STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಬೆಂಕಿಯಲ್ಲಿ ಅರಳಿದ ಹೂವು.ಭಾಗ 1.

ಬೆಂಕಿಯಲ್ಲಿ ಅರಳಿದ ಹೂವು.ಭಾಗ 1.

2 mins
245

ಹಿಂದೆ ನಮ್ಮ ಹಿರಿಯರು ಮಕ್ಕಳಿರಲವ್ವ ಮನೆ ತುಂಬ ಎನ್ನುತ್ತಿದ್ದರು. ಅದೇ ರೀತಿಯಾಗಿ ಆಗ ಮನೆ ತುಂಬ ಮಕ್ಕಳಿರುತ್ತಿದ್ದರು. ಏನಿಲ್ಲ ಅಂದರೂ ಒಬ್ಬ ತಾಯಿ ಎಂಟರಿಂದ ಹತ್ತು , ಹನ್ನೆರಡು ಮಕ್ಕಳನ್ನು ಹೆರುತ್ತಿದ್ದರು. ಯಾವ ಆಸ್ಪತ್ರೆಗೂ ಹೋಗುತ್ತಿರಲಿಲ್ಲವಂತೆ. ಬಡೆದರಾಗ ಹತ್ತು ರೊಟ್ಟಿ ಹೆಚ್ಚು ಬಡಿಬೇಕು , ಹೆರುವಾಗ ಒಂದೆರಡು ಮಕ್ಕಳನ್ನು ಹೆಚ್ಚು ಹೆರಬೇಕು ಎನ್ನುತ್ತಿದ್ದರು. ಹೆರುವುದು ಆಗಿನ ಕಾಲಕ್ಕೆ ಕಷ್ಟವಾಗಿರಲಿಲ್ಲ ಅನ್ಸುತ್ತೆ. ಹೆಚ್ಚು ಕಡಿಮೆ ಎಲ್ಲರೂ ಹೆಚ್ಚೆಚ್ಚು ಮಕ್ಕಳನ್ನು ಹೆತ್ತಿದ್ದನ್ನೇ ಕಾಣಬಹುದಾಗಿದೆ.


ಅಪ್ಪ ಅಮ್ಮನಿಗೆ ಎಂಟನೆಯ ಮಗಳಾಗಿ ಹುಟ್ಟಿದವಳು ಸಾವಿತ್ರಮ್ಮ. ಈ ಸಾವಿತ್ರಮ್ಮನ ನಂತರ ಇನ್ನಿಬ್ಬರು ತಮ್ಮಂದಿರು ಹುಟ್ಟಿದ್ದರು. ಒಟ್ಟು ಜೀವಂತ ಇದ್ದ ಮಕ್ಕಳು ಹತ್ತಾದರೆ, ಒಂದೆರಡು ಗರ್ಭಪಾತವಾಗಿ ಹೋಗಿದ್ದವು. ಆಗಿನ ಅವರ ಆ ಜೋರು ಕೆಲಸದ ರಭಸಕ್ಕೆ ಸಾಧಾರಣವಾಗಿ ಗರ್ಭಪಾತ ಆಗುತ್ತಿದ್ದವು. ಹೀಗೆ ಉಳಿದ ಹತ್ತು ಮಕ್ಕಳಲ್ಲಿ ಸಾವಿತ್ರಮ್ಮ ತಮ್ಮ ಅಣ್ಣ- ಅಕ್ಕ- ತಮ್ಮಂದಿರೊಡಗೂಡಿ ಬೆಳೆದು ಬಂದ ರೀತಿಯನ್ನು ಹಾಗೂ ಈ ಸಮಾಜದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೋಡೋಣ ಬನ್ನಿ.


ಅಪ್ಪ ರಂಗಪ್ಪ ಬಡ ಕೃಷಿಕ. ಕಣ್ಣಿಗೆ ಕಾಣುವಷ್ಟು ಇದ್ದರೂ ಆ ಭೂಮಿಯಲ್ಲಿ ಫಸಲು ಏರಿ ಬರುತ್ತಿರಲಿಲ್ಲ. ತುಸು ಕಲ್ಲು ಹೊಲದ ರೀತಿ ಗೋಚರಿಸುತ್ತಿತ್ತು. ನೀರಾವರಿ ಕೂಡ ಇದ್ದಿರಲಿಲ್ಲ. ಒಂದೆರಡು ಮೂರು ಬಾರಿ ಬೋರ್ ವೆಲ್ ಹಾಕಿಸಿದರೂ ನೀರು ಬೀಳದೇ, ಹಣ ಮಾತ್ರ ಕೈ ಚೆಲ್ಲಿ ಹೋಗಿತ್ತು. ಹೀಗಾಗಿ ನೀರಿನ ದೆಸೆಯಿಂದ ತುಂಬಾ ಬೇಸತ್ತ ರಂಗಪ್ಪ ಬೋರ್ ವೆಲ್ ಸಹವಾಸವೇ ಸಾಕೆಂದು ಕೈ ಮುಗಿದಿದ್ದ.


ಈ ನಡುವೆ ಆತನ ಅಪ್ಪ ಅಮ್ಮ ತಮ್ಮ ಮಗ ರಂಗಪ್ಪನ ಮದುವೆ ಮಾಡಿದರೆ, ಬರುವ ಹುಡುಗಿಯ ಕಾಲ್ಗುಣದಿಂದ ಆದರೂ ರಂಗಪ್ಪ ದುಡಿದದ್ದರ ಫಲ ಕೈಗೆ ಬರಲಿ ಎನ್ನುತ್ತಾ ಆತನಿಗೆ ಶಾಂತಮ್ಮನೊಂದಿಗೆ ಮದುವೆ ಮಾಡಿಸಿದರು. ಶಾಂತಮ್ಮ ಹೆಸರಿಗೆ ತಕ್ಕಂತೆ ಶಾಂತ ಮೂರ್ತಿಯೇ ಆಗಿದ್ದಳು. ಒಂದಿಷ್ಟು ಕೋಪ ತಾಪ ಗೊತ್ತಿರದ , ತಾಳ್ಮೆಯ ಪ್ರತಿರೂಪವಾಗಿ ಶಾಂತಮ್ಮ ರಂಗಪ್ಪನ ಜೀವನದಲ್ಲಿ ಮಡದಿಯಾಗಿ ಪ್ರವೇಶ ಮಾಡಿ , ಆತನ ಮನೆ ಮನ ಬೆಳಗಿದ್ದಳು.


ಆಕೆ ಬಂದ ನಂತರ ರಂಗಪ್ಪನ ಅಪ್ಪ ಅಮ್ಮ, ತಮ್ಮ ದೊಡ್ಡ ಮಗನಾದ ರಾಮಣ್ಣನ ಮನೆಗೆ ವರ್ಗವಾಗಿದ್ದರು. ಈಗ ಹಳೆಯ ಮನೆಯಲ್ಲಿ ರಂಗಪ್ಪ ಮತ್ತು ಶಾಂತಮ್ಮನ ವಾಸವಾಗಿತ್ತು. ಶಾಂತಮ್ಮ ಯಾವತ್ತೂ ಇಂತಹದು ಬೇಕೆಂದು ಕೇಳಿದವಳೇ ಅಲ್ಲ. ಆದರೆ ತನ್ನ ಗಂಡ ರಂಗಪ್ಪನಿಗೆ ಒಂದು ಹತ್ತು ಮುತ್ತುಗಳನ್ನು ಹೆತ್ತು ಕೊಟ್ಟು ದೇವತೆಯಾಗಿದ್ದಳು.


ಆ ಹತ್ತು ಮುತ್ತು ರತ್ನದಲ್ಲಿ ಎಂಟನೇಯ ಮುತ್ತಾಗಿ ಜನಿಸಿದವಳೇ ಸಾವಿತ್ರಮ್ಮ. ಸಾವಿತ್ರಮ್ಮನ ಜನನದ ಪೂರ್ವದಲ್ಲಿ ರಂಗಪ್ಪನ ಮನೆಯಲ್ಲಿ ಕಷ್ಟ ಮತ್ತು ಸಮಸ್ಯೆಗಳು ತುಂಬಿಕೊಂಡು, ನೆಮ್ಮದಿಯ ಜೀವನ ಅಲ್ಪ ಕಷ್ಟವಾಗಿತ್ತು. ಇಂತಹ ಕಷ್ಟದ ಜೀವನದ ಮದ್ಯಯೂ ರಂಗಪ್ಪನಿಗೆ ಅಷ್ಟೊಂದು ಮಕ್ಕಳು ಜನಿಸಿದರೂ ಆ ಮಕ್ಕಳೆಂದೂ ಆತನಿಗೆ ಆಗಲಿ ಅಥವಾ ಶಾಂತಮ್ಮನಿಗೆ ಆಗಲಿ ಒಮ್ಮೆಯೂ ಭಾರವೆನಿಸಲಿಲ್ಲ. ಇಷ್ಟ ಪಟ್ಟು ಹೆತ್ತ ಮೇಲೆ ಬೇಸರದ ಮಾತೇಕೆ ಅಲ್ಲವೇ?


ಅಂತದ್ದರಲ್ಲಿ ಸಾವಿತ್ರಮ್ಮ ಜನಿಸಿದ ನಂತರ ಅದೇನೋ ಗೊತ್ತಿಲ್ಲ, ರಂಗಪ್ಪನ ಅದೃಷ್ಟ ಸ್ವಲ್ಪ ಖುಲಾಯಿಸಿದಂತೆ ಗೋಚರಿಸಿತು. ಎಲ್ಲರೂ ಮಗಳು ಅದೃಷ್ಟವಂತೆ, ಆಕೆಯ ಕಾಲ್ಗುಣ ಚೆನ್ನಾಗಿದೆ ಎಂದು ರಂಗಪ್ಪನಿಗೆ ಹೇಳುತ್ತಿದ್ದರು. ಅದು ನಿಜವೂ ಆಯ್ತು. ಆಕೆಯ ಆಗಮನದ ನಂತರ ಇಬ್ಬರು ಗಂಡು ಮಕ್ಕಳು ಆ ಮನೆಗೆ ಆಗಮಿಸಿದರು.


ಆದರೆ ಮುಂದೆ ?



Rate this content
Log in

Similar kannada story from Classics