ ಮಾಡಿದೆ.ಅದರೆ ಇಲ್ಲೂ ನನಗೆ ದುರಾದೃಷ್ಟ ಹಿಂಬಾಲಿಸಿತು.. ಆದರೆ ನಾನು ಮಾಡಿದ ಕೊಲೆ ನಿನ್ನ ಜೈಲಿಗೆ ಸೇರುವಂತೆ ಮಾಡಿತು.. ನನಗೆ ಕೊಲೆ ಮಾಡಿದ ಬಗ್ಗೆ ಯಾವುದೇ ಪಶ್ಚಾತ್ತಾಪವಿರಲಿಲ್ಲ.. ಅದರೆ ನೀನು ಜೈಲಿಗೆ ಸೇರಿದ್ದು ನನಗೆ ಕದಲುವಂತೆ ಮಾಡಿತ್ತು..ಅದಕ್ಕೋಸ್ಕರವೇ ಈ ಪತ್ರ ಬರೆಯ ಬೇಕಾಗಿ ಬಂತು.. ಆದರೆ ಅವರನ್ನು ನಾನು ಸುಮ್ಮನೆ ಬಿಡಲ್ಲ. .ನನಗೆ ಬಂದ ಪರಿಸ್ಥಿತಿ ನಾಳೆ ಯಾರಿಗೂ ಬರಬಾರದು..ಅದಕ್ಕೆ ನೀನು ಅತ್ಯಾಚಾರಿಗಳ ಪಾಲಿಗೆ ಯಮದೂತನಾಗಬೇಕು... ಅಂತಹವರಿಗೆ ಈ ಭೂಮಿ ಮೇಲೆ ಜಾಗ ಇಲ್ಲ ಎಂದು ಅವರಿಗೆ ಅರ್ಥವಾಗಬೇಕು...ಇದು ನನ್ನ ಕೊನೆಯ ಆಸೆ..

ಇದನ್ನೆಲ್ಲಾ ನಾನು ನಿನಗೆ ಅವತ್ತೆ ಹೇಳಬೇಕು ಅಂತಾ ನೆನಸಿದ್ದೆ.. ಅದರೆ ನೀನು ಕೆಲಸ ಸಿಕ್ಕ ಖುಷಿಯಲ್ಲಿ ನನ್ನ ಹತ್ತಿರ ಬಂದಿದ್ದೆ.. ಆ ಸಂತೋಷದ ಕ್ಷಣಗಳನ್ನು ಹಾಳು

ಮಾಡಲು ನನಗೆ ಮನಸಾಗಲಿಲ್ಲ. ಅದಕ್ಕೆ ಈ ವಿಷಯವನ್ನು ನಿನ್ನಿಂದ ಮುಚ್ಚಿಟ್ಟುಬಿಟ್ಟೆ..ಕ್ಷಮೆ ಇರಲಿ ಗೆಳೆಯಾ... ಇನ್ನೊಂದು ಜನ್ಮ ಅಂತಾ ಇದ್ರೆ ಪುನಃಹ ನಿನ್ನ ಪ್ರಿಯತಮೆಗಾಗಿ ಹುಟ್ಟಿ ನೂರು ವರ್ಷ ಬಾಳ್ತೀನಿ...

* * *

ಒಮ್ಮೆಲೆ ಹಳೆಯ ಎಲ್ಲಾ ನೆನಪುಗಳು ಮನಸಿನಾಳದಲಿ ಇಳಿದು, ತತ್ತರಿಸಿಹೋದ ಆರ್ಯ.. ಯಾವುದೇ ವಿಷಯವಿದ್ದರೂ ಮುಕ್ತವಾಗಿ ಚರ್ಚಿಸುತ್ತಿದ್ದ ನಿತ್ಯಾ, ಈ ವಿಷಯವನ್ನು ನನ್ನಿಂದ ಯಾಕೆ ಮುಚ್ಚಿಟ್ಟುಬಿಟ್ಟಳು.. ಅವನಿಗೆ ಈಗ ಜೈಲಿಗೆ ಹೋದುದರ ಬಗ್ಗೆ ಚಿಂತೆ ಇರಲಿಲ್ಲ..ಅವಳ ನೆನಪಿನಲ್ಲಿ ಅವನು ಹಣ್ಣಾಗಿ ಹೋಗಿದ್ದ.. ಊಟ ತಿಂಡಿಯ ಬಗ್ಗೆ ಅವನಿಗೆ ನೆನಪೇ ಇರುತ್ತಿರಲಿಲ್ಲ..ನಾನು ಅವಳ ಮನಸ್ಸಿನ ಒಳಗಿನ ನೋವನ್ನು ಅರ್ಥಮಾಡಿಕೊಳ್ಳದೆ ಹೋದೆನಲ್ಲ ಎಂದು ಅವನಿಗೆ ತನ್ನ ಮೇಲೆಯೆ ಕೋಪ ಬರುತ್ತಿತ್ತು..ಈಗ ಏನು ಮಾಡೋದು..ಅವಳನ್ನ ಎಲ್ಲಿ ಅಂತಾ ಹುಡುಕೋದು... ಒಮ್ಮೆ ಪೋಲಿಸ್ ಠಾಣೆಗೆ ಹೋಗಿ ಬರೋಣ ಅಂತಾ ಅಲ್ಲಿಂದ ಅನುವಾದ...ಅಷ್ಟರಲ್ಲಿ ಇನ್ನೊವ ಕಾರೊಂದು ಅಲ್ಲಿಂದ ವೇಗವಾಗಿ ಹೊರಟು ಹೋಯಿತು... ಅದರಲ್ಲಿ ಅವನಿಗೆ ಹುಡುಗರಿಬ್ಬರ ಮುಖ ಕಂಡಿತು..ಕೂಡಲೇ ಬೈಕ್ ಹತ್ತಿ ಆ ಕಾರನ್ನು ಹಿಂಬಾಲಿಸಲು ಆರಂಭಿಸಿದ...

ಸುಮಾರು ಐದು ಕಿ ಮೀ ದೂರದವರೆಗೂ ಆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದ ಆರ್ಯ..ಆದರೆ ಅವರು ಇವನ ಕಣ್ಣು ತಪ್ಪಿಸಿ ಹೋಗಿದ್ದರು..ಅವರು ಎಲ್ಲಿ ಮಿಸ್ ಆಗಿರಬಹುದು ಎಂದು ಯೋಚಿಸಿ ದಾರಿಯ ಕೊನೆಯಲ್ಲಿ ಬೈಕ್ ನಿಲ್ಲಿಸಿದ ಆರ್ಯ. ಅದು ನಿರ್ಜನ ಪ್ರದೇಶ ಅಲ್ಲಿ ಜನಸಂಚಾರ ತುಂಬಾನೇ ಕಡಿಮೆ ಇತ್ತು..ಸ್ವಲ್ಪ ದೂರದಲ್ಲಿ ಒಂದು ಪಾಳು ಬಿದ್ದ ಕಟ್ಟಡಯೊಂದಿತ್ತು... ಸಂಜೆಯ ಸಮಯವಾದುದರಿಂದ ಹೊರಗೆ ಮೆಲ್ಲನೆ ಕತ್ತಲೆ ಕವಿಯುತ್ತಿತ್ತು...ಆದರೂ ಮೆಲ್ಲನೆ ಆ ಪಾಳು ಬಿದ್ದ ಕಟ್ಟಡದ ಹತ್ತಿರ ಹೊರಟ.. ಆಗ ಬಂಗಲೆ ಹಿಂದೆಯಿಂದ ಜೋರಾಗಿ ಕಿರುಚಿದ ಸದ್ದು ಕೇಳಿಸಿತು..ಕೂಡಲೇ ಬಂಗಲೆಯ ಹಿಂದೆ ಓಡಿದ ಆರ್ಯ...

ಆಗ ಅಲ್ಲಿ ಅವನಿಗೆ ಕಂಡದ್ದು ಭಯಾನಕ ದೃಶ್ಯ...ಅಲ್ಲಿ ಒಬ್ಬ ಸತ್ತು ಬಿದ್ದಿದ್ದ...ಅವನ ಎದೆಯಲ್ಲಿ ಮೂರು ಗುಂಡುಗಳು ಇಳಿದಿದ್ದವು...ಸ್ವಲ್ಪ ದೂರದಲ್ಲಿ ಮತ್ತೊಬ್ಬ ಸತ್ತು ಬಿದ್ದಿದ್ದ..ಅವನ ಮೇಲೂ ಮನಸ್ಸೊಚ್ಚೆ ಗುಂಡು ಹಾರಿಸಲಾಗಿತ್ತು..ಆ ದೃಶ್ಯಗಳು ಎಂತವರ ಮೈಯನ್ನು ನಡುಗಿಸುವಂತಿತ್ತು... ಈ ಇಬ್ಬರು ಇಲ್ಲಿ ಇರುವುದರಿಂದ ಮತ್ತೊಬ್ಬ ಕೂಡ ಇಲ್ಲೇ ಇರಬೇಕು ಅಂತಾ ಯೋಚಿಸಿ ಬಂಗಲೆಯೊಳಕ್ಕೆ ಕಾಲಿಟ್ಟ ಆರ್ಯ...ಆಗ ಬಂಗಲೆ ಹೊರಗಿನಿಂದ ಗುಂಡು ಹಾರಿಸಿದ ಸದ್ದು ಕೇಳಿಸಿತು..ಆ ಕೂಡಲೇ ಆರ್ಯ ಬಂಗಲೆಯ ಹೊರಗೆ ಬಂದ.. ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿತ್ಯಾ ಬಿದ್ದಿದ್ದಳು..ಆರ್ಯ ಅವಳ ಹತ್ತಿರಕ್ಕೆ ದೌಡಾಯಿಸಿದ...ಅವಳ ಹತ್ತಿರವೇ ಮತ್ತೊಬ್ಬ ಪಾತಕಿ ಬಿದ್ದಿದ್ದ..ಅವನ ಕುತ್ತಿಗೆಯನ್ನು ಸೀಳಲಾಗಿತ್ತು..

ಆರ್ಯ ಓಡಿದವನೇ ಕೆಳಗೆ ಬಿದ್ದಿದ್ದ ನಿತ್ಯಾಳನ್ನು ತನ್ನ ಮಡಿಲಿಗೆ ತೆಗೆದುಕೊಂಡ.. ಗುಂಡುಗಳ ಹೊಡೆತದಿಂದ ಅವಳ ದೇಹ ಜರ್ಜರಿತವಾಗಿತ್ತು...

"ಯಾಕೆ ನಿತ್ಯಾ ಈ ರೀತಿ ಮಾಡ್ದೆ..ನಾನೂ ಇರಲಿಲ್ಲವಾ..ಒಂದು ಮಾತು ನನ್ನತ್ತ ಹೇಳುತ್ತಿದ್ದರೆ.. ನೀನು ಈ ರೀತಿ ಕಷ್ಟ ಪಡೋ ಅಗತ್ಯ ಇರಲಿಲ್ಲ...ನಾನೇ ಆ ಪಾಪಿಗಳಿಗೆ ಯಮಲೋಕ ತೋರಿಸುತ್ತಿದ್ದೆ.. ಇಷ್ಟೇನಾ ನೀ ನನ್ನನ್ನು ಅರ್ಥ ಮಾಡಿಕೊಂಡದ್ದು..ನಿನಗೋಸ್ಕರ ನಾನು ಏನೂ ಮಾಡಲು ತಯಾರಿದ್ದೆ.."

"ಅವತ್ತು ನಿನ್ನ ಮುಖದಲ್ಲಿದ್ದ ಸಂತೋಷನ ಕಿತ್ತುಕೊಳ್ಳಲು ನನಗೆ ಮನಸ್ಸಾಗಲಿಲ್ಲ..ನಿನ್ನ ಕಣ್ಣಿಂದ ದೂರ ಹೋಗ್ಬೇಕು ಅಂತಾ ಅವತ್ತೆ ನಿರ್ಧಾರ ಮಾಡಿದೆ...ನಿನಗೆ ಯಾವುದೇ ವಿಷಯಗಳು ತಿಳಿಯಬಾರದು ಎಂಬುದು ನನ್ನ ಇಚ್ಛೆಯಾಗಿತ್ತು..ಅದರೆ ದೂರ ಹೋಗೋಕೂ ಮುಂಚೆ ನನಗೆ ಅನ್ಯಾಯ ಮಾಡಿದವರು ಜೀವಂತ ಇರಬಾರದು.. ಅವರನ್ನು ನಾನೇ ಕೊಲ್ಲಬೇಕು ಅಂತಾ ಅವತ್ತೆ ಮನಸ್ಸಿನಲ್ಲಿ ಒಂದು ಶಪಥ ಮಾಡಿದ್ದೆ..ಆ ಶಪಥನ ಇವತ್ತು ಪೂರ್ತಿಗೊಳಿಸಿದೆ.. ಆದರೆ ವಿಧಿಯ ಆಟ ನೋಡು ಪುನಃ ನನ್ನನ್ನು ನಿನ್ನ ಹತ್ತಿರವೇ ಸೇರಿಸಿತು.. ಈಗ ನನ್ನ ದೇವರ ಮಡಿಲಲ್ಲೇ ಪ್ರಾಣ ಬಿಡ್ತಾ ಇದ್ದೀನಿ..

" ಹಾಗೆಲ್ಲ ಮಾತನಾಡ ಬೇಡ ನಿತ್ಯಾ...ನಾನು ಇರುವವರೆಗೂ ನಿಂಗೆ ಏನೂ ಆಗಲ್ಲ.... ಬಾ ಹಾಸ್ಪಿಟಲ್ಗೆ ಹೋಗುವ,". ಎಂದು ಅವಳ ತಲೆ ನೇವರಿಸಿದ.

"ಇಲ್ಲ ಆರ್ಯ, ನಂಗೆ ಬದುಕುವ ಯಾವ ಭರವಸೆಯು ಉಳಿದಿಲ್ಲ.. ನಂಗೆ ಒಂದು ಕೊನೆಯಾಸೆ ಇದೆ.ನಾನು ಆರಂಭ ಮಾಡಿರುವ ಈ ಯಜ್ಞವನ್ನು ನೀನು ಮುಂದುವರಿಸಬೇಕು.. ಈ ಭೂಮಿಯಲ್ಲಿ ಅತ್ಯಾಚಾರಿಗಳಿಗೆ ಬದುಕುವ ಯೋಗ್ಯತೆ ಇಲ್ಲ.. ಅಂತಹವರಿಗೆ ನೀನು ಭಯಹುಟ್ಟಿಸಬೇಕು... ಅವರಿಗೆ ನೀನು ರಾಕ್ಷಸನಾಗಬೇಕು ... ಇನ್ನೊಂದು ಜನ್ಮ ಅಂತಾ ಇದ್ರೆ ಪುನಃ ನಿನ್ನ ಪ್ರಿಯತಮೆಯಾಗಿ ಹುಟ್ಟಿ ಬರುತ್ತೇನೆ. " ಎಂದು ಮೆಲ್ಲನೆ ತನ್ನ ಕೈಯನ್ನು ಅವನ ಕೈ ಮೇಲೆ ಇಟ್ಟಳು...

ಆರ್ಯನಿಗೆ ಅವಳ ಕೈ ತಣ್ಣಗಾದಂತೆ ಅನಿಸಿತು...ಅಳುವುದಕ್ಕೆ ಅವನ ಕಣ್ಣಿನಲ್ಲಿ ಕಣ್ಣೀರು ಬತ್ತಿ ಹೋಗಿತ್ತು.. ಮೆಲ್ಲನೆ ಎದ್ದು ಯಾವುದೋ ಶಪಥದೊಂದಿಗೆ ಪಶ್ಚಿಮ ದಿಕ್ಕಿನಲ್ಲಿ ನಡೆದ.. ಈಗ ಸೂರ್ಯ ಸಂಪೂರ್ಣವಾಗಿ ಮರೆಯಾಗಿ ಪೂರ್ತಿ ಕತ್ತಲಾಗಿತ್ತು....ಅದುವರೆಗೂ ಆರ್ಭಟಿಸುತ್ತಿದ್ದ ಮಳೆ ಯು ಕಡಿಮೆಯಾಗಿತ್ತು..ಅವನ ಬದುಕಿನಲ್ಲಿಯೂ ಬೆಳದಿಂಗಳು ಮರೆಯಾಗಿ ಕತ್ತಲಾವರಿಸಿತ್ತು.......

* * *



Rate this content
Log in

Similar kannada story from Drama