ಗೋಮುಖ
ಗೋಮುಖ
ನಂದಿನಿಗೆ ನಾಗೇಶ್ ಜೊತೆ ಮದುವೆ ಗೊತ್ತಾದಾಗ , ಅವಳ ಮನೆಯಲ್ಲಿ ಎಲ್ಲರಿಗೂ ಸಂತೋಷವಾಯಿತು. ಹುಡುಗ ಸಾಫ್ಟ್ ವೇರ್ ಇಂಜಿನಿಯರ್ ಅಂದು ಮೇಲೆ
ತಮ್ಮ ಹುಡುಗಿ ಗಂಡನ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಎಂದು ಕೊಂಡು ತುಂಬಾ ಅದ್ದೂರಿಯಾಗಿ ಮದುವೆ ಮಾಡಿ ಕೊಡಲು ನಿರ್ಧರಿಸಿದರು. ನಂದಿನಿಯೂ ಕಡಿಮೆ ಇರಲಿಲ್ಲ. ಅವಳೂ ಸಹ ಫಿಸಿಕ್ಸ್ ಎಂ.ಎಸ್.ಸಿ ಮಾಡಿ, ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಕೆಲಸ ಮಾಡುತ್ತಿದ್ದಳು.
ಮದುವೆಯ ವರೋಪಚಾರದ ಮಾತುಕತೆಗೆ ನಂದಿನಿಯ ತಂದೆ ತಾಯಿ, ಹುಡುಗನ ಮನೆಗೆ ಹೋಗಿ ಕೇಳಿದಾಗ, ತಮಗೆ ಏನೂ ಬೇಡ, ಮಾಮೂಲು ರೀತಿಯ ಉಡುಗೊರೆ ನೀಡಿ ಮದುವೆ ಮಾಡಿ ಕೊಟ್ಟರೆ ಸಾಕು ಎಂದಾಗ, ನಂದಿನಿಯ ತಂದೆ ತಾಯಿಗೆ ತುಂಬಾ ಸಮಾಧಾನ ವಾಯಿತು.
ಮಾಮೂಲಿನಂತೆ ಮೂರು ದಿನಗಳ ಅದ್ಧೂರಿ ಮದುವೆ ಮಾಡಿ, ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟರು.
ಮದುವೆಯಾದ ಆರು ತಿಂಗಳು ಎಲ್ಲವೂ ಸರಾಗವಾಗಿ ನಡೆಯಿತು. ನಂತರ ನಾಗೇಶ್ ನ ಮನೆಯವರು ಹಣಕಾಸಿನ ವಿಚಾರದಲ್ಲಿ ತುಂಬಾ ಬಿಗಿ ಎಂದು
ನಂದಿನಿಗೆ ಗೊತ್ತಾದಾಗ ಅವಳಿಗೆ ಸ್ವಲ್ಪ ನಿರಾಸೆಯಾಯಿತು. ಹನಿಮೂನ್ ಗೆಂದು ಒಂದೆರಡು ದಿನಗಳು ಹತ್ತಿರದ ಊಟಿಗೆ ಹೋಗಿ ಬಂದ ನಂತರ ನಾಗೇಶ್ ಹೆಂಡತಿಗಾಗಿ ಒಂದು ಪೈಸೆಯನ್ನೂ ಖರ್ಚುಮಾಡದೇ ಇದ್ದದ್ದನ್ನು ನೋಡಿದ, ನಂದಿನಿಗೆ ಅವನ ಜುಗ್ಗುತನದ ಅರಿವಾಯಿತು
ಅಷ್ಟೇ ಆಗಿದ್ದಿದ್ದರೆ ಅವಳು ಹೇಗೋ ಹೊಂದಿಕೊಂಡು ಹೋಗುತ್ತಿದ್ದಳೇನೋ? ಆದರೆ ಬರಬರುತ್ತಾ, ನಾಗೇಶ್ ಅವಳ ಸಂಬಳವನ್ನೂ ನಯವಾಗಿ ಮಾತನಾಡಿ ತನ್ನದಾಗಿಸಿಕೊಳ್ಳಲು ಶುರು ಮಾಡಿದಾಗ, ತುಂಬಾ ಸ್ವತಂತ್ರವಾಗಿ ಖರ್ಚು ಮಾಡಿ ಅಭ್ಯಾಸ ವಿದ್ದ ಅವಳಿಗೆ ತುಂಬಾ ನೋವಾಗುತ್ತಿತ್ತು.
ಮುಂದೆ ಮದುವೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲಿ ನಂದಿನಿಗೆ ತನ್ನ ಗಂಡ, ಅವನ ಅಮ್ಮ ಅಪ್ಪ ನ ಗೋಮುಖದ ಮುಖವಾಡದ ಅರಿವಾಗುತ್ತಾ ಹೋಯಿತು.
ಅವಳ ಬಳಿ ಇದ್ದ ಸೇವಿಂಗ್ಸ್ ಹಣವನ್ನೆಲ್ಲಾ ಏನಾದರೂ
ತಾಪತ್ರಯಗಳ ನೆಪ ವೊಡ್ಡಿ ನಾಗೇಶ್ ಕಿತ್ತು ಕೊಳ್ಳುತ್ತಿದ್ದಾಗ, ನಂದಿನಿ ಅವರನ್ನೆಲ್ಲ ಎದುರಿಸಿ ನಿಂತು ಗಟ್ಟಿಸಿ ಕೇಳಿದಾಗ, ಅವರ ಅಮ್ಮ, ತಾವೇನು ವರದಕ್ಷಿಣೆ ಕೇಳಲಿಲ್ಲವಲ್ಲ, ಮದುವೆಯಲ್ಲಿ ಕೊಂಕು ಮಾತನಾಡಲಿಲ್ಲವಲ್ಲಾ, ಎಂದು ಏನೇನೋ ಸಬೂಬು ಹೇಳುತ್ತಾ ಹೋದರು.
ಎರಡು ವರ್ಷದೊಳಗೆ ನಂದಿನಿಗೆ ಗಂಡನ ಮತ್ತು ಅವನ ಪೋಷಕರು ಮುಖವಾಡ ಕಳಚಿ ಬಿದ್ದಿತು. ಅವರೆಲ್ಲರೂ ಧನಪಿಶಾಚಿಗಳೆಂಬುದು ಅವಳಿಗೆ ಮನದಟ್ಟಾಯಿತು. ಯಾಕೋ ಇನ್ನು ಮುಂದೆ ತನ್ನ ಬಾಳು ಹೀಗೆ ಸಾಗಿದರೆ ತನಗೆ ತನ್ನ ಅಸ್ತಿತ್ವ ಇರುವುದಿಲ್ಲ ಮತ್ತು ತಾನು ಪಾಪರ್ ಆಗುತ್ತೇನೆ ಎಂದು ತಿಳಿದುಕೊಂಡ ಅವಳು, ಒಂದು ದಿನ ತನ್ನದೆಲ್ಲವನ್ನೂ ಪ್ಯಾಕ್ ಮಾಡಿ ಕೊಂಡು ತವರಿಗೆ ಹಿಂದಿರುಗಿ ,ತನ್ನ ತಂದೆ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡು ಇನ್ನು ಮುಂದೆ ತಾನು ಗಂಡನ ಮನೆಗೆ ಹೋಗುವುದಿಲ್ಲವೆಂದು ತನ್ನ ನಿರ್ಧಾರವನ್ನು ತಿಳಿಸಿದಳು.
ಮಗಳ ನಿರ್ಧಾರವನ್ನು ಕೇಳಿ ಅವಳ ಅಪ್ಪ ಅಮ್ಮನಿಗೆ ತುಂಬಾ ಬೇಸರವಾದರೂ, ಅಂತಹ ಗೋಮುಖ ವ್ಯಾಘ್ರ ಗಳೊಂದಿಗೆ ಮಗಳ ಜೀವನ ಹಾಳಾಗಬಾರದೆಂಬ ಉದ್ದೇಶದಿಂದ, ನಂದಿನಿಯ ತಂದೆ ಒಳ್ಳೆಯ ವಕೀಲರನ್ನು ಸಂಪರ್ಕಿಸಿ ಮಗಳಿಗೆ ಅಳಿಯನಿಂದ ವಿಚ್ಛೇದನ ಕೊಡಿಸಿದರು. ಧನಪಿಶಾಚಿಗಳಿಂದ ಮಗಳು ಪಾರಾಗಿ ಬಂದದ್ದು ಅವರಿಗೆ ನೆಮ್ಮದಿ ತಂದಿತ್ತು.
ವಿಚ್ಛೇದನದ ಕೆಲವು ವರ್ಷಗಳ ಬಳಿಕ ನಂದಿನಿಗೆ ಒಳ್ಳೆಯ ಸಂಸ್ಕಾರವಂತ ಸರಳ ಸಜ್ಜನಿಕೆಯ ಹುಡುಗ ಸುಧನ್ವ ನ ಜೊತೆ ಮರುಮದುವೆಯಾಯಿತು.
