STORYMIRROR

Swati Hegde

Abstract Tragedy Action

4  

Swati Hegde

Abstract Tragedy Action

ಮುರಿದ ಸಂಬಂಧ

ಮುರಿದ ಸಂಬಂಧ

3 mins
419

    ಕೇರಿ ಕರೆಯಲು ಅವರೆಲ್ಲರ ಜೊತೆ ನಾನು ಹೋಗಿದ್ದೆ. ಅದೂ ಚಿಕ್ಕಮ್ಮನ ಒತ್ತಾಯಕ್ಕೆ ಮನಸ್ಸಿಲ್ಲದ ಮನಸಿಂದ. ಅಣ್ಣನ ಮದುವೆಯ ಸಂಭ್ರಮ. ಮದುವೆ ಹಳ್ಳಿಯಲ್ಲಾಗಿದ್ದರಿಂದ ನಮ್ಮ ಕಡೆ ಸಂಪ್ರದಾಯದಂತೆ ನಾಂದಿಯ ದಿನ ಬೆಳಿಗ್ಗೆ ನಮ್ಮ ಊರಿನ ಕೇರಿ ಕರೆಯುವುದು ವಾಡಿಕೆ. ಅಂತೆಯೇ ಅವರೆಲ್ಲರ ಜೊತೆ ನಾನೂ ಹೊರಟಿದ್ದೆ. ಅಣ್ಣನ ಬಿತ್ತಕ್ಕಿ ನಾನೇ ಹಿಡಿಯುವವಳಾಗಿದ್ದರಿಂದ ಮುಂಚೂಣಿಯಲ್ಲಿ‌ ನಿಂತಿದ್ದೆ.


ಮೊದಲ ಮನೆ ಭಟ್ಟಜ್ಜನ ಮನೆಯಿಂದ ಕೊನೆಯ ಮನೆ ಪಟೇಲಜ್ಜನ ಮನೆಯ ತನಕ‌ ಒಟ್ಟೂ ಹತ್ತು ಮನೆಗೆ ಹೋಗಿ ನಾಂದಿಗೆ, ಮದುವೆಗೆ, ಮರುದಿನದ ಹೋಮಕ್ಕೆ ಎಲ್ಲಾ ಬೆಳಿಗ್ಗೆ ತಿಂಡಿಯಿಂದ ರಾತ್ರಿ ಊಟಕ್ಕೆ ಎಲ್ಲಾ ನಮ್ಮನೆಗೆ ಬನ್ನಿ ಎಂದು ಕರೆಯುತ್ತಾ ಇದ್ದೆವು. 

 ಕೊನೆಯ ಮನೆಗೆ ನಾನು ಬರುವುದಿಲ್ಲ, ನೀವೇ ಹೋಗಿ ಬನ್ನಿ ಎಂದು ಅತ್ತೆಯ ಬಳಿ‌ ಹೇಳಿ ಕುಳಿತಿದ್ದೆ. "ಎಂತಕ್ಕೆ ಮಾರಾಯ್ತಿ, ಅಲ್ಲಿ‌ ಬಂದ್ರೆ ಎಂತಾ ಆಗ್ತು ನಿಂಗೆ" ಎಂದು ಅತ್ತೆ ಮರು ಪ್ರಶ್ನೆ ಹಾಕಿದ್ದರು. "ಅತ್ತೆ ವಿಷ್ಯ ಗೊತ್ತಿದ್ಕಂಡು ಎಂತಕ್ಕೆ ಕೇಳ್ತ್ಯಲೆ?" ಎಂದಿದ್ದೆ ನಾನು. "ಆತು ಬರಡ, ಇಲ್ಲೇ ಕೂತ್ಕ. ಜನರನ್ನ ಎದ್ರಸವು. ಅದು ಬಿಟ್ಟಿಕ್ಕಿ ಹೆದ್ರಿ ಮೂಲೆ ಗುಂಪಾಪ್ಪದಲ್ಲ" ಎಂದರು. "ಅತ್ತೆ ನಂಗೆ ಮನಸಿಗೆ ನೋವಾಗ್ತೆ" ಎಂದಿದ್ದೆ ನಾನು. "ಹೌದೇ ಕೂಸೆ, ನಂಗೆ ನಿನ್ನ ಮಾವನ ಸಂತಿಗೆ ಡೈವೋರ್ಸ್ ಕೊಡ್ಸಿ ಇನ್ನೊಂದು ಮದ್ವೆ ಮಾಡ್ಸಿ, ಅವನೆದ್ರಿಗೇ ರಾಜಾರೋಷವಾಗಿ ಓಡಾಡ ಧೈರ್ಯ ತುಂಬಿದ ಕೂಸು ನೀನೇ ಅಲ್ದನೇ? ಮತ್ತೆ ಯಾರೋ ಮಾಡಿದ ತಪ್ಪಿಗೆ ನೀ ಎಂತಕ್ಕೆ ತಲೆ ತಗ್ಗಿಸಿ ಕೂತ್ಕತ್ತೆ?" ಅತ್ತೆ ಧೈರ್ಯ ತುಂಬುತ್ತಿದ್ದರು. 


    ಅತ್ತೆಯ ಮದುವೆಯ ಕತೆ ಒಂದು ಗೋಳು. ಮಕ್ಕಳಾಗಲಿಲ್ಲ ಅಂತ ದಿನವೂ ಅತ್ತೆಗೆ ಹೊಡೆಯುತ್ತಿದ್ದ ನನ್ನ ಸೋ‌ಕಾಲ್ಡ್ ಮಾವ. ತೊಂದರೆ ಅವನಲ್ಲಿಟ್ಟುಕೊಂಡು ಅತ್ತೆಗೆ ಬಡಿಯುತ್ತಿದ್ದ. ನಾನಾಗ ಫಸ್ಟ್ ಪಿಯುಸಿ ಓದುತ್ತಿದ್ದೆ. ಯಾಕೋ ಅವಳ ನೋವು ನಂಗೆ ತುಂಬಾ ಹಿಂಸೆ ಅನಿಸುತ್ತಿತ್ತು. ಅತ್ತೆಯನ್ನ ಒಮ್ಮೆ ಶಿರಸಿಗೆ ಕರೆಸಿ ಅಲ್ಲಿ ಹೋಗಿ ಅವಳ ತಾಯ್ತನದ ಬಗ್ಗೆ ಚೆಕ್ ಮಾಡಿಸಿಕೊಂಡು ಬಂದದ್ದೂ ಆಗಿತ್ತು. ಆಗ ನಾನೇ ಅಪ್ಪನ ಬಳಿ ಎಲ್ಲಾ ವಿಷಯವನ್ನೂ ಹೇಳಿ, ಅತ್ತೆಗೆ ಡೈವೋರ್ಸ್ ಅಪ್ಲೈ ಮಾಡಲು ಹೇಳಿ ಅತ್ತೆಯ ಬಟ್ಟೆ ಬರೆ ಎಲ್ಲಾ ಪ್ಯಾಕ್ ಮಾಡಿಕೊಂಡು ನಮ್ಮ ಮನೆಗೆ ಕರೆ ತಂದಿದ್ದೆ. ಹಳ್ಳಿಯಲ್ಲಿದ್ದ ಚಿಕ್ಕಪ್ಪ ಚಿಕ್ಕಮ್ಮಂದಿರೆಲ್ಲಾ ನಂಗೆ ಬೈದು ರಾಜಿ‌ಸಂಧಾನ ಮಾಡ್ಕೊಳೋದು ಬಿಟ್ಟು ಹೀಗೆ ಮಾಡೋದಾ ಅಂತೆಲ್ಲಾ ಬೈದಿದ್ದರು. ಅತ್ತೆಯ ಡೈವೋರ್ಸ್ ಆಗಿ ಅವರಿಗೆ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಿದ್ದೇ ನನ್ನ ತಂದೆ ತಾಯಿ. ಅವಳೀಗ ಸುಖಿ ಸಂಸಾರಿ. ಒಂದು ಗಂಡು ಮಗುವೂ ಇದೆ. ಅವನೋ "ನನ್ನ ಹೆಂಡತಿ ನೀನೇಯಾ ಅತ್ಗೆ" ಹೇಳಿ ನಾನಿದ್ದರೆ ನನ್ನ ಹಿಂದೆ ಮುಂದೆಯೇ ಸುತ್ತುತ್ತಾನೆ.

    "ಕೂಸೆ, ಎಲ್ಲಿ ಕಳ್ದಹೋದೇ? ನಿನ್ನ ಮದ್ವೆ ಅಪ್ಪಲೇ ಆ ಮಾಣಿಗೆ ಯೋಗ ಇತ್ತಿಲ್ಲೆ ಹೇಳಿ ತಿಳ್ಕ. ಅವ ಬೇರೆ ಕೂಸಿಗೋಸ್ಕರ ನಿನ್ನ ಬಿಟ್ಟಿಕ್ಕೆ ಓಡಿಹೋದ್ರೆ ನೀ ಎಂತಾ ಮಾಡಲಾಗ್ತು?" ಅತ್ತೆ ಅಷ್ಟು ಹೇಳಲು ಎದುರಿನಿಂದ ಆ ಹುಡುಗ ಬರಲು ಸರಿ ಹೋಗಿತ್ತು. ಅವನು ತಲೆ‌ತಗ್ಗಿಸಿ ನಿಂತಿದ್ದ. "ಮದ್ವೆ ಆಗು ನಮ್ಮನೆ ಕೂಸನ್ನ ಹೇಳಿ ಯಾರೂ ನಿನ್ನ ಕಾಲಿಗೆ ಬಿದ್ದಿದ್ವಿಲ್ಲೆ ನಂಗ, ನಿಮ್ಮನಿಂದನೇ ಸಂಬಂಧ ಬಂದಿತ್ತು. ಆದ್ರೂ ನೀನು ಮದ್ವೆ ದಿನ ಹಂಗೆ ಮಾಡಿದ್ದು ಸರಿ ಅಲ್ಲ ಆತ್ರೇಯ" ಎಂದು ಅತ್ತೆ ಅವನ ಮೇಲೆ ಹರಿಹಾಯ್ದಿದ್ದರು. "ಅತ್ತೆ ಅಣ್ಣನ ಮದ್ವೆಗೆ ಕರ್ಯಲೆ ಬಂಜ್ಯ ಆ ಕೆಲಸ ಮುಗಸ್ಕ ಹೋಪನ ಬಾ" ಎಂದು ಅತ್ತೆಯ ಕೈ ಹಿಡಿದು ಜಗ್ಗಿ ಅವರ ಮನೆಯೊಳಗೆ ನುಗ್ಗಿದ್ದೆ. ಆತ್ರೇಯನ ತಾಯಿ ನನ್ನ ಕಂಡಿದ್ದೇ ಕೈ ಮುಗಿದಿದ್ದರು "ಶಾಂತತ್ತೆ ನಾಳೆ ಅಣ್ಣನ ಮದ್ವೆ. ಇವತ್ತು ನಾಳೆ ನಾಡಿದ್ದು ಎಲ್ಲರೂ ಮುದ್ದಾಂ ನಮ್ಮನಿಗೇ ಬರವು. ಆಸ್ರಿ ಊಟ ಎಲ್ಲಾ ನಮ್ಮನೆಲ್ಲೆಯಾ, ನಿಮ್ಮನೆಲ್ಲಿ ಒಲೆ ಉರಸಡಿ ಮತ್ತೆ. ಮುದ್ದಾಂ ಬನ್ನಿ" ಎಂದು ನಗುತ್ತಾ ಕರೆದಿದ್ದೆ. "ಸಂಧ್ಯೆ, ನೀನು ಆ ಮಾಣಿ ಮಾಡಿರ ಕೆಲಸಕ್ಕೆ ತಲೆ ತಗ್ಗಸವು ಹೇಳಿಲ್ಯೆ. ಅದು ಅವನ ಹಣೆಬರಹ. ಎಂತಾ ಮಾಡಲೂ ಆಗ್ತಿಲ್ಲೆ. ನೀನು ಯಾವತ್ತಿದ್ರೂ ನಂಗಳೂರಿನ ಹೆಮ್ಮೆ" ಎಂದಿದ್ದರು. ಯಾಕಂದ್ರೆ ನಮ್ಮೂರಿನಲ್ಲೇ ಮೊದಲ ಹುಡುಗಿ ನಾನು ಡಾಕ್ಟರ್ ಆದವಳು. ಅಲ್ಲೇ ಆತ್ರೇಯನ ಹೆಂಡತಿ ಕೂಡಾ ಇದ್ದಳು. ನೋವಿನ ಸಂಗತಿ ಅಂದರೆ ಆಕೆ ನನ್ನ ಪ್ರಾಣ ಸ್ನೇಹಿತೆ. "ಶುಭಾ ಮುದ್ದಾಂ ಬಾ. ಆತ್ರೇಯಂಗೂ ಹೇಳು. ಶಾಂತತ್ತೆ ಪಟೇಲಜ್ಜಂಗೆ ಹೇಳೆ" ಎಂದು ನಾನು ಅಲ್ಲಿಂದ ಹೊರಬಿದ್ದಿದ್ದೆ. ಅವರ ಮನೆಯ ಸಂಕದ ತನಕ ಅದು ಹೇಗೆ ನಡೆದುಬಂದೆ ಎಂದೇ ತಿಳಿಯಲಿಲ್ಲ. ಒಮ್ಮೆ ಉಸಿರು ಹೊರದಬ್ಬಿದೆ. ಅತ್ತೆ ನನ್ನ ಮುಖ ನೋಡಿ ನಕ್ಕಿದ್ದರು. "ಸಾಕು ಸಾಕು ಬಾ ಅತ್ತೆ. ಮನಿಗೆ ಹೋಪನ. ಇಲ್ದಿದ್ರೆ ನನ್ನ ಪುಟೀ ಗಂಡ ಸಂಧ್ಯೆ ಬೇಕು ಹೇಳಿ ಹಟ ಹಿಡಿತಾ. ಅವ ಎದ್ಕಂಬದ್ರೊಳಗೆ ಅಲ್ಲಿರವು ನಾವು" ಎಂದು ಮನೆಯ ಕಡೆ ಹೆಜ್ಜೆ ಹಾಕಿದ್ದೆವು. ಆತ್ರೇಯನ ಜೊತೆ ಮದುವೆ ಗೊತ್ತಾದಾಗಿನಿಂದ, ತಿರುಗಿದ ತೋಟ, ಗದ್ದೆ, ಹಳ್ಳಗಳೆಲ್ಲಾ ನನ್ನ ನೋಡಿ‌ ನಕ್ಕಂತೆ ಭಾಸವಾಯ್ತು. ಒಂದು ಮದುವೆ ಮುರಿದುಬಿದ್ದರೆ, ಗಂಡಿನ ತಪ್ಪಿದ್ದರೂ ಹೆಣ್ಣೇ ಕಾರಣ ಎಂಬ ಈ ಸಮಾಜದಲ್ಲಿ ನನ್ನ ಮನೇ, ಊರು, ಕೇರಿಯವರು ಬೇರೆಯೇ ತರಹ. "ಅವ ನಾಲಾಯಕ್ ಇದ್ದಿದ್ದ ನೀ ಹೆದ್ರಡ ಸಂಧ್ಯೆ. ನಿಂಗೆ ಇನ್ನೂ ಚಲೋ ಗಂಡು ನೋಡಿ ಮದ್ವೆ ಮಾಡನ" ಎನ್ನುತ್ತಿದ್ದರು. ನಾನು ನಕ್ಕು, ತಲೆಯಾಡಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದೆ.


    


Rate this content
Log in

Similar kannada story from Abstract