Chethana Bhargav

Classics Inspirational Thriller

4.5  

Chethana Bhargav

Classics Inspirational Thriller

ಕಾರ್ಗಿಲ್ ಕಥನ

ಕಾರ್ಗಿಲ್ ಕಥನ

2 mins
235


ಈ ಸಾರಿ ಚಳಿಗಾಲದಲ್ಲಿ ಬಿದ್ದ ದಟ್ಟ ಹಿಮ ಬೇಗನೆ ಕರಗುತ್ತಿರುವ ಲಕ್ಷಣ ಕಾಣುತಿತ್ತು.ಹಿಮವಾಗಿದ್ದ ಸರೋವರದಲ್ಲಿ ಹನಿ ನೀರು ತೊಟ್ಟಿಕ್ಕುವ ಸದ್ದು. ಅದೆಲ್ಲೋ ದೂರದಲ್ಲಿ ನಿರ್ಗಲ್ಲು ಕರಗಿದ ಸದ್ದು.ಶಿಬಿರದಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮ ತುಕಡಿಯ ಸದಸ್ಯರಿಗೆ ಏಕೋ ಎಲ್ಲವೂ ಎಂದಿನಂತಿಲ್ಲ ಎನಿಸುತ್ತಿತ್ತು. ಮುಂಜಾವು ಕಳೆದು ಒಂದು ಬಿಸಿಯಾದ ಟೀ ಕುಡಿದು ಕುಳಿತಿದ್ದೆವು.ಹಠಾತ್ತಾಗಿ ಬಂದು ಎರಗಿತು ಸುದ್ದಿ . ಸರಹದ್ದಿನ ಆಯಕಟ್ಟಿನ ಪರ್ವತ ಪ್ರದೇಶದಲ್ಲಿ ಮನುಷ್ಯರ ಚಟುವಟಿಕೆಗಳನ್ನು ಗಮನಿಸಿದ ಕುರಿಗಾಹಿಯೊಬ್ಬ ಸುದ್ದಿ ಅರುಹಿದ್ದ.ಶಿಬಿರದಲ್ಲಿ ಹಠಾತ್ ಚಲನವಲನಗಳು ಜೋರಾಗಿತ್ತು.ಚಳಿಗಾಲ ಮುಗಿಯುವ ಮೊದಲೇ ಹಿಮ ಮುಸುಕಿದ ಶಿಬಿರಗಳನ್ನು ಶತ್ರುದೇಶದ ಭಯೋತ್ಪಾದಕರು (ಪಾಕಿಸ್ತಾನಿ ಸೈನ್ಯದ ಸಹಕಾರದೊಂದಿಗೆ) ಆಕ್ರಮಿಸಿದ್ದಾರೆ ಎಂಬ ವಾರ್ತೆ ಖಚಿತವಾಗಿತ್ತು.ನಿನ್ನೆ ರಾತ್ರಿಯ ವಿಲಕ್ಷಣ ಭಾವ ನಿಜವಾದ ರೀತಿ ನನಗೆ ಅಚ್ಚರಿ ತರಿಸಿತ್ತು.

      ಅದಾಗಲೇ ಬಂದಿತ್ತು ಆದೇಶ ನಮ್ಮ ತುಕಡಿಗೆ ಸರಹದ್ದಿನಲ್ಲಿ ಗಸ್ತು ತಿರುಗಿ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಒಪ್ಪಿಸುವ ಕೆಲಸ. ನಮ್ಮ ಬಂದೂಕುಗಳನ್ನು ಸರಿಮಾಡಿಕೊಂಡು ಹತ್ತು ಜನರಿದ್ದ ನಮ್ಮ ತುಕಡಿ ಸರಹದ್ದಿಗೆ ಸಮೀಪವಾಗಿತ್ತು. ಬಂಡೆಯ ಆಚೆ ಆಗಸವನ್ನೇ ಚುಂಬಿಸುವ ಹಿಮ ಪರ್ವತ . ಅದನ್ನು ಸುತ್ತಿ ಬಳಸಿ ಗಸ್ತು ತಿರುಗಬೇಕು. ಎರಡು ಹೆಜ್ಜೆ ಮುಂದಿಟ್ಟಿದ್ದೇ ದಢಾರನೆ ಸಿಡಿಯಿತು ಸದ್ದು.

    ಪರ್ವತದ ಮೇಲಿನಿಂದ ಒಂದೇ ಸಮನೆ ಗುಂಡಿನ ಮಳೆ. ನನ್ನ ಜೊತೆಗಾರರು ಹಲವರು ಏನಾಗುತ್ತಿದೆ ಎಂದು ಅರಿಯುವಸ್ಟರಲ್ಲಿ ಧರಾಶಾಯಿಗಳಾಗಿದ್ದರು.

   ಸಿಕ್ಕ ಬಂಡೆಯ ಮರೆಯಲ್ಲಿ ನಾನು ಗುಂಡುಹಾರಿಸ ತೊಡಗಿದೆ. ನನ್ನ ಜೊತೆಗಾರ ರೆಡಿಯೋಸೆಟ್ ನಿಂದ ಮುಖ್ಯ ಶಿಬಿರವನ್ನು ಸಂಪರ್ಕಿಸಿ ಆಗಿರುವ ಪರಿಸ್ಥಿತಿಯನ್ನು ವಿವರಿಸಲು ಹೆಣಗುತ್ತಿದ್ದ. ಗುಂಡಿನ ದಾಳಿ ಭಾರತ ದೇಶದ ನಮ್ಮ ಭೂ ಪ್ರದೇಶದಲ್ಲೇ ಆಗಿತ್ತು. ಕವರಿಂಗ್ ಫೈರ್ ಕೊಡುತ್ತಿದ್ದ ನಾನು ಗುರಿ ಸಾಧಿಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದು ಹಾಕಿದೆ. ಆಗ ಸಿಡಿಯಿತು ದುಷ್ಮನ್ ನ ಗ್ರೇನೇಡ್. ತಕ್ಷಣದಲ್ಲೇ ರೇಡಿಯೋಸೆಟ್ ಚೂರಾಗಿತ್ತು. ನನ್ನ ಜೊತೆಗಾರ ಹೆಣವಾಗಿದ್ದ. ಗ್ರೇನೆಡ್ ಚೂರುಗಳು ನನ್ನ ಮುಂಗಾಲುಗಳನ್ನು ಸೀಳಿ ಹಾಕಿದ್ದವು. ಹತ್ತಿರವಿದ್ದ ಇಬ್ಬರ ಸಹಾಯದಿಂದ ಫೈರಿಂಗ್ ಮಾಡುತ್ತಾ ತೆವಳುತ್ತಾ ಹಿಂದೆ ಬಂದು ಬೆಂಗಾವಲಿಗೆ ಬರುತ್ತಿದ್ದ ತುಕಡಿಗೆ ಕೈ ಬೀಸಿ ಕರೆದಿದ್ದೆ ಅದೇ ನನ್ನ ಕೊನೆಯ ನೆನಪು.

     ನಂತರ ನಾನು ಕಣ್ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಕಾಲಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿದ್ದರು. ನಮ್ಮ ಮೇಲಾದ ಗುಂಡಿನ ದಾಳಿ ಶತ್ರುದೇಶದ ನೀಚತನವನ್ನು ಬಯಲು ಮಾಡಿತ್ತು. ಕಾರ್ಗಿಲ್ ಕದನ ಬಾಯ್ದೆರೆದಿತ್ತು. ಮೊದ ಮೊದಲಂತೂ ನಮ್ಮ ಸೈನಿಕರಿಗೆ ನನಗಾದ ಪರಿಸ್ಥಿತಿಯೇ ಕಾರ್ಗಿಲ್,ದ್ರಾಸ್ ಬಟಾಲಿಕ್ ಗಡಿಗಳಲ್ಲಿ ಅಗ್ನಿವರ್ಷ. ಭೋಫೊರ್ಸ್ ಭೋರ್ಗರೆದಿತ್ತು .ಹಲವು ಜೊತೆಗಾರರ ಬಲಿದಾನದ ನಂತರ ಯುದ್ಧ ನಮ್ಮ ಕಡೆ ತಿರುಗಿತ್ತು. ಟೊಲೊಲಿಂಗ್,ಟೈಗರ್ ಹಿಲ್ ಮುಂತಾಗಿ ಆಯಕಟ್ಟಿನ ಪ್ರದೇಶಗಳಲ್ಲಿನ ದುಷ್ಮನ್ ನಮ್ಮ ಸೈನಿಕರ ವೀರಾವೇಶದ ಮುಂದೆ ಮಂಡಯೂರಿ ಹತನಾಗಿದ್ದ ಕಾರ್ಗಿಲ್ ಯುದ್ದ ವಿಜಯ ಮಾಲೆಯನ್ನು ಭಾರತಮಾತೆಗೆ ಸೈನಿಕರು ತೊಡಸಿದ್ದರು.

   ಆಸ್ಪತ್ರೆಯಿಂದ ಬಿಡುಗಡೆಯಾದ ನನಗೆ ವೀರಚಕ್ರ ಘೋಷಣೆಯಾದ ಪತ್ರವನ್ನು ಕೊಡಲಾಯಿತು. ಅದರ ಅಕ್ಷರಗಳಲ್ಲಿ ನನ್ನ ಜೊತೆಗಾರರ ನೆತ್ತರಿನ ಬಿಂದುಗಳೇ ಕಂಡಂತಾಯಿತು. ತಾಯಿ ಭಾರತಿಯ ಮಾನಕಾಯ್ದ ನನ್ನ ಸಹ ಸೈನಿಕರ ಬಲಿದಾನ ಎಂದೂ ಅಮರ ಎಂದು ಗದ್ಗದಿತನಾದೆ.

    ಒಬ್ಬ ವೀರ ಯೋಧ ಕಾರ್ಗಿಲ್ ಯುದ್ಧದ ವಿಜಯೋತ್ಸವದ ದಿನ ಯುದ್ಧದ ಸಂದರ್ಭ ದಲ್ಲಿ ನಡೆದ ಘಟನೆಗೆಳನ್ನು ಮೆಲುಕು ಹಾಕುತ್ತಾ ತನ್ನ ಪದಕಕ್ಕೆ ಸೆಲ್ಯೂಟ್ ಹೊಡೆದು ಯುದ್ಧದ ಗೆಲುವಿನ ದಿನವನ್ನು ಸಂಭ್ರಮಿಸಿದನು.


Rate this content
Log in

Similar kannada story from Classics