STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 15

ಇಷ್ಟ ದೇವತೆ ಭಾಗ 15

2 mins
295


ಗಿರಿಜೆಯ ಮಾವನು ತನ್ನ ಹೆಂಡತಿಯ ದುಃಖ , ಹಾಗೂ ಸಂಕಟವನ್ನು ಅರಿತು, ಅವಳಿಗೆ ಕೂರಿಸಿಕೊಂಡು ಬುದ್ದಿ ಹೇಳಿದನು. ಗಿರಿಜೆ ನಮ್ಮ ಮನೆಗೆ ಬಂದ ಮೇಲೆ ಕಲ್ಲಿನಂತೆ ಇದ್ದ ನಮ್ಮ ಮಗನನ್ನು ಮನುಷ್ಯನನ್ನಾಗಿ ಮಾಡಿದ್ದಾಳೆ. ಮನೆಗೆ ಬರಲು ವಿಚಾರಿಸುತ್ತಿದ್ದ ಆತನನ್ನು ಹೊಲದಿಂದ ತುಸು ಮನೆ ಕಡೆ ಮುಖ ಮಾಡುವಂತೆ ಬಡಲಾಯಿಸಿದ್ದಾಳೆ. ಆತನ ಹೃದಯ ಗೆದ್ದು, ನಮ್ಮ ಮನೆ ತುಂಬಿದ್ದಾಳೆ.


ಹೆಣ್ಣು ಮಕ್ಕಳನ್ನು ಹೆತ್ತರೇನಾಯಿತು? ಅವುಗಳು ಸಹ ನಮ್ಮ ಮೊಮ್ಮಕ್ಕಳೆ ಅಲ್ಲವೇ? ಆ ಮೊಮ್ಮಕ್ಕಳಿಗೂ ನಾವೇ ಅಜ್ಜ ಅಜ್ಜಿ ಅಲ್ಲವೇ? ಈಗೇನು ಹೆಣ್ಣು ಗಂಡು ಅಂತ ಬೇಧ ಭಾವ ಮಾಡುವಂತಿಲ್ಲ, ಎಲ್ಲರೂ ಸರಿ ಸಮಾನರೆ.... ಹಾಗಿದ್ದಾಗಿಯೂ ನೀನು ಈ ರೀತಿ ನಡೆದು ಕೊಂಡಿದ್ದು ತಪ್ಪು. ಆದರೂ ಸಹ ಅವಳು ನಿನ್ನನ್ನು ಬಿಟ್ಟು ಕೊಟ್ಟು ಮಾತಾಡುತ್ತಿಲ್ಲ. ಮತ್ತೂ ಗಂಡನಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾಳೆ. ಇದಕ್ಕೆ ನಾವು ಮೆಚ್ಚಿ ಹೋಗಳಲೇ ಬೇಕು. ಇನ್ನಾದರೂ ನೀನು ನಿನ್ನ ತಪ್ಪನ್ನು ತಿದ್ದಿಕೊಂಡು , ಅವಳು ನಿನ್ನ ಮಗಳೆಂದು ತಿಳಿದು ಚೆನ್ನಾಗಿ ನೋಡಿಕೊಂಡು ಹೋಗು ಎಂದು ಬುದ್ದಿ ಮಾತು ಹೇಳಿದನು.


ಆಗ ಗಿರಿಜೆಯ ಅತ್ತೆ, ಆಯ್ತು ರಿ , ನೀವು ಹೇಳಿದಂತೆ ಮಾಡುತ್ತೆನೆ, ಇಷ್ಟೊಂದು ಒಳ್ಳೆಯ ಮನಸ್ಸಿನ, ಒಳ್ಳೆಯ ಗುಣವಿರುವ ಸೊಸೆಯನ್ನು ತುಚ್ಛವಾಗಿ ಕಂಡು ತಪ್ಪು ಮಾಡಿದ್ದೇನೆ,ಪಾಪವನ್ನೂ ಮಾಡಿದ್ದೇನೆ. ಅವಳ ಹತ್ತಿರ ಕ್ಷಮೆ ಬೇಡಿ ನನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿ ಕೊಳ್ಳುವೆ.. ಬೇಕಾದರೆ ಕಾಲಿಗೂ ಬೀಳುವೆ ಎಂದಳು.



ಹೆಂಡತಿಯ ಇಂತಹ ಮಾತುಗಳನ್ನು ಕೇಳಿ ಪಟೇಲಪ್ಪನು ತುಂಬಾ ಖುಷಿಯಾದನು. ಸರಿ ಹಂಗಾದ್ರ ತಡ ಮಾಡಬೇಡ, ನಿನ್ನ ಮನಸು ಯಾವಾಗ ಹೆಂಗ ಹೊರಳುತ್ತೋ ಗೊತ್ತಿಲ್ಲ. ಈಗ ಸರಿಯಾದ ಸಮಯ,ಸರಿಯಾದ ಮೂಢನಲ್ಲಿ ಇದ್ದಿಯಾ, ಅದಕ್ಕೆ ಈಗಲೇ ಹೋಗಿ ಸೊಸೆಯ ಹತ್ತಿರ ಮಾತಾಡಿ ಬಾ ಎಂದು ಹೇಳಿದನು.


ಆಯ್ತು ರಿ, ನೀವ್ ಹೇಳಿದಂಗೆ ಮಾಡ್ತನಿ ಅಂತ ಸೊಸೆಯ ಕೋಣೆಯ ಕಡೆಗೆ ನಡೆದಳು..


ಅತ್ತೆ ತನ್ನ ಕೋಣೆಗೆ ಬಂದಿದ್ದನ್ನು ನೋಡಿದ ಕೂಡಲೇ ಗಿರಿಜೆಯು ಸ್ವಲ್ಪ ಹೆದರುತ್ತಲೇ, ಅತ್ತೆವ್ವಾರ ಬರ್ರಿ ಅಂತ ಕರೆದಳು. ಒಳಗೊಳಗೇ ಭಯ,ಹೆಣ್ಣು ಹುಟ್ಟಿದ್ದಕ್ಕೆ ಏನಂತಾರೋ, ಏನು ಮಾಡಲಿಕ್ಕೆ ಬಂದಿದ್ದರೋ ಅಂತ ಹೆದರುತ್ತಲೇ ಗಿರಿಜೆ ಮಾತು ಆರಂಭಿಸಿದಳು.


ಯಾಕರಿ ಅತ್ತೆವ್ವಾರ, ಹೇಳಿದ್ದರ ನಾನ ಬರ್ತಿದ್ದೆ ,ನೀವ್ಯಾಕ ತ್ರಾಸ್ ಮಾಡಿಕೊಂಡರಿ ಅಂದ್ಲು. ಅದಕ್ಕೆ ಅತ್ತೆ, ಇಲ್ಲ ಗಿರಿಜಾ ನಾನು ಹಿಂಗ ಮಾಡಿ ಮಾಡಿ ನಿನ್ನ ಮುಂದ ಬಾಳ ಸಣ್ಣಕಿ ಆಗ್ಬಿಟ್ಟನಿ. ನೀನು ನಿನ್ನ ಒಳ್ಳೆ ಗುಣದಿಂದ ಬಾಳ ಮೇಲಕ್ಕೆ ಹೋಗ್ಬಿಟ್ಟಿ ಅಂದಳು.


ಗಿರಿಜೆಯು ಒಂದು ನಿಮಿಷ ಮೌನವಾಗಿ ಬಿಟ್ಟಳು.


ಆಮೇಲೆ ಸುಧಾರಿಸಿಕೊಂಡು , ಅತ್ತೆವ್ವಾರ ಏನಾಗೇತ್ರಿ ನಿಮಗ , ಯಾಕ್ ಹಿಂಗ ಮಾತಾಡಾಕ್ ಕುಂತೀರಿ , ಇದೆಲ್ಲ ನಿಮಗ ಚೆಂದ ಕಾಣಲ್ರಿ , ನಾನೇನಾದ್ರು ತಪ್ಪು ಮಾಡಿದ್ದರ ಒಂದ್ಯಾಡು ಹೊಡೆತ ಹೊಡದ್ ಬಿಡ್ರಿ,ಅದ್ರ ಹಿಂಗೆಲ್ಲ ಮಾತಾಡಬೇಡ್ರಿ ಅಂದ್ಲು. ಆಗ ಗಿರಿಜೆಯ ಅತ್ತೆಯು ಅಳುತ್ತಾ,ತಾನು ಮಾಡಿದ ತಪ್ಪೇಲ್ಲವನ್ನು ಹೇಳಿ, ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡಲು.


ಆಗ ಗಿರಿಜೆಯು ಅತ್ತೆ ಕಾಲಿಗೆ ನಮಸ್ಕಾರ ಮಾಡಿ, ತಾನೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ, ಆದ್ರೆ ಹಿಂಗೆಲ್ಲ ಮಾತಾಡಬೇಡಿ ಅಂತ ಹೇಳಿ ಅತ್ತೆಯನ್ನು ತಬ್ಬಿ ಅಳಲು ಶುರು ಮಾಡಿದಾಗ ಅತ್ತೆಗೆ ಸೊಸೆಯ ಮೇಲೆ ಮತ್ತಷ್ಟು ಪ್ರೀತಿ, ಗೌರವ , ಅಭಿಮಾನ ಹೆಚ್ಚಾಗಿ, ಅವಳನ್ನು ಆಲಂಘಿಸಿ , ಹಣೆಗೊಂದು ಮುಟ್ಟನಿಟ್ಟು ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಂಡಳು. ಹೀಗೆ ಅತ್ತೆ ಸೊಸೆಯರಿಬ್ಬರು ಒಂದಾಗಿದ್ದನ್ನು ಕಂಡು ಪಟೇಲಪ್ಪ ತುಂಬಾ ಖುಷಿಯಾದನು.


ಈಗಂತೂ ಅವಳು ಅತ್ತೆಗೆ ಮುದ್ದಿನ ಸೊಸೆಯಾದಳು.

ಮೊಮ್ಮಕ್ಕಳನ್ನು ಪ್ರೀತಿಸುತ್ತ, ಅವರಿಗೆ ಕಥೆ ಹಾಡು ಹೇಳುತ್ತಾ ದಿನ ಕಳೆಯಲು ಶುರುವಾದ ಗಿರಿಜೆಯ ಅತ್ತೆಯು ಮಗ ಶಂಭುನನ್ನು ಕರೆದು , ನಿನ್ನಿಂದಾಗಿ ನನಗೆ ಇಂತಹ ಒಳ್ಳೆಯ ಸೊಸೆ ಸಿಕ್ಕಿದ್ದಾಳೆ. ಅವಳು ನಮ್ಮ ಮನೆಯ ಮಹಾಲಕ್ಷ್ಮಿ , ನಮ್ಮ ಮನೆಗೆ ಒಳ್ಳೆಯದನ್ನೇ ಮಾಡಲಿಕ್ಕೆ ಸೊಸೆಯಾಗಿ ಬಂದಿದ್ದಾಳೆ. ಅವಳು ನನ್ನ ಪಾಲಿಗಂತೂ ಇಷ್ಟ ದೇವತೆ ಆಗಿದ್ದಾಳೆ. ಅವಳ ಗುಣ ಒಳ್ಳೆಯ ಮನಸ್ಸಿನಿಂದ , ನಿನ್ನನ್ನು ನನ್ನನ್ನು ತಿದ್ದಿ ಒಳ್ಳೆಯವರನ್ನಾಗಿ ಮಾಡಿದ್ದಾಳೆ.


ನಮ್ಮ ಕುಟುಂಬದ ಇಷ್ಟದೇವತೆ ಆಗಿ ಗಿರಿಜೆಯು ಇಂದು ಎಲ್ಲರನ್ನು ಒಂದು ಮಾಡಿ, ಮತ್ತೆ ನಮ್ಮ ಮನೆಯಲ್ಲಿ ಖುಷಿ ನೆಮ್ಮದಿ ಸಂತೋಷ ನೆಲೆಸುವಂತೆ ಮಾಡಿದ್ದಾಳೆ ಎಂದು ಹೇಳಿದಳು.


ಆಗ ಎಲ್ಲರೂ ಸಹ ಆ ಮಾತನ್ನು ಒಪ್ಪಿ ಗಿರಿಜೆಯನ್ನು ಹೊಗಳಿದರು. ಅಂದು ಮನೆಯಲ್ಲಿ ಸಿಹಿ ಅಡುಗೆ ಮಾಡಿ ಹಬ್ಬದಂತೆ ಆಚರಣೆ ಮಾಡಿದರು...


ಅವಳು ತವರುಮನೆಯಲ್ಲಿ ಸುಖವಾಗಿ ಬೆಳೆದಿದ್ದರೂ, ಗಂಡನ ಮನೆಯಲ್ಲಿ ಕಷ್ಟವನ್ನು ಎದುರಿಸಿದ್ದರೂ ಸಹ, ಅವಳ ತಾಳ್ಮೆ, ಸಹನೆ, ಒಳ್ಳೆಯ ಗುಣಗಳಿಂದಾಗಿ ,ಎಲ್ಲರ ಮನಸ್ಸನ್ನು ಗೆದ್ದು, ಇಷ್ಟ ದೇವತೆಯಾಗಿ ,ಕುಟುಂಬದ ಖುಷಿಯಾಗಿ ,ಎಲ್ಲರಲ್ಲೂ ನಗು ಸಂತೋಷ ನೆಮ್ಮದಿ ತಂದು ಕುಟುಂಬದವರೆಲ್ಲರನ್ನು ಒಟ್ಟುಗೂಡಿಸಿದ್ದಳು...





Rate this content
Log in

Similar kannada story from Classics