ಜೀವರಕ್ಷಕ
ಜೀವರಕ್ಷಕ
ಮಧ್ಯರಾತ್ರಿ ಹನ್ನೆರಡರ ವೇಳೆಗೆ ಸರಿಯಾಗಿ ಆಂಬ್ಯುಲೆನ್ಸ್ ಸಂಜೀವಿನಿ ನರ್ಸಿಂಗ್ ಹೋಂ ಅನ್ನು ತಲುಪಿತು. ಐದುವರ್ಷದ ಪುಟ್ಟ ಕಂದನನ್ನು ಐ.ಸಿ.ಯು.ಗೆ ಕರೆದುಕೊಂಡು ಹೋದಾಗ, ಸುಧೀರ್ ಮತ್ತು ಸುಮಾ, ಹೊರಗಡೆಯ ಕುರ್ಚಿ ಗಳಲ್ಲಿ ಕುಳಿತು ಒಂದೇ ಸಮನೆ ಕಣ್ಣೀರಿಡುತ್ತಿದ್ದರು. ಕ್ಷಣ ಕ್ಷಣಕ್ಕೂ ಅವರ ಆತಂಕ ಹೆಚ್ಚಾಗುತ್ತಿತ್ತು.
ಅಂದು ಸಂಜೆ ಆಟ ಆಡುತ್ತಾ ಇದ್ದಾಗ ಮೆಟ್ಟಿಲುಗಳಿಂದ ಕೆಳಗುರುಳಿ ಪ್ರಜ್ಞೆ ತಪ್ಪಿದ ಐದು ವರ್ಷದ ಮಗು ಧೃತಿಯನ್ನು , ತಮ್ಮ ಮನೆಯ ಹತ್ತಿರದಲ್ಲಿದ್ದ
ಡಾ. ಶಾಂಭವಿಯ ಸಲಹೆಯ ಮೇರೆಗೆ ಸಂಜೀವಿನಿ ನರ್ಸಿಂಗ್ ಹೋಂಗೆ, ಮುಂದಿನ ಚಿಕಿತ್ಸೆ ಗಾಗಿ ಕರೆದುಕೊಂಡು ಬಂದಿದ್ದರು. ಮದುವೆಯಾಗಿ ಐದು ವರ್ಷಗಳ ನಂತರ ಹಲವು ದೇವರಿಗೆ ಹರಕೆ ಹೊತ್ತು ಪಡೆದ ತಮ್ಮ ಮುದ್ದು ಮಗಳು ಹೀಗೆ ಪ್ರಜ್ಞಾ ಹೀನವಾಗಿ ಮಲಗಿರುವುದನ್ನು ನೋಡುತ್ತಾ, ಸುಧೀರ್ ಮತ್ತು ಸುಮಾ ಇಬ್ಬರೂ ಬಿಕ್ಕುತ್ತಿದ್ದರು. ಅರ್ಧ ಗಂಟೆಯಾದರೂ ಐ.ಸಿ.ಯು.ವಿನ ಬಾಗಿಲು ತೆಗೆಯದಿದ್ದಾಗ, ಇಬ್ಬರೂ ಆತಂಕದಿಂದ ಅತ್ತ ಕಡೆಯೇ ನೋಡುತ್ತಾ ಚಡಪಡಿಸುತ್ತಿದ್ದಾಗ, ನರ್ಸ್ ಹೊರಗೆ ಬರುತ್ತಿರುವುದನ್ನು ನೋಡಿ, ಇಬ್ಬರೂ ದಿಗ್ಗನೆ ಎದ್ದು ಅವಳ ಹತ್ತಿರ ಹೋಗಿ "ಮಗು ಹೇಗಿದೆ ?" ಎಂದಾಗ,
"ಸರ್. ಟ್ರೀಟ್ ಮೆಂಟ್ ನಡಿತಾ ಇದೆ, " ಅಂತ ಹೇಳಿ ಅವಳು ತನ್ನ. ಪಾಡಿಗೆ ತಾನು ನಡೆದಾಗ, ಸುಧೀರ್ ಮತ್ತು ಸುಮಾ ಇಬ್ಬರಿಗೂ ಗಾಬರಿಯಾಯಿತು.
ಒಳಗಡೆ ಏನು ಚಿಕಿತ್ಸೆ ಆಗುತ್ತಿದೆ ಎಂಬುದು ಇವರಿಗೆ ಗೊತ್ತಾಗದೆ, ಇಬ್ಬರ ಹೃದಯವೂ ಡವಡವಗುಟ್ಟುತ್ತಿದ್ದವು. ಒಂದು ಗಂಟೆಯ ನಂತರ ಹೊರಗೆ ಬಂದ ಡ್ಯೂಟಿ ಡಾಕ್ಟರ್ , "ಮಗುವಿನ ಸ್ಥಿತಿ ಸ್ಟೇಬಲ್ ಆಗಿದೆ. ನಾಳೆ ನ್ಯೂರೋ ಸ್ಪೆಷಲಿಸ್ಟ್ ಬಂದು ನೋಡುತ್ತಾರೆ. ಜೀವಕ್ಕೆ ಅಪಾಯ ವಿಲ್ಲ"ಎಂದು ಹೇಳಿ ಹೊರಟಾಗ, ಸುಧೀರ್ ಮತ್ತು ಸುಮಾಗೆ ಸ್ವಲ್ಪ ಸಮಾಧಾನವಾದರೂ,' ಧೃತಿಗೆ ಏನಾಗಿದೆ ?'ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಅವರು ಇನ್ನು ಮೂರು ನಾಲ್ಕು ಗಂಟೆಗಳು ಕಾಯದೇ ವಿಧಿಯಿರಲಿಲ್ಲ.
ಇಬ್ಬರೂ ಗಡಿಯಾರದ ಮುಳ್ಳನ್ನು ನೋಡುತ್ತಾ ಹಾಗೆಯೇ ಕುಳಿತರು. ತಮ್ಮ ಮಗು ಸುರಕ್ಷಿತವಾಗಿರಲೆಂದು ಹಲವು ದೇವರುಗಳಿಗೆ ಹರಕೆ ಹೊತ್ತರು.
ರಾತ್ರಿ ಕಳೆದು ಬೆಳಗಾಗುವುದನ್ನೇ ಕಾಯುತ್ತಾ ಕುಳಿತಿದ್ದ ಇಬ್ಬರೂ ಎಂಟೂವರೆಯ ಹೊತ್ತಿಗೆ ನ್ಯೂರೋ ಸರ್ಜನ್ ಡಾ ಕರಣ್ ಬಂದಾಗ, ಅವರನ್ನು ನೋಡಿದ ಇಬ್ಬರಿಗೂ ಅವರು ಜೀವ ರಕ್ಷಕನಾಗಿ ಕಂಡರು. ನ್ಯೂರೋ ಸರ್ಜನ್ ರವರ ಸತತ ಚಿಕಿತ್ಸೆಯ ಫಲವಾಗಿ ಅಂದು ಮಧ್ಯಾಹ್ನದ ಹೊತ್ತಿಗೆ ಪುಟ್ಟ ಕಂದ ಧೃತಿ ಕಣ್ಣು ಬಿಟ್ಟು ನೋಡಿದಾಗ, ಇಬ್ಬರೂ ನಿಟ್ಟುಸಿರು ಬಿಟ್ಟರು. ಸುಧೀರ್ ಮತ್ತು ಸುಮಾ ಇಬ್ಬರಿಗೂ ಡಾ.ಕರಣ್ ಇವರ ಪಾಲಿನ ಸಂಜೀವಿನಿಯಾದರು. ಹಲವು ದಿನಗಳ ನಂತರ ಧೃತಿಯನ್ನು ನರ್ಸಿಂಗ್ ಹೋಂ ನಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಾಗ, ಇಬ್ಬರಿಗೂ ತಮ್ಮ ಕೈ ಜಾರಿದ್ದ ಮಾಣಿಕ್ಯ ಮತ್ತೆ ತಮಗೆ ದೊರಕಿದಷ್ಟು ಖುಷಿಯಾಗಿತ್ತು.
