ಕಡಲ ತಡಿ
ಕಡಲ ತಡಿ
ನಾವೆಲ್ಲರೂ ಕುಟುಂಬ ಸಹಿತವಾಗಿ ಕೇರಳ ಕಡೆಗೆ ಪ್ರವಾಸ ಮಾಡಿದ್ದ ಒಂದು ಸಂದರ್ಭದ ಮಳೆಯ ನೆನಪುಗಳು.
ಕೇರಳದ ರಾಜಧಾನಿ ಟ್ರಿವೇಂಡ್ರಂ(ತಿರುವನಂತಪುರಂ)
ನಲ್ಲಿ ಪ್ರವಾಸದಲ್ಲಿದ್ದಾಗ,ಅಲ್ಲಿಯ ಸುಪ್ರಸಿದ್ಧ ಅನಂತ ಪದ್ಮನಾಭನ ದೇವಸ್ಥಾನವನ್ನು ನೋಡಿಕೊಂಡು , ನಂತರ ಸಾಯಂಕಾಲ ಐದು ಗಂಟೆಯ ವೇಳೆಗೆ, ಸಮೀಪದ ಕಡಲ ತಡಿಗೆ ಹೋದೆವು. ನಮ್ಮ ಗುಂಪಿನ ಆಬಾಲವೃದ್ಧರಿಗೆ
ಅದೆಂತಹುದೋ ಸಂಭ್ರಮ. ಸಮುದ್ರದ ಅಬ್ಬರದ ಅಲಿಗಳಿಗೆ ಮೈ ಒಡ್ಡುತ್ತಾ, ಅಲೆಗಳು ನಮ್ಮನ್ನು ಸ್ವಲ್ಪ ದೂರಕ್ಕೆ ಎಳೆದೊಯ್ಯುವಾಗ ಹೋ ಎಂದು ಕಿರಿಚುತ್ತಾ, ಒಬ್ಬರ ಕೈ ಇನ್ನೊಬ್ಬರು ಹಿಡಿದು, ಸಂಭ್ರಮಿಸುತ್ತಾ, ಮೊಬೈಲ್ ಗಳಲ್ಲಿ ಫೋಟೋ ಕ್ಲಿಕ್ಕಿಸುತ್ತಾ, ಸಂತೋಷವಾಗಿ ಕಾಲ ಕಳೆಯುತ್ತಿದ್ದ ನಮ್ಮೆಲ್ಲರಿಗೂ ಸಮಯದ ಪರಿವೆಯೇ ಇರಲಿಲ್ಲ. ನಾವು ನೋಡು ನೋಡುತ್ತಿದ್ದಂತೆ, ಸೂರ್ಯಾಸ್ತ ವೂ ಸಮೀಪಿಸಿತು. ದೂರದ ಕಡಲ ಅಂಚಿನಲ್ಲಿ ಕೆಂಬಣ್ಣದ ಸೂರ್ಯ ನಿಧಾನವಾಗಿ ಕಡಲೊಳಗೆ ಮುಳುಗುವ ಆ ಅದ್ಭುತ ದೃಶ್ಯವನ್ನು ನೋಡಿ, ಖುಷಿ ಪಟ್ಟು, ಇನ್ನೇನು
ನಮ್ಮ ತಂಗುದಾಣದತ್ತ ಹೊರಡಬೇಕೆನ್ನುವಷ್ಟರಲ್ಲಿ,ಯಾವ ಮುನ್ಸೂಚನೆ ಇಲ್ಲದೆ, ಟಪ ಟಪನೆ ಮಳೆ ಶುರುವಾಗಿಯೇ ಹೋಯಿತು. ಬಿರು ಬೇಸಿಗೆಯಲ್ಲಿ ಸಂಜೆಯ ಮಳೆ. ಇದ್ದಕ್ಕಿದ್ದಂತೆ ಮಳೆಯ ರಭಸ ಹೆಚ್ಚಾದಾಗ, ಸಂಜೆಯ ಮಬ್ಬು ಗತ್ತಲಿನಲ್ಲಿ,ಆ ಕೂಡಲೇ ಅಲೆಗಳು ನಮ್ಮನ್ನು ನುಂಗುವಂತೆ ಮುಂದೆ ಮುಂದೆ ಬರುತ್ತಿದ್ದರೆ, ನಾವೆಲ್ಲರೂ ಅತ್ಯಂತ ಭಯದಿಂದ, ಮಳೆ ಹನಿಗಳು ಮಧ್ಯದಲ್ಲೆ
ಒದ್ದೆಯ ಬಟ್ಟೆಗಳಲ್ಲೇ ಓಡಿ ಬಂದು ಆಟೋಗಳನ್ನು ಹಿಡಿಯುವಷ್ಟರಲ್ಲಿ, ಸಾಕು ಸಾಕೆನಿಸಿತ್ತು.
ಅಂದು ಮಳೆಯಲ್ಲಿ ಪೂರ್ಣವಾಗಿ ನೆನೆದು, ಬೇಗ ಬೇಗ ಆಟೊದೊಳಗೆ ತೂರಿಕೊಂಡು ನಮ್ಮ ತಂಗುದಾಣ ತಲುಪಿದಾಗ, ಎಲ್ಲರೂ ನಡುಗುತ್ತಿದ್ದೆವು.
ಪ್ರಕೃತಿಯ ಸೌಂದರ್ಯ ಎಷ್ಟು ರಮಣೀಯವೋ ಅಷ್ಟೇ ಭಯಂಕರ ಎನ್ನುವುದು ನಮಗೆ ಅಂದು ಅನುಭವವಾಯಿತು.
