ಕಾಣದ ಕಡಲಿಗೆ....
ಕಾಣದ ಕಡಲಿಗೆ....
ಯಾಕೆ ಸಹನಾ ಈ ರೀತಿಯಾಗಿ ಮೌನಿಯಾಗಿದ್ದಿಯಾ? ಏನಾಯ್ತೆ? ನೀನು ಮಾತಾಡೋದೆ ಕಮ್ಮಿ , ಆದರೂ ಈ ರೀತಿ ಮಾತಾಡದೇ ಇದ್ದಿರೋ ದಿನವಿಲ್ಲ. ಅದೂ ನನ್ನೊಂದಿಗೆ ನೀನು ಇಷ್ಟು ಸುಮ್ಮನಿದ್ದಿದ್ದು ಇದೆ ಮೊದಲು. ಯಾಕೆ ಬಂಗಾರಿ ಏನಾಯ್ತಂತಾ ಹೇಳಬಾರಾದಾ? ನಿನ್ನ ಬಿಗಿದ ಗಂಟಲು , ಒದ್ದೆಯಾದ ಕಣ್ಣು ನನಗೆ ನೋಡಲಾಗುತ್ತಿಲ್ಲ .
ಏನಿಲ್ಲ ಕಣೆ ವಂದನಾ, ಹೀಗೆ ಮನೆಯೆಂದ ಮೇಲೆ ಇರುತ್ತವಲ್ಲ ಅಷ್ಟೇ ಬಿಡು .
ಹೌದು ಮನೆಯೆಂದ ಮೇಲೆ ಇದ್ದೇ ಇರುತ್ತವೆ. ಆದರೆ ನಿಮ್ಮನೆದೆ ವಿಶೇಷ ಬಿಡೇ ಸಹನಾ , ನಾನೂ ಹನ್ನೆರಡು ವರ್ಷದಿಂದ ನೋಡ್ತಿದೀನಿ , ಅರ್ಥವಾಗಲಾರದ ನಿನ್ನ ಕುಟುಂಬದ ಬಗ್ಗೆ ನೀನೇನು ಹೆಚ್ಚು ಹೇಳೋದು ಬೇಡ. ನಿನಗೆ ಸರಿಯಾಗಿ ಸುಳ್ಳು ಹೇಳೋದಕ್ಕೂ ಬರಲ್ಲ. ಸುಮ್ಮನೇ ಏನೋ ಒಂದು ಹೇಳೋದು ಬೇಡ ಅಂತ ವಂದನಾ ಅವತ್ಯಾಕೋ ಗರಂ ಆಗಿ ಮಾತಾಡಿ ಹೋದಳು.
ಮೊದಲೇ ಮನೆಯಲ್ಲಿ ಕಿರಿ ಕಿರಿ ಇದ್ದ ಸಹನಾಗೆ ಆತ್ಮೀಯ , ಪ್ರಾಣ ಸ್ನೇಹಿತೆಯ ಮಾತುಗಳು ಕೊಂಚ ಬೇಸರ ಮೂಡಿಸಿದವು. ಅಂದೇಕೋ ಆಫೀಸಿನಿಂದ ನೇರವಾಗಿ ತನ್ನ ಮನೆಗೆ ಹೋಗದೇ , ಮಾವನಿಗೆ ಫೋನ್ ಮಾಡಿ ಲೇಟಾಗಿ ಬರುವೆ ಎಂದು ಹೇಳಿ , ಅಮ್ಮನ ಮನೆ ಕಡೆ ಹೆಜ್ಜೆ ಹಾಕಿದಳು.
ಅಮ್ಮನ ಮನೆಗೆ ಹೋದವಳೇ ಅಮ್ಮನ ಮಡಿಲಿನಲ್ಲಿ ಚಿಕ್ಕ ಮಗುವಿನಂತೆ ಮಲಗಿ , ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು. ಅಪ್ಪ ಅಮ್ಮನಿಗೆ ಏನೊಂದು ತಿಳಿಯದು, ಆಫೀಸಲ್ಲಿ ಏನಾಯ್ತು ಅಂತ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದರು. ಆದರೆ ಸಹನಾ ಮಾತ್ರ ಅಳುತ್ತ ಏನೂ ಮಾತಾಡದೇ ಸುಮ್ಮನಿದ್ದಳು. ಕೊನೆಗೆ ಅಪ್ಪನ ಸಹನೆಯ ಕಟ್ಟೆ ಒಡೆಯಿತು. ಮಗಳಿಗೆ ಗದರಿಸಿ ಏನಾಯ್ತಂತಾ ಕೇಳಿದರು. ಅಪ್ಪನ ಸಿಟ್ಟು ಕಂಡವಳೇ ಹೆದರಿ ಸಹನಾ ತನ್ನ ಗಂಡನ ಕುರಿತು ಇಷ್ಟುದ್ದ ಹೇಳಿದಳು. ಆದರೆ , ಅಪ್ಪ ಅಮ್ಮ ನಂಬುವ ಹಾಗಿರಲಿಲ್ಲ. ಅಳಿಯ ಮನೆಯ ಮಗನಂತೆ ನಾಟಕ ಮಾಡಿಕೊಂಡಿದ್ದ. ಸಹನಾ ಕೂಡ ಮೊದಲಿನ ಮೂರು ವರ್ಷ ಗಂಡನೆ ದೇವರು ಎಂದಿದ್ದಳು. ಆದರೆ ಆ ದೇವರು ಗೌರಿಯ ಜೊತೆಗೆ ಗಂಗೆಯನ್ನು ತಂದಿದ್ದನ್ನು ನೋಡಿ ರೋಷಿ ಹೋಗಿದ್ದಳು. ಗಂಡನೊಂದಿಗೆ ಬರೋಬ್ಬರಿ ನಾಲ್ಕು ವರ್ಷದಿಂದ ಮಾತಿಲ್ಲ , ಕತೆಯಿಲ್ಲ , ಇರುವ ಒಬ್ಬ ಮಗಳನ್ನು ಸಹ ಪ್ರೀತಿಯಿಂದ ಕಾಣುವುದಿಲ್ಲ , ಜೊತೆಗೆ ಈಗಂತೂ ನಾನು ಸ್ವಲ್ಪ ದಪ್ಪ ಆಗಿರುವುದರಿಂದ ನನ್ನನ್ನು ತುಂಬಾ ಕಡೆಗಣಿಸುತ್ತಿದ್ದಾರೆ , ಬೇಕು ಬೇಡಗಳ ಪಟ್ಟಿಯಿಂದ ನಮ್ಮನ್ನು ತೆಗೆದೇ ಹಾಕಿದ್ದಾರೆನೋ ಎನ್ನುವಂತೆ ನಡೆದುಕೊಳ್ಳುತ್ತಾರೆ. ನನ್ನ ಸಂಬಳದಲ್ಲಿ ನಾನು ಮಗಳು ಮತ್ತು ಮಾವ , ನಮ್ಮ ಮೂವರ ಜೀವನ ಸಾಗಬೇಕು ಅದೂ ಕಷ್ಟವಾಗುತ್ತಿದೆ , ಮಗಳ ಶಾಲೆಯ ಖರ್ಚನ್ತೂ ಹೆಚ್ಚುತ್ತಿದೆ. ಈತ ಮಾತ್ರ ಆಕೆಯ ಸೆರಗು ಹಿಡಿದು ನಮ್ಮನ್ನು ನೋಡುತ್ತಲೇ ಇಲ್ಲ. ನನಗಂತೂ ಆತನ ಮೊದಲಿನ ಆ ಪ್ರೀತಿಯ ಮಾತುಗಳು ಬೇಕಿವೆ. ರೇಗಿಸುವ ಅವನ ಆ ಧಾಟಿ ಬೇಕಿದೆ. ಆತನ ಆ ತುಂಟ ಕಣ್ಣೋಟ ನೋಡುವಾಸೆಯಾಗಿದೆ. ಮನವು ಆತನನ್ನು ಬಯಸುತ್ತಿದೆ. ಆದರೆ ಆ ಕಾಣದ ಕಡಲ ಬಯಸಿ ನನ್ನ ಮನ ನೋಯುತ್ತಿದೆ , ಸಂಕಟ ಪಡುತ್ತಿದೆ , ಆದರೆ ಈ ಮನಸ್ಸಿನ ಬಯಕೆ ಅರಿತು ಆ ಜೀವ ಬರುವುದೇ? ಎಂದು ಸಹನಾ ಅಪ್ಪನಿಗೆ ಕೇಳಿದಳು.
ಮಗಳು ಕೇಳಿದ ಆ ಪ್ರಶ್ನೆಗೆ ಸಹನಾಳ ಅಪ್ಪನ ಹತ್ತಿರ ಉತ್ತರವಿಲ್ಲ.
(ಸಹನಾ ನಾಲ್ಕು ಜನ ಅಕ್ಕ ತಂಗಿಯರೊಡನೆ ಕೂಡಿ , ಆಡಿ , ಬೆಳೆದ , ಹೆಸರಿಗೆ ತಕ್ಕಂತಹ ಸಹನಾ ಮೂರ್ತಿಯೇ ಆಗಿದ್ದಳು. ಒಮ್ಮೆಯೂ ಕೂಡ ಅಕ್ಕ ತಂಗಿಯರೊಡನೆ ಜಗಳ ಮಾಡಿದವಳಲ್ಲ. ಅಪ್ಪ ಅಮ್ಮನಿಗೆ ಯಾವ ಒಂದು ಸಣ್ಣ ಮಾತಿಗೂ ಎದುರು ಮಾತಾಡಿ ವಾದಿಸಿದವಳಲ್ಲ. ಎಲ್ಲರೊಂದಿಗೆ ತಾಳ್ಮೆಯ ಮೂರ್ತಿಯಾಗಿ , ಹೃದಯ ವೈಶಾಲ್ಯತೆಯ ಗಣಿಯಾಗಿ ಮೆರೆದವಳು ಸಹನಾ. ಆದರೆ ಇಂದು ಆಕೆಯ ಪರಿಸ್ಥಿತಿ ಕಂಡು ಅಪ್ಪ ಅಮ್ಮ ತುಂಬಾನೇ ನೊಂದುಕೊಂಡರು. ಮಗಳ ಜೀವನ ಕಂಡು ಸಂಕಟ ಪಟ್ಟರು. ಅವಳ ಮನ ಬಯಸಿದ್ದು ಸಿಗುವುದೇ ಎಂದು ಮನಸ್ಸಲ್ಲೇ ವ್ಯಥೆ ಪಟ್ಟರು.)
