ಇಷ್ಟ ದೇವತೆ ಭಾಗ 14.
ಇಷ್ಟ ದೇವತೆ ಭಾಗ 14.
ಶಂಭು ಈಗ ತುಂಬಾ ಬದಲಾಗಿದ್ದನು . ಆತನಿಗೆ ಗಿರಿಜೆಯ ಬೆಲೆ ಏನೆಂದು ತಿಳಿದಿತ್ತು. ಗೆಳೆಯನ ಅರ್ಥಗರ್ಭಿತ ಮಾತುಗಳು ಆತನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದ್ದವು. ಜೊತೆಗೆ ಆತನ ಮಾತುಗಳಿಂದ ಬುದ್ಧಿಯೂ ಬಂದಂತಾಗಿತ್ತು. ಹೀಗಾಗಿ ಶಂಭು ಈಗ ಹೆಂಡತಿಯ ಪರ ನಿಂತಿದ್ದನ್ನು ಆತನ ತಾಯಿಗೆ ಸಹಿಸಲು ಆಗಲಿಲ್ಲ. ಮಾತಿಗೆ ಮಾತು ಬೆಳೆದಾಗ ತಾಯಿಯ ಮಾತುಗಳನ್ನು ಕೇಳಿದ ಶಂಭುವಿಗೆ ಇನ್ನು ಆ ಮನೆಯಲ್ಲಿ ತನ್ನ ಹೆಂಡತಿ ಹಾಗೂ ಮಕ್ಕಳು ಇರುವುದು ಸರಿಯಲ್ಲ ಎನ್ನಿಸಿತು.
ತನ್ನ ತಂದೆಯೊಂದಿಗೆ ಶಂಭು ಈ ವಿಷಯದ ಕುರಿತು ಮಾತನಾಡಲು ಯೋಚಿಸಿದನು. ಅದಕ್ಕೂ ಮುನ್ನ ಅವನ ಹೆಂಡತಿ ಗಿರಿಜೆಯೊಂದಿಗೆ ಚರ್ಚಿಸಿದನು.
ಆಗ ಅವಳು ಶಂಭುವಿನ ನಿರ್ಧಾರವನ್ನು ತಪ್ಪೆಂದು ಹೇಳಿದಳು. ಹಾಗೂ ಇದಕ್ಕೆ ತನ್ನ ಸಮ್ಮತಿಯಿಲ್ಲ ಎಂದೂ ಹೇಳಿದಳು. ಆಗ ಶಂಭುವಿಗೆ ಹೆಂಡತಿ ಮೇಲೆ ಇನ್ನೂ ಪ್ರೀತಿ , ಗೌರವ ಹೆಚ್ಚಾಯಿತು. ಇಷ್ಟೋಂದು ಒಳ್ಳೆಯ ಗುಣವಿರುವ ಸತಿಗೆ ಹೊಡೆದು ಬಿಟ್ಟೆನಲ್ಲ, ಅಂದು ನನ್ನ ಬುದ್ದಿಗೆ ಮಂಕು ಕವಿದಿತ್ತೇನೋ ಎಂದುಕೊಂಡು ಬೇಸರಿಸಿಕೊಂಡನು.
ಗಂಡನ ಸಪ್ಪೆ ಮುಖ ನೋಡಲಾರದ ಅವಳು ಸಮಾಧಾನ ಮಾಡುತ್ತ ಗಂಡನಿಗೆ ಬೇರೆ ಹೋಗುವ ನಿರ್ಧಾರವನ್ನು ಕೈ ಬಿಡುವಂತೆ ಹೇಳಿದಳು. ಜೊತೆಗೆ ತನ್ನ ಮೂರು ಜನ ಹೆಣ್ಣು ಮಕ್ಕಳು ತನ್ನಂತೆಯೇ ಕೂಡು ಕುಟುಂಬದಲ್ಲಿ ಬೆಳೆಯ ಬೇಕೆಂದು ಆಸೆ ಪಟ್ಟಳು. ಆ ಮೂರು ಮಕ್ಕಳಿಗೂ ಅಜ್ಜ ಅಜ್ಜಿಯ ಪ್ರೀತಿ, ಮಮತೆ ಸಿಗಬೇಕೆಂದೂ , ಕಾಕಂದಿರು , ಚಿಕ್ಕಮ್ಮಂದಿರು ,ತಮ್ಮ ಇವರೆಲ್ಲರ ಜೊತೆಗೆ ಬೆಳೆಯಬೇಕೆಂದು ತನ್ನ ಆಸೆಯನ್ನು ಗಂಡನಿಗೆ ತಿಳಿಸಿದಳು.
ನೀವಂದುಕೊಂಡಂತೆ ಅತ್ತೆಯೇನೂ ಕೆಟ್ಟವರಲ್ಲ. ತುಂಬಾ ಒಳ್ಳೆಯವರು. ಅವರಿಗೂ ಆಸೆಯಿರುತ್ತೆ ಅಲ್ವಾ , ತಮ್ಮ ಮಗನಿಗೂ ಒಬ್ಬ ಗಂಡು ಮಗ ಹುಟ್ಟಲಿ ,ಆತನ ವಂಶ ಬೆಳಗಲಿ ಅಂತಾ, ಅದೇನೂ ದೊಡ್ಡ ತಪ್ಪಲ್ಲ, ಎಲ್ಲರೂ ಆಸೆ ಪಡುವಂತೆ ಅವರೂ ಆಸೆ ಪಟ್ಟಿದ್ದಾರೆ.. ಇಷ್ಟಕ್ಕೆಲ್ಲ ಬೇರೆ ಮನೆಗೆ ಹೋಗುವುದು ಸರಿಯಲ್ಲ. ಮಾವನವರ ಮರ್ಯಾದೆ ಬಗ್ಗೆ ಯೋಚಿಸಿ, ಹಾಗೂ ಅವರಿಗಾಗುವ ನೋವು, ಸಂಕಟದ ಬಗ್ಗೆ ಯೋಚಿಸಿ ಎಂದು ತಿಳಿಸಿ ಹೇಳಿದಳು.
ಆಗ ಶಂಭುವಿಗೂ ತನ್ನ ಹೆಂಡತಿ ಹೇಳುತ್ತಿರುವ ಮಾತುಗಳು ಸರಿಯೆನ್ನಿಸಿದವು. ಇಷ್ಟೊಂದು ಒಳ್ಳೆಯ ಗುಣಗಳಿರುವ ಸೊಸೆಯನ್ನು ಕೀಳಾಗಿ ಕಾಣುತ್ತಿರುವ ಅವ್ವನ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿರುವಾಗ ಮತ್ತೇ ಗಿರಿಜೆಯು ಪುನಃ ಅತ್ತೆಯ ಪರ ಮಾತನಾಡಿದಳು. ಈ ಭಾರಿಯೂ ಅತ್ತೆ ಕೋಣೆಯ ಹೊರಗೆ ನಿಂತು ಎಲ್ಲ ಮಾತುಗಳನ್ನು ಕೇಳಿಸಿ ಕೊಳ್ಳುತ್ತಿದ್ದಳು.
ಆಕೆಗೆ ತನ್ನ ಕೆಟ್ಟ ಬಾಯಿಯ ಬಗ್ಗೆ ಅಸಯ್ಯವಾಯಿತು. ತನ್ನ ವರ್ತನೆಯ ಕುರಿತು ನೆನೆಸಿಕೊಂಡು ನಾಚಿಕೆ ಆಯಿತು. ತಾನೆಂತಹ ಹೆಣ್ಣು ಎಂದು ತನಗೆ ತಾನೇ ಹಳಿದುಕೊಂಡಳು. ಮುತ್ತಿನಂತಹ ಸೊಸೆಗೆ ಎಷ್ಟೊಂದು ನೋವು ಕೊಟ್ಟು ಬಿಟ್ಟೆನಲ್ಲ ಅಂತ ಬೇಸರವಾಯಿತು. ತನ್ನ ತಪ್ಪಿನ ಅರಿವಾಗಿ, ಹೆರಿಗೆಯ ನೋವಲ್ಲಿಯೂ ನಾನು ನನ್ನ ಕ್ರೂರತನವನ್ನೇ ಮೆರೆದು, ಹೆಣ್ಣು ಜಾತಿಗೆ ಕಳಂಕವಾದೇನಲ್ಲ ಎಂದು ತನ್ನಲ್ಲೇ ತಾನು ದುಃಖ ಪಟ್ಟಳು.
ಈಗ ಯಾವ ಮುಖ ಹೊತ್ತು ಸೊಸೆಯ ಹತ್ತಿರ ಹೋಗಿ ಮಾತನಾಡಲಿ, ಮಾತನಾಡಲು ನಾನೇನು ಉಳಿಸಿರುವೆ, ಅವಳ ದೃಷ್ಟಿಯಲ್ಲಿ ನಾನು ತುಂಬಾ ಸಣ್ಣವಳಾಗಿ ಬಿಟ್ಟಿದ್ದೀನಿ ಎಂದುಕೊಳ್ಳುತ್ತ ಸಂಕಟ ಪಡುತ್ತಿದ್ದಳು. ಇದೆಲ್ಲವನ್ನು ಗಮನಿಸುತ್ತಿದ್ದ ಶಂಭುವಿನ ತಂದೆ ಬಂದು, ತನ್ನ ಹೆಂಡತಿಯನ್ನು ಸಮಾಧಾನಿಸಿ ಒಂದಿಷ್ಟು ಬುದ್ಧಿ ಮಾತುಗಳನ್ನು ಹೇಳಿದನು.
ಗಿರಿಜೆಯ ಮಾವ ಹೇಳಿದ ಮಾತುಗಳನ್ನು ,ಅವಳ ಅತ್ತೆ ಕೇಳಿ ಮುಂದೇನು ಮಾಡಿದಳೆಂದು ಮುಂದಿನ ಹಾಗೂ ಕೊನೆಯ ಭಾಗದಲ್ಲಿ ನೋಡೋಣ.
