ಭಕ್ತೆ
ಭಕ್ತೆ
ಒಂದು ದೇಗುಲ. ಆ ದೇಗುಲಕ್ಕೆ ಹೋಗಬೇಕೆಂದರೆ ನದಿ ದಾಟಿಯೇ ಹೋಗಬೇಕು. ಒಂದು ಸಾರಿ ಅಲ್ಲಿ ಪ್ರತಿದಿನ ಒಂದು ತಿಂಗಳು ಕಾಲ , ದೇವರ ಮೇಲಿನ ನಂಬಿಕೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರತಿದಿನ ಹಾಲು ಮೊಸರು ದೇಗುಲಕ್ಕೆ ತಂದು ಕೊಡುತ್ತಿದ್ದ ಒಂದು ಹಳ್ಳಿ ಹೆಂಗಸು ಬಹಳ ಭಕ್ತಿ ಯಿಂದ ಉಪನ್ಯಾಸ ಕೇಳಿ ಹೋಗುತ್ತಿದ್ದಳು. ಒಂದು ಸಲ ಇಡೀ ರಾತ್ರಿ ಭಾರಿ ಮಳೆ. ಮಾರನೇದಿನ ಭಕ್ತರು ಯಾರೂ ಬರುವುದಿಲ್ಲವೆಂದೇ ತಿಳಿದಿದ್ದಾಗ ಈ ಹೆಂಗಸು ಬಂದಳು. ಉಪನ್ಯಾಸ ಮಾಡುತ್ತಿದ್ದವರಿಗೆ ಆಶ್ಚರ್ಯ. ನದಿ ಉಕ್ಕಿ ಹರೀತಿದೆ ಬೋಟ್ ನಲ್ಲೇ ಬರಲು ಆಗಲ್ಲ ಆದರೆ ನೀನು ಹೇಗೆ ಬಂದೆ ಅಂತ ಕೇಳಿದರು. ಅದಕ್ಕೆ ಅವಳ ಉತ್ತರ , ಸ್ವಾಮಿ, ನೀವೇ ಹೇಳಿದ್ದು ದೇವರಲ್ಲಿ ನೈಜ ಭಕ್ತಿ ಇದ್ದರೆ ಎಂತಹ ನದಿಯನ್ನೂ ದಾಟ ಬಹುದು, ಸಂಪೂರ್ಣ ನಂಬಿಕೆ ಇರಬೇಕಷ್ಟೆ ಅಂತ. ಇವರಿಗೆ ಅವಳ ಮಾತಿನಲ್ಲಿ ನಂಬಿಕೆ ಬರಲಿಲ್ಲ. ನಕ್ಕು ಸುಮ್ಮನಾದರು. ಆದರೆ ಕುತೂಹಲ ಮಾತ್ರ ಕಡಿಮೆಯಾಗಲಿಲ್ಲ. ಆ ಹೆಂಗಸು ಹೇಗಿದ್ದರೂ ಈಗ ಹಾಲು ಮೊಸರು ಕೊಟ್ಟು ವಾಪಸ್ ಹೋಗುವಾಗ
ಸತ್ಯ ತಿಳಿಯುತ್ತೆ ಅಂತ ಕಾದು, ಉಪನ್ಯಾಸ ಮಾಡಿದವರೇ ಅವಳ ಹಿಂದೆ ಹೋದರು. ಕೃಷ್ಣ ಕೃಷ್ಣ ಅಂತ ನೆನೆಯುತ್ತ ತಲೆ ಮೇಲೆ ಬುಟ್ಟಿ ಇಟ್ಟುಕೊಂಡು ನೀರಮೇಲೆ ನಡೆದುಕೊಂಡು ಹೊರಟೇ ಹೋದಳು.
ತಾನೇ ಹೇಳಿಕೊಟ್ಟ ಮಂತ್ರ ತನಗೆ ಉಪಯೋಗವಿಲ್ಲದಿದ್ದರೆ ಹೇಗೆ ಅನ್ನುವ ಅಹಂ ಸೇರಿಕೊಂಡು ಕೃಷ್ಣ ಕೃಷ್ಣ ಅಂತ ನೀರಲ್ಲಿ ಕಾಲಿಟ್ಟಾಗ ಭಯ. ಸ್ವಲ್ಪ ದೂರ ಹೋಗಿರಬಹುದು, ಹೆಂಡತಿ ಮಕ್ಕಳೆಲ್ಲಾ ನೆನೆಪಾದರು. ಬೇಡಪ್ಪ ಅವರವರು ಪಡೆದು ಬಂದ ಪುಣ್ಯ ಅವರವರಿಗೆ ಅಂತ ಹಿಂದುರಿಗಿ ಬಂದರು.