Chethana Bhargav

Abstract Classics Others

4.2  

Chethana Bhargav

Abstract Classics Others

ಆಗುವುದೆಲ್ಲಾ ಒಳ್ಳೆಯದಕ್ಕೆ

ಆಗುವುದೆಲ್ಲಾ ಒಳ್ಳೆಯದಕ್ಕೆ

2 mins
249



ನಗರದಲ್ಲಿ ಸರಳ ಮೋಹನ್ ಹಾಗೂ ಅವರ ಮಗ ರೋಹನ್ ವಾಸಿಸುತ್ತಿದ್ದರು.ಹಳ್ಳಿಯಲ್ಲಿ ಮೋಹನ್ ತಂದೆ ತಾಯಿ ಹೊಲವನ್ನು ನೋಡಿಕೊಂಡು ಅಲ್ಲೇ ನೆಲೆಸಿದ್ದರು.ಇವರದ್ದು ಸುಖಿ ಕುಟುಂಬ.ಸರಳ ಮತ್ತು ಮೋಹನ್ ಇಬ್ಬರೂ ಅಭಿಯಂತರರು. ಸಾಫ್ಟ್ವೇರ್ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು. ಇವರ ಮಗ ನಾಲ್ಕನೇ ತರಗತಿಯನ್ನು ನಗರದ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದನು. ಈ ದಂಪತಿಗಳು ಸದಾ ಕಾರ್ಯನಿರತ ವಾಗಿರುತ್ತಿದ್ದರು. ಕಚೇರಿಯಲ್ಲಿ ಬಹಳ ಒತ್ತಡದ ಕೆಲಸ.ಇಬ್ಬರೂ ತುಂಬಾ ಪ್ರತಿಭಾವಂತರು. ಕಚೇರಿ ಅಥವಾ ಖಾಸಗಿ ವಿಷಯದಲ್ಲಿ ಎಂತಹ ಸಮಸ್ಯೆ ಎದುರಾದರೂ ಕ್ಷಣಾರ್ಧದಲ್ಲಿ ಬಗೆಹರಿಸುವ ಛಾತಿ ಅವರಲ್ಲಿತ್ತು.

       ಇವರು ತಮ್ಮ ಜೀವನದಲ್ಲಿ ಮತ್ತು ಕೆಲಸದಲ್ಲಿ ಕೆಲವು ಆದರ್ಶಗಳನ್ನು ಇಟ್ಟುಕೊಂಡಿದ್ದರು. ಕಚೇರಿಯಲ್ಲಿ ನಡೆಯುತ್ತಿದ್ದ ರಾಜಕೀಯ ಹಾಗೂ ಭಾಷಾವಾರು ಜನಗಳಿಗೆ ನೀಡುತ್ತಿದ್ದ ಪ್ರಾಧಾನ್ಯತೆ ನೋಡಿ ಇವರಿಬ್ಬರೂ ಬೇಸತ್ತು ಹೋಗಿದ್ದರು.ನಿಜವಾದ ಪ್ರತಿಭೆಗೆ ಬೆಲೆಯೇ ಇಲ್ಲವಲ್ಲಾ ಎಂದು ಬಹಳ ನೊಂದುಕೊಳ್ಳುತ್ತಿದ್ದರು.

         ಇಂತಹ ಸಂದರ್ಭದಲ್ಲಿ ಇವರೀರ್ವರ ಸ್ನೇಹಿತರು ನೀವಿಬ್ಬರು ಎಷ್ಟೊಂದು ರಚನಾತ್ಮಕವಾಗಿ ಯೋಚಿಸುತ್ತೀರಾ,ಒಳ್ಳೆಯ ಪ್ರತಿಭಾವಂತರೂ ಕೂಡ ನೀವೇ ಒಂದು ಕಂಪೆನಿ ಶುರುಮಾಡಿ ಎಂದು ಸಲಹೆ ಕೊಟ್ಟರು. ಇಬ್ಬರು ತುಂಬಾ ಯೋಚಿಸಿ ಅವಲೋಕಿಸಿ ನಾವೇ ಒಂದು ಸಣ್ಣ ಕಂಪೆನಿಯನ್ನು ಶುರುಮಾಡೋಣ ಎಂದು ನಿರ್ಧರಿಸಿದರು.

    ಕಂಪೆನಿಗೆ ಬೇಕಾಗುವ ಸಾಮಾಗ್ರಿಗಳನ್ನು ತರಲು ವಿದೇಶಕ್ಕೆ ಹೋಗಬೇಕಾಗಿತ್ತು ಆದರೆ ಶಾಲೆ ಇರುವ ಕಾರಣದಿಂದಾಗಿ ಮಗನನ್ನು ಕರೆದುಕೊಂಡು ಹೋಗುವುದು ಸರಿಯಲ್ಲ ಎಂದು ತೀರ್ಮಾನಿಸಿ ಊರಿನಲ್ಲಿ ಇದ್ದ ತಂದೆ ತಾಯಿಯನ್ನ ಸ್ವಲ್ಪ ದಿನದ ಮಟ್ಟಿಗೆ ಮಗನನ್ನು ನೋಡಿಕೊಳ್ಳಲು ಕರೆಸಿಕೊಂಡರು. ರೋಹನ್ ಗೆ ಅಪ್ಪ ಅಮ್ಮ ತನ್ನನ್ನು ಬಿಟ್ಟು ವಿದೇಶಕ್ಕೆ ಹೋಗುವುದು ಇಷ್ಟವಿರಲಿಲ್ಲ.ನಾನು ನಿಮ್ಮೊಡನೆ ಬರುವೆನೆಂದು ಹಠ ಮಾಡುತಿದ್ದ.ಅವನಿಗೆ ಅವನ ಅಪ್ಪ ಅಮ್ಮ, ನಿನಗೆ ಹೊಸ ಹೊಸ ಆಟಿಕೆ ಚಾಕಲೇಟ್ ಎಲ್ಲಾವನ್ನು ತರುವುದಾಗಿ ಆಸೆ ತೋರಿಸಿ, ಪರಿಸ್ಥಿತಿಯನ್ನೆಲ್ಲಾ ವಿವರಿಸಿ ಮನವರಿಕೆಮಾಡಿದ ಮೇಲೆ ಸುಮ್ಮನಾಗಿದ್ದ.ಆದರೂ ಅವನ ಒಳ ಮನಸ್ಸಿನಲ್ಲಿ ಬೇಜಾರು ಇದ್ದೇ ಇತ್ತು.

     ಮೋಹನ್ ತಂದೆ ತಾಯಿಯ ಉಪಸ್ಥಿತಿಯಲ್ಲಿ ದಂಪತಿಗಳಿಬ್ಬರು ವಿದೇಶಕ್ಕೆ ಹೊರಡಲು ತಯಾರಾಗುತ್ತಿದ್ದರು. ರೋಹನ್ ಮಾತ್ರ ಬಹಳ ಮಂಕಾಗಿ ಬೇಸರದಿಂದ ಕುಳಿತಿದ್ದ .ಇನ್ನೇನು ವಿಮಾನ ನಿಲ್ದಾಣಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ರೋಹನ್ ತಲೆ ಸುತ್ತಿ ಕೆಳಗೆ ಬಿದ್ದನು.ಗಾಬರಿಯಿಂದ ಸರಳ ಮತ್ತು ಮೋಹನ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಡಾಕ್ಟರ್ ಪರೀಕ್ಷಿಸಿ ಆಹಾರವನ್ನು ಸರಿಯಾಗಿ ತೆಗೆದುಕೊಂಡಿಲ್ಲ ನಿಶಕ್ತನಾಗಿದ್ದಾನೆ,ಹಾಗೆ ಮನಸ್ಸಿಗೆ ಏನೋ ಹಚ್ಚಿಕೊಂಡು ಮನಸ್ಸು ದುರ್ಬಲವಾಗಿದೆ ಅಷ್ಟೇ,ಯೋಚಿಸುವ ಅಗತ್ಯವೇನು ಇಲ್ಲ ಎಂದು ಹೇಳಿ ಮನೆಗೆ ಕಳುಹಿಸಿದರು.

        ಅವರು ಹೋಗಬೇಕಿದ್ದ ವಿಮಾನವು ಹಾರಿಹೋಗಿತ್ತು. ಪ್ರಯಾಣ ರದ್ದಾದರೂ ಪರ್ವಾಗಿಲ್ಲ ಮಗನು ಹುಷಾರಾಗಿದ್ದಾನಲ್ಲ ಸಾಕು ಎಂದು ಕೊಳ್ಳುತ್ತಾ ಮೋಹನನು ಟಿ.ವಿ. ಹಾಕಿದನು.ಅದರಲ್ಲಿ ಬರುತ್ತಿದ್ದ ವಾರ್ತೆಯನ್ನು ಕೇಳಿ ಮೋಹನನ ಮೈ ಎಲ್ಲಾ ಬೆವರಿದಂತಾಗಿ ತನ್ನ ಹೆಂಡತಿ ಅಪ್ಪ ಅಮ್ಮನನ್ನು ಕೂಗಿ ಕರೆದನು.ಅದರಲ್ಲಿ ಇವರು ಪ್ರಯಾಣಿಸ ಬೇಕಿದ್ದ ವಿಮಾನವು ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಅಪ್ಪಳಿಸಿ ಪ್ರಯಾಣಿಸುತ್ತಿದ್ದ ಬಹುತೇಕ ಪ್ರಯಾಣಿಕರು ಮರಣ ಹೊಂದಿದ್ದಾರೆ ಕೆಲವೇ ಕೆಲವು ವ್ಯಕ್ತಿಗಳು ಬದುಕಿದ್ದಾರೆ ಅವರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಪ್ರಸಾರವಾಗುತ್ತಿತ್ತು.

      ಮಗನಿಂದಾಗಿ ತಮ್ಮ ಪ್ರಾಣ ಉಳಿಯಿತು ಎಂದು ಸಮಾಧಾನ ಪಟ್ಟುಕೊಳ್ಳುತ್ತಾ "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂದು ಮೋಹನ್ ದಂಪತಿಗಳು ನಿಟ್ಟುಸಿರು ಬಿಟ್ಟರು. ಇವರಿಬ್ಬರು ಸೇರಿ ತಂದೆ ತಾಯಿಯ ಸಹಾಯದೊಂದಿಗೆ ಒಂದು ಸಣ್ಣ ಕಂಪೆನಿಯನ್ನು ಪ್ರಾರಂಭಿಸಿ ನಂತರ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು. ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶ ನೀಡುತ್ತಾ ಅವರ ಜೀವನಕ್ಕೆ ದಾರಿ ದೀಪವಾದರು.


Rate this content
Log in