ಕಡಲ ಕಿನಾರೆ
ಕಡಲ ಕಿನಾರೆ
ಸಂಜೆಯ ಸಮಯ,
ತಿಳಿನೀಲ ಬಾನಡಿಯಲ್ಲಿ ಸಮುದ್ರ ದಂಡೆಯ ಮರಳ ಮೇಲೆ ಮೈ ಚಾಚಿ ಮಲಗಿದ್ದಾನೆ ಆತ. ಹಳೆಯ ನೆನಪುಗಳು ಬೇಡವೆಂದರೂ ಮನದ ಕದ ತಟ್ಟಿ ಹಿಂದಿರುಗತ್ತಿವೆ. ಸಮುದ್ರದ ಅಲೆಗಳು ದಡವನ್ನು ಮುಟ್ಟಿ ಹೋಗುವಂತೆ. ಅವಳ ನೆನಪುಗಳ ಸುಳಿಯಿಂದ ಹೊರಬರಲಾಗದೇ ತಾನೇ ಆತ ತನ್ನ ನೆಚ್ಚಿನ ಊರನ್ನು ಬಿಟ್ಟು ಯಾರೂ ಬೇಡವೆಂದು ಇಲ್ಲಿಗೆ ಬಂದಿದ್ದ. ಆದರೂ ಅವಳ ನೆನಪುಗಳಿಂದ ಅವನಿಗೆ ಹೊರಬರಲಾಗುತ್ತಿಲ್ಲ. ನಿಜವೇ ತಾನೆ? ಇಷ್ಟಪಟ್ಟವರನ್ನು ಎಷ್ಟೇ ದೂರ ಮಾಡಿಕೊಳ್ಳುತ್ತೇವೆ ಅಂದರೂ ಅದು ಕಾಡದೇ ಬಿಡದಲ್ಲ. "ಫಸ್ಟ್ ಲವ್ ಈಸ್ ಫಸ್ಟ್ ಲವ್, ವಿ ನೆವರ್ ಫಾರಗೆಟ್ ದೆಟ್" ಅವಳ ಈ ಮಾತುಗಳು ಅವನ ಕಿವಿಯಲ್ಲಿ ಇನ್ನೂ ಗುಂಯ್ ಎನ್ನುತ್ತಿದೆ.
ಅವನು ಅಭಿಜಿತ್. ಮಹತ್ವಾಕಾಂಕ್ಷೆಯನ್ನು ಹೊತ್ತವನು. ಇಂಜಿನಿಯರಿಂಗ್ ಪದವಿ ಮುಗಿಸಿ ತಂದೆ ತಾಯಿಯನ್ನು ಬಿಟ್ಟು ಹೋಗಲಾರದೇ ತಮ್ಮ ಊರಲ್ಲೇ ಚಿಕ್ಕ ಕನ್ಸಟ್ರಕ್ಷನ್ ಕಂಪನಿ ತೆರೆದಿದ್ದ. ಅವನ ಕಂಪನಿಯಲ್ಲಿ ಕೆಲಸಕ್ಕೆಂದು ಸೇರಿದವಳು ಅವಳು ಸಂಜನಾ. ಸ್ನೇಹ ಬೆಳೆದಂತೆಲ್ಲಾ ಪ್ರೇಮ ಶುರುವಾಗಿತ್ತು. ಸ್ನೇಹಿತರು ಪ್ರೇಮಿಗಳಾದರು. ಮನೆಯಲ್ಲಿ ಮದುವೆಯ ಮಾತುಕತೆ ನಡೆಯುತ್ತಿತ್ತು. ಆದರೆ...?! ಮದುವೆ ಆಗಬೇಕಾದ ಹುಡುಗಿ! ಸಂಜನಾ ಮತ್ತು ಅವಳ ಮನೆಯವರು ಬರುತ್ತಿದ್ದ ಟೆಂಪೊ ಒಂದು ಬಸ್‌ಗೆ ಗುದ್ದಿ ಟೆಂಪೊ ಅಲ್ಲೇ ಪಕ್ಕದಲ್ಲಿದ್ದ ಇಳಿಜಾರಿನಲ್ಲಿ ಬಿದ್ದು ಸ್ಪೋಟಗೊಂಡಿತ್ತು. ಟೆಂಪೋದಲ್ಲಿದ್ದವರ‌್ಯಾರೂ ಬದುಕಲಿಲ್ಲ.
ಆಗಿನಿಂದ ಅಭಿಜಿತ್ ತಂದೆ ತಾಯಿಯನ್ನು ಕರೆದುಕೊಂಡು ಆ ಊರನ್ನೇ ಬಿಟ್ಟಿದ್ದ. ಅವನನ್ನು ಮತ್ತೆ ಸಾಮಾನ್ಯವಾಗಿ ಮಾಡಿದವಳು ಅವನ ಹೆಂಡತಿ ಚೈತ್ರ. ಆದರೂ ಮುಸ್ಸಂಜೆಯ ಹೊತ್ತು ಕಡಲ ತೀರದಲ್ಲಿ ಕುಳಿತು ಅವಳ ನೆನಪುಗಳ ಜೊತೆ ಸಂಭಾಷಣೆ ನಡೆಸುತ್ತಲೇ ಇರುತ್ತಾನೆ.
ಅರ್ಣವನೆಸೆಯುವ ಅಲೆಗಳಂತೆ
ನಿನ್ನ ನೆನಪುಗಳು ಗೆಳತಿ
ಕಳೆದವು ಕೆಲವು ಚಣಗಳಾದರೂ
ನೆನಪುಗಳು ಹಲವು ವರುಷಗಳಿಗಾಗುವಷ್ಟು
ಕಡಲ ತೀರದಲ್ಲಿ ಮುಸ್ಸಂಜೆಯ
ಕೆಂಪು ಬಾನನ್ನು ನೋಡುವಾಗೆಲ್ಲ
ನಿನ್ನ ಕೆಂಪು ಗಲ್ಲವೇ ನೆನಪಾಗುವುದು
ನೀ ಇನ್ನು ಬರಲಾರೆಯೆಂಬ
ನೆನಹು ನನಗಿದ್ದರೂ
ಕಾಯುತ್ತಿರುವೆ ನಾ
ಈ ಕಡಲತೀರದಲ್ಲಿ....

