ಗೆಳತಿಯ ಮೇಲಿನ ಕಾಳಜಿ
ಗೆಳತಿಯ ಮೇಲಿನ ಕಾಳಜಿ
ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಆರಂಭಿಕ ಹಂತ
೧ ಸ್ನೇಹಿತ
ಸ್ನೇಹ ಸುಂದರ ಅನುಭವ. ಉಂಡವನೆ ಬಲ್ಲ ಊಟದ ರುಚಿಯ ಎನ್ನುವಂತೆ, ಗೆಳೆತನವೂ ಸಹ ಒಂದು ರುಚಿಯಾದ ಸಿಹಿ ಹೋಳಿಗೆಯ ಊಟ ಸವಿದಂತೆ. ಗೆಳೆತನದ ಸವಿಯಾದ ಹೋಳಿಗೆಯ ಊಟ ಸವಿಯೋಣ ಬನ್ನಿ.
ನಯನಾ ಬಾರೆ, ಇವತ್ತು ನನ್ನ ಡಬ್ಬಿಲೇ ಊಟಾ ಮಾಡೋಣ ಅಂತ ಬಾನು ನಯನಾಳನ್ನು ಊಟಕ್ಕೆ ಕರೆದಾಗ ನಯನಾಳಿಗೆ ಖುಷಿನು ಆಗುತ್ತೆ, ಜೊತೆಗೆ ತನ್ನ ಡಬ್ಬಿಯಲ್ಲಿ ಊಟ ಹಾಗೆ ವಾಪಸ್ ತಗೊಂಡು ಹೋದರೆ ಅಮ್ಮ ಬೈಯುವಳು ಅನ್ನುವ ಹೆದರಿಕೆ ಬೇರೆ.. ಆದರೂ ಬಾನು ಡಬ್ಬಿಯಲ್ಲಿಯ ಬಿರಿಯಾನಿ ಮಾತ್ರ ನಯನಾಳಿಗೆ ಅಚ್ಚು ಮೆಚ್ಚು.. ಅದೇ ನಯನಾ ತೆಗೆದುಕೊಂಡು ಹೋಗ್ತಿದ್ದ ಪಡ್ಡು ಅಂದ್ರೆ ಬಾನುವಿಗೆ ಫೇವರೇಟ್.. ಹೀಗೆ ನಯನಾ ಬಾನು ಬೆಸ್ಟ್ ಫ್ರೆಂಡ್ಸ್ ಆಗಿದ್ದರು..
ನಯನಾ ಪಕ್ಕಾ ಸಂಪ್ರದಾಯಸ್ಥ ಮನೆತನದ ಹುಡುಗಿ, ಹಾಗೆ ಬಾನು ಕೂಡ ಮುಸ್ಲಿಮ ಸಮಾಜದ ದೊಡ್ಡ ಕುಟುಂಬದ ಹುಡುಗಿ.ಇಬ್ಬರು ಕೂಡ ಒಂದೇ ಊರಿನವರು, ಒಂದೇ ಸ್ಕೂಲ್ನಲ್ಲಿ ಒಂದೇ ಕ್ಲಾಸ್ನಲ್ಲಿ ಓದುತ್ತಿದ್ದರು.. ಚಿಕ್ಕಂದಿನಿಂದಲೂ ಬಹಳ ಒಳ್ಳೆಯ ಗೆಳತಿಯರು. ಒಬ್ಬರ ಮನೆಗೆ ಒಬ್ಬರು ಹೋಗ್ತಿಲ್ಲವಾಗಿದ್ದರೂ ಕೂಡ ಕ್ಲಾಸ್ ಒಮ್ಮೊಮ್ಮೆ ಬಂಕ್ ಮಾಡಿಯಾದ್ರು ತಮ್ಮ ಮಾತಿನ ಸುರಿಮಳೆ ಹರಸ್ತಿದ್ರು..
ಒಬ್ಬರು ತಪ್ಪು ಮಾಡಿದ್ದರೆ ಇಬ್ಬರು ಶಿಕ್ಷೆ ಅನುಭವಿಸುತ್ತಿದ್ದರು. ಇಬ್ಬರು ಓದುವುದರಲ್ಲಿ,ಆಟೋಟ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲದರಲ್ಲೂ ಮುಂದಿರುತ್ತಿದ್ದರು.... ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಅತ್ಯುತ್ತಮ ಸ್ನೇಹಕ್ಕೆ ಇವರೇ ಉದಾಹರಣೆ ಎನ್ನುವಂತಿದ್ದರು..
ಬಾನು ಯಾಕೋ ಎರಡು ಮೂರು ದಿನಗಳಿಂದ ಶಾಲೆಗೆ ಬಂದಿರಲಿಲ್ಲ, ಫೋನ್ ಕೂಡ ಮಾಡಿರಲಿಲ್ಲ ನಯನಾಳಿಗೆ.. ನಯನಾ ಬಾನು ಮನೆ ಲ್ಯಾಂಡ್ ಲೈನ್ ನಂಬರಿಗೆ ಫೋನ್ ಮಾಡಿದರೆ ಯಾರು ರಿಸೀವ್ ಮಾಡಿರಲಿಲ್ಲ.. ಹೀಗೆ ಒಂದಿನ ಹೋಯ್ತು, ಎರಡು ದಿನ ಹೋಯ್ತು, ಒಂದ್ ವಾರ ಕೂಡ ಕಳೆದೋಯ್ತು.. ಆಮೇಲೆ ಬೇರೆಯವರಿಂದ ಒಂದು ಸುದ್ದಿ ಬರುತ್ತೆ ..ಬಾನುವಿಗೆ ಮದ್ವೆ ಆಯ್ತು ಅಂತ, ಅದು ಅವಳಿಗಿಂತ ತುಂಬಾ ವಯಸ್ಸಾದ ಹುಡುಗನೊಂದಿಗೆ, ಬಾನುವಿಗೆ ಇಷ್ಟವಿಲ್ಲದ ಮದ್ವೆ ಅಂತ,,,,,,ಆದರೇನು ಮಾಡುವುದು, ಮನೆಯಲ್ಲಿ ಹಿರಿಯರ ಮಾತು ಮೀರುವ ಹಾಗಿರಲಿಲ್ಲ .ಗೆಳತಿಗೊಂದು ಕರೆ ಮಾಡಲು ಬಿಡಲಿಲ್ಲ ಇಂತಹ ಪರಿಸ್ಥಿತಿಯಲ್ಲಿಅವಳಾದರೂ ಏನು ಮಾಡಿಯಾಳು? ಬಾನುವಿನ ಅಪ್ಪನಿಗೆ ಕ್ಯಾನ್ಸರ್ ಫೈನಲ್ಸ್ಟೇಜ್ ಇದ್ದ ಕಾರಣ ತರಾತುರಿಯಲ್ಲಿ ಮದ್ವೆ ಆಗಿರುತ್ತೆ. ಹೇಗೋ ವಿಷಯ ಅಂತೂ ನಯನಾಳಿಗೆ ತಿಳಿತು. ಬೆಟ್ಟಿ ಆಗಬೇಕಂದರೆ ಸಾಧ್ಯವಿಲ್ಲ, ಆದರೆ ಹೇಗಾದರೂ ಮಾಡಿ ಬೆಟ್ಟಿ ಆಗಲೇಬೇಕೆಂದು ಒಂದು ತಿಂಗಳು ಪರದಾಡಿದಳು,ಆದರೂ ಆಗಲಿಲ್ಲ.ಇತ್ತ ನಯನಾ,ಅತ್ತ ಬಾನು ಸಂಕಟದಿಂದ ಒದ್ದಾಡಿದರು.
ಹಾಗೂ ಹೀಗೂ ಒಂದು ವರ್ಷ ಕಳೆಯಿತು. ಬಾನು ಗರ್ಭಿಣಿ ಬೇರೆ ಆಗಿದ್ದಳು.ಅವಳಿಗೆ ತನ್ನ ಸ್ನೇಹಿತೆ ನಯನಾಳನ್ನು ನೋಡುವ ಬಯಕೆಯಾಗಿತ್ತು.. ಗಂಡನ ಹತ್ತಿರ ಹೇಳುವ ಹಾಗಿಲ್ಲ. ಕಾರಣ ಅವನಿಗೆ ತನ್ನ ಹೆಂಡತಿ ತವರಲ್ಲಿ ತನ್ನ ಮನೆಯವರನ್ನ ಬಿಟ್ಟು ಯಾರ ಹತ್ತಿರ ಮಾತನಾಡುವುದು ಇಷ್ಟವಾಗ್ತಿರ್ಲಿಲ್ಲ. ಬಾನಂತನಕ್ಕೆಂದು ಬಂದಾಗ ಬಾನು ಹೇಗೋ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಗೆಳತಿಗೆ ಸಿಕ್ಕಳು. ಅವಳೋ ಕಾಲೇಜಗೆ ಹೋಗುತ್ತಿದ್ದಳು.ಬಾನು ಮನಸಲ್ಲೇ ಬೇಸರ ಮಾಡಿಕೊಂಡಳು,ತನ್ನ ತಂದೆತಾಯಿ ಮೇಲೆ ಸಿಟ್ಟೂ ಮಾಡಿಕೊಂಡಳು,. ಆದರೆ ಗೆಳತಿ ಓದುತ್ತಿರುವುದನ್ನು ಕಂಡು ಖುಷಿಯೂ ಪಟ್ಟಳು.ನಯನಾ ಓಡಿಬಂದು ಬಾನುವನ್ನು ತಬ್ಬಿಕೊಂಡು ಸ್ವಲ್ಪ ಕಣ್ಣೀರು ಹಾಕಿದಳು. ಆದರೆ ಬಾನು ಏನೋ ಹೇಳಬೇಕು ಅಂತಿದ್ದಳು. ಆದರೆ ಬಾನುವಿನ ಚಿಕ್ಕಮ್ಮ ಪಕ್ಕದಲ್ಲೇ ಇದ್ದಿದ್ದರಿಂದ ಮಾತನಾಡಲು ಆಗಲಿಲ್ಲ. ಆದ್ರೆ ಗೆಳತಿಯನ್ನು ನೋಡಿದ ಖುಷಿ ನಯನಾಳಿಗೆ ಹೋಳಿಗೆ ತುಪ್ಪ ಸವಿದಂತೆ ಆಗಿತ್ತು..
ರಾತ್ರಿ ಪೂರ ಬಾನುವಿನ ಮುಖವೇ ನಯನಾಳಿಗೆ ಕಾಣಿಸುತಿತ್ತು. ಗರ್ಭಿಣಿ ಆಗಿದ್ದರಿಂದ ಇನ್ನು ಅಂದ ಹೆಚ್ಚಿತ್ತು, ಮೊದಲೇ ಸುಂದರಿ ಈ ಬಾನು,ಈವಾಗ ಕೇಳಬೇಕಾ? ಕೇವಲ ಒಂದು ಬಾರಿಯಾದರೂ ಭೇಟಿಯಾಗಿ ನೋಡಬೇಕೆಂದ ಗೆಳತಿಯ ಮುಖ ನೋಡಲು ಸಿಕ್ಕಿದ್ದು ನಯನಾಳಿಗೆ ಅದೇನೋ ಸ್ವರ್ಗವೇ ಸಿಕ್ಕಂತಾಗಿತ್ತು.
ಗೆಳೆತನ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದು. ಅದು ಜಾತಿ ನೀತಿಗಳನ್ನು ನೋಡುವುದಿಲ್ಲ.ಮೇಲೆ ಕೆಳಗೆ ಅಂತ ಭೇದ ಭಾವ ಮಾಡುವುದಿಲ್ಲ. ಗೆಳೆತನ ಎಲ್ಲ ಮೇರೆಯನ್ನೇ ಮೀರಿದ್ದು ಅಲ್ಲವೇ..
