STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಬೇಗೆ

ಬೇಗೆ

2 mins
339

ಮದುವೆಯಾಗಿ ಮೂರು ವರ್ಷಗಳೇ ಕಳೆದು ಹೋದರೂ ಮಾನಸಾಳಿಗೆ ಗರ್ಭ ನಿಲ್ಲಲಿಲ್ಲ. ಮನೆಯ ಒಳಗಿನ ಮತ್ತು ಹೊರಗಿನ ಹಿತಶತ್ರುಗಳ ಕುಹಕಗಳಿಂದ ಸೋತುಹೋದ ಮಾನಸಾ, ವೈದ್ಯರ ಬಳಿಗೆ ವಾರಿ ನಡೆದಳು. ಅವಳನ್ನು ಪರೀಕ್ಷಿಸಿದ ವೈದ್ಯರು, ಅವಳಲ್ಲಿ ಯಾವ ದೋಷವೂ ಇಲ್ಲವೆಂದು ಹೇಳಿದಾಗ ಅವಳಿಗೆ ಎಷ್ಟೋ ಸಮಾಧಾನವಾಯಿತು. ದೈಹಿಕವಾಗಿ ತನ್ನಲ್ಲಿ ಯಾವ ದೋಷವಿಲ್ಲದಿದ್ದರೂ ಏಕೆ ಮಕ್ಕಳಾಗುತ್ತಿಲ್ಲ ಎಂದು ಅವಳು ವೈದ್ಯರನ್ನು ಕೇಳಿದಾಗ, ಅವರು ಒಂದು ಬಾರಿ ಮಾನಸಾಳ ಗಂಡನನ್ನು ಪರೀಕ್ಷೆ ಮಾಡಬೇಕೆಂದು ತಿಳಿಸಿದರು.

ಮನೆಯಲ್ಲಿ ಈ ವಿಷಯ ಕೇಳಿದ ಕೂಡಲೇ ಅವಳ ಅತ್ತೆ ಮತ್ತು ಗಂಡನಿಂದ ಪಟಾಕಿ ಸಿಡಿಮದ್ದುಗಳು ಸಿಡಿದು ಹೋದವು. 'ನಾನು ಯಾವ ವೈದ್ಯರ ಬಳಿಗೆ ಬರುವುದಿಲ್ಲ. ನನಗೇನೂ ತೊಂದರೆ ಇಲ್ಲ.'ಎಂದು ಗಂಡ ಪಟ್ಟು ಹಿಡಿದರೆ,

'ಹಾ, ನನ್ನ ಮಗನಿಗೇಕೆ ಪರೀಕ್ಷೆ?,ಅವನಿಗೇನೂ ಆಗಿಲ್ಲ. ಆ ವೈದ್ಯರಿಗೆ ಬುದ್ಧಿ ಇಲ್ಲ. ಸುಮ್ಮನೆ ನನ್ನ ಮಗನಿಗೆ ಅವಮಾನ ಮಾಡಬೇಕೂ ಅಂತಾನಾ? ನೀನು ಅವರ ಹತ್ತಿರ ಏನೇನು ಹೇಳಿಕೊಂಡಿದ್ದೀಯೋ? ನಿನಗೆ ಏನೋ ಪ್ರಾಬ್ಲಂ ಇರಬೇಕು. ಆ ಡಾಕ್ಟರ್ ಬೇಡ. ನಮಗೆ ಪರಿಚಯ ಇರುವ ಡಾಕ್ಟರ್ ಹತ್ತಿರ ಹೋದರಾಯಿತು." ಅತ್ತೆಯ ಕಿರಿಕಿರಿ ಶುರು.


ಇವರಿಬ್ಬರ ನಡುವೆ ಮಾನಸಾ ಅಡಕೊತ್ತಿಯಲ್ಲಿ ಸಿಕ್ಕ ಅಡಕೆಯಾದಳು.

ಅತ್ತೆಯ ಆಜ್ಞೆಯಂತೆ ಅವರ ಪರಿಚಯದ ಡಾಕ್ಟರ್ ಹತ್ತಿರವೂ ಹೋಗಿಯಾಯಿತು. ಅವರೂ ಕೂಡ ಮಾನಸಾಳಲ್ಲಿ ಯಾವ ದೋಷವಿಲ್ಲ ಎಂದು ಪ್ರಮಾಣ ಪತ್ರ ಕೊಟ್ಟರು. ಯಾವ ಡಾಕ್ಟರ್ ಗಳು ಎಷ್ಟೇ ಹೇಳಿದರೂ ಮಾನಸಳ ಗಂಡ ಮಾತ್ರ ಪರೀಕ್ಷೆಗೆ ಸಹಕರಿಸಲಿಲ್ಲ.

ಮನೆಯ ಬಿಗಿಯಾದ ವಾತಾವರಣ, ಹೊರಗಡೆ ಜನರ ಇಲ್ಲಸಲ್ಲದ ವಿಚಾರಣೆಗಳಿಂದ ಮಾನಸಾಳಿಗೆ ಉಸಿರು ಗಟ್ಟಿಸುವಂತಾಯಿತು. ಇಪ್ಪತ್ತೊಂದನೆಯ ಶತಮಾನದಲ್ಲೂ ಜನರು ಹೀಗೇಕೆ?, ಎಂದು ನೊಂದುಕೊಳ್ಳುತ್ತಿದ್ದಳು.


ಎಲ್ಲಾ ಕಡೆಯೂ ಬಿಸಿಲ ಬೇಗೆ. ಎಲ್ಲಿಂದಲಾದರೂ ತಂಬೆಲರು ಸುಳಿದೀತೆ? ಆ ತಂಪು ಗಾಳಿಗಾಗಿ ಅವಳು ಕಾದು ಕುಳಿತಳು. ಬಂಜೆತನಕ್ಕೆ ತಾನು ಕಾರಣವಲ್ಲ ಎಂಬುದೇ ಅವಳಿಗೆ ಸಮಾಧಾನದ ವಿಷಯವಾಗಿತ್ತು. ಮತ್ತೆರಡು ವರ್ಷಗಳುರುಳಿದಾಗ, ಮಾನಸಾಳಿಗೆ ತಾವು ಮಗುವೊಂದನ್ನು ದತ್ತು ತೆಗೆದುಕೊಳ್ಳಬಾರದು ಎಂಬ ಆಲೋಚನೆ ಹೊಳೆಯಿತು.   ಬಹಳ ಕಷ್ಟಪಟ್ಟು ಗಂಡನನ್ನು ಒಪ್ಪಿಸಿದಳು. ಅವಳ ಮಾವ ಯಾವ ಮಾತಿಗೂ ಬಾರದೆ ತಟಸ್ಥರಾಗಿದ್ದರು. ಆದರೆ ಅವಳ ಅತ್ತೆಯದು ಮತ್ತೆ ಅದೇ ಹಠ. ತಮಗೆ ತಮ್ಮ ವಂಶದ ಕುಡಿಯೇ ಆಗಬೇಕೆಂದು. ಹೇಗೆ?

ಮಗನಿಗೆ ಬೇರೆ ಮದುವೆ ಮಾಡಿದರೂ ಪ್ರಯೋಜನವಿಲ್ಲ ಎಂಬುದು ಗೊತ್ತು. ಆದರೂ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟವಿಲ್ಲವಂತೆ.

ಮನೆಯ ಈ ರೀತಿಯ ಬೇಗುದಿ ಗೆ ಮಾನಸ ಬೆಂದು ಹೋದಳು. ಹೆಂಡತಿಯ ಖಿನ್ನತೆಯನ್ನು ನೋಡಲಾಗದೆ ಮಾನಸನ ಗಂಡ, ಕಡೆಗೂ ತಾಯಿಯ ಮಾತಿಗೆ ಲಕ್ಷ್ಯ ಕೊಡದೆ, ಅನಾಥಾಶ್ರಮದಿಂದ ಮಗುವನ್ನು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದಾಗ, ಮಾನಸಾಳಿಗೆ

ಎಷ್ಟೋ ಸಮಾಧಾನವಾಯಿತು. ಒಂದು ಶುಭ ಮುಹೂರ್ತದಲ್ಲಿ ಹತ್ತು ದಿನದ ಗಂಡು ಮಗುವನ್ನು ಮನೆಗೆ ಕರೆದುಕೊಂಡು ಬಂದಾಗ, ಆ ಮನೆಯಲ್ಲಿ ತಂಬೆಲರು ಬೀಸಿ, ಬಿಸಿ ವಾತಾವರಣ ಹೋಗಿ ಎಲ್ಲೆಲ್ಲೂ ತಂಪುಗಾಳಿ ಸುಳಿದಾಡತೊಡಗಿತು.



Rate this content
Log in

Similar kannada story from Abstract