ಅವಳೂ ತಾಯಿಯೇ. ಭಾಗ 3.
ಅವಳೂ ತಾಯಿಯೇ. ಭಾಗ 3.
ಕಲಾವತಿಗೆ ಬರು ಬರುತ್ತಾ , ಚಿಕ್ಕಮ್ಮನ ದರ್ಪದ ಮಾತುಗಳು , ಹಿಂಸೆ , ಅರ್ಧಂಬರ್ಧ ಊಟ , ಹೊಡೆತ ,ಬೈಗುಳ ಎಲ್ಲವೂ ರೂಢಿಯಾಗಿ ,ಬರು ಬರುತ್ತಾ ಅವಳ ಚರ್ಮವೂ ದಪ್ಪವಾಗುತ್ತ ಬಂದಿತು. ಹೊಡೆದರೂ ಬೈದರೂ ಜಗ್ಗದೆ ಕುಗ್ಗದೆ ತನ್ನ ನೇರಕ್ಕೆ ಬದುಕಲು ಕಲಿಯಲು ಪ್ರಯತ್ನ ಪಡುತ್ತಿದ್ದಳು.
ಎಷ್ಟೋ ಸಲ ಅವಳ ಅಕ್ಕ , ಆಕೆಗೆ ಅದೆಷ್ಟೇ ಬುದ್ಧಿ ಹೇಳಿದರೂ ಸಹ ಕೇಳದೆ , ತನ್ನ ಮನಸ್ಸಿಗೆ ಬಂದಂತೆ ಇರತೊಡಗಿದಳು . ಹಾಗಂತ ದಾರಿ ತಪ್ಪಿರಲಿಲ್ಲ.
ಈ ಮಧ್ಯ ಅದ್ಯಾರೋ ಪುಣ್ಯಾತ್ಮರು ಒಬ್ಬರು ಅದೆಲ್ಲಿಂದ ಒಂದು ಸಂಬಂಧ ತಂದರೊ ಗೊತ್ತಿಲ್ಲ , ಒಳ್ಳೆಯ ಸಂಬಂಧವೇ ಸರಿ , ಆದರೂ ತಂಗಿಯನ್ನು ಚಿಕ್ಕಮ್ಮನ ಹತ್ತಿರ ಬಿಟ್ಟು ಮದುವೆ ಆಗಿ ಹೋಗಲು ಅಕ್ಕನಿಗೆ ಭಯ , ಅಕ್ಕನಿಲ್ಲದೇ ದಿನವನ್ನು ಊಹಿಸಿಕೊಳ್ಳಲು ತಂಗಿಗೆ ಕಷ್ಟ . ಹೀಗೆ ಇರಲು ಕಲಾವತಿಯ ಅಪ್ಪ ಹಿರಿ ಮಗಳ ಮದುವೆಯ ಸಿದ್ಧತೆ ಮಾಡೇ ಬಿಟ್ಟಿದ್ದನು. ಆವನಿಗೋ ಒಂದು ರೂಪಾಯಿ ವರದಕ್ಷಿಣೆ ಇಲ್ಲದೆ ಮದುವೆಯನ್ನು ಸಹ ತಾವೇ ಮಾಡಿಕೊಳ್ಳುತ್ತೇವೆ ಎನ್ನುತ್ತಿರುವಾಗ ,ಎಣ್ಣೆ ಬಂದಾಗ ಯಾರಾದರೂ ಕಣ್ಣು ಮುಚ್ಚಿಕೊಂಡು ಕೂರುತ್ತಾರೆಯೇ ?
ಕಲಾವತಿಯ ಚಿಕಮ್ಮನೂ ಕೂಡ ಇಂತದ್ದನ್ನೇ ಬಯಸುತ್ತಿದ್ದಳು . ಒಂದು ರೂಪಾಯಿ ವರದಕ್ಷಿಣೆ ಕೊಡದೆ ಸಾಗ ಹಾಕಬೇಕೆಂದು ಕೊಂಡಿದ್ದಳು . ಅದೇ ಪ್ರಕಾರ ಸಂದರ್ಭ ಬಂದೊದಗಿದಾಗ , ಗಂಡ ಹೆಂಡತಿಯಿಬ್ಬರು ಜಾಣರಾಗಿ ಕೆಲಸ ಮಾಡಿದರು .
ಅಕ್ಕನ ಮದುವೆಯಂತೂ ಆಯಿತು . ಒಳ್ಳೆಯ ಮನೆತನ , ಒಳ್ಳೆಯ ಸ್ವಭಾವದ ಗಂಡ , ಅಕ್ಕ ಚೆನ್ನಾಗಿರುತ್ತಾಳೆ ಅಂತ ಖುಷಿ ಪಡುತ್ತಿದ್ದರೂ ತಾನು ಒಂಟಿಯಾದೇನಲ್ಲ ಅಂತ ಕೊರಗು ಹುಟ್ಟಿತ್ತು. ಆದರೇನು ಮಾಡುವಂತಿಲ್ಲ. ಈಗಂತೂ ಚಿಕ್ಕಮ್ಮ ಕಲಾವತಿಯ ಕಡೆಯಿಂದ ಸಂಪೂರ್ಣ ಕೆಲಸಗಳನ್ನು ಮಾಡಿಸುತ್ತಿದ್ದಳು. ಅಪ್ಪನಂತೂ ಕಣ್ಣಿದ್ದೂ ಕುರುಡನಂತೆ , ಎರಡನೇ ಹೆಂಡತಿಯ ಸೀರೆ ಸೆರಗನ್ನು ಹಿಡಿದು , ಅವಳು ಹೇಳಿದಂತೆ ಕೇಳುತ್ತಿದ್ದ. ಅವರಿಗೆ ಹುಟ್ಟಿದ ಗಂಡು ಮಗುವೊಂದೇ ಶ್ರೇಷ್ಠವೆಂಬಂತೆ ಪ್ರತಿಸಲವೂ ಹೇಳುತ್ತಾ , ಅವನನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದರು.
ಆದರೆ ಆ ಮಗ ಮಾತ್ರ ಅಕ್ಕಂದಿರೆಂದರೆ ಸ್ವಲ್ಪ ಇಷ್ಟ ಪಡುತ್ತಿದ್ದನು. ಅದೂ ದೊಡ್ಡಕ್ಕನನ್ನು ಹೆಚ್ಚು ಪ್ರೀತಿಸುತ್ತಿದ್ದನು. ಕಲಾವತಿ ಅಂದರೆ ಇಷ್ಟ ಆದರೆ ದೊಡ್ಡಕ್ಕನಷ್ಟು ಅಲ್ಲ..
ಹೀಗೆ ಬೆಳೆದು ದೊಡ್ಡವಳಾದಳು ಕಲಾವತಿ. ಕೂಲಿಯನ್ನು ಮಾಡುತ್ತ , ಮಣ್ಣಿನ ಕೆಲಸ ಏನಾದರೂ ಇದ್ದರೆ ಮಾಡುತ್ತ ,ಮಡಿಕೆ ಕುಡಿಕೆ ಏನಾದರು ಇದ್ದರೆ ಮಾಡುತ್ತಿದ್ದಳು. ತಾನು ಕೆಲಸಕ್ಕೆ ಹೋಗುವ ಮನೆಯ ಪಕ್ಕದಲ್ಲಿ ಕುಂಬಾರರ ಮನೆಯಿದ್ದ ಕಾರಣ ಅವಳು ಆಸಕ್ತಿಯಿಂದ ದಿನೇ ದಿನೇ ನೋಡುತ್ತಾ , ನೋಡುತ್ತಾ ಸ್ವಲ್ಪ್ ಸ್ವಲ್ಪೇ ಕಲಿತಿದ್ದಳು. ಕಲಿತ ವಿಧ್ಯೆ ಎಂದೂ ಕೆಡುವುದಿಲ್ಲ ಎಂದು ಅಕ್ಕ ಹೇಳುತ್ತಿದ್ದದ್ದನ್ನು ಮರೆಯದೆ , ಅಲ್ಪ ಸ್ವಲ್ಪ ಏನೇನೋ ಕಲಿತುಕೊಂಡಿದ್ದಳು.
ಒಮ್ಮೆ ಚಿಕ್ಕಮ್ಮ ಕಟ್ಟೆಯ ಮೇಲಿನಿಂದ ಇಳಿಯಲು ಹೋಗಿ ,ಜಾರಿ ಬಿದ್ದು ಕಾಲು ಮುರಿದುಕೊಂಡಳು. ಆ ಸಮಯದಲ್ಲಿ ಕಲಾವತಿಯು ಅಕ್ಕನ ಮನೆಗೆ ,ಅಕ್ಕನನ್ನು ನೋಡಲಿಕ್ಕೆಂದು ಹೋಗಿದ್ದಳು. ಚಿಕ್ಕಮ್ಮ ಕಾಲು ಮುರಿದುಕೊಂಡ ವಿಷಯ ಗೊತ್ತಾಗುತ್ತಿದ್ದಂತೆ ಕಲಾವತಿ ಅಕ್ಕನ ಮುಂದೆ ಚಿಕ್ಕಮನನ್ನು ಬೈಯಲು ಶುರು ಮಾಡಿದಳು . ಮಾಡಿದ್ದುಣ್ಣೋ ಮಹಾರಾಯ ಎಂಬ ಮಾತಿನಂತೆ ತಾನು ಮಾಡಿದ ಕೆಟ್ಟ ಕೆಲಸಕ್ಕೆಲ್ಲ ಈಗ ಅನುಭವಿಸುತ್ತಿದ್ದಾಳೆ ನೋಡಕ್ಕಾ ಅಂದಳು.
ಕಲಾವತಿಯ ಮಾತಿಗೆ ಅಕ್ಕ ಹೇಳಿದ್ದೇನು ?
ಅಕ್ಕನ ಮಾತಿಗೆ ತಂಗಿ ಒಪ್ಪಿದಳೇ ?
ನೋಡೋಣ ಮುಂದಿನ ಭಾಗದಲ್ಲಿ.
