ಇಷ್ಟ ದೇವತೆ ಭಾಗ 6
ಇಷ್ಟ ದೇವತೆ ಭಾಗ 6
ಗಿರಿಜೆಯನ್ನು ನೋಡಲಿಕ್ಕೆ ಪಟೇಲರ ಮನೆಯವರು ಯಾವಾಗ ಬರುತ್ತಾರೋ ಅಂತಾ ಕಾಯುತ್ತಿದ್ದ ಮಹಾದೇವಪ್ಪನಿಗೆ ಪಟೇಲರಿಂದ ಟಪಾಲು ಬಂದಿತ್ತು.
ಬರುವ ಶುಕ್ರವಾರ ಬರುತ್ತೇವೆ ಎಂಬ ವಿಷಯ ಬರೆದ ಟಪಾಲು ಆಗಿತ್ತದು...
ಮಲ್ಲಪ್ಪ, ಚೆನ್ನಪ್ಪ, ಬರ್ರಿ ಇಲ್ಲೇ, ನಿಮ್ಮ ಸಣ್ಣ ತಮ್ಮಂದಿರು ಅವರಿಬ್ಬರನ್ನೂ ಕರದ ಬಿಡ್ರಿ. ಒಂದ ಸಲ ಎಲ್ಲಾರಿಗೂ ಹೇಳ್ತೀನಿ ಅಂತ ಅಪ್ಪ ಅಂದಾಗ ಆತ ತಡ್ರಿ ಕರಿತನಿ ಅಂತ ಹೋಗಿ ಲೋ ಶಿವಾನಂದ, ಶೇಖ್ರೂ ಇಬ್ರೂ ಬರ್ರೆಪ್ಪ,ನಮ್ಮಪ್ಪ ಏನೋ ಹೇಳೋದು ಐತೆಂತ ಎಲ್ಲಾರನೂ ಕರ್ಯಾಕುಂತಾರ ಅಂದನು.
ನಡಿಪಾ ಅಣ್ಣ ಬಂದ್ವಿ ಅಂತ ತಮ್ಮಂದಿರಿಬ್ರೂ ಹೇಳಿದರು.
ಎಲ್ಲರೂ ಸೇರಿದ ಮ್ಯಾಲೆ , ನೋಡ್ರಪಾ ಬರೋ ಶುಕ್ರವಾರ ನಮ್ಮ ಮನಿ ಲಕ್ಷ್ಮೀನ ನೋಡಾಕ ಪಕ್ಕದೂರಿನ ಪಟೇಲರು ಕುಟುಂಬ ಸಮೇತ ಬರ್ತಾರಂತ ಅಂದಾಗ ಎಲ್ಲರೂ ಆಯ್ತು ಅಂತ ಒಪ್ಪಿಕೊಂಡು ಅದರ ತಯಾರಿ ನಡೆಸಿದರು...
ಗಿರಿಜೆಗೂ ಅಜ್ಜ ಈ ವಿಷಯ ತಿಳಿಸಿ ತಯಾರಾಗಲು ಹೇಳಿದನು.
ಶುಕ್ರವಾರ ಬೆಳಿಗ್ಗೆ ಹತ್ತ ಗಂಟೆ ಅನ್ನೋದ್ರಾಗ ಪಟೇಲರ ಕುಟುಂಬ ಗಿರಿಜೆಯ ಮನೆಯಲ್ಲಿತ್ತು. ಎಲ್ಲರೂ ಚಹಾ ಕುಡಿದು ಕುಳಿತಿದ್ದರು . ಆಗ ಗಿರಿಜೆ ಸೀರೆ ಉಟ್ಟು ದೇವತೆ ತರ ಅಟ್ಟದ ಮೇಲಿನಿಂದ ಕೆಳಗೆ ಇಳಿದು ಬಂದು , ಕುಳಿತವರ ಮುಂದೆ ಬಂದು ಹಿರಿಯರೆಲ್ಲರಿಗೂ ನಮಸ್ಕರಿಸಿ ಪಕ್ಕಕ್ಕೆ ಸರಿದು ನಾಚುತ್ತ, ಹೆದರುತ್ತ ಕುಳಿತಳು..
ಪಟೇಲರು ಏನವಾ ನಿನ್ನ ಹೆಸರು ಅಂತಾ ಏರು ಧ್ವನಿಯಲ್ಲಿ ಕೇಳಿದಾಗ ತಡಬಡಿಸಿ, ಗಿರಜಮ್ಮ ರಿ ಅಂದಳು. ಆತಾತು,ನೀವು ಎಷ್ಟ ಜನ ಮಕ್ಕಳು ಅಂದಾಗ ನಾವು ನಾಕು ಜನಾರಿ ಅಂದು ಸುಮ್ಮನಾದಳು.
ಆಗ ಪಟೇಲರ ಧರ್ಮಪತ್ನಿ ಎದ್ದು ,ಗಿರಿಜೆಯನ್ನು ಕರೆದುಕೊಂಡು ಕೋಣೆ ಕಡೆ ನಡೆದಳು. ಆಗ ಗಿರಿಜೆ ತುಂಬಾ ಭಯಪಟ್ಟಿದ್ದಳು. ಕೋಣೆಗೆ ಹೋಗಿ,ಅಲ್ಲಿ ಅವಳ ಕಾಲು ಕೈ , ಸೊಂಟ ಬೆನ್ನು ಕುತ್ತಿಗೆ ಎಲ್ಲವನ್ನು ಕೂಲಂಕುಷವಾಗಿ ನೋಡುತ್ತಿದ್ದಾಗ ಗಿರಿಜೆ ಇದೆಲ್ಲ ಯಾಕರಿ ಅಂದಾಗ, ಅಯ್ಯ ಚರ್ಮ ರೋಗ ಮತ್ತೇನರ ಕಲಿ ಗಿಲಿ ಅದಾವನ ಅಂತ ನೋಡಾಕತ್ತನಿ ತಡಿವಾ ಅಂದ್ಲು.
ಗಿರಿಜೆಗೆ ಒಳಗೊಳಗೇ ಭಯ.
ಚಿಗವ್ವನರ ಕರ್ಕೊಂಡ್ ಬರಬೇಕಿತ್ತು ಅಂತ ಮನಸ್ಸಲ್ಲಿ ಅಂದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ ಅವಳ ಚಿಗವ್ವ ಬಂದವಳೇ ಗಿರಿಜೆಯನ್ನು ಹಿಡಿದು ನಿಂತಾಗ ಸ್ವಲ್ಪ ಧೈರ್ಯ ಬಂದು ಉಸಿರು ಬಿಟ್ಟಳು. .
ಆಗ ಪಟೇಲನ ಹೆಂಡತಿ , ನಿವೇನಾಗಬೇಕು ಈಕಿಗೆ, ಅವ್ವ ನಿವೇನಾ ಅಂದಳು.
ಇಲ್ರಿ, ನಾನು ಗಿರಿಜೆಗೆ ಚಿಗವ್ವ ಅದನ್ರಿ , ಇಕಿ ಕಾಕಾನ ಹೆಂಡತಿ ರಿ . ನನ್ನ ಹೆಸರು ಶಾರವ್ವ ರಿ.
ಹೌದನು. ಸರಿ ಹುಡುಗಿ ಚೆಂದ ಅದಾಳ್ರಿ. ಏನು ಕಲಿ ಗಿಲಿ ಇಲ್ಲ, ಕೈಯಾಗಿನ ರೇಖಾ ಎಲ್ಲ ಚೋಲೋ ಅದಾವು. ಹುಡುಗಿ ದೇಸೇವಾನಿ ಅದಾಳ, ನಮಗ ಒಪ್ಪಿಗೆ ಆಗೇತಿ ನೋಡ್ರಿ ಅಂತ ಪಟೇಲರ ಹೆಂಡತಿ ಹೇಳಿದಳು.
ಚಿಗವ್ವ ಮಗಳು ಮುಖ ಮುಖ ನೋಡಿಕೊಂಡು ಸುಮ್ಮನಾದ್ರು.
ಕೋಣೆಯಿಂದ ಮತ್ತ ಪಡಸಾಲಿಗೆ ಬಂದು ಕುಳಿತರು. ಆಗ ಪಟೇಲರು ಸರಿ ನಮಗೆ ಹುಡುಗಿ ಇಷ್ಟ ಆದಳು. ದೇವತೆ ತರ ಅದಾಳ, ಈ ದೇವತೆ ನಮಗೆ ಇಷ್ಟ ಆದಳು. ಈ ಇಷ್ಟ ದೇವತೆ ನಮ್ಮ ಮನೆಗೆ ಸೊಸೆಯಾಗಿ , ಮಹಾಲಕ್ಷ್ಮಿಯಾಗಿ ಬಂದರೆ ಬಹಳ ಖುಷಿಯಾಗುತ್ತದೆ ಅಂದಾಗ ಎಲ್ಲರೂ ಮಂದಹಾಸ ಬೀರಿದರು...
ಇನ್ನು ಗಿರಿಜೆಯ ಮದುವೆ ಹೇಗಾಯ್ತು ಅಂತ ಮುಂದಿನ ಭಾಗದಲ್ಲಿ ನೋಡೋಣ....
