Shridevi Patil

Classics Inspirational Others

3.4  

Shridevi Patil

Classics Inspirational Others

ಹವ್ಯಾಸ ಕಟ್ಟಿಕೊಟ್ಟ ಬದುಕು

ಹವ್ಯಾಸ ಕಟ್ಟಿಕೊಟ್ಟ ಬದುಕು

2 mins
234



ಬದುಕು ಎನ್ನುವುದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪಾಠ ಕಲಿಸುತ್ತದೆ. ಕಷ್ಟ , ಸುಖ , ನೋವು , ನಲಿವು ಎಲ್ಲವೂ ಸಹ ಒಂದೊಂದು ಅನುಭವದಿಂದ ಬರುತ್ತದೆ. ಅದೇ ರೀತಿ ಜೀವನೋಪಾಯಕ್ಕೆ ನಮ್ಮಲ್ಲಿರುವ ಹವ್ಯಾಸಗಳು ಸಹ ಒಮ್ಮೊಮ್ಮೆ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತವೆ. ಮನೆಯ ಹಿಂಬದಿಯಲ್ಲಿ ಚಿಕ್ಕದಾಗಿ ಕೈದೋಟ ಮಾಡುವುದು , ಹೂವಿನ ಗಿಡ ನೆಟ್ಟು ಹೂವು ಮಾರುವುದು , ಹೊಲಿಗೆ ಕೆಲಸ , ಹೀಗೆ ಅನೇಕಾರು ಹವ್ಯಾಸಗಳನ್ನು ಬೆಳೆಸಿಕೊಂಡವರು ಒಮ್ಮೊಮ್ಮೆ ಆಪತ್ಕಾಲದಲ್ಲಿ ಈ ಹವ್ಯಾಸಗಳಿಂದ ಜೀವನ ನಡೆಸಿದ ಉದಾಹರಣೆಗಳೂ ಇವೆ...



ಆರತಿ ಸುಂದರವಾದ ಹುಡುಗಿ. ಇಬ್ಬರು ಅಣ್ಣಂದಿರ ಮುದ್ದಿನ ತಂಗಿ. ಅಪ್ಪ ಅಮ್ಮ ಇಲ್ಲದಿದ್ದರೂ ಅಣ್ಣಂದಿರಿಬ್ಬರು ತಂಗಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ತಂಗಿ ಕೇಳಿದ್ದನ್ನು ಇಲ್ಲವೆನ್ನದೆ ತಂದು ಕೊಟ್ಟು , ಅಪ್ಪ ಅಮ್ಮ ಇಲ್ಲ ಎನ್ನುವ ಕೊರಗು ಬರದೆ ಇರುವಂತೆ ನೋಡಿಕೊಳ್ಳುತ್ತಿದ್ದರು. ಮೂರು ಜನರು ದೇಹ ಮಾತ್ರ ಬೇರೆ , ಉಸಿರು ಒಂದೇ ಎನ್ನುವಂತೆ ಇದ್ದರು. ಊರಲ್ಲಿಯೂ ಸಹ ಹಾಗೆ ಹೆಸರು ಉಳಿಸಿಕೊಂಡಿದ್ದರು. ಜಗಳಗಳು ಅವರತ್ತ ಸುಳಿದ ಉದಾಹರಣೆಗಳೇ ಇರಲಿಲ್ಲ. ಅಷ್ಟೊಂದು ಅನ್ಯೋನ್ಯತೆ ಹೊಂದಿದ್ದರು. ಮೂವರು ಸಣ್ಣವರಿದ್ದ ಕಾರಣ ಸೋದರ ಮಾವನ ಕಾಳಜಿ ಇರುತ್ತಿತ್ತು. ಅಮ್ಮನ ತಮ್ಮ ಆದರೂ ಅಷ್ಟೊಂದು ವಯಸ್ಸಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಅರತಿಗೆ ಹಾಗೂ ಆಕೆಯ ಸೋದರ ಮಾವನಾದ ಸೂರ್ಯನಿಗೆ ಮದುವೆ ಮಾಡುವುದಾಗಿ ಹೆಸರಿಟ್ಟಿದ್ದರು.


ಎಲ್ಲವೂ ಚೆನ್ನಾಗಿದ್ದಿದ್ದರೆ ಆ ಸೂರ್ಯನೂ ಕೂಡ ಬೇರೆ ಹುಡುಗರಂತೆ ಮೋಜು ಮಸ್ತಿ ಅಂತ ಇರುತ್ತಿದ್ದನೋ ಏನೋ ಗೊತ್ತಿಲ್ಲ , ಅಕ್ಕನ ಮಕ್ಕಳ ಜವಾಬ್ದಾರಿ ಬಿದ್ದ ಮೇಲೆ ತನ್ನ ಕರ್ತವ್ಯ ಅರಿತು ನಡೆಯುತ್ತಿದ್ದನು. ಈ ಮದ್ಯ ಆರತಿಯ ಅಣ್ಣಂದಿರು ತಂಗಿಗೆ ಸ್ವಲ್ಪ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಹೊಲಿಗೆ ತರಬೇತಿಯನ್ನು ಕೊಡಿಸಿದರು. ಅವಳು ಕೂಡ ಅಷ್ಟೇ ಗಮನವಹಿಸಿ ಹೊಲಿಗೆ ಕಲಿತುಕೊಂಡಳು.



ಆರತಿಗೆ ಹದಿನೆಂಟು ವರ್ಷ ತುಂಬುತ್ತಿದ್ದಂತೆಯೇ ಸೂರ್ಯನ ಜೊತೆಗೆ ಮದುವೆ ಮಾಡಿಸಿದರು. ನಾಲ್ಕೈದು ವರ್ಷ ಕಳೆಯುವುದರೊಳಗಾಗಿ ಮೂರು ಜನ ಮಕ್ಕಳು ಜನಿಸಿದರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಹೀಗೆ ತುಂಬಿದ ಕುಟುಂಬ ಆರತಿಯದಾಯಿತು.


ಖುಷಿ ಸಂತೋಷ ಮಾತ್ರ ತುಂಬಿದ್ದ ಆರತಿಯ ಬಾಳಲ್ಲಿ ಬಿರುಗಾಳಿಯೊಂದು ಬೀಸಿ ಬದುಕೇ ಛಿದ್ರ ಛಿದ್ರ ಆಯ್ತು. ಮನೆ ದೇವರಿಗೆ ಹರಕೆ ತೀರಿಸಲು ಹೋಗುವ ವೇಳೆ ಘಟ್ಟ ಪ್ರದೇಶದ ಬಳಿ ಭೀಕರ ಅಪಘಾತವಾಗಿ ಗಂಡ ಮತ್ತು ಮಗ ಇಬ್ಬರು ತೀರಿಹೋದರು. ಸಣ್ಣ ಮಗಳ ಕಾಲು ಮುರಿದು ಒಂದು ಕಾಲೇ ಇಲ್ಲದಾಯ್ತು. ಆರತಿಗೂ ಗಾಯಗಳಾಗಿ ಬಲಗೈಯಲ್ಲಿ ಕಿರುಬೆರಳು ಕೂಡ ಹೋಯಿತು.


ವಿಧಿಯ ಕ್ರೂರ ಆಟ ಮುಗಿದಮೇಲೆ ಆರತಿ ಗಟ್ಟಿ ಮನಸ್ಸು ಮಾಡಿ , ಧೈರ್ಯ ತಂದು ಕೊಂಡಳು. ಅಣ್ಣಂದಿರಿಗೂ ಮದುವೆ ಆಗಿತ್ತು. ಅವರಿಗೆ ತೊಂದರೆ ಕೊಡುವ ಮನಸ್ಸೂ ಇರಲಿಲ್ಲ ಅವಳಿಗೆ. ಹೀಗಾಗಿ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳುವ ನಿರ್ಧಾರ ಮಾಡಿದಳು . ಆದರೆ ಹೆಚ್ಚು ಶಾಲೆಯನ್ನು ಕಲಿಯದ ಕಾರಣ ಮನೆಯಿಂದ ಹೊರ ಹೋಗಿ ಮಾಡುವ ಕೆಲಸ ಸಿಗುವುದು ಕಷ್ಟವಾಗಿತ್ತು. ಆಗ ಅವಳು ಚಿಕ್ಕವಳಿದ್ದಾಗ ಕಲಿತ ಹೊಲಿಗೆ ಕೆಲಸವನ್ನು ಶುರು ಮಾಡಿದಳು. ಮೊದ ಮೊದಲು ಸಣ್ಣದಾಗಿ ಶುರು ಮಾಡಿದ ಆಕೆಯ ಆ ಹೊಲಿಗೆ ಕೆಲಸ ಆರತಿಯ ಕೈ ಹಿಡಿದಿತ್ತು. ತನ್ನಿಬ್ಬರು ಪುಟ್ಟ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆ ಆಗದಂತೆ, ಜೊತೆಗೆ ಮನೆಯನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಳು.


ಹವ್ಯಾಸ ರೂಪದ ಆ ಕೆಲಸ ಇಂದು ಆರತಿಗೆ ಜೀವನ ಮಾಡಲು ಸಹಾಯವಾಗಿತ್ತು.ಮಕ್ಕಳಿಬ್ಬರನ್ನು ಓದಿಸಿ, ಒಳ್ಳೆಯ ಮನೆಗಳಿಗೆ ಮದುವೆ ಮಾಡಿಕೊಟ್ಟು ಆರತಿಯೀಗ ತನಗಾಗಿ ಮಾಡಿಕೊಂಡ ಪುಟ್ಟ ಗೂಡಲ್ಲಿ ಬೇರೆ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ನೀಡುತ್ತಾ ತನ್ನ ಜೀವನ ನಡೆಸುತ್ತಿದ್ದಾಳೆ.


ಹೀಗೆ ಯಾವುದೇ ಕೆಲಸವನ್ನು ಕೀಳಾಗಿ ಕಾಣದೇ, ಕಲಿಯುವ ಅವಕಾಶ ಸಿಕ್ಕಾಗ ಚೆನ್ನಾಗಿ ಕಲಿತರೆ ಮುಂದೊಂದು ದಿನ ಅದು ನಮ್ಮ ಕೈ ಹಿಡಿಯುತ್ತದೆ.






Rate this content
Log in

Similar kannada story from Classics