ಅವಳು ಮತ್ತು ಮೋಂಬತ್ತಿ
ಅವಳು ಮತ್ತು ಮೋಂಬತ್ತಿ
ಕರೆಂಟ್ ಹೋದಾಗ, ಅಲ್ಲಿಯೇ ಇದ್ದ ಮೋಂಬತ್ತಿಯನ್ನು ಹತ್ತಿಸಿ ಅದನ್ನು ಒಂದು ಕಡೆ ಅಂಟಿಸಿ ಕುಳಿತಿದ್ದ ಅವಳು ಆ ಮೋಂಬತ್ತಿ ಕರಗಿ ಉರಿಯುವುದನ್ನೇ ತದೇಕ ಚಿತ್ತದಿಂದ ನೋಡುತ್ತಾ ಇದ್ದಳು. ಅವಳಿಗೆ
ಆ ಕರಗಿ ಹೋಗುತ್ತಿರುವ ಮೋಂಬತ್ತಿಯನ್ನು ನೋಡಿದಾಗ, ತನ್ನ ಜೀವನವೂ ಇದೇ ರೀತಿ ಬೇರೆಯವರ ಬೇಡಿಕೆಗಳನ್ನು ಪೂರೈಸುವುದರಲ್ಲೇ ಮುಕ್ಕಾಲು ಭಾಗ ಕಳೆದು ಹೋಗಿದೆ. ಮುಂದೆ ತನ್ನ ಜೀವನದ ಅವಧಿ ಎಷ್ಟಿದೆಯೋ ಗೊತ್ತಿಲ್ಲ.
ಇದುವರೆಗೂ ತನ್ನ ಒಡ ಹುಟ್ಟಿದವರಿಗಾಗಿ, ತನ್ನ ಗಂಡನ ಮನೆಯವರಿಗಾಗಿ , ತನ್ನ ಸಂಪಾದನೆ ಎಲ್ಲವೂ ಕರಗಿ ನೀರಾಗಿ ಹೋಯಿತು.ಲಕ್ಷ ಗಟ್ಟಲೆ ಸಂಪಾದನೆ ಮಾಡಿದರೂ, ಅವಳಿಗೆ ತನಗಾಗಿ ಏನನ್ನೂ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.ಕಡೆಗೆ ಎಲ್ಲಾ ಹೆಣ್ಣು ಮಕ್ಕಳೂ ಆಸೆ ಪಡುವ ಚಿನ್ನದ ಒಂದೆಳೆ ಸರವನ್ನೂ ಸಹ ಅವಳು ಮಾಡಿಸಿಕೊಂಡಿರಲಿಲ್ಲ. ಇದುವರೆಗೂ ಮನೆಯಲ್ಲಿ ಅತ್ತೆ, ಗಂಡ, ಮಾವನವರ ಬೇಡಿಕೆಗಳನ್ನು ತುಟಿ ಅಲ್ಲಾಡಿಸದೇ ಪೂರೈಸಿ ಮುಗಿಸುತ್ತಿದ್ಧ ಅವಳಿಗೆ, ಅವಳ ಅಸ್ತಿತ್ವ ದ ಅರಿವಾಗಲೇ ಇಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದು ರಜತ ಮಹೋತ್ಸವ ನಡೆಯುತ್ತಿದ್ದರೂ, ಮಹಿಳೆ ಮಾತ್ರ ಇಂದಿಗೂ ಪರಾಧೀನಳೇ. ಅವಳಿಗೆ ಸಾಮಾಜಿಕ ಸಮಾನತೆ ದೊರಕಿದ್ದರೂ, ಆರ್ಥಿಕ ಸ್ವಾವಲಂಬನೆ ಇದ್ದರೂ ,ತನಗಾಗಿ ತಾನು ಖರ್ಚು ಮಾಡುವ ಸ್ವಾತಂತ್ರ್ಯ ಮಾತ್ರ ಅವಳಿಗೆ ಇಲ್ಲ, ಅವಳು ಇಂದಿಗೂ ಅಸ್ವತಂತ್ರಳೇ. ತಾನೂ ಹೀಗೇ ಇನ್ನೊಬ್ಬರ ಅಧೀನದಲ್ಲಿಯೇ ತನ್ನ ಬದುಕು ಕಳೆದು ಹೋಗುವುದನ್ನು ತಡೆಯಬೇಕು.,...ಅವಳು ತನ್ನ ಮನಸ್ಸಿನೊಳಗೆ ಯೋಚಿಸುತ್ತಾ ಇದ್ದಳು.
ಇನ್ನು ಮುಂದಾದರೂ ತನ್ನ ಸುಖ ಸಂತೋಷಕ್ಕಾಗಿ
ತನ್ನ ಸಂಪಾದನೆಯ ಹಣವನ್ನು ಖರ್ಚು ಮಾಡಿಕೊಂಡು
ಇನ್ನು ಉಳಿದಿರುವ ತನ್ನ ಆಯುಷ್ಯವನ್ನು ಸಂತೋಷವಾಗಿ ಕಳೆಯಬೇಕು,ಇನ್ನು ತಾನು ಈ ಮೋಂಬತ್ತಿಯಂತೆ ಕರಗಿ ಕರಗಿ ಮರೆಯಾಗಿ ಹೋಗಲಾರೆ ಎಂದು ಅವಳು ನಿರ್ಧರಿಸಿದಳು.
ಆ ವೇಳೆಗೆ ಕರೆಂಟ್ ಬಂದಾಗ, ಅರ್ಧ ಉರಿದು ಹೋಗಿದ್ದ ಮೋಂಬತ್ತಿ ಯನ್ನು ಉಫ್ ಎಂದು ಊದಿ, ಆರಿಸಿ ಬಿಟ್ಟಳು.
