ಜಾಣ ನರಿ
ಜಾಣ ನರಿ
ಮಕ್ಕಳ ಕಥೆ
ಒಂದು ಕಾಡಿನಲ್ಲಿ ಶಬಾಲವೆಂಬ ನರಿ ಇತ್ತು. ಒಂದು ದಿನ ಅದಕ್ಕೆ ತುಂಬಾ ಹಸಿವಾಗಿತ್ತು. ಆಹಾರಕ್ಕಾಗಿ ಕಾಡೆಲ್ಲಾ ಅಲೆದು ಕಡೆಗೆ ಒಂದು ಕಡೆ ಆಗತಾನೇ ಬೇಟೆಗೆ ಸಿಕ್ಕಿದ್ದ ಜಿಂಕೆ ಮರಿಯ ಹಸಿ ಮಾಂಸವನ್ನು ಕಂಡು, ಶಬಾಲ ನಿಗೆ ಬಹಳ ಖುಷಿಯಾಯಾಯಿತು. ಸುತ್ತಮುತ್ತಾ ಕಣ್ಣಾಡಿಸಿ, ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು, ಗಬಗಬನೆ ಆ ಮಾಂಸವನ್ನು ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡಿತು.
ಹಸಿದ ಹೊಟ್ಟೆ ತುಂಬಿದ ಮೇಲೆ ಆ ಶಬಾಲ ನರಿಯು ತನ್ನ ಗುಹೆಯ ಕಡೆಗೆ ಹೊರಟಿತು. ಅದು ತನ್ನ ಗುಹೆಯ ಮುಂದೆ ಬಂದಾಗ, ಗುಹೆಯ ಬಾಗಿಲಿನಲ್ಲಿ ಸಿಂಹದ ಹೆಜ್ಜೆ ಗುರುತುಗಳಿರುವುದನ್ನು ಕಂಡು, ಬಾಗಿಲ ಬಳಿಯೇ ನಿಂತುಕೊಂಡು,
"ಒಳಗೆ ಯಾರಿದ್ದೀರಿ ? " ಎಂದು ಕೂಗಿ ಕೇಳಿತು.
ಸ್ವಲ್ಪ ಸಮಯದ ನಂತರ ಒಳಗಿನಿಂದ ಸಿಂಹ ಜೋರಾಗಿ ಕೂಗಿ, "ಬಾ ಗೆಳೆಯ ಶಬಾಲ, ಒಳಗೆ ಬಾ, ನಾನು ಈ ಕಾಡಿನ ರಾಜ ಸಿಂಹ ಇದ್ದೀನಿ. ಹೆದರಬೇಡ" ಎಂದು ನರಿಯನ್ನು
ಗುಹೆಯೊಳಗೆ ಬರುವಂತೆ ಹೇಳಿತು.
ಜಾಣನರಿ ಶಬಾಲ, ತನ್ನ ಗುಹೆಯೊಳಗೆ ಈಗ ತಾನು ಹೋದರೆ ತನ್ನ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ ಅಂತ ಯೋಚಿಸಿ, ಅಲ್ಲಿಂದ ದೂರ ಓಡಿತು. ಎಂತಹ ಕಷ್ಟದ ಸಂದರ್ಭದಲ್ಲೂ ತನ್ನ ಸಮಯೋಚಿತವಾದ ಬುದ್ಧಿಯನ್ನು ಉಪಯೋಗಿಸಿಕೊಂಡು ಅಪಾಯದಿಂದ ಪಾರಾಯಿತು ಶಬಾಲ.
ನೀತಿ: ಜೀವನದಲ್ಲಿ ಸಮಯೋಚಿತವಾದ ಬುದ್ಧಿ ಇದ್ದರೆ ಎಂತಹ ಅಪಾಯದಿಂದಲೂ ಪಾರಾಗಬಹುದು.
