ಹೀಗಿದ್ದರು ಅವರು ಆಗ
ಹೀಗಿದ್ದರು ಅವರು ಆಗ
ಇದು ನಂಬಲಸಾಧ್ಯವಾದರೂ, ಒಂದು ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಒಂದು ರಾಜ್ಯದ ಅತ್ಯುನ್ನತ ಸ್ಥಾನ ಪಡೆದ ಒಬ್ಬ ನಿಷ್ಠಾವಂತ ರಾಜಕಾರಣಿಯ, ಇಂದಿನ ಪೀಳಿಗೆ ತಿಳಿಯಲೇ ಬೇಕಾದ ಹಲವು ಸತ್ಯ ಸಂಗತಿಗಳು.
ಇವರು ಒಮ್ಮೆ ಒಂದು ಕಾರ್ಯಕ್ರಮದ ಉದ್ಘಾಟನೆಗೆ ಇವರ ಹಳ್ಳಿಯ ಮುಖಾಂತರವೇ ಹೋಗಬೇಕಾದ ಕಾರಣ, ವಯಸ್ಸಾದ ತಾಯಿಯನ್ನು ನೋಡಿ ಬಹಳ ದಿನಗಳಾದ್ದರಿಂದ ಮನೆಯಲ್ಲೇ ಊಟಮಾಡು ಕೊಂಡು ಹೋಗುವ ಬಯಕೆಯೂ ಇದ್ದುದರಿಂದ ತಮ್ಮ ಮನೆಗೆ ಬಂದರು. ಈಗಿನಂತೆ ಮೊದಲೇ ವಿಷಯ ತಿಳಿಸಲು ಸಾಧ್ಯ ವಿಲ್ಲದ ಕಾರಣ, ಮಗನನ್ನು ನೋಡಿ ತಾಯಿಗೆ ಆಶ್ಚರ್ಯ. ಬೇಗ ಮೂರು ಜನಕ್ಕೆ ಅಡುಗೆ ಮಾಡು. ಊಟ ಮಾಡಿ ಹೋಗ್ತೀವಿ ಅಂದಾಗ ವಯಸ್ಸಾದ ತಾಯಿಗೆ ಗಡಿಬಿಡಿ. ಈ ಹಳ್ಳಿಗೆ ಬರುತ್ತಿರುವಾಗಿ ಮುಂದೆ ಒಂದು ಬೆಂಗಾವಲು ಪಡೆಯ ಪೊಲೀಸ್ ಜೀಪ್ ಸೈರನ್ ಮಾಡಿಕೊಂಡು ಹೋಗುತ್ತಿದ್ದುದನ್ನ ಕಂಡು. ಇವರ ಕಾರನ್ನು ನಿಲ್ಲಿಸಿ ಜೀಪ್ ನಲ್ಲಿದ್ದ ಪೊಲೀಸರನ್ನು ಕರೆದು ನಾನು ಚೈನಾ ದೇಶದಲ್ಲಿ ಇಲ್ಲ ಈ ಪೊಲೀಸ್ ಜೀಪ್ ವಾಪಸ್ ತೊಗೊಂಡು ಹೋಗಿ ಅಂದರು. ಅವರು ಏನು ಮಾಡಬೇಕೆಂದೇ ತಿಳಿಯದೆ ಒಪ್ಪಿ ಹಾಗೇ ಮಾಡ ಬೇಕಾಯ್ತು. ಇವರು ಮನೆಯಲ್ಲಿ ಅತ್ತ ಇತ್ತ ಎಲ್ಲಾ ನೋಡುತ್ತ ಬಂದಾಗ ಕಣ್ಣಿಗೆ ಹೊಸದಾಗಿ ಕಂಡದ್ದು, ಗ್ರಾಮ ಪಂಚಾಯ್ತಿ ಯಿಂದ ಹಾಕಿಸಿ ಕೊಟ್ಟ ಒಂದು ನಲ್ಲಿ. ತಾಯಿಯನ್ನ ಕರೆದು ಕೇಳಿದಾಗ ನೀನು ಈಗ ದೊಡ್ಡ ಪದವಿಯಲ್ಲಿ ಇರೋದರಿಂದ ಯಾರ್ಯಾರೋ ಮನೆಗೆ ಬಂದು ನೋಡಿಕೊಂಡು ಹೋಗ್ತಾರೆ. ಕೆಲವರಂತೂ ದೂರದಿಂದ ಬಂದವರು ಊಟ ಮಾಡಿ ಕೊಂಡೇ ಹೋಗ್ತಾರೆ. ಅದಕ್ಕೇ ಇರಬಹುದು ಪಂಚಾಯ್ತಿಯವರು ನಾನು ಕೇಳದೇ ಇದ್ದರೂ ಹಾಕಿಸಿದ್ದಾರೆ ಅಂದಾಗ., ಹೊರಗೇ ಇದ್ದ ಗ್ರಾಮ ಪಂಚಾಯ್ತಿ ಸಂಭಂದ ಪಟ್ಟವರನ್ನ ಕರೆದು ಈ ಹಳ್ಳಿಯಲ್ಲಿ ಎಲ್ಲರಮನೆಗೂ ನೀರಿನ ವ್ಯವಸ್ಧೆ ಮಾಡಿದ್ದೀರಾ ಅಂತ ಕೇಳಿದರು. ಇಲ್ಲಾ ಅಂದಾಗ ನಮ್ಮ ಮನೆಗೆ ಮಾತ್ರ ಹೇಗೆ ಬಂತು. ಎಲ್ಲಿಂದ ಕನೆಕ್ಷನ್ ಕೊಟ್ಟಿದ್ದೀರಿ. ಇದಕ್ಕೆ ಹಣ ಯಾರು ಕೊಟ್ಟರು ಅಂತ ಚೆನ್ನಾಗಿ ಬೈದು ತಮ್ಮ ಸೆಕ್ರೆಟರಿಯ ಮೂಲಕ ತಕ್ಷಣ ಹಣ ಕಟ್ಟಿಸಿದರು. ಮತ್ತು ಉಳಿದವರಿಗೂ ಅವರನ್ನ ಕೇಳಿ ಹಣ ಕಟ್ಟಿಸಿಕೊಂಡು ಕನೆಕ್ಷನ್ ಕೊಡಿ ಅಂತ ಹೇಳಿದರು.
ಒಂದು ಸಾರಿ ಒಬ್ಬ ಬಹಳ ಆತ್ಮೀಯ ಸ್ನೇಹಿತ, ಮಗಳ ಮದುವೆಗೆ ಕರೆಯಲು ಬಂದು, ಬರಲೇ ಬೇಕು ತಪ್ಪಿಸಿ ಕೊಳ್ಳಬಾರದು ಎಂದಾಗ ತಕ್ಷಣ ಹೇಳಿದ್ದು ಆಗಲ್ಲ. ನಾನು ಬರಲು ಆಗಲ್ಲ. ಅಂದು ಬೇರೆ ಮುಖ್ಯಕಾರ್ಯಕ್ರಮಗಳು ಇದೆ. ಇಲ್ಲಿಂದಲೇ ಆಶೀರ್ವಾದ ಮಾಡ್ತೀನಿ ಅಂದಾಗ ಸ್ನೇಹಿತ ಒಂದು ಕ್ಷಣ ಇಷ್ಟು ಬದಲಾಗಿದ್ದಾನಲ್ಲ. ನಾನು ಊಹಿಸಕ್ಕೂ ಸಾಧ್ಯವಿಲ್ಲ ವೆಂದು ಕೊಂಡು ಹೊರಟು ಹೋದ. ಅವನು ಹೊರಟು ಹೋದನಂತರ ಸೆಕ್ರೆಟರಿಗೆ ಆ ಮದುವೆಯ ದಿನ ಏನಾದರೂ ಕಾರ್ಯಕ್ರಮ ಇದ್ದರೆ cancel ಮಾಡು ಅಂತ ಹೇಳಿದಾಗ ಸೆಕ್ರೆಟರಿ ಗೂ ಆಶ್ಚರ್ಯ. ಮದುವೆ ದಿನ ತಮ್ಮ ಡ್ರೈವರ್ ನ ಕರೆದು ಇನ್ವಿಟೇಶನ್ ಕೊಟ್ಟು ಇಲ್ಲಿಗೆ ಹೊರಡು ಎಂದು ಹೇಳಿದರು. ಮದುವೆ ಮನೆಗೆ ಬಂದಾಗ ಎಲ್ಲರಿಗೂ ಆಶ್ಚರ್ಯ. ಸ್ನೇಹಿತ ಓಡೋಡಿ ಬಂದು ಬರಲ್ಲಾ ಅಂತ ಹೇಳಿ ಬಂದಿದ್ದೀಯೆ ಎಂದಾಗ. ಅಯ್ಯಾ ನೀನು ಕರೆದ ತಕ್ಷಣ ಬರ್ತೀನಿ ಅಂತ ನಾನು ಹೇಳಿದರೆ, ನೀನು ನನ್ನ ಆಹ್ವಾನ ಮಾಡೋಕ್ಕೆ ಅಂತ ಒಂದಿಷ್ಟು ಹೆಚ್ಚು ಹಣ ಖರ್ಚು ಮಾಡುತ್ತಿ. ನೀನು ಕರೆಯದೆ ಇದ್ದೋರು ಬಂದು ಬಿಡ್ತಾರೆ. ನಿನಗೆ ಮದುವೆ ವೆಚ್ಚ ಜಾಸ್ತಿ ಆಗುತ್ತೆ. ನಿನ್ನ ಹಣಕಾಸಿನ ಪರಿಸ್ಥಿತಿ ಮೊದಲಿಂದ ನನಗೆ ಗೊತ್ತು ಅದಕ್ಕೇ ಹಾಗೇ ಮಾಡಿದ್ದು. ನನಗೆ ಊಟ ಹಾಕು. ನಾನು ಬೇಗ ಹೋರಾಡಬೇಕು ಅಂದರಂತೆ.
ಒಮ್ಮೆ ಕಾರಿನಲ್ಲಿ ಹೋಗುತ್ತಿದ್ದಾಗ ಸೆಕ್ರೆಟರಿ ಹೇಳಿದ. ಸಾರ್ ಒಂದು ವಿಷಯ ಹೇಳಬೇಕು ಆದರೆ ಅದನ್ನ ಹೇಳಬೇಕೋ ಬೇಡವೋ ಅಂತ ಯೋಚನೆ ಆಗಿದೆ.
ನಾವು ಈಗ ನಮ್ಮ ಕಾರ್ಯಕ್ರಮ ಇರೋ ಊರಿನ ಕಲೆಕ್ಟರ್ ಗೆ ಬಹಳ ಅಹಂಕಾರ. ಯಾರಿಗೂ ಹೆದರದ ವ್ಯಕ್ತಿ. ನನ್ನ ಮುಂದೆಯೇ ಒಂದು ದಿನ ಹೇಳಿದ, ನಾನು ಮನಸ್ಸು ಮಾಡಿದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ನಿಮ್ಮ ಯಜಮಾನರು ಕಲೆಕ್ಟರ್ ಆಗಕ್ಕಾಗಲ್ಲ ಗೊತ್ತಾ ಅಂದ ಸಾರ್. ಹೌದಾ ಅಷ್ಟು ಧೈರ್ಯ ಇದೆಯಾ ಅವನಿಗೆ ಅಂತ ಹೇಳಿ ನಾನು ಮಾತಾಡ್ತೀನಿ ಅಂತ ಸುಮ್ಮನಾದರು. ಅಲ್ಲಿಗೆ ಹೋದಾಗ ಕಲೆಕ್ಟರ್ ಕಾರಿನ ಬಳಿ ಬಂದು ನಮ ಸ್ಕಾರಮಾಡಿ TB ಗೆ ಕರೆದು ಕೊಂಡು ಹೋದ. ಏನಪ್ಪಾ ನಿನ್ನ ಹೆಸರು, ಮೊದಲು ಎಲ್ಲಿ ಕೆಲಸ ಮಾಡಿದ್ದೀಯೆ ಅಂತ ವಿಚಾರಿಸುತ್ತಿದ್ದಾಗ ಸೆಕ್ರೆಟರಿ ತಿಳಿದ ಇವತ್ತು ಆಯ್ತು ಇವನ ತಿಥಿ. ನಮ್ಮ ಸೆಕ್ರೆಟರಿಗೂ ನಿನಗೂ ಎಂದಾದ್ರೂ ಮೊದಲೇ ಗಲಾಟೆ ನಡೆದಿತ್ತಾ ಅಂತ ಕೇಳಿದರು. ಸಾರ್ ಏಕೆ ಈ ಪ್ರಶ್ನೆ ಅಂದಾಗ, ಏನಿಲ್ಲ ಬರೋ ವಾಗ ಅವನು ನಿನ್ನ ಬಗ್ಗೆ ಒಂದು ವಿಷಯ ತಿಳಿಸಿದ. ಅದನ್ನ ಕೇಳಿ ಈ ಪ್ರಶ್ನೆ ಅಂದಾಗ, ಕಲೆಕ್ಟರ್ ಹೇಳಿದ ಮಾತು ಮಾತು ಬೆಳೆದು ಒಂದು ಸಾರಿ ಹೇಳಿದೆ ನಾನು ಬೇಕಾದರೆ ಪ್ರಧಾನ ಮಂತ್ರಿಯಾಗಬಹುದು. ಆದರೇ ನಿಮ್ಮ ಯಜಮಾನ್ರು ಕಲೆಕ್ಟರ್ ಅಲ್ಲ ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್ ಕೆಲಸ ಮಾಡಕ್ಕೂ ಆಗಲ್ಲ ಅಂದಿದ್ದು ನಿಜ ಸಾರ್ ಅಂತ ಹೇಳಿದಾಗ. ನೀನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಸರಿಯಾಗೇ ಹೇಳಿದ್ದೀಯೆ. ಇದನ್ನೇ ದೊಡ್ಡದು ಮಾಡಬೇಡಿ ಮುಂದಿನ ಕೆಲಸ ನೋಡೋಣ ಅಂತ ಹೊರಟರಂತೆ.
ಮಂತ್ರಿಮಂಡಲವೇ ಒಪ್ಪಿದ ಒಂದು ದೊಡ್ಡ ಮೊತ್ತದ ನೀರಾವರಿ project ಬಗ್ಗೆ ಮಾತುಕತೆ ನಡೆಯುವಾಗ ಒಬ್ಬ ಬುದ್ದಿವಂತ ಯುವ ಇಂಜಿನಿಯರ್ ಆ ಪ್ರೊಜೆಕ್ಟ್ ಗೆ ತನ್ನ ಅಸಮ್ಮತಿ ಸೂಚಿಸಿದ. ಅಲ್ಲಿದ್ದವರೆಲ್ಲಾ ಕೋಪ ಗೊಂಡು ಈಗಾಗಲೇ ಸರ್ಕಾರದ ಒಪ್ಪಿಗೆ ಪಡೆದಾಗದೆ .ಈಗ ನೀನೊಬ್ಬ ತಪ್ಪು ತೆಗೆದರೆ ನಮ್ಮ ನಿರ್ಧಾರ ಬದಲಾಯಿಸಲು ಸಾಧ್ಯವಿಲ್ಲ. ನೀನು ಬೇಕಾದರೆ ಹೊರ ಹೋಗಬಹುದು ಎಂದಾಗ ಆ ಇಂಜಿನಿಯರ್ ಹೊರ ನಡೆದ.ಮೀಟಿಂಗ್ ಮುಗಿದ ನಂತರ, ಇವರಿಗೆ ಆಪ್ತರಾಗಿದ್ದ ನಿವೃತ್ತ chief ಇಂಜಿನಿಯರ್ ಒಬ್ಬರನ್ನ ಕರೆಸಿ ಮಾತನಾಡಿದಾಗ ಅವರು ಹೇಳಿದ್ದು, ಈ project ನಿಮಗೆ ಕೆಟ್ಟ ಹೆಸರು ತರುವುದಂತೂ ನಿಶ್ಚಿತ. ನೀವು ಒಂದು ಊರಿಗೆ ಕುಡಿಯುವ ನೀರು ಕೊಡಲು ಹೋಗಿ ನೂರು ಗ್ರಾಮಗಳ ಬೆಳೆಗಳಿಗೆ ಹರಿಸುವ ನೀರನ್ನ ಕಿತ್ತುಕೊಳ್ಳುತ್ತಿದ್ದೀರಿ ಎಂದಾಗ ಸತ್ಯ ದ ಅರಿವಾಯ್ತು. ಆಗ ಸಮಯ ರಾತ್ರಿ ಒಂಬತ್ತು ಗಂಟೆ. ತಕ್ಷಣ ಆ ಯುವ ಇಂಜಿನಿಯರ್ ನ ಕರಸಲು ಹೇಳಿದಾಗ, ಆತ ರಾಜೀನಾಮೆ ಸಲ್ಲಿಸಿ ಒಂದು ತಿಂಗಳು ರಜೆ ಹಾಕಿ ತನ್ನ ಊರಿಗೇ ಹೊರಟು ಹೋಗಿದ್ದಾನೆಂದು ತಿಳಿಯಿತು. ಹೇಗೋ ಅವನ ವಿಳಾಸ ತಿಳಿದು ಡ್ರೈವರ್ ಗೆ ತಕ್ಷಣ ಅಲ್ಲಿಗೆ ಹೋಗಬೇಕೆಂದು ಹೇಳಿ ಅಲ್ಲಿ ಅವನ ಮನೆ ತಲುಪಿದಾಗ ರಾತ್ರಿ ಹನ್ನೆರಡು ಗಂಟೆ. ಡ್ರೈವರ್ ಮನೆ ಬಾಗಿಲು ತಟ್ಟಿದಾಗ ಹೆದರಿ ಬಾಗಿಲು ತೆರೆದದ್ದು ಅವನ ತಾಯಿ. ಅಷ್ಟು ಹೊತ್ತಿಗೆ ಕಾರಿನಿಂದ ಇವರೂ ಬಾಗಿಲಬಳಿ ಬಂದಿದ್ದು ಕಂಡು ಒಳಗೆ ಬರಲು ಹೇಳಿ ಮಲಗಿದ್ದ ಮಗನನ್ನ ಕರೆದರು ಅವನಿಗೂ ಆಶ್ಚರ್ಯ. ಕಾಲಿಗೆ ಬಿದ್ದ. ಸಾರ್ ನನ್ನಿಂದ ತಪ್ಪಾಗಿದೆ. ನೀವು ಏಕೆ ಇಷ್ಟು ದೂರ ಬಂದಿದ್ದು. ನಾನೇ ಬರ್ತಿದ್ದೆ ಅಂತ ಹೇಳಿದಾಗ. ನೀನು ಮೊದಲು ರಾಜೀನಾಮೆ ವಾಪಸ್ ತೊಗೊಂಡು ಕೆಲಸಕ್ಕೆ ಬರಬೇಕು. ನಿನ್ನನ್ನ ಎಲ್ಲರ ಮುಂದೆ ಬೈದು ಬಿಟ್ಟೆ. ಕ್ಷಮಿಸಿಬಿಡು ಎಂದಾಗ ಅವನ ಕಣ್ಣಲ್ಲಿ ನೀರು. ಮಾರನೇ ದಿನವೇ ಆ ಪ್ರೋಜೆಕ್ಟ್ ನ ಕೈ ಬಿಟ್ಟಾಯ್ತು. ಅದರ ಹಿಂದೆ ಅವರ ಆಡಳಿತ ಪಕ್ಷದ ಕಾಣದ ಹಲವು ಕೈಗಳು ಇದ್ದುವೆಂದು ನಂತರ ಅವರಿಗೆ ತಿಳಿದು ಬಂತು.
ಒಂದು ದೊಡ್ಡ ಕಾರ್ಯಕ್ರಮ . ಸ್ವಲ್ಪ ತಡವಾಗಿ ಬಂದಇವರು ಮಾತನಾಡಲು ವೇದಿಕೆಗೆ ಹೋಗುತ್ತಿರುವಾಗ ಯಾರೋ ಆಪ್ತರು ಓಡೋಡಿ ಬಂದು ಕಿವಿಯಲ್ಲಿ ಏನೋ ಹೇಳಿದರು. ಆಗ ತಮ್ಮ ಎಡ ಹೆಗಲಮೇಲಿದ್ದ ಟವಲ್ ತೆಗೆದು ಬಲ ಹೆಗಲಮೇಲೆ ಹಾಕಿಕೊಂಡು ಭಾಷಣ ಮಾಡಿದರು. ಕಾರ್ಯಕ್ರಮ ಮುಗಿದ ನಂತರ ಕಾರಿನ ಬಳಿ ಬಂದಾಗ ಅಲ್ಲಿ ಬೇರೊಂದು ಬಿಳಿ ಶರ್ಟ್ ಬದಲಾಯಿಸಿದಾಗಲೇ ಎಲ್ಲರಿಗೂ ವಿಷಯ ತಿಳಿದದ್ದು. ಅಗಸ ಬೆಳಗ್ಗೆ ಹರಿದು ಹೋಗಿದ್ದ ಶರ್ಟ್ ನ್ನೇ ಇಸ್ತ್ರಿಮಾಡಿ ತಂದು ಕೊಟ್ಟಿದ್ದ. ಅವಸರದಲ್ಲಿ ನೋಡದೆ ಇವರು ಅದನ್ನೇ ಧರಿಸಿ ಬಂದು ಬಿಟ್ಟಿದ್ದರು.