Chethana Bhargav

Classics Inspirational Others

3.4  

Chethana Bhargav

Classics Inspirational Others

ಅನುಮಾನ

ಅನುಮಾನ

3 mins
283



ಪದ್ಮಿನಿಗೆ ತಾನು ಹೆಚ್ಚಾಗಿ ಓದಿಲ್ಲ ತನ್ನ ಗಂಡನ ವಿದ್ಯಾರ್ಹತೆಗೆ ತಾನು ಸರಿಯಾದವಳಲ್ಲ ಎಂಬ ಮನೋಭಾವ ಸುಪ್ತವಾಗಿತ್ತು. ಆದರೆ ಅವಳ ಪತಿ ದರ್ಶನ್ ಅವಳನ್ನು ಬಹಳ ಪ್ರೀತಿಯಿಂದ ಗೌರವದಿಂದ ಆದರಿಸುತ್ತಿದ್ದ. ದೊಡ್ಡ ಸಾಫ್ಟ್ವೇರ್ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ದರ್ಶನ್ ಬಹಳ ಜವಾಬ್ದಾರಿಯುತ ಸ್ಥಾನವನ್ನು ಹೊಂದಿದ್ದ.


ಪದ್ಮಿನಿಗೆ ತನ್ನ ಗಂಡನ ಕೆಲಸದ ಬಗ್ಗೆ ಅರಿವಿತ್ತಾದರೂ ಪೂರ್ಣ ಅವಗಾಹನೆಯಿರಲಿಲ್ಲ. ಆದರೆ ಆಕೆ ಒಳ್ಳೆಯ ಗೃಹಿಣಿ. ಮನೆಕೆಲಸಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುತ್ತಿದ್ದಳು. ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸುತ್ತಿದ್ದಳು. ದರ್ಶನ್ ಗೆ ಈ ಬಗ್ಗೆ ಹೆಮ್ಮೆ ಇತ್ತು. ಆದರೆ ವೈಚಾರಿಕ ಸ್ವಭಾವದ ಈತ ಹೆಣ್ಣು ಮಕ್ಕಳು ಕೂಡ ಹೊರಗೆ ದುಡಿಯಬೇಕು, ಆರ್ಥಿಕವಾಗಿ ಸಬಲರಾಗಿ ಸ್ವತಂತ್ರವಾಗಿರಬೇಕು, ಎಂಬ ಅಭಿಲಾಷೆಯನ್ನು ಹೊತ್ತಿದ್ದ. ಲೋಕಾಭಿರಾಮವಾಗಿ ಮಾತಾಡುತ್ತಾ ಕೆಲವೊಮ್ಮೆ ಅತಿಥಿಗಳ ಮುಂದೆ ,ಸ್ನೇಹಿತರ ಮುಂದೆ ಪ್ರಸ್ಥಾಪಿಸಿಯೂ ಇದ್ದ. ಆದರೆ ಅದು ಆತನ ವೈಯುಕ್ತಿಕ ನಿಲುವಾಗಿತ್ತು. ಪದ್ಮಿನಿಯ ಕುರಿತಾಗಿರಲಿಲ್ಲ. ಈ ವಿಚಾರಗಳನ್ನು ಅವಳಿಗೆ ಆತ ಹೇಳಿಯೂ ಇರಲ್ಲಿಲ್ಲ , ತನ್ನ ವಿಚಾರಗಳನ್ನು ಬೇರೆಯವರ ಮೇಲೇ ಹೇರುವ ಸ್ವಭಾವವೂ ಆತನದಾಗಿರಲಿಲ್ಲ.


ಆದರೆ ಪದ್ಮಿನಿಗೆ ಆ ಮಾತುಗಳು ತನ್ನ ಕುರಿತೇ ಆಡಿದ್ದಿರಬಹುದು ಎಂಬ ಸಣ್ಣ ಅನುಮಾನ ಏಳಲಾರಂಭಿಸಿತು. ತಾನು ಹೆಚ್ಚು ಓದಿಲ್ಲ , ಕೆಲಸಕ್ಕೆ ಹೋಗುತ್ತಿಲ್ಲವಾದ್ದರಿಂದ ದರ್ಶನ್ ಗೆ ನನ್ನ ಬಗ್ಗೆ ಕೊಂಚ ಅನಾದರವಿರಬಹುದು ಎಂದು ಅನಿಸಲಾರಂಬಿಸಿತು. ಅದರಲ್ಲೂ ಇತ್ತೀಚೆಗೆ ದರ್ಶನ್ ಗೆ ಆಫೀಸಿನಲ್ಲಿ ಕೆಲಸದ ಒತ್ತಡ ವಿಪರೀತವಾಗಿ ಮನೆಗೆ ಬರುವಾಗ ವಿಪರೀತ ದಣಿದಿರುತ್ತಿದ್ದ. ಪದ್ಮಿನಿಯ ಜೊತೆ ಸಾವಾಕಾಶವಾಗಿ ಕೂತು ಮಾತನಾಡಲು ಅವನಿಗೆ ಸಮಯ ಸಿಗುತ್ತಿರಲಿಲ್ಲ. ಇದರಿಂದ ಪದ್ಮಿನಿಗೆ ಆಕೆಯ ಮನದಲ್ಲಿ ಮೂಡಿದ್ದ ಅನುಮಾನದ ಬಿರುಕು ಅಗಲವಾಗುತ್ತಲೇ ಹೋಯಿತು. ಇದಕ್ಕೆಲ್ಲ ಪುಷ್ಟಿಕೊಡುವಂತೆ ಒತ್ತಡ ಮಧ್ಯೆ ಏನೋ ಕೇಳಲು ಬಂದ ಪದ್ಮಿನಿಯ ಮೇಲೆ ದರ್ಶನ್ ಆಫೀಸ್ ಕೆಲಸದ ಒತ್ತಡ ನಿನಗೆ ಹೇಗೆ ಗೊತ್ತಾಗಬೇಕು ಎಂದು ಒಂದೆರಡು ಬಾರಿ ಸಣ್ಣಗೆ ರೇಗಿದ್ದ. ಇದರಿಂದ ಒಳಗೊಳಗೆ ಪದ್ಮಿನಿ ತಾನು ಗೃಹಿಣಿಯಾಗಿ ಮನೆಯಲಿರುವುದೇ ಕಾರಣವೆಂದು ಬಲವಾಗಿ ಅಂದುಕೊಂಡಳು


ಈ ಮಧ್ಯೆ ಪದ್ಮಿನಿಯ ಹುಟ್ಟು ಹಬ್ಬ ಸಮೀಪಿಸುತ್ತಿತ್ತು. ಆಕೆಗೆ ಈಗಲಾದರೂ ದರ್ಶನ್ ಸಮಯ ಮಾಡಿಕೊಂಡು ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿ ತನ್ನ ಜೊತೆ ಸಮಯ ಕಳೆಯುತ್ತಾನೆಂದು ಹಂಬಲಿಸುತ್ತಿದ್ದಳು. ಈ ಮಧ್ಯೆ ದರ್ಶನ್ ಆಫೀಸು ಕೆಲಸದ ಮಧ್ಯೆ ಫೋನ್ ನಲ್ಲಿ ಮಗ್ನನಾಗಿರುತ್ತಿದ್ದ. ಶರಣ್ಯ ಎಂಬ ಹುಡುಗಿಯ ಕಡೆಯಿಂದ ಪದೇ ಪದೇ ಕರೆ ಬರುತ್ತಿತ್ತು. ಹಾಗೂ ಸಂಭಾಷಣೆ ಇಂಗ್ಲೀಷ್ನಲ್ಲಿ ಬಹಳ ಹೊತ್ತು ನಡೆಯುತ್ತಿತ್ತು. ಪದ್ಮಿನಿಗೆ ದರ್ಶನ್ ತನ್ನನ್ನು ಬಿಟ್ಟು ಹೋಗಿ ಬಿಡುವನೇನೋ ಎಂದು ಅನಿಸತೊಡಗಿತು. 


ಆದಿನ ಪದ್ಮಿನಿಯ ಹುಟ್ಟುಹಬ್ಬ. ದರ್ಶನ್ ಇವಳಿಗೆ ಶುಭಾಶಯ ಕೂಡ ಹೇಳದೆ ಬೆಳಗ್ಗೆ ಏಳಕ್ಕೆ ಮನೆ ಬಿಟ್ಟು ಆಫೀಸು ಸೇರಿದ್ದ. ರಾತ್ರಿ ಏಳಾದರೂ ಅವನ ಸುಳಿವಿಲ್ಲ. ನನ್ನ ಹುಟ್ಟುಹಬ್ಬ ಆಚರಿಸುವುದು ಹೋಗಲಿ ಕೊನೆಪಕ್ಷ ಪ್ರೀತಿಯಿಂದ ಮಾತಾಡಿಸಿ ಶುಭಾಶಯ ಕೋರಬಹುದಿತ್ತಲ್ಲ ಎಂದು ಅಂದುಕೊಂಡಳು . ಅಷ್ಟರಲ್ಲೇ ಆಕೆಯ ಮೊಬೈಲ್ ರಿಂಗಣಿಸಿ ಆಕಡೆ ಶರಣ್ಯ ಮಾತಾಡುತ್ತಿದ್ದಳು. ಪದ್ಮಿನಿಗೆ ಬೇಗ ಸಿದ್ಧವಾಗಿ ಬರಬೇಕೆಂದು ಜಾಸ್ತಿ ಮಾತಾಡಲು ಸಮಯವಿಲ್ಲೆಂದು ದರ್ಶನ್ ಹೇಳಿದ್ದಾರೆಂದು ಒಂದು ಸ್ಥಳದ ಗುರುತು ಹೇಳಿ ಬೇಗ ಬರಬೇಕೆಂದು ಫೋನಿಟ್ಟಳು. ಪದ್ಮಿನಿಗೆ ದಿಕ್ಕೇ ತೋಚದಾಯಿತು. ದರ್ಶನ್ ಗೆ ಏನೂ ತೊಂದರೆ ಆಗಿರದಿರಲಿ , ಶರಣ್ಯ ಏಕೆ ಇಷ್ಟು ಅವಸರದಿಂದ ಬರುವುದಕ್ಕೆ ಹೇಳಿದಳು. ಎಂದು ಬಹಳ ಯೋಚಿಸುತ್ತಾ ಟ್ಯಾಕ್ಸಿಯಲ್ಲಿ ಶರಣ್ಯ ಹೇಳಿದ್ದ ಜಾಗಕ್ಕೆ ಬಂದಳು.


ಆ ಜಾಗ ನಗರದ ಗೌಜಿನಿಂದ ದೂರಗಿದ್ದು, ಪ್ರಶಾಂತವಾಗಿತ್ತು. ಹಳೆಯ ಮಲೆನಾಡ ಮನೆಯಂತೆ ಸಿಂಗರಿಸಿದ್ದರು. ಒಳಗೆ ಹೋದ ಪದ್ಮಿನಿಗೆ ಅದು ಒಂದು ಹೊಟೇಲ್ ಎಂದು ತಿಳಿಯಿತು. ಹಾಗೆ ಮುಂದೆ ಹೋದ ಪದ್ಮಿನಿಗೆ ನಡೆಯುವ ದಾರಿಯಯಲ್ಲಿ ಬಗೆ ಬಗೆ ಯ ಹೂವು ಚೆಲ್ಲಿತ್ತು. ಮುಂದೆ ಒಂದು ಹಜಾರವಿದ್ದು ಬೆಳಕಿನಿಂದ ಸಿಂಗರಿಸಲ್ಪಟ್ಟಿತ್ತು. ಅಲ್ಲಿ ನಡುವಲ್ಲಿ ದೊಡ್ಡ ಮೇಜು ಎಲ್ಲ ಪುಷ್ಪರಾಶಿಯೊಡನೆ ಅಲಂಕೃತವಾಗಿ ಸಜ್ಜುಗೊಂಡ ಊಟದ ವ್ಯವಸ್ಥೆ ಅಲ್ಲಿತ್ತು. ಆಗ ಹಠಾತ್ತಾಗಿ “ ಶುಭಾಷಯಗಳು “ ಎಂದು ಕೂಗುತ್ತ ಹಿಂದಿನಿಂದ ದರ್ಶನ್ ಅವಳನ್ನು ಹಿಡಿದುಕೊಂಡು ತನ್ನ ಕೈಲಿದ್ದ ಕೆಂಪು ಹೂಗಳ ಗುಚ್ಛವನ್ನು ನೀಡಿದ. ಒಂದು ಕ್ಷಣ ಪದ್ಮಿನಿಗೆ ತಾನು ಕಾಣುತ್ತಿರುವುದು ಕನಸೊ ನನಸೊ ಎಂದು ನಂಬಲಾಗಲಿಲ್ಲ. ಸಲ್ಪ ಸಮಯದ ನಂತರ ಶರಣ್ಯ ಹಾಗೂ ಅವಳ ಅನುಚರರು ಬಂದು ಪರಿಚಯಿಸಿಕೊಂಡು ಇದೆಲ್ಲ ದರ್ಶನ್ ಅವರದೇ ಐಡಿಯಾ ಎಂದು , ತಮಗೆ ಅಚ್ಚರಿ ಮೂಡಿಸಲು ಹೀಗೆ ವ್ಯವಸ್ಥಿತವಾಗಿ ಯೋಜನೆ ಸಿಡ್ಡಪಡಿಸಲಾಗಿತ್ತು ಎಂದು ಹೇಳಿದರು. ದರ್ಶನ್ ಆಫೀಸ್ ನಲ್ಲಿ ಕೆಲಸಕ್ಕೆ ಸೇರಿದ್ದ ಶರಣ್ಯ ಹವ್ಯಾಸಿ ಕಾರ್ಯಕ್ರಮ ಆಯೋಜಕಿಯೂ ಆಗಿದ್ದಳು. ತನಗೆ ಸೀನಿಯರ್ ಆಗಿ ಗೈಡ್ ಆಗಿರುವ ದರ್ಶನ್ ಅವರಿಗೆ ಇದು ನನ್ನ ಸಣ್ಣ ಸಹಾಯವೆಂದೂ ಹೇಳಿದಳು.

ಪದ್ಮಿನಿ ಹಾಗೂ ದರ್ಶನ್ ಊಟ ಮಾಡುತ್ತಾ ಮಧ್ಯೆ ನಗು ನಗುತ್ತಾ ಹರಟುತ್ತಿದ್ದರು. ಪದ್ಮಿನಿಗೆ ತಾನು ವೃಥಾ ದರ್ಶನ್ ಮೇಲೆ ಹಾಗೂ ಶರಣ್ಯಾಳ ಮೇಲೆ ಅನುಮಾನ ಪಟ್ಟಿದ್ದಕ್ಕೆ ತನ್ನಲ್ಲೇ ವ್ಯಥಿಸಿದಳು. ದರ್ಶನ್ ಕೂಡ ಇತ್ತೀಚಿನ ದಿನಗಳ ತನ್ನ ವರ್ತನೆಯನ್ನು ಮನಗಂಡು ಪದ್ಮಿನಿಯ ಬಳಿ ಕ್ಷಮೆ ಕೋರಿದ . ತನ್ನನ್ನು ಆ ಮಟ್ಟಿಗೆ ಪ್ರೀತಿಸುವ ದರ್ಶನ್ ಗೆ ತನ್ನ ಕಣ್ಣುಗಳಲ್ಲೇ ಮೆಚ್ಚಿಗೆ ಸೂಸಿದಳು. ಅಂತೂ ಅವಳ ಅನುಮಾನ ರೋಗಕ್ಕೆ ತಿರುಗದೆ ಅಲ್ಲಿಯೇ ಶಮನಾಗಿತ್ತು. ಅವಳ ಬದುಕಿನಲ್ಲಿ ಹೊಸ ಹೆಜ್ಜೆ ಶುರುವಾಗಿತ್ತು.


Rate this content
Log in

Similar kannada story from Classics