ಕಾರ್ಮೋಡ
ಕಾರ್ಮೋಡ
ಸುತ್ತಲೂ ಕಾರ್ಮೋಡ, ಇನ್ನೇನು ಯಾವ ಗಳಿಗೆಯಲ್ಲಿ ಬೇಕಾದರೂ ಮಳೆ ಧುಮುಕಿ ರಭಸವಾಗಿ ಧರೆಗೆ ಇಳಿದು ಬೀಳಬಹುದು. ಸುಂದರವಾದ ಸಂಜೆಯಲ್ಲಿ ಪ್ರಕೃತಿಯ ಚಿತ್ತಾರವನ್ನು ನೋಡುತ್ತಾ ಬಾಲ್ಕನಿಯಲ್ಲಿ ಕುಳಿತಿದ್ದಳು ಸುರಭಿ. ಅವಳ ಮನದಲ್ಲೂ ಕರಗದ ಕಾರ್ಮೋಡ ಮಡುಗಟ್ಟಿದೆ. ಅವಳ ಮನದೊಳಗೆ ಅವಳ ಪತಿ ಸೂರಜ್ ಗುಡುಗಿದ ಸಿಟ್ಟಿನ ಮಾತುಗಳು
ಬಲವಾಗಿ ಘನೀಕರಿಸಿದೆ . ಮಾತನಾಡದೇ ಯಾವಾಗಲೂ ಮೌನವಾಗಿ ರುವ ಅವನೊಳಗೇ ಅದೇನು ಭಾವನೆಗಳಿವೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ಅವನು ಬಾಯಿ ತೆಗೆದರೆ,ಆಕ್ರೋಶದ ಮಾತುಗಳು. ತನ್ನದೇ ಮೂಗಿನ ನೇರಕ್ಕೆ ಇಡೀ ಪ್ರಪಂಚ ನಡೆಯಬೇಕೆಂದು ಬಯಸುವ ಸ್ವಲ್ಪ ಸ್ವಾರ್ಥಿಯೇ ಆಗಿರುವ ಸೂರಜ್ ನ ಜೊತೆ ಅವನ ಮನದ ಇಚ್ಛೆ ಅನುಗುಣವಾಗಿ ನಡೆದು ಸಾಕಾಗಿ ಹೋಗಿರುವ ಸುರಭಿ, ಒಮ್ಮೊಮ್ಮೆ ಅವನ ಕೋಪಕ್ಕೆ ಗುರಿಯಾಗುತ್ತಿರುತ್ತಾಳೆ. ತನ್ನವರ ಬಗ್ಗೆ ನಿರ್ಭಾವುಕನಾಗಿ ಸದಾ ತನ್ನದೇ ಸರಿ ಎಂದು ಗುಡುಗಾಡುವ ಸೂರಜ್ ನ ಕಲ್ಲು ಹೃದಯ ಎಂದಾದರೂ ಕರಗಿ ಮೆದುವಾಗುವುದೇ? ಎಂದು ಕಾದು ಕಾದು ವರುಷಗಳು ಉರುಳಿ ಹೋಗುತ್ತಿವೆ.
ಹಿಂದಿನ ರಾತ್ರಿ ನಡೆದ ವಾದ ವಿವಾದಗಳಲ್ಲಿ ಅವನ ವಿತಂಡವಾದವೇ ಗೆದ್ದಾಗ ,ಸುರಭಿಯ ಮನದಾಳದ ದುಗುಡ ಮೋಡ ಮಡುಗಟ್ಟಿ ನಿಂತಿದೆ.
ಅವಳು ಇನ್ನೇನು ಕರಗುವ ಕಾರ್ಮೋಡವನ್ನೇ ನೋಡುತ್ತಾ,
"ಎಲೈ ಮೋಡಗಳೇ, ನೀವು ಕರಗಿ ಕೆಳಗಿಳಿದು ನೀರಾಗಿ ಹರಿಯುವಂತೆ, ನನ್ನ ಗಂಡನ ಹೃದಯದಲ್ಲಿ ಹೆಪ್ಪು ಗಟ್ಟಿರುವ ಭಾವಗಳು ಮೆದುವಾಗಿ ಹರಿಯುವಂತೆ ಆಗಬಾರದೇ?"
ಎಂದು ನಿಡುಸುಯ್ಯುತ್ತಾ ಇರುವಾಗ ಪಟಪಟನೆ ಮಳೆ ಸುರಿಯಲು ಪ್ರಾರಂಭವಾದಾಗ ಆ ಮಳೆ ನೀರಿಗೆ ಕೈಯೊಡ್ಡಿ ನಿಂತು ,ಸಂಭ್ರಮಿಸುತ್ತಾಳೆ.