Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 2

ಇಷ್ಟ ದೇವತೆ ಭಾಗ 2

2 mins
151



ಗಿರಜಮ್ಮ ಹೊರಗೆ ಹೋಗದಂತೆ ಹೇಳುತ್ತಿದ್ದ ಅಜ್ಜ ಮಹದೇವಪ್ಪ ಮೊಮ್ಮಗಳನ್ನು ಅಂದರೆ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ಉಳಿದೆಲ್ಲ ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ ಇದ್ದರೂ ಸಹ ಗಿರಿಜಮ್ಮ ಎಂದರೆ ವಿಶೇಷ ಪ್ರೀತಿ. ಅದಕ್ಕೂ ಒಂದು ಕಾರಣವಿದೆ. ಮಹಾದೇವಪ್ಪಜ್ಜನ ತಾಯಿಯ ಹೆಸರು ಗಿರಿಜಮ್ಮ. ತನ್ನ ತಾಯಿಯೇ ಈ ಮೊಮ್ಮಗಳ ಅಂದರೆ ನನ್ನ ರೂಪದಲ್ಲಿ ಬಂದಿದ್ದಾಳೆ ಅಂತ ಅಂದುಕೊಂಡು ನನ್ನ ಮೇಲೆ ತುಸು ಮಮತೆ ಪ್ರೀತಿ ಹೆಚ್ಚಿತ್ತು.. ಹಾಗಂತ ಉಳಿದ ಮೊಮ್ಮಕ್ಕಳು ಜಗಳ ಮಾಡುತ್ತಿರಲಿಲ್ಲ. ಅಜ್ಜ, ತನ್ನ ಮೊಮ್ಮಕ್ಕಳು ಬೇಕೆಂದು ಕೇಳಿದ್ದನ್ನು ಎಲ್ಲರಿಗೂ ಕೊಡಿಸುತ್ತಿದ್ದ. ಒಂದು ವೇಳೆ ಇಲ್ಲ ಅಂತ ಅಜ್ಜ ಹೇಳಿದರೆ, ನಾನು ಶಿಫಾರಸ್ಸು ಮಾಡಿದ್ದೆ ಆದರೆ, ಆ ಶಿಫಾರಸ್ಸು ಕೆಲಸ ಮಾಡುತ್ತಿತ್ತು.. ಒಟ್ಟಿನಲ್ಲಿ ನನ್ನ ಅಜ್ಜನ ಕೂಡು ಕುಟುಂಬ ಸಂತಸದ ಹೊನಲಲ್ಲಿ ತೇಲುತ್ತಿತ್ತು.


ಹೀಗೆ ಸಂತಸದ ಹೊಳೆಯಲ್ಲಿ ತೇಲುತ್ತಿರುವಾಗ ನಾನು ಹನ್ನೆರಡರ ಪ್ರಾಯಕ್ಕೆ ಬರುತ್ತಿದ್ದಂತೆ ಮೈ ನೆರೆತೆ.. ಆಗೆಲ್ಲ ಮೈ ನೆರೆತ ದಿನ, ಸಮಯ ಮೂಹೂರ್ತ ಎಲ್ಲವನ್ನು ಕೇಳಿಸುತ್ತಿದ್ದರು. ಜೊತೆಗೆ ಮೈನೆರೆತ ದಿನ ಸ್ನಾನಕ್ಕೂ ಮೊದಲು ಮೈನೆರೆತ ಹೆಣ್ಣು ಮಕ್ಕಳಿಂದ ಒಂದು ಯಾವುದಾದರೂ ಹೂವಿನ ಗಿಡ ಅಥವಾ ಬಳ್ಳಿಗೆ ಎಲೆ ಅಡಿಕೆ ಇಟ್ಟು, ಕೈ ಮುಟ್ಟಿ ಆ ಗಿಡ ನಮಸ್ಕಾರ ಮಾಡುವಂತೆ ಹೇಳುತ್ತಿದ್ದರು. ಅಂದರೆ ಆ ಗಿಡ ಒಣಗಿದ ಮೈ ನೆರೆತ ಸಮಯ ದೋಷಪೂರಿತವಾದದ್ದು, ಇಲ್ಲವೇ ಆ ಗಿಡ ಸೊಂಪಾಗಿ ಬೆಳೆದರೆ ಮೈ ನೆರೆತ ಸಮಯ ಉತ್ತಮವಾದದ್ದು ಎನ್ನುವ ನಂಬಿಕೆ ನಮ್ಮ ಕಾಲಕ್ಕಿತ್ತು..


ಈ ಎಲ್ಲ ಸಂಪ್ರದಾಯಗಳನ್ನು ನಾನು ನೋಡಿದ್ದೇನೆ. ನಾನು ಮೈ ನೆರೆತ ಕೂಡಲೇ ನನ್ನ ಅಪ್ಪ ಅವ್ವನಿಗಿಂತ ಅಜ್ಜನೆ ಹೆಚ್ಚು ಖುಷಿಯಾಗಿದ್ದನು. ಈಗಿನ ತರಹ ಹೆಣ್ಣು ಮಕ್ಕಳು ಮೈನೆರೆತಿದ್ದು ಪಕ್ಕದ ಮನೆಯವರಿಗೆ ಗೊತ್ತಾಗದಂತೆ ಕಾರ್ಯಕ್ರಮ ಮಾಡುತ್ತಿರಲಿಲ್ಲ ಆಗ.



ಊರಿಗೆಲ್ಲ ಊಟ ಹಾಕಿಸಿ, ಸಂಬಂಧಿಕರಿಗೆ ಹೇಳಿ ಕಳಿಸಿ ಹಬ್ಬ ಮಾಡಿದಂತೆ ಜೋರಾಗಿ ಮಾಡುತ್ತಿದ್ದರು. ನನ್ನದೂ ಕೂಡ ಒಂದು ತರಹ ಊರ ಹಬ್ಬವೇನೋ ಅನ್ನುವಂತೆ ಜೋರಾಗಿ ಕಾರ್ಯಕ್ರಮ ಮಾಡಿದ್ದರು.


ಆ ಕಾರ್ಯಕ್ರಮಕ್ಕೆ ಬಂದಿದ್ದ ಪಕ್ಕದೂರಿನ ಪಟೇಲರ ಮನೆಯ ಹಿರಿಯರು ಅಂದರೆ ನನ್ನ ಅಜ್ಜನ ಗೆಳೆಯರೊಬ್ಬರು ಬಂದಿದ್ದರು. ಆ ಪಟೇಲರ ಅಜ್ಜ ಕಾರ್ಯಕ್ರಮಕ್ಕೆ ಅಂತ ಬಂದವರೊ ಬಂದು ಊಟ ಮಾಡಿ ಹೋಗಿದ್ದರೆ ಆಗುತ್ತಿರಲಿಲ್ಲವೇನೋ? ಅದೆಲ್ಲಿಂದ ಬಂದಿದ್ದರೋ ಅನ್ನುವಂತೆ ಸಿಟ್ಟು ತರಿಸಿ ಹೋಗಿದ್ದರು. ನಾನು ಯಾಕಾದರೂ ಮೈ ನೆರೆತನೊ ಅನ್ನುವಂತೆ ಆಗಿತ್ತು.. ಕಾರ್ಯಕ್ರಮ ಬಹಳ ಚೆನ್ನಾಗಿ ಆಗಿತ್ತು, ನನ್ನ ಅವ್ವ ಕಮಲವ್ವನ ತವರಿಂದ ನನಗೆ ದಂಡಿ ಕುಪ್ಪಸ, ಸೀರೆ, ಹಣ್ಣು ಕಾಯಿ ಜೊತೆಗೆ ಒಂದಿಷ್ಟು ಚಿನ್ನವೂ ಬಂದಿತ್ತು.. ಒಟ್ಟಿನಲ್ಲಿ ನನ್ನ ಅಜ್ಜ ತನಗಿಷ್ಟ ಬಂದ ಹಾಗೆ ತುಂಬಾ ಜೋರಾಗಿಯೇ ಮಾಡಿ ಮುಗಿಸಿದ್ದರು ನನ್ನ ಆ ಕಾರ್ಯಕ್ರಮವನ್ನು..


ಇದೆಲ್ಲ ಮುಗಿದು ದೇವಸ್ಥಾನ, ದೇವರ ದರುಶನ ಮಾಡಿ ಬಂದು ಆ ಕಾರ್ಯಕ್ರಮದ ಗುಂಗಿನಿಂದ ಮನೆಯವರೆಲ್ಲರೂ ಹೊರಗೆ ಬಂದಿದ್ದರು ಅನಿಸುತ್ತೆ..

ನಾನಂತೂ ಹದಿನಾರು ದಿನ , ಪ್ರತಿದಿನ ಅಲಂಕಾರ ಮಾಡಿಕೊಳ್ಳುವುದು, ಆಮೇಲೆ ಮುತ್ತೈದೆಯರಿಂದ ಆರತಿ ಮಾಡಿಸಿಕೊಳ್ಳುವುದು.ಸಾಕಾಗಿ ಹೋಗಿತ್ತು. ಹದಿನಾರು ದಿನದ ನಂತರ ನಾನೂ ಸಹ ನೆಮ್ಮದಿಯ ಉಸಿರು ಬಿಟ್ಟಿದ್ದೆ..


ಹೀಗೆ ಎಲ್ಲರೂ ಆರಾಮವಾಗಿ ಕೂತು ಒಂದು ದಿನ ಕಟ್ಟೆಯ ಮೇಲೆ ಹರಟೆ ಹೊಡೆಯುವಾಗ ನನ್ನ ಅಜ್ಜ ಒಂದು ವಿಷಯ ಪ್ರಸ್ತಾಪ ಮಾಡಿದರು..



ಹಾಗಾದರೆ ಅಜ್ಜ ಮಾಡಿದ ಪ್ರಸ್ತಾಪ ಏನು? ಅದಕ್ಕೆ ಮನೆಯವರೆಲ್ಲರ ಪ್ರತಿಕ್ರೀಯೆ ಏನಾಗಿತ್ತು ಅಂತ ಇಷ್ಟ ದೇವತೆ ಭಾಗ ಮೂರರಲ್ಲಿ ನೋಡೋಣ....



Rate this content
Log in

Similar kannada story from Classics