Revati Patil

Romance Classics Others

3.4  

Revati Patil

Romance Classics Others

ಎರಡನೇ ಗಂಡನ ಮನಸ್ಸಿನಲೆಗಳು

ಎರಡನೇ ಗಂಡನ ಮನಸ್ಸಿನಲೆಗಳು

3 mins
394



ಅವರಿಬ್ಬರಿಗೂ ಇಂದು ಹದಿನಾರನೇ ವಿವಾಹ ವಾರ್ಷಿಕೋತ್ಸವದ ದಿನ. ದಾಂಪತ್ಯದ ಇತ್ತೀಚಿನ ಕೆಲ ವರ್ಷಗಳಿಂದ ಅವರಿಬ್ಬರ ನಡುವೆ ಮಾತಿಗಿಂತ ಮೌನವೇ ಹೆಚ್ಚು ಮಾತಾಡುತ್ತಿತ್ತು. ಅದರ ರಭಸದ ಮುಂದೆ ಇವರ ಮಾತುಗಳು ಪರಸ್ಪರರಿಗೆ ಕೇಳಲಿಲ್ಲವೋ, ಅಥವಾ ಇವರು ಮಾತಾಡಲಿಲ್ಲವೋ ಗೊತ್ತಿಲ್ಲ. ಬಯಸಿ ಬಯಸಿ ವಿಸ್ಮಯಳನ್ನು ಮದುವೆಯಾಗಿದ್ದ ಮುರಳಿ. ಮುರಳಿಗಿದು ಮೊದಲ ಮದುವೆಯಾದರೆ, ವಿಸ್ಮಯಾಳಿಗೆ ಇದು ಎರಡನೇ ಮದುವೆ. ಅವಳೇನು ವಿಷಯ ಮುಚ್ಚಿಟ್ಟು ಮದುವೆಯಾಗಿರಲಿಲ್ಲ. ದೂರದ ಸಂಬಂಧಿಯೇ ಆಗಿದ್ದಳು ವಿಸ್ಮಯ. ವಿಸ್ಮಯಳ ಗಂಡನು ಮುರಳಿಗೆ ಸ್ನೇಹಿತ. ವಿಸ್ಮಯಳ ಮೊದಲ ಮದುವೆಯಲ್ಲಿ ಮುರಳಿ ತುಂಬ ಓಡಾಡಿದ್ದ. ಬೇರಾವುದೇ ಭಾವನೆಯಿಲ್ಲದೆ ವಿಸ್ಮಯಾಳಿಗೆ ಒಳ್ಳೆಯ ಗೆಳೆಯನಂತೆ ಇದ್ದ. ವಿಸ್ಮಯಳ ಮೊದಲಿನ ದಾಂಪತ್ಯ ಗೀತೆಯಲ್ಲಿ ಮುರಳಿಯಿಂದ ಅಪಸ್ವರ ಬಂದಿರಲಿಲ್ಲ. ವಿಸ್ಮಯಳ ಗಂಡನಿಗೆ ಮುರಳಿ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇತ್ತು

ಬಾಲ್ಯ ಸ್ನೇಹಿತರು ಆಗಿದ್ದರು ಅವರಿಬ್ಬರು.

ಮತ್ತೇಕೆ ವಿಸ್ಮಯಳ ಮೊದಲ ಸಂಸಾರದ ನೌಕೆ ಮಗುಚಿ ಬಿತ್ತು? ಪ್ರಶಾಂತ ಮನಸ್ಸಿನ ತುಂಬ ಕಂಡು ಕಾಣದಂತಹ ಭೋರ್ಗರೆವ ಅಲೆಗಳು ಏಕೆ ಎದ್ದಿದ್ದವು?


ವಿಸ್ಮಯಳ ಮೊದಲ ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳ ಫಲ ಕಾಣಲಿಲ್ಲ. ವೈದ್ಯರ ಬಳಿ ವಿಸ್ಮಯ ಅದೆಷ್ಟು ಸಲ ಹೋಗಿಬಂದರೂ ಪ್ರಯೋಜನವಾಗಲಿಲ್ಲ. ಎಲ್ಲವೂ ನಾರ್ಮಲ್ ಎಂದೇ ಹೇಳುತ್ತಿದ್ದರು. ವಂಶೋದ್ಧಾರಕನಿಲ್ಲದ ಮನೆಯನ್ನು ಈ ಸಮಾಜ ಒಪ್ಪದು ಎನ್ನುವ ಕಟ್ಟಾ ಸಂಪ್ರದಾಯಸ್ಥರು ವಿಸ್ಮಯಳ ಅತ್ತೆ ಮಾವ. ಮಗನಿಗೆ ಮತ್ತೊಂದು ಮದುವೆ ಮಾಡಲು ಸಜ್ಜಾಗಿಯೇ ಬಿಟ್ಟರು. ಇವಳ ಅಂತರಂಗದ ಧ್ವನಿಗೆ ಕಿವಿಯಾಗಲು  ಯಾರೊಬ್ಬರೂ ಸಹನೆ ತೋರಲಿಲ್ಲ, ಗಂಡನು ಸಹ !


ವಿದ್ಯಾವಂತಳಾಗಿದ್ದ ವಿಸ್ಮಯ ಗಂಡ ತನ್ನನ್ನು ತೊರೆಯುವ ಮೊದಲು, ತಾನೇ ಅವನಿಗೆ ವಿಚ್ಚೇಧನ ನೀಡಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಬಂದಿದ್ದಳು. ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಇತ್ತು ವಿಸ್ಮಯಾಳಿಗೆ. ಮುರಳಿಯ ಸಹಾಯದಿಂದ ಅವನು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕೆಲಸ ಗಿಟ್ಟಿಸಿಕೊಂಡಳು. ಈ ಮಧ್ಯೆ ಗಂಡನ ಎರಡನೇ ಮದುವೆ ವಿಷಯ ತಿಳಿದು ಮತ್ತಷ್ಟು ಗಟ್ಟಿಯಾದಳು.


ಹೀಗೆ ಎಲ್ಲ ಕಹಿ ನೆನಪನ್ನು ಮರೆತು ಮುರಳಿಯ ಸ್ನೇಹ, ಹೊಸ ಕೆಲಸ, ಜಾಗದಿಂದಾಗಿ ವಿಸ್ಮಯ ಮತ್ತಷ್ಟು ಗೆಲುವಾದಳು. ಆದರೆ ಮುರುಳಿ ಅವಳಿಗೆ ಸೋತಿದ್ದ. ಗೆಳೆಯನ ಹೆಂಡತಿಯ ಮೇಲೆ ಇಂತಹ ಭಾವನೆ ಬಂದಿರುವುದು ಹೊರ ಪ್ರಪಂಚಕ್ಕೆ ತಿಳಿದರೆ ಈ ಸಂಬಂಧಕ್ಕೆ ಅನೈತಿಕತೆಯ ಮಸಿ ಬಳಿಯುತ್ತಾರೆ ಎಂದು ಅರಿತಿದ್ದ ಮುರುಳಿ ಆದಷ್ಟು ವಿಸ್ಮಯಳಿಂದ ದೂರವಾಗಲು ಪ್ರಯತ್ನಿಸಿದ.  ಬೇರೆ ಕಡೆ ವರ್ಗಾವಣೆಗೆ ಅರ್ಜಿ ನೀಡಿದ್ದ. ಎಲ್ಲ ಬೆಳವಣಿಗೆಗಳು ವಿಸ್ಮಯಾಳಿಗೆ ಗೊತ್ತಾಗಿತ್ತು. ವಿಸ್ಮಯ ನೇರವಾಗಿಯೇ ಮುರಳಿಯ ಬಳಿ ತನ್ನ ಸಂದೇಹ ಕೇಳುತ್ತಾಳೆ.


ತಾನೀಗ ವಿಚ್ಚೇಧನ ಪಡೆದವಳು. ಇದನ್ನು ಸಮಾಜ ನೋಡುವುದು ಬೇರೆ ರೀತಿಯಲ್ಲಿ. ಮಕ್ಕಳಾಗಿಲ್ಲ, ವಂಶ ಬೆಳೆಯುತ್ತಿಲ್ಲ ಎನ್ನುವ ಕಾರಣಕ್ಕೆ ನನಗೆ ವಿಚ್ಚೇಧನ ಆಗಿದೆ. ಇಷ್ಟೆಲ್ಲ ಗೊತ್ತಿದ್ದೂ ನೀನು ನನ್ನ ಮದುವೆಯಾಗುವುದಾದರೆ, ಮುಂದೆ ಯಾವತ್ತೋ, ಯಾವುದೋ ವಿಷಯದ ಮಧ್ಯೆ ನನ್ನ ಮೊದಲ ಮದುವೆಯ ಬಗ್ಗೆಯಾಗಲಿ, ಗಂಡನ ಬಗ್ಗೆಯಾಗಲಿ ಮಾತಾಡದಿದ್ದರೆ ನನಗೆ ಅಭ್ಯಂತರವಿಲ್ಲ . ನಾನು ದುಡಿಯುತ್ತೇನೆ, ನಿನಗೆ ಆರ್ಥಿಕವಾಗಿ ಕೈ ಜೋಡಿಸಬಲ್ಲೆ. ಇದೇ ಗೆಳೆತನ ಮದುವೆಯ ನಂತರವೂ ಮುಂದುವರೆಯುಂತಿದ್ದರೆ ನಿನ್ನಂತಹ ಗೆಳೆಯನನ್ನು ಕಳೆದುಕೊಳ್ಳಲು ನಾನು ತಯಾರಿಲ್ಲ ಎಂದು ನೇರವಾಗಿ ಹೇಳುತ್ತಾಳೆ. ಕೆಲವೇ ದಿನಗಳಲ್ಲಿ ಹಿರಿಯರ ಸಮ್ಮತಿ, ಅಸಮ್ಮತಿಗಳ ಮಧ್ಯೆಯೂ ಮುರಳಿ, ವಿಸ್ಮಯಳನ್ನು ಮದುವೆಯಾಗುತ್ತಾನೆ.


ವಿಸ್ಮಯ ತನ್ನ ಮೊದಲ ಗಂಡನನ್ನು ಎಂದೋ ಮರೆತ ಕಾರಣ ಮುರಳಿಯ ಜೊತೆ ಪ್ರಾಮಾಣಿಕ ಪತ್ನಿಯಾಗಿ ಸಂಸಾರ ಶುರು ಮಾಡುತ್ತಾಳೆ. ಮೊದಲೇ ಏಕೆ ಮುರಳಿ ತನಗೆ ಸಿಗಲಿಲ್ಲ ಎನ್ನುವಷ್ಟು ಮುರಳಿ, ವಿಸ್ಮಯಳನ್ನು ಪ್ರೀತಿಸುತ್ತಿರುತ್ತಾನೆ. ಎಷ್ಟೇ ಕೋಪ ಬಂದರೂ ಸರಿ, ಮದುವೆಗೆ ಮುನ್ನ ಕೊಟ್ಟ ವಚನದಂತೆ ಅವಳ ಮೊದಲ ಮದುವೆಯ ಬಗ್ಗೆ ಮಾತಾಡುತ್ತಿರಲಿಲ್ಲ ಮುರಳಿ. ಹೀಗೆ ವಿಸ್ಮಯ ವರ್ಷದೊಳಗೆ ಗರ್ಭಿಣಿ ಆದಾಗ ಇಬ್ಬರಿಗೂ ಆಶ್ಚರ್ಯ. ಇಬ್ಬರಿಗೂ ತಿಳಿಯುತ್ತದೆ ಮಕ್ಕಳಾಗದ್ದಕ್ಕೆ ವಿಸ್ಮಯ ಕಾರಣವಲ್ಲವೆಂದು !


ಮಕ್ಕಳಿಲ್ಲದವಳು ಎಂದ ಸಮಾಜದ ಮುಂದೆ ಅವಳಿ ಮಕ್ಕಳನ್ನು ಹೆತ್ತು ತಾಯ್ತನ ತೋರಿದ್ದಳು ವಿಸ್ಮಯ. ಮಕ್ಕಳ ನಂತರ ವಿಸ್ಮಯ, ಮುರಳಿಯ ಜೀವನ ಇನ್ನೂ ಸುಂದರವಾಗಿತ್ತು. ಈಗವರು ಹೊಸ ಮನೆಯನ್ನು ಖರೀದಿಸಿದ್ದರು. ಮಕ್ಕಳು ಬೆಳೆಯುತ್ತ ಮತ್ತೇ ಕೆಲಸಕ್ಕೆ ಸೇರಿಕೊಂಡಳು ವಿಸ್ಮಯ. ಕೆಲಸದ ಒತ್ತಡ, ಮಕ್ಕಳ ಕಡೆಗೇ ಸಾಕಷ್ಟು ಗಮನ ಕೊಡದ ನಿಸ್ಸಹಾಯಕತೆ, ಗಂಡನಿಗೂ ಸಮಯ ಕೊಡಲು ವಿಸ್ಮಯಾಳಿಗೆ ಕಷ್ಟವಾಗತೊಡಗಿತು. ಅಲ್ಲದೇ ಮೆನೋಪಾಸ್ ಹಂತ ತಲುಪಿದ್ದ ಅವಳ ದೇಹಸ್ಥಿತಿ ಪದೇ ಪದೇ ಕೋಪಗೊಳ್ಳುವಂತೆ, ಹತಾಶೆ ಅನುಭವಿಸುವಂತೆ ಮಾಡುತ್ತಿತ್ತು. ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ದುಡಿಯುವುದರಿಂದ ಒಂಟಿತನ ಕಾಡುತ್ತಿರಬಹುದೆಂದು ಹೆಂಡತಿಗೆ ಕೆಲಸ ಬಿಟ್ಟು ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳುತ್ತಾನೆ ಮುರಳಿ. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿದ ವಿಸ್ಮಯ ಮುರಳಿಯೊಂದಿಗೆ ಮೌನ ಸಾಧಿಸುತ್ತಾಳೆ. ಅವನು ಹೆಂಡತಿಯೊಂದಿಗೆ ಏಕಾಂತ ಬಯಸಿದಾಗ ಇವಳು ಅವನನ್ನು ದೂರ ಮಾಡುತ್ತಾಳೆ. ಗೊತ್ತಿಲ್ಲದೆ ಅವರಿಬ್ಬರ ಮಧ್ಯೆ ಗೋಡೆಯೊಂದು ಸೃಷ್ಟಿ ಆಗಿತ್ತು. ಮದುವೆಯಾಗಿ ಹತ್ತು ವರ್ಷಗಳ ಮೇಲಾಗಿತ್ತು. ಎಂದೂ ವಿಸ್ಮಯಳ ಮೊದಲ ಗಂಡನ ಬಗ್ಗೆ ಮಾತಾಡದ ಮುರಳಿ ಒಂದು ದಿನ ಮೊದಲ ಗಂಡನ ಬಗ್ಗೆ ಅಸಹನೆಯಿಂದ ನುಡಿದೇ ಬಿಟ್ಟ. ಏನಂದನೋ ಗೊತ್ತಿಲ್ಲ, ಅವಳಿಗದು ಅಸ್ಪಷ್ಟವಾಗಿ ಕೇಳಿಸಿತು. ಅಲ್ಲಿಂದ ಮುರಳಿಯೊಂದಿಗೆ ಮಕ್ಕಳೆದುರು ಮಾತ್ರ ಮಾತಾಡುವಂತೆ ನಾಟಕ ಮಾಡತೊಡಗಿದಳು. ಅವರಿಬ್ಬರ ಮಧ್ಯೆ ಮೌನ ಮಾತಾಡಲು ಶುರು ಮಾಡಿ ಮೂರು ವರ್ಷಗಳಾಗಿತ್ತು. ಈ ವಾರ್ಷಿಕೋತ್ಸವಕ್ಕೆ ಹೆಂಡತಿಯನ್ನು ಮಕ್ಕಳೊಂದಿಗೆ ಕಡಲ ತೀರಕ್ಕೆ ಕರೆದುತಂದಿದ್ದ.


ಸಮುದ್ರ ಶಾಂತವೆನಿಸಿದರೂ ಆಗಾಗ ಅಲೆಗಳ ಭೋರ್ಗರೆತ ಜೋರಾಗಿಯೇ ಇತ್ತು. ಮುರಳಿ ಏನೋ ಹೇಳಲು ವಿಸ್ಮಯಳತ್ತ ಬರುವುದಕ್ಕೂ, ವಿಸ್ಮಯಳ ಮೊದಲ ಗಂಡ ತನ್ನ ಮತ್ತೊಬ್ಬ ಹೆಂಡತಿ ಜೊತೆ ಕೂತಿರುವುದು ಕಾಣಿಸಿತು. ವಿಸ್ಮಯಳನ್ನು ನೋಡಿದ ಅವಳ ಮೊದಲ ಗಂಡ ಮಾತಾಡಿಸಲು ಇವರತ್ತ ಬಂದ. ಹಳೆಯ ಗಂಡನ ಮುಖ ನೋಡುತ್ತಲೇ ವಿಸ್ಮಯ ಎದ್ದೇಬಿಟ್ಟಳು. ಅಷ್ಟರಲ್ಲಿ ಅವಳ ಮಕ್ಕಳು ಇವರು ಯಾರಮ್ಮ ಎಂದು ಕೇಳಿದಾಗ ವಿಸ್ಮಯಳ ಮೊದಲ ಗಂಡನಿಗೆ ಆಶ್ಚರ್ಯ ಆಗುತ್ತದೆ.


"ಇವಳಿಗೆ ಮಕ್ಕಳಾಗಿವೆಯೇ? "

ಅವನಿಗಿನ್ನೂ ನಂಬಲು ಅಸಾಧ್ಯ ಎನಿಸಿತ್ತು. ಆಗ ಮುರಳಿ ಹೌದು ಎನ್ನುತ್ತಾನೆ. ಮದುವೆಯಾಗಿ ವರ್ಷದೊಳಗೆ ತಾಯಿಯಾಗಿದ್ದಾಳೆ

ಎನ್ನುವಾಗ ವಿಸ್ಮಯಳ ದೃಷ್ಟಿ ಮೊದಲ ಗಂಡನ ಹೆಂಡತಿಯತ್ತ ಹೋಗುತ್ತದೆ. ವಿಸ್ಮಯ ಅಲ್ಲಿಂದ ಎದ್ದು, ಅವಳತ್ತ ಹೋಗಿ ಮಾತಾಡಿದಾಗಲೇ ತಿಳಿಯುತ್ತದೆ ಆ ಹೆಂಡತಿಯ ಮನಸ್ಸಲ್ಲಿ ಎಂತಹ ಅಲೆಗಳ ಕಾದಾಟ ಪ್ರಾರಂಭವಾಗಿತ್ತೆಂದು. ಅವರಿಗಿನ್ನೂ ಮಕ್ಕಳಾಗಿಲ್ಲ. ತನ್ನ ವೈದ್ಯಕೀಯ ಪರೀಕ್ಷೆಗಳಲ್ಲಿ ಎಲ್ಲವೂ ನಾರ್ಮಲ್ ಇದ್ದರೂ ಅತ್ತೆ ಮಾವ ಒಪ್ಪುತ್ತಿಲ್ಲ. ತನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತಿದ್ದಾರೆ. ಆದರೆ ಮಗನನ್ನು ಮಾತ್ರ ಚಿಕಿತ್ಸೆಗೆ ಕಳಿಸುತ್ತಿಲ್ಲ. ಇದು ನನ್ನ ಗಂಡನೊಂದಿಗೆ ನನ್ನ ಕೊನೆಯ ಪಯಣವೆಂದು ಹೇಳಿದಾಗ ವಿಸ್ಮಯ ಒಂದು ಕ್ಷಣ ಅವಕ್ಕಾದಳು.


ತನ್ನಲ್ಲೇ ಸಮಸ್ಯೆ ಇಟ್ಟುಕೊಂಡು ಇನ್ನೂ ಅದೆಷ್ಟು ಮದುವೆಯಾಗುತ್ತಾನೆ ಈ ಗಂಡಸು ಎಂದು ಮನದಲ್ಲೇ ಹೇಳಿಕೊಂಡು ತನ್ನ ಮುರಳಿಯ ಬಗ್ಗೆ ಹೆಮ್ಮೆ ಪಡುತ್ತಾಳೆ. ತನಗೆ ಮಕ್ಕಳಾಗಿಲ್ಲ ಎಂದಾಗಲೂ ಅವನು ತನ್ನನ್ನು ಪ್ರೀತಿಸಿದ. ಎಂದೂ ನನ್ನನ್ನು ಕೇವಲವಾಗಿ ನೋಡಿದವನಲ್ಲ. ಅವನ ಜೊತೆ ನಾನೇಕೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದೇನೆ ಎನಿಸಿ ಮುರಳಿಯ ಬಳಿ ಹೋಗಿ ಮೊದಲ ಗಂಡನ ಎದುರಲ್ಲೇ ಜೋರಾಗಿ ಆಲಂಗಿಸುತ್ತಾಳೆ. ಇಡೀ ಪ್ರಪಂಚವನ್ನೇ ಮರೆತು ಮುರಳಿಯ ಬಾಹುಗಳಲ್ಲಿ ಬಂಧಿಯಾಗುತ್ತಾಳೆ. ಸಮುದ್ರದ ಅಲೆಗಳು ಭೋರ್ಗರೆಯುತ್ತ ಇವರತ್ತ ಧಾವಿಸುತ್ತದೆ.

ಕಡಲ ತೀರದಲ್ಲಿ ಇವರೆಲ್ಲರ ಮನಸ್ಸಿನಲೆಗಳು ಕಾದಾಟ ಆರಂಭಿಸಿದ್ದವು. ಎರಡನೇ ಗಂಡ ಎನಿಸಿಕೊಂಡರೂ ಮುರಳಿ ಉತ್ತಮ ಗಂಡನಾಗಿದ್ದ. ಮನಸ್ಸಿನ ಅಲೆಗಳ ಉದ್ವೇಗವನ್ನು ಹತೋಟಿಯಲ್ಲಿಟ್ಟು ಹೆಂಡತಿಯನ್ನು ಪ್ರಾಮಾಣಿಕವಾಗಿ ಪ್ರೀತಿಸಿದ್ದ.


Rate this content
Log in

Similar kannada story from Romance