STORYMIRROR

Vijaya Bharathi.A.S.

Abstract Inspirational Others

4  

Vijaya Bharathi.A.S.

Abstract Inspirational Others

ಹಾಸಿಗೆ ಇದ್ದಷ್ಟು ಕಾಲು ಚಾಚು

ಹಾಸಿಗೆ ಇದ್ದಷ್ಟು ಕಾಲು ಚಾಚು

2 mins
966

ತುಂಬಾ ಬಡತನದಲ್ಲಿ ಹುಟ್ಟಿ ಬೆಳೆದು ಬಂದ ವಿವೇಕ್ ಗೆ ಕಾಲೇಜ್ ನಲ್ಲಿ ತನ್ನ ಜೊತೆಯ ಸಿರಿವಂತ ಗೆಳೆಯರನ್ನು ನೋಡುವಾಗ , ಒಳಗೊಳಗೇ ಸಂಕಟವಾಗುತ್ತಿತ್ತು. ಅವರು ಹಾಕುವ ಮಿರಿ ಮಿರಿ ಮಿರುಗುವ ಬಟ್ಟೆಗಳು,ಲೋಕ ಲೋಕ ಹೊಳೆಯುವ ಶೂಸ್ ಗಳನ್ನು ಅವರ ಜೇಬಿನಲ್ಲಿ ಹಿಡಿ ಹಿಡಿ ನೋಟುಗಳನ್ನು ನೋಡುವಾಗ ಅವನಿಗೆ ತುಂಬಾ ಅಸೂಯೆ ಯಾಗುತ್ತಿತ್ತು ಮತ್ತು ತನ್ನ ಬಡತನದ ಬಗ್ಗೆ ಕೀಳರಿಮೆ ಮೂಡುತ್ತಿತ್ತು. ತನ್ನ ಜೊತೆ ಇರುವ ಕೇವಲ ಎರಡು ಜೊತೆ ಬಟ್ಟೆ ಗಳು,ಹಳೆಯದಾದ ಚಪ್ಪಲಿ, ಹೆಗಲಲ್ಲಿ ಒಂದು ಬಟ್ಟೆಯ ಚೀಲ,ಅವನ ಜೇಬಿನಲ್ಲಿ ಹತ್ತು ರೂಪಾಯಿ ಗಳ ಹತ್ತುನೋಟಿದ್ದರೆ ಹೆಚ್ಚು .ಅವನ ಬಡತನದ ದೆಸೆಯಿಂದ ಅವನು ಯಾರೊಂದಿಗೂ ಬೆರೆಯದೆ ಏಕಾಂಗಿಯಾಗಿ ಇರುತ್ತಿದ್ದನು. ಇದರಿಂದ ಅವನ ಓದಿಗೆ ಅನುಕೂಲ ವೇ ಆಗಿತ್ತು. ಬಿಡುವಿನ‌ ವೇಳೆಯಲ್ಲಿ ಕಾಲೇಜಿನ ಲೈಬ್ರರಿಯಲ್ಲಿ ಕುಳಿತು , ಓದುತ್ತಾ ಕುಳಿತಿರುತ್ತಿದ್ದನು. ಇದರಿಂದ ಅವನು ಓದಿನಲ್ಲಿ ಮುಂದಿದ್ದು, ತರಗತಿಗೇ ಮೊದಲಿನಾಗಿರುತ್ತಿದ್ದನು.

ಹೀಗಾಗಿ ಅವನಿಗೆ ವಿದ್ಯಾರ್ಥಿ ವೇತನಗಳು ಸಿಗುತ್ತಿತ್ತು.


ತನ್ನೆಲ್ಲಾ ಆಸೆಗಳನ್ನು ಒಳಗೇ ಅದುಮಿಟ್ಟುಕೊಂಡು, ವಿವೇಕ್ ಹೇಗೋ ಕಷ್ಟ ಪಟ್ಟು ಬಿ.ಇ.ಗೂ ಸೇರಿದಾಗ,ಅವನ ತಂದೆ ಸೋಮಣ್ಣ, ಅವರ ಒಂದು ಎಕರೆ ಗದ್ದೆಯನ್ನು ಮಾರಿ , ಅವನಿಗೆ ಆರ್ಥಿಕವಾದ ಬೆಂಬಲವನ್ನು ನೀಡಿದ್ದರು. ಬುದ್ದಿವಂತ ತಮ್ಮ ಮಗ, ಇಂಜಿನಿಯರ್ ಆದರೆ ಮುಂದೆ ತಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎಂಬ ಆಸೆಯಿಂದ ತಮಗೆ ಆಧಾರವಾಗಿದ್ಧ ಜಮೀನನ್ನು ಮಾರಾಟ ಮಾಡಿದ್ದರು.


ಅಂತೂ ಇಂತೂ ಹೇಗೋ ಕಷ್ಟದಲ್ಲೇ, ವಿವೇಕ್ ತನ್ನ ಇಂಜಿನಿಯರಿಂಗ್ ಮುಗಿಸಿದಾಗ, ಇನ್ನು ತಮ್ಮ ಕಷ್ಟ ಗಳು ಮುಗಿಯಿತೆಂದು ನಿಟ್ಟುಸಿರು ಬಿಟ್ಟರು ಸೋಮಣ್ಣ.

ಆದರೆ ಬಿ.ಇ.ನಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದ್ದ ವಿವೇಕ್ ಗೆ ವಿದೇಶದಲ್ಲಿ ಎಮ್.ಎಸ್.ಮಾಡಬೇಕೆಂಬ ಮಹದಾಸೆ ಹೊಕ್ಕಿತು.

ಅವನು ಅದಕ್ಕಾಗಿ ಯೋಚಿಸುತ್ತಾ ತಲೆಕೆಡಿಸಿಕೊಂಡು ಮಂಕಾಗಿ ಕುಳಿತಿದ್ದಾಗ, ಮಗನ ಖಿನ್ನತೆಯನ್ನು ಮನಗಂಡ ಸೋಮಣ್ಣ ಅವನಿಗೆ ಸಮಾಧಾನ ಮಾಡುತ್ತಾ ತಿಳುವಳಿಕೆ ಹೇಳಿದರು.


"ನೋಡು ಮಗಾ,ನೀನು‌ ಆಸೆ ಪಟ್ಟೆ ಅಂತ ನಾನು ನನ್ನ ಶಕ್ತಿ ಮೀರಿ ನಿನ್ನನ್ನು ಇಂಜಿನಿಯರ್ ಮಾಡಿಸಿದೆ. ನೀನು ಮುಂದೆ ಚೆನ್ನಾಗಿ ಸಂಪಾದನೆ ಮಾಡಿ ನಮ್ಮನ್ನು ನೋಡಿಕೊಳ್ಳುತ್ತೀಯೆಂಬ ಭರವಸೆಯಿಂದ ನಮ್ಮ ಜೀವನಕ್ಕೆ ಆಧಾರವಾಗಿದ್ದ ಒಂದು ಎಕರೆ ಗದ್ದೆಯನ್ನು ಮಾರಿ ಬಿಟ್ಟೆ. ಈಗ ನೀನು ನಮ್ಮ ಪರಿಸ್ಥಿತಿ ಯನ್ನು ಅರ್ಥ ಮಾಡಿಕೊಂಡು, ನಿನ್ನ ವಿದೇಶದಲ್ಲಿ ಓದುವ ಆಸೆಯನ್ನು ಬಿಟ್ಟು,ಇಲ್ಲೇ ಯಾವುದಾದರೂ ಕೆಲಸಕ್ಕೆ ಸೇರಿ ಸಂಪಾದನೆ ಶುರುಮಾಡು. ಮುಗಿಲ ಮಲ್ಲಿಗೆಗೆ ಆಸೆ ಪಡಬೇಡ. ಮುಂದೆ ಅನುಕೂಲ ಆದಾಗ ಓದನ್ನು ಮುಂದುವರಿಸಿದರಾಯಿತು. "ಹಾಸಿಗೆ ಇದ್ದಷ್ಟು ಕಾಲು ಚಾಚು" ಎನ್ನುವ ಗಾದೆಯನ್ನು ನೆನಪಿಸಿಕೋ ಮಗ"

ತಂದೆಯ ಮಾತಿಗೆ ಬೆಲೆ ಕೊಟ್ಟ ವಿವೇಕ್ ಕೆಲಸಕ್ಕೆ ಸೇರುವ ನಿರ್ಧಾರ ಮಾಡಿದ.



Rate this content
Log in

Similar kannada story from Abstract