STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಅಂತರಂಗದ ಆಸೆಗಳಿಗೆ ಹಾಕಿದ ಗೋಡೆ .

ಅಂತರಂಗದ ಆಸೆಗಳಿಗೆ ಹಾಕಿದ ಗೋಡೆ .

2 mins
428


ಒಂದು ಕಣ್ಣು ಸಣ್ಣದು , ಸ್ವಲ್ಪ ಹಲ್ಲು ಉಬ್ಬು , ನಾನು ಎಲ್ಲೋ ನೋಡುತ್ತಿದ್ದರೆ , ನನ್ನನ್ನು ನೋಡುತ್ತಿದ್ದವರಿಗೆ ನನ್ನ ದೃಷ್ಟಿ ಎತ್ತೋ ಕಾಣುತ್ತಿತ್ತು. ಆಡಿಕೊಂಡು ನಗುವವರಿಗೆ ನಾನೊಂದು ವಿಷಯ ವಸ್ತುವಾಗಿದ್ದೆ , ಜೊತೆಗೆ ಯಾರಿಗಾದರೂ ಉದಾಹರಣೆ ಕೊಡಲೂ ನನ್ನ ಹೆಸರೇ ಬೇಕಿತ್ತು ಎಲ್ಲರಿಗು. ನನಗಾಗುವ ಬೇಸರ , ದುಃಖ , ನೋವು ಯಾರಿಗೂ ಕಾಣುತ್ತಿರಲಿಲ್ಲ. ಏಕೆಂದರೆ ಅಂತರಂಗದ ನೋವು ಬೇರೆಯವರಿಗೆ ಹೇಗೆ ತಾನೇ ಗೊತ್ತಾಗುತ್ತದೆ. ನನ್ನ ಹೆತ್ತಮ್ಮನಿಗೆ ಮಾತ್ರ ತಿಳಿಯುತ್ತಿತ್ತೇನೋ ಗೊತ್ತಿಲ್ಲ. ತುಂಬಾ ಬೇಸರ ಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ನನಗಂತೂ ಈ ಕೆಟ್ಟ ಸಮಾಜ ಕಂಡು ಎತ್ತಾದರೂ ಓಡಿ ಹೋಗಬೇಕೆಂದು ಅನ್ನಿಸಿಬಿಡುತ್ತಿತ್ತು. ಆದರೆ , ಎಲ್ಲಿಯೇ ಹೋದರು ಈ ಸಮಾಜ ಎನ್ನುವ ಗೋಡೆಯ ಒಳಗಡೆಯೇ ನಮ್ಮ ಬದುಕಲ್ಲವೇ ಎನ್ನುವ ಸತ್ಯ ಅರಿತ ನಾನು , ಚೆನ್ನಾಗಿ ಓದಿ ಉನ್ನತ ವ್ಯಾಸಂಗವನ್ನು ಮುಗಿಸಿಕೊಂಡು ಒಳ್ಳೆಯ ಕೆಲಸವನ್ನು ಪಡೆದುಕೊಂಡು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು. ಯಾರ ಹಂಗಿಲ್ಲದೆ ಬದುಕು ಕಟ್ಟಿಕೊಳ್ಳಬೇಕು ಎಂದು ಸೌಮ್ಯ ತನ್ನ ಅಂತರಂಗದೊಳು ಅಂದುಕೊಂಡಳು.


ಸೌಮ್ಯ ಒಂದು ದಿನವೂ ಯಾರೊಟ್ಟಿಗೂ ಬೆರೆಯುತ್ತಿರಲಿಲ್ಲ. ಚಿಕ್ಕಂದಿನಿಂದ ಎಲ್ಲರಿಂದಲೂ ಅವಮಾನಿಸಿಕೊಂಡು ಬೆಳೆದಿದ್ದರಿಂದ ಆಕೆಗೆ ಸ್ನೇಹಿತರು ಬಂಧುಗಳು ಎಂದರೆ ಅಷ್ಟಕಷ್ಟೇ. ನೋಡಲು ಆಕೆ ಕಪ್ಪು , ಮೇಲಾಗಿ ಕೆನ್ನೆ ತುಂಬೆಲ್ಲ ಆ ಮೊಡವೆಗಳು , ಕಪ್ಪು ಕಲೆಗಳು , ಸಣ್ಣ ಕಣ್ಣಿನ ವಕ್ರ ದೃಷ್ಟಿ ಬೇರೆ , ಚೂರು ಹಲ್ಲು ಮುಂದಿದ್ದ ಕಾರಣ ಆಕೆಯನ್ನು ಯಾರಾದರೂ ಮಾತಾಡಿಸಿದರೂ ಸಹ ಆಕೆ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಅಮ್ಮನಿಗೆ ಹೇಳಿ ಉನ್ನತ ಶಿಕ್ಷಣ ಮುಗಿಸಲು ಪಟ್ಟಣಕ್ಕೆ ಬಂದಳು. 


ತಾನಾಯಿತು ತನ್ನ ಓದಾಯಿತು ಎಂದು ಸೌಮ್ಯ ಓದಿನತ್ತ ಲಕ್ಷ್ಯ ಕೊಟ್ಟು ಹಗಲು ರಾತ್ರಿ ಓದಿನಲ್ಲಿಯೇ ಕಾಲ ಕಳೆಯುತ್ತಿದ್ದಳು. ವಿದ್ಯಾಲಯದಲ್ಲೂ ಕೂಡ ಒಬ್ಬಂಟಿಯಾಗಿಯೇ ಇರುತ್ತಿದ್ದಳು. ಈ ಮದ್ಯ ಅವಳು ನಿರೀಕ್ಷೆ ಕೂಡ ಮಾಡಿರದ ಸುಂದರಿಯೊಬ್ಬಳು ಆಕೆಯ ಓದು , ಮತ್ತು ಮೃದು ಸ್ವಭಾವ ಇಷ್ಟ ಪಟ್ಟು ಸ್ನೇಹಿತೆಯಾದಳು. ಈಗಂತೂ ಸೌಮ್ಯಾಳಿಗೆ ಖುಷಿಯೋ ಖುಷಿ. ಇಷ್ಟು ದಿನ ಒಬ್ಬಳೇ ಇದ್ದವಳಿಗೆ ಇದೊಂಥರಾ ಖುಷಿ ಕೊಟ್ಟಿತ್ತು. 


ಸೌಮ್ಯ , ತನ್ನ ಗೆಳತಿ ಸೌಂದರ್ಯಳ ಗೆಳೆತನ ಆದಾಗಿನಿಂದ ತನ್ನ ಮನಸ್ಸಿನಲ್ಲಿಯೇ ತನ್ನ ಭಾವನೆಗಳಿಗೆ ಗೋಡೆ ಕಟ್ಟಲಾರಂಭಿಸಿದಳು. ಆಕೆಯ ಹಾವ ಭಾವ , ಆಕೆಯೊಂದಿಗೆ ಹುಡುಗರ ಒಡನಾಟ , ಜೊತೆಗೆ ಆಕೆಗೊಬ್ಬ ಬಾಯ್ ಫ್ರೆಂಡ್ ಬೇರೆ ಇದ್ದನು. ಆಗಾಗ ಸೌಂದರ್ಯ ತನ್ನ ಗೆಳೆಯನನ್ನು ಭೇಟಿಯಾಗಲು ಹೋಗುತ್ತಿದ್ದಳು. ಇವೆಲ್ಲ ಸೌಮ್ಯಳ ಅಂತರಂಗದಲ್ಲಿ ಇಲ್ಲಿಯವರೆಗೆ ಮಲಗಿದ್ದ ಭಾವನೆಗಳನ್ನು ಬಡಿದೆಬ್ಬಿಸಲು ಶುರು ಮಾಡಿದವು. ಆದರೆ ಸೌಮ್ಯ ತಾನು ಕಪ್ಪು ,ಸುಂದರಿಯಲ್ಲ ಎನ್ನುವ ಕೀಳರಿಮೆಯ ಆ ಗೋಡೆಯನ್ನು ಭದ್ರಪಡಿಸಿ ಬಿಟ್ಟಿದ್ದಳು. 


ತನ್ನ ಮನಸ್ಸಿನಲ್ಲಿ ಆ ವಿದ್ಯಾಲಯದ ಹುಡುಗರ ಗುಂಪಲ್ಲಿ ಚೆನ್ನಾಗಿ , ಸುಂದರವಾಗಿರುವ ಹುಡುಗನನ್ನು ಕಂಡರೆ ಇಷ್ಟ ಪಡುತ್ತಿದ್ದಳು. ತಾನು ಆತನೊಂದಿಗೆ ಕೈ ಹಿಡಿದು ಪಾರ್ಕಿನಲ್ಲಿ ಅಡ್ಡಾಡಬೇಕು , ಆತನ ಜೊತೆ ಐಸ್ ಕ್ರೀಮ್ ತಿನ್ನಬೇಕು , ಚುಮು ಚುಮು ಚಳಿಯಲ್ಲಿ ಆತನ ಬಾಹುಬಂಧನದಲ್ಲಿ ಬಿಗಿಯಾಗಿ ಅಪ್ಪಿ ಕಳೆದು ಹೋಗಬೇಕು , ಆತ ತನ್ನ ಹಣೆಗೊಂದು ಪ್ರೀತಿಯ ಮುತ್ತೊಂದನ್ನು ಇಡಬೇಕು , ಈ ಕೆಟ್ಟ ಸಮಾಜ ಬಿಟ್ಟು ತಾವಿಬ್ಬರೇ ಬೇರೆ ಲೋಕದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಇರಬೇಕು , ಹಾಗೆ , ಹೀಗೆ ಅಂತೆಲ್ಲ ಏನೇನೋ ಕನಸು ಕಾಣುತ್ತಿದ್ದಳು. ಆದರೆ ಒಂದು ದಿನವೂ ಯಾವೊಬ್ಬ ಹುಡುಗನನ್ನು ಮಾತನಾಡಿಸಿದವಳೂ ಅಲ್ಲ. 


ತನ್ನ ಮನದೊಳಗೆ ಎಲ್ಲ ಭಾವನೆಗಳನ್ನು ಕಟ್ಟಿ ಹಾಕಿ ಅದಕ್ಕೆ ಗೋಡೆಯ ಚೌಕಟ್ಟನ್ನು ನಿರ್ಮಿಸಿ ಒಮ್ಮೊಮ್ಮೆ ನೋವನ್ನು ಅನುಭವಿಸುತ್ತಿದ್ದಳು , ಒಮ್ಮೊಮ್ಮೆ ತನ್ನನ್ನು ಹೀಗೆ ಹುಟ್ಟಿಸಿದ ದೇವರಿಗೆ ಹಿಡಿಶಾಪ ಹಾಕುತ್ತಿದ್ದಳು. 


ಆದರೆ ಯಾವತ್ತೂ ಆಕೆ ತನ್ನ ಮನದೊಳಗೆ ಹಾಕಿದ ಆ ಗೋಡೆಯನ್ನು ದಾಟಿ , ಅಥವಾ ಗೋಡೆಯನ್ನು ಜಿಗಿದು ಆಚೆ ಬರಲೇ ಇಲ್ಲ , ತನ್ನ ಎಲ್ಲಾ ಆಸೆ ಕಾಮನೆಗಳಿಗೆ ಆ ಗೋಡೆಯಂಬ ಬೇಲಿ ಹಾಕಿ ಕೊನೆಯವರೆಗೂ ಒಬ್ಬಳೇ ಬದುಕಿದಳು.


இந்த உள்ளடக்கத்தை மதிப்பிடவும்
உள்நுழை

Similar kannada story from Classics