ಬೇಬಿ ಪಿಂಕ್
ಬೇಬಿ ಪಿಂಕ್
ಅಂದು ಸುಮಾಳ ಸೀಮಂತ. ಆರು ತಿಂಗಳು ತುಂಬಿದ ಗರ್ಭಿಣಿಗೆ ಮನೆಯಲ್ಲಿ ಸೀಮಂತ ಮಾಡಬೇಕೆಂದು ಅವಳ ಅಪ್ಪ ಅಮ್ಮ ಸಡಗರದಿಂದ ಓಡಾಡುತ್ತಿದ್ದರು.ತಮ್ಮ ಮಗಳು ಮಗುವಾದ ನಂತರ ಆ ಮನೆಯಲ್ಲಿ ಇನ್ನು ಯಾವ ಮಕ್ಕಳ ಅಳು ನಗು ಚೇಷ್ಟೆ ಗಳ ಗಲಾಟೆಯೇ ಇರಲಿಲ್ಲ.ಹೀಗಾಗಿ ಮಗಳಿಗೆ ಅದ್ದೂರಿಯಾಗಿ ಸೀಮಂತ ಇಟ್ಟು ಕೊಂಡಿದ್ದರು. ಸಾಮಾನ್ಯವಾಗಿ ಸೀಮಂತಕ್ಕಾಗಿ ಹಸಿರು ಬಳೆಗಳು ಹಸಿರು ಸೀರೆಯನ್ನು ಬಸುರಿ ಹುಡುಗಿಗೆ ತರುವ ವಾಡಿಕೆ. ಆದರೆ ಸುಮಾ ತನಗೆ ಹಸಿರು ಸೀರೆ ಬೇಡ, ಪಿಂಕ್ ಸೀರೆಯೇ ಬೇಕೆಂದಾಗ, ಅವರ ಅಮ್ಮ ಮಗಳಿಗೆ ಹಸಿರು ಸೀರೆ ಯ ಜೊತೆ ಒಂದು ಬೇಬಿ ಪಿಂಕ್ ಸೀರೆಯನ್ನು ತಂದರು. ಯಾರು ಎಷ್ಟೇ ಹೇಳಿದರೂ ಸುಮಾ ಅಂದು ಹಸಿರು ಸೀರೆಯನ್ನು ಉಟ್ಟಿಕೊಳ್ಳದೇ ಪಿಂಕ್ ಸೀರೆಯನ್ನು ಉಟ್ಟಾಗ, ಅಲ್ಲಿಗೆ ಬಂದಿದ್ದವರೆಲ್ಲರೂ ಒಂದು ರೀತಿಯ ವಿಚಿತ್ರ ದೃಷ್ಟಿಯಿಂದ ಅವಳನ್ನು ನೋಡಿ, ಹಸಿರು ಸೀರೆ ಏಕೆ ಉಡಲಿಲ್ಲ ಎಂದು ಕೇಳುತ್ತಿದ್ದರು.
ಆಗ ಸುಮಾ ಬಂದವರೆಲ್ಲರೆದುರಿಗೆ "ಹಾಂ ನನಗೆ ಗುಲಾಬಿ ಬಣ್ಣ ವೆಂದರೆ ಇಷ್ಟ. ಈ ಬಣ್ಣ ಸ್ತ್ರೀ ಶಕ್ತಿಯ ಸಂಕೇತ. ನನಗೆ ಹುಟ್ಟುವ ಮಗು ಹೆಣ್ಣು ಮಗುವಾದರೆ ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು
ಶಕ್ತಿ ಪಡೆಯಬೇಕು" ಎಂದು ಹೇಳುತ್ತಿದ್ದಳು.
ಆಗೆಲ್ಲಾ ಅಲ್ಲಿಗೆ ಬಂದಿದ್ದವರು ಇವಳು ಈ ಮಾತುಗಳನ್ನು ಕೇಳಿ
'ಅಯ್ಯೋ ಹುಟ್ಟುವ ಮಗು ಗಂಡಾದರೆ ಆಗ ಏನು ಮಾಡುತ್ತಾಳೋ?'ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಹೊರಟರು.
ಸುಮಾ ಳಿಗೆ ತುಂಬಾ ಚಿಕ್ಕ ವಯಸ್ಸಿನಿಂದಲೂ ಪಿಂಕ್ ಬಣ್ಣ ವೆಂದರೆ ತುಂಬಾ ಇಷ್ಟ. ಮಹಿಳಾ ಪರವಾದ ಹೋರಾಟ ಗಳಲ್ಲಿ ಭಾಗವಹಿಸುತ್ತಿದ್ದ ಅವಳು ಹೆಚ್ಚು ಹೆಚ್ಚು ಗುಲಾಬಿ ಬಣ್ಣದ ಬಟ್ಟೆಗಳನ್ನು ಹಾಕುತ್ತಿದ್ದಳು.
ಸುಮಾ ಳಿಗೆ ಒಂಭತ್ತು ತಿಂಗಳು ಆಗಿ ಒಂದು ದಿನ ಹೆರಿಗೆಯ ನೋವು ಶುರುವಾಗಿ , ಎರಡು ದಿನಗಳ ನೋವನ್ನು ಅನುಭವಿಸಿ ಕಡೆಗೆ ಅವಳ ಇಚ್ಛೆಯಂತೆಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ದುಂಡು ದುಂಡಗೆ ಪಿಂಕ್ ಆಗಿ
ಮುದ್ದಾಗಿದ್ದ ಪಿಂಕ್ ಬೇಬಿ ಅವಳ ಮಡಿಲಿನಲ್ಲಿ ಮಲಗಿದಾಗ, ಅವಳ ಸಂತೋಷ ಹೇಳತೀರದು. ಅದರ ಪಿಂಕ್ ಆಗಿರುವ ಕೆನ್ನೆಯನ್ನು ಮುಟ್ಟುತ್ತಾ "ಪಿಂಕಿ" ಅಂತ ಕರೆದು ಬಿಟ್ಟಳು. ಅವಳು ಸುತ್ತ ಇದ್ದ ಅವಳ ಗಂಡ ಅತ್ತೆ ಮಾವ ತಂದೆ ತಾಯಿ ಎಲ್ಲರೂ ನಗುತ್ತಾ
"ಪಿಂಕ್ ಪ್ರಿಯೆಗೆ ಬೇಬಿ ಪಿಂಕ್ ಸಿಕ್ಕಿಯೇ ಬಿಟ್ಟಿತು. ಕಂಗ್ರಾಜುಲೇಷನ್ಸ" ಎನ್ನುತ್ತಾ ಅವಳಿಗೆ ಶುಭಕೋರಿದರು.
