Vijaya Bharathi

Abstract Inspirational

2  

Vijaya Bharathi

Abstract Inspirational

ದೀಪಾ

ದೀಪಾ

3 mins
106


ದೇವಸ್ಥಾನದ ಮುಂದೆ ಹೂ ಹಣ್ಣು ಕಾಯಿ ಗಳನ್ನು ಮಾರಾಟ ಮಾಡುತ್ತಿದ್ದ ದೀಪಾ ಹದಿನಾರರ ಹರೆಯದ ಯುವತಿ.


ಬೆಳಿಗ್ಗೆ ಬೇಗ ಎದ್ದು ಏಳೂವರೆಗೆಲ್ಲಾ ದೇವಸ್ಥಾನದ ಮುಂದೆ ಕುಳಿತು ಒಂಭತ್ತು ಗಂಟೆಯವರೆಗೂ ವ್ಯಾಪಾರ ಮುಗಿಸಿ,ಅವಳ ಅಮ್ಮ ಬಂದ ನಂತರ ತಾನು ಶಾಲೆಗೆ ಹೋಗುತ್ತಿದ್ದಳು. ಕುಡುಕ ಅಪ್ಪ, ಕರುಣೆ ಇಲ್ಲದೆ ಹೆಂಡತಿ ಮಕ್ಕಳನ್ನು ಹೊಡೆದು ಅವರ ಬಳಿ ಇದ್ದ ಅಲ್ಪಸ್ವಲ್ಪ ಹಣವನ್ನು ದೋಚಿಕೊಂಡು ಹೋಗುತ್ತಿದ್ದ. ವಯಸ್ಸಿಗೆ ಬಂದ ದೀಪಾಳಿಗೆ ತನ್ನ ತಂದೆಯನ್ನು ಎದುರಿಸಿ ನಿಲ್ಲುವ ಷ್ಟು ಧೈರ್ಯ ಬಂದಿತ್ತು. ತನ್ನ ತಾಯಿ ಮತ್ತು ತನ್ನ ತಮ್ಮ ತಂಗಿಯರನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂಬ ಆಸೆ ಇದ್ದ ಅವಳು, ವ್ಯಾಪಾರದಿಂದ ಬಂದ ಹಣವನ್ನು ತಂದೆಗೆ ಕಾಣದಂತೆ ದೇವಸ್ಥಾನದ ಅರ್ಚಕರ ಹತ್ತಿರ ಇಡುತ್ತಿದ್ದಳು. ತನಗೆ ಬೇಕಾದಾಗ ಅವರಿಂದ ಹಣ ತೆಗೆದುಕೊಂಡು ಅಮ್ಮನ ಖರ್ಚಿಗೆ ಕೊಡುತ್ತಿದ್ದಳು. ಬಡತನದಲ್ಲಿ ಅರಳಿದ‌ ದೀಪಾ, ತನ್ನ ಓದನ್ನು ಎಸ್.ಎಸ್.ಎಲ್.ಸಿ.ಗೆ ನಿಲ್ಲಿಸಿ, ಕಂಪ್ಯೂಟರ್ ಕೋರ್ಸ್ಗಳನ್ನು ಮಾಡಿಕೊಂಡು, ತಿಂಗಳಿಗೆ ಐದುಸಾವಿರ ಸಿಗುವ ಒಂದು ಪ್ರೈವೇಟ್ ಕೆಲಸಕ್ಕೆ ಸೇರಿದಳು.


ಅವಳಿಗೆ ಕೆಲಸ ಕೊಟ್ಟಿದ್ದ ಮಾಲೀಕ ಶಾಮ ರಾವ್ ಅವರ ಮನೆಯೇ ಅವಳ ಆಫೀಸ್ ಆಗಿದ್ದರಿಂದ, ಸಾಹುಕಾರರಾದ ಅವರ ಮನೆಯ ಕೆಲವು ವ್ಯವಹಾರ ಗಳನ್ನು ಇವಳು ನೋಡಿಕೊಳ್ಳುತ್ತಿದ್ದಳು. ಎಪ್ಪತ್ತರ ಹರೆಯದ ರಾವ್ ಅವರ ಬ್ಯಾಂಕ್ ಕೆಲಸಗಳು, ಮನೆಯ ಇನ್ನಿತರ ಕೆಲಸಗಳು, ಅವರು ನಡೆಸುತ್ತಿದ್ದ ಕಂಪನಿಯ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡುತ್ತ, ಅವರ ವಿಶ್ವಾಸವನ್ನು ಗಳಿಸಿದಳು.ಅವರ ಹೆಂಡತಿ ಗೂ ದೀಪ ಮೆಚ್ಚುಗೆಯಾದಳು. ಒಂದು ದಿನ ಅವಳು ಕೆಲಸಕ್ಕೆ ಹೋದಾಗ ಮನೆಯ ಯಜಮಾನರು ಕಾಣಲಿಲ್ಲ. ಮನೆಯ ಬಾಗಿಲನ್ನು ಮಾಲಿ ತೆಗೆದಾಗ, ಇವಳು ತನ್ನಷ್ಟಕ್ಕೆ ತಾನು ತನ್ನ ಕೆಲಸಗಳನ್ನು ಪ್ರಾರಂಭಿಸಿಕೊಂಡಳು. ಒಂದರ್ಧ ಗಂಟೆಯ ನಂತರ ಮಾಲೀಕರು ಬಂದಾಗ, ಇವಳೇ ಹೋಗಿ ಬಾಗಿಲು ತೆಗೆದಳು. ಅವರ ಜೊತೆ ಒಬ್ಬ ಸುಂದರ ಯುವಕ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ನಿಂತಿದ್ದ!


ಅವರಿಬ್ಬರೂ ಒಳಗೆ ಬಂದ ಮೇಲೆ ಇವಳು ತನ್ನ ಕೆಲಸ ಮುಂದುವರಿಸಲು ರೂಂ ಕಡೆ ಹೊರಟಳು. ಅವಳ ಮನಸ್ಸಿನಲ್ಲಿ ತಾನು ಈಗ ತಾನೇ ನೋಡಿದ ಆ ಸುರ ಸುಂದರಾಂಗನ ರೂಪ ಕಣ್ಮುಂದೆ ಸುಳಿಯಿತು. ಹಾಲು ಬಿಳುಪಿನ ಮಧ್ಯಮ ನಿಲುವಿನ, ಚಿಗುರು ಮೀಸೆಯ, ತಲೆ ತುಂಬಾ ಹೊಳೆಯುವ ಕೂದಲಿನ, ಸುಮಾರು ಇಪ್ಪತ್ತೈದರ ಯುವಕ.'ಯಾರಿರಬಹುದು,ಬಾಸ್ ಮಗನಾ? ದೇವರು ಕೊಟ್ಟವರಿಗೆ ಎಲ್ಲವನ್ನೂ ಕೊಡುತ್ತಾನೆ, ಐಶ್ವರ್ಯದ ಜೊತೆಗೆ ಎಂತಹ ರೂಪ' ಎಂದು ದೀಪ ಯೋಚಿಸುತ್ತಾ ಇದ್ದಂತೆ, ಅವಳಿಗೆ ಮನೆಯ ಒಡತಿ ಯಿಂದ ಕರೆ ಬಂದಾಗ ತನ್ನ ಯೋಚನೆಗಳಿಗೆ ಅರ್ಧ ವಿರಾಮ ಹಾಕಿ, ಒಳಕ್ಕೆ ಹೋದಳು. "ದೀಪಾ, ಇವತ್ತು ನನ್ನ ಮಗನೂ ಬಂದಿದ್ದಾನೆ. ಊಟಕ್ಕೆ ರೆಡಿ ಮಾಡು. ಡೈನಿಂಗ್ ಟೇಬಲ್ ಮೇಲೆ ಎಲ್ಲವನ್ನೂ ಜೋಡಿಸು" ಎಂದು ಯಜಮಾನಿ ಹೇಳಿದಾಗ, "ಆಯ್ತಮ್ಮ' ಎನ್ನುತ್ತಾ ಊಟಕ್ಕೆ ರೆಡಿ ಮಾಡುತ್ತಾ ಇದ್ದಾಗ, ಮಾಲೀಕರು ಮಗನ ಜೊತೆ ಬಂದರು. ಆಗ ನೋಡಿದ ಆ ಯುವಕನೇ ಇವರ ಮಗ ಎಂದು ಗೊತ್ತಾಯಿತು. ತಂದೆ ಮಗ ಇಬ್ಬರೂ ಒಟ್ಟಿಗೆ ಬಂದರು. ಮಗನ ಕೈಹಿಡಿದು ಕೊಂಡೇ ಬಂದ ಮಾಲೀಕರನ್ನು ನೋಡಿ ದೀಪಾಳಿಗೆ ಆಶ್ಚರ್ಯ ವಾಯಿತು. ಅವನನ್ನು ನಿಧಾನವಾಗಿ ಚೇರಿನಲ್ಲಿ ಕೂರಿಸಿದಾಗ ಮತ್ತೂ ಆಶ್ಚರ್ಯ ವಾಯಿತು. ಕಡೆಗೆ ಅವಳಿಗೆ ಅವನ ಅಂಧತ್ವ ಗೊತ್ತಾಯಿತು.


ತಮ್ಮ ಮಗನಿಗೆ ಕಣ್ಣು ಕಾಣಿಸದೇ ಇರುವುದನ್ನು ರಾಯರು, ದೀಪಾಳ ಹತ್ತಿರ ಹೇಳಿಕೊಂಡಾಗ, ಅವಳಿಗೆ ತುಂಬಾ ನೋವಾಯಿತು. ಆ ದೇವರು ಎಷ್ಟೆಲ್ಲ ಐಶ್ವರ್ಯ ಕೊಟ್ಟು, ಮುಖ್ಯ ವಾದ ಅಂಗವನ್ನೇ ಕಿತ್ತು ಕೊಂಡಿದ್ದಾನಲ್ಲ,ಪಾಪ ಎಂದು ಕೊಂಡು ಮರುಗಿದಳು. 'ಸಧ್ಯ ತಮಗೆ ಬಡತನವಿದ್ದರೂ, ಅಂಗಾಂಗಗಳನ್ನು ಸರಿಯಾಗಿಟ್ಟಿದ್ದಾನೆ. .,ದುಡ್ಡಿದ್ದರೆ ಸಾಕು ಏನು ಬೇಕಾದರೂ ಮಾಡಬಹುದು ಎಂದು ನಾನು ಪ್ರತಿದಿನ ಆ ದೇವರೆದುರು ಪೇಚಿಕೊಳ್ಳುತ್ತಿದ್ದೆ. ಈಗ ಈ ಸಾಹುಕಾರರ ಮನೆಯ ಪರಿಸ್ಥಿತಿ ನೋಡಿದಾಗ, ಕೇವಲ ಐಶ್ವರ್ಯವಿದ್ದರೆ ಸಾಲದು, ಆರೋಗ್ಯ ವೂ ಮುಖ್ಯ.' ದೀಪಳಿಗನಿಸಿತು. ಆ ಯುವಕನ ಹೆಸರು ಆದಿತ್ಯ . ಮುಂದೆ ಬರಬರುತ್ತಾ ಅವನ ಕೆಲಸಗಳನ್ನೂ ಇವಳೇ ಮಾಡಬೇಕಾಯಿತು. ಇವಳ ಪ್ರಾಮಾಣಿಕತೆಯನ್ನು ಮೆಚ್ಚಿದ್ದ ರಾಯರು ಇವಳಿಗೆ ಸಂಬಳವನ್ನು ಹತ್ತು ಸಾವಿರಕ್ಕೆ ಹೆಚ್ಚು ಮಾಡಿದ್ದರು. ದೀಪಾ ಳ ಮನೆಯ ಪರಿಸ್ಥಿತಿ ಸುಧಾರಿಸುತ್ತಾ ಬಂದಿತ್ತು. ಕುಡುಕ ಅಪ್ಪ ಒಂದು ದಿನ ಶಿವನ ಪಾದವನ್ನು ಸೇರಿ ಬಿಟ್ಟಾಗ , ದೀಪಳ ಮಾಲೀಕರು, ಅಮ್ಮ ಮತ್ತು ಮಕ್ಕಳಿಗೆ ತಮ್ಮ ಮನೆಯ ಕಾರ್ ಗ್ಯಾರೇಜ್ ನಲ್ಲಿ ವಾಸಿಸಲು ಅನುಕೂಲ ಮಾಡಿಕೊಟ್ಟಿದ್ದರು. ದೀಪಾ ಈಗ ಆದಿತ್ಯ ನ ಕಡೆಗೇ ಹೆಚ್ಚು ಗಮನ ಕೊಡುತ್ತಿದ್ದಳು. ಅವನು ಎಲ್ಲಾ ಕೆಲಸಗಳಿಗೂ ಇವಳೇ ಊರುಗೋಲಾಗಿದ್ದಳು. ಬರಬರುತ್ತಾ ದೀಪಾ ಆ ಮನೆಯವಳಂತೆಯೇ ಆಗಿ ಹೋಗಿದ್ದಳು. ಒಮ್ಮೊಮ್ಮೆ ಕೀ ಬೋರ್ಡ್ ನುಡಿಸುತ್ತಿದ್ದ ಆದಿತ್ಯನನ್ನೇ ನೋಡುತ್ತಾ ಅವನ ಸಂಗೀತವನ್ನು ತನ್ಮಯನಾಗಿ ಕೇಳುತ್ತಾ ಮೈಮರೆಯುತ್ತಿದ್ದಳು. ಆದಿತ್ಯನೂ  ದೀಪಾ ಳ ಜೊತೆ ಮನಬಿಚ್ಚಿ ಮಾತನಾಡುತ್ತಿದ್ದ.


ಒಂದು ದಿನ ಮಾಲೀಕರು ದೀಪಗಳನ್ನು ಕರೆದು, "ದೀಪಾ, ನೋಡಮ್ಮ ನನಗೆ ದೇವರು ಬೇಕಾದಷ್ಟು ಐಶ್ವರ್ಯ ಕೊಟ್ಟಿದ್ದಾನೆ .ಆದರೆ ಅದನ್ನು ಸಂಭಾಳಿಸಲು ಮುಂದೆ ಅದನ್ನು ಕಾಪಾಡಿಕೊಂಡು ಹೋಗಲು ಆಗದಂತೆ ನನ್ನ ಒಬ್ಬನೇ ಮಗ ಆದಿತ್ಯ ನ ಕಣ್ಣು ಕಿತ್ತು ಕೊಂಡು ಬಿಟ್ಟಿದ್ದಾನೆ. ನಮ್ಮ ನಂತರ ಅವನನ್ನು ನೋಡಿಕೊಳ್ಳುವವರಾರು? ಇಷ್ಟು ದೊಡ್ಡ ಆಸ್ತಿ ಯನ್ನು ಕಾಪಾಡಿಕೊಳ್ಳುವುದು ಯಾರೆಂದು ನನಗೆ ತುಂಬಾ ಚಿಂತೆಯಾಗಿದೆ. ನೀನು ನಮ್ಮ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ,ಎರಡು ವರ್ಷಗಳು ಆಗಿವೆ. ನಿನ್ನ ಪ್ರಾಮಾಣಿಕ ತೆ, ಶ್ರದ್ಧೆಯ ಬಗ್ಗೆ ನನಗೆ ತುಂಬಾ ಮೆಚ್ಚುಗೆ ಇದೆ. ಇತ್ತೀಚೆಗೆ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಹೊಳೆಯುತ್ತಿದೆ. ಅದನ್ನು ನಿನ್ನಲ್ಲಿ ಹೇಗೆ ಹೇಳುವುದು ಎಂಬುದೇ ನನಗೆ ಗೊತ್ತಾಗುತ್ತಿಲ್ಲ"ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿ ದಾಗ,ದೀಪಾ "ಸರ್ ಏನು ಹೇಳಬೇಕು ಅಂತ ಅನ್ನಿಸುತ್ತೋ ಅದನ್ನು ಹೇಳಿ ಸಾರ್, ಚಿಂತಿಸಬೇಡಿ'", ಎಂದು ಭರವಸೆ ಕೊಟ್ಟಾಗ ಮಾಲೀಕರು ಧೈರ್ಯ ಮಾಡಿ, ತಮ್ಮ ಮನಸ್ಸಿನೊಳಗೆ ಇದ್ದದ್ದನ್ನು ಅವಳೆದುರು ಹೇಳಿಬಿಡುವ ಧೈರ್ಯ ಮಾಡಿದರು. ಅಲ್ಲಿಯೇ ಎದುರಿಗಿದ್ದ ಅವರ ಹೆಂಡತಿ ಅವರನ್ನೇ ಕುತೂಹಲದಿಂದ ನೋಡುತ್ತಿದ್ದರು.ಆಗ ಮಾಲೀಕರು ದೀಪಾ ಳ ಎರಡೂ ಕೈಗಳನ್ನು ಹಿಡಿದುಕೊಂಡು

'ಅಮ್ಮಾ ದೀಪಾ, ನೀನು ನನ್ನ ಮಗನ ಅಂಧಕಾರಕ್ಕೆ ಬೆಳಕಾಗಿ ಬರುವೆಯಾ?"ಎಂದು ಕೇಳಿದಾಗ, ದೀಪಾಳಿಗೆ

ಅವರ ಮಾತುಗಳನ್ನು ನಂಬಲಾಗಲೇ ಇಲ್ಲ. ಸ್ವಲ್ಪ ಹೊತ್ತು ಹಾಗೆ ನಿಂತು ಬಿಟ್ಟಳು. ಅವಳಿಗೆ ಏನು ಹೇಳಲು ತೋಚಲಿಲ್ಲ.


ಅವಳು ತನ್ನ ನಿರ್ಧಾರಕ್ಕಾಗಿ ಸ್ವಲ್ಪ ಸಮಯದ ಕಾಲಾವಕಾಶ ಕೇಳಿದಳು. ದೀಪಾ ತನ್ನ ತಾಯಿಗೆ ಈ ವಿಷಯ ಹೇಳಿದಾಗ ಅವಳು ತನ್ನ ಅಸಮ್ಮತಿಯನ್ನು ಸೂಚಿಸಿದಳು. ಯಾವ ತಾಯಿ ತಾನೇ ತಾನು ಹಡೆದ ಮಗಳು ಕುರುಡನನ್ನು ಮದುವೆಯಾಗಲು ಒಪ್ಪುತ್ತಾಳೆ. ಕೂಲಿ ಮಾಡಿ ಬದುಕಿದರೂ ಸರಿ, ತನ್ನ ಮಗಳು ಕುರುಡನನ್ನು ಮದುವೆ ಯಾಗಬಾರದೆಂದು ಪಟ್ಟು ಹಿಡಿದಳು. ಆದರೆ ದೀಪಾ ಮಾತ್ರ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಂತ ತನ್ನ ಮಾಲೀಕರನ್ನು ನಿರಾಸೆ ಗೊಳಿಸಲು ತಯಾರಿರಲಿಲ್ಲ.


ಒಂದೆರಡು ದಿನಗಳು ಸಾವಕಾಶವಾಗಿ ಯೋಚಿಸಿದ ದೀಪಾ, ಆದಿತ್ಯ ನ ಅಂಧಕಾರಕ್ಕೆ ಬೆಳಕಾಗಿ ಬೆಳಗಲು

ತನ್ನ ಒಪ್ಪಿಗೆ ನೀಡಿದಳು. ಇದರಿಂದ ಶಾಮರಾವ್ ಗೆ ತುಂಬಾ ಸಂತೋಷ ವಾಗಿ, ತಮ್ಮ ಮಗನ ಅಂಧತ್ವಕ್ಕೆ

ಹಣತೆಯಾಗಿ ಬೆಳಗಲು ಬಂದ ದೀಪಾಳಿಗೆ ಚಿರಋಣಿ ಯಾದರು. ಬಡವರ ದೀಪಾ ಸಿರಿವಂತರ ಮನೆಯ ಕತ್ತಲನ್ನು ಓಡಿಸಿತು.


Rate this content
Log in

Similar kannada story from Abstract